ಕಾರ್ಯದ ಹಿಂದಿರುವ ಭಾವನೆಯಿಂದಲೇ ದೇವರ ಮೆಚ್ಚುಗೆ ದೊರೆಯುವುದು

Print Friendly, PDF & Email
ಕಾರ್ಯದ ಹಿಂದಿರುವ ಭಾವನೆಯಿಂದಲೇ ದೇವರ ಮೆಚ್ಚುಗೆ ದೊರೆಯುವುದು

Abdullah wakes up hearing the angels conversation

ಒಂದು ದಿನ, ಅಬ್ದುಲ್ಲನು ಮೆಕ್ಕಾದ ಮಸೀದಿಯ ಒಂದು ಮೂಲೆಯಲ್ಲಿ ಮಲಗಿ ನಿದ್ರಿಸುತ್ತಿದ್ದ. ಅಲ್ಲಿ, ಮೇಲೆ ಇಬ್ಬರು ದೇವತೆಗಳು ನಡೆಸುತ್ತಿದ್ದ ಸಂಭಾಷಣೆಯಿಂದಾಗಿ ಅವನಿಗೆ ಎಚ್ಚರವಾಯಿತು. ದೇವರ ಅನುಗ್ರಹಕ್ಕೆ ಪಾತ್ರರಾದವರ ಹೆಸರುಗಳನ್ನು, ಅವರು ಪಟ್ಟಿಮಾಡುತ್ತಿದ್ದರು. ಪವಿತ್ರ ನಗರ ಮೆಕ್ಕಾಗೆ ಯಾತ್ರೆ ಬಂದಿಲ್ಲದಿದ್ದರೂ ಸಹ, ಸಿಕಂದರ್ ನಗರದಲ್ಲಿರುವ ಮಹಬೂಬ್ ಎಂಬ ವ್ಯಕ್ತಿಯು, ಆ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯಲು ಅರ್ಹನಾದವನೆಂದು, ಒಬ್ಬ ದೇವತೆಯು ಇನ್ನೊಬ್ಬ ದೇವತೆಗೆ ಸೂಚಿಸುತ್ತಿತ್ತು.

Abdullah giving costly food to the starving beggar

ಇದನ್ನು ಕೇಳಿಸಿಕೊಂಡ ಅಬ್ದುಲ್ಲನು ಕುತೂಹಲದಿಂದ, ಸಿಕಂದರ್ ನಗರಕ್ಕೆ ಪ್ರಯಾಣ ಹೊರಟನು. ಅಲ್ಲಿ ವಿಚಾರಿಸಲಾಗಿ, ಮಹಬೂಬ್ ಎಂಬುವನು ಜನರ ಪಾದರಕ್ಷೆಗಳನ್ನು ರಿಪೇರಿ ಮಾಡಿಕೊಡುವ ಒಬ್ಬ ಚಮ್ಮಾರನೆಂದು ತಿಳಿಯಿತು. ಮಹಬೂಬನೋ ಅತ್ಯಂತ ಬಡವ, ಅವನ ಸಂಪಾದನೆಯೂ ಬಹಳ ಕಡಿಮೆ. ಜೀವನ ನಡೆಸಲು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದ. ಅಂತಹುದರಲ್ಲಿ, ಹಲವಾರು ವರ್ಷಗಳಿಂದ, ಬಹಳ ತ್ಯಾಗಮಾಡಿ ಕೆಲವು ಕಾಸುಗಳನ್ನು ಕೂಡಿಡುತ್ತಾ ಬಂದಿದ್ದ. ಆ ಹಣದಿಂದ ಒಂದು ವಿಶೇಷ ಅಡುಗೆ ಪದಾರ್ಥವನ್ನು ತಯಾರಿಸಿ, ತನ್ನ ಪ್ರೀತಿಯ ಹೆಂಡತಿಗೆ ಉಡುಗೊರೆಯಾಗಿ ನೀಡಿ ಅವಳಿಗೆ ಆಶ್ಚರ್ಯ ಮತ್ತು ಸಂತೋಷಗಳನ್ನು ಉಂಟುಮಾಡಬೇಕೆಂದು, ಮನೆಯ ಕಡೆ ಹೊರಟ.

ಅವನು ಹೋಗುತ್ತಿದ್ದ ಆ ದಾರಿಯಲ್ಲಿ, ತೀವ್ರವಾದ ಹಸಿವಿನಿಂದ ಬಳಲಿದ್ದ, ಒಬ್ಬ ಬಡ ಭಿಕ್ಷುಕನ ದೀನ ಸ್ವರವು ಕೇಳಿಬಂತು. ಮಹಬೂಬನಿಗೆ ಅಲ್ಲಿಂದ ಮುಂದೆ ಹೋಗಲಾಗಲಿಲ್ಲ.

ಅತಿ ಬೆಲೆಯುಳ್ಳ ತಿನ್ನುವ ಪದಾರ್ಥವಿದ್ದ ಮಡಿಕೆಯನ್ನು ಆ ಭಿಕ್ಷುಕನ ಮುಂದೆ ಇಟ್ಟ. ಬಹು ಹಸಿದಿದ್ದ ಆ ಭಿಕ್ಷುಕನು ತಿನ್ನುವುದನ್ನೇ ನೋಡುತ್ತಿದ್ದ ಮಹಬೂಬನು, ಹಸಿವು, ಬಳಲಿಕೆಯಿಂದ ಕಂಗೆಟ್ಟಿದ್ದ ಆ ಭಿಕ್ಷುಕನ ಮುಖದ ಮೇಲೆ ಅರಳುತ್ತಿದ್ದ ತೃಪ್ತಿ, ಸಂತೋಷಗಳನ್ನು ಗಮನಿಸುತ್ತಾ ತುಂಬಾ ಆನಂದಿತನಾದ. ಆ ಒಂದು ಪ್ರೇಮತುಂಬಿದ ನಿಸ್ವಾರ್ಥ ಕ್ರಿಯೆಯೇ, ಅವನಿಗೆ ದೈವಕೃಪೆಗೆ ಪಾತ್ರರಾದವರ ಪಟ್ಟಿಯಲ್ಲಿ, ಮೊದಲನೆಯ ಸ್ಥಾನವು ದೊರೆಯುವಂತೆ ಮಾಡಿತು. ಇಂತಹ ಮಹಾನ್ ಭಾಗ್ಯವು, ಮೆಕ್ಕಾಗೆ ಯಾತ್ರೆ ಬಂದು ಲಕ್ಷಾಂತರ ದಿನಾರಗಳನ್ನು ದಾನಮಾಡಿದ್ದವರಿಗೂ ಸಿಕ್ಕಿರಲಿಲ್ಲ.

ದೇವರು ನಾವು ಮಾಡುವ ಕಾರ್ಯದ ಹಿಂದಿರುವ ಭಾವನೆಯನ್ನು ಮೆಚ್ಚುತ್ತಾನೆಯೇ ಹೊರತು, ಮಾಡುವಾಗ ತೋರುವ ಆಡಂಬರ ಮತ್ತು ಪ್ರದರ್ಶನದಿಂದಲ್ಲ, ಎಂಬುದನ್ನು ಇದು ನಿರೂಪಿಸಿತು.

ಪ್ರಶ್ನೆಗಳು
  1. ಮಸೀದಿಯಲ್ಲಿ ಮಲಗಿ ನಿದ್ರಿಸುತ್ತಿದ್ದ ಅಬ್ದುಲ್ಲನು ಒಂದು ದಿನ ಏನು ಕೇಳಿಸಿಕೊಂಡನು?
  2. ಸಿಕಂದರ್ ನಗರದಲ್ಲಿದ್ದ ಮಹಬೂಬನ ಬಗ್ಗೆ ಅವನು ತಿಳಿದುಕೊಂಡ ವಿಷಯವೇನು?
  3. ದೈವಕೃಪೆಗೆ ಪಾತ್ರವಾಗಲು, ಮಹಬೂಬನ ಯಾವ ಕಾರ್ಯವು ಕಾರಣವಾಯಿತು?

Leave a Reply

Your email address will not be published. Required fields are marked *