ಅಂದವಾದ ಕೈಗಳ ಕಥೆ
ಅಂದವಾದ ಕೈಗಳ ಕಥೆ
ಒಮ್ಮೆ ಭಗವಂತನು ಅತ್ಯಂತ ಅಂದವಾದ ಕೈಗಳನ್ನು ಹುಡುಕಿ ತರಲು ಒಬ್ಬ ದೇವತೆಯನ್ನು ಕಳಿಸುತ್ತಾನೆ. “ಭೂಮಿಗೆ ಹೋಗಿ ಅತ್ಯಂತ ಅಂದವಾದ ಕೈಗಳನ್ನು ಹೊಂದಿರುವ ಒಬ್ಬ ಮನುಷ್ಯನನ್ನು ಕರೆದುಕೊಂಡು ಬಾ” ಎಂದು ಆ ದೇವತೆಗೆ ಹೇಳುತ್ತಾನೆ.
ಆ ದೇವತೆಯು ‘ಮಧ್ಯರಾತ್ರಿಯ ಹೊತ್ತಿಗೆ ಎಲ್ಲ ಜನರೂ ವಿಶ್ರಾಂತಿ ಪಡೆಯುತ್ತಿರುತ್ತಾರೆ, ಆಗ ಅವರ ಕೈಗಳನ್ನು ಹತ್ತಿರದಿಂದ ನೋಡುವುದು ಸುಲಭ’ ಎಂದುಕೊಂಡು ಮಧ್ಯರಾತ್ರಿಯ ಸಮಯದಲ್ಲಿ ಭೂಮಿಗೆ ಬರುತ್ತಾನೆ.
ಕಥೆ
ದೇವತೆಯು, ‘ರಾಣಿಯ ಕೈಗಳು ಆಭರಣಗಳಿಂದ ಅಲಂಕೃತವಾಗಿ, ಲೇಪನಗಳಿಂದ ಪೋಷಿಸಲ್ಪಟ್ಟಿರುವುದರಿಂದ ಅವು ಅತ್ಯಂತ ಅಂದವಾಗಿರುತ್ತವೆ’ ಎಂದು ಯೋಚಿಸಿ, ಮೊದಲು ಅರಮನೆಗೆ ಬರುತ್ತಾನೆ. ಆದರೆ ದೇವತೆಯು ರಾಣಿಯ ಅಂತಃಪುರವನ್ನು ಪ್ರವೇಶಿಸಿದಾಗ ಅಲ್ಲಿಯ ಗಾಳಿಯು ಅಸಹ್ಯವಾದ ವಾಸನೆಯಿಂದ ಕೂಡಿರುತ್ತದೆ. ಅದು ರಾಣಿಯ ಕೆಟ್ಟ ವರ್ತನೆಯಿಂದ ಉಂಟಾದ ವಾಸನೆಯಾಗಿರುತ್ತದೆ. ಅವಳ ಕೈಗಳು ಅನೇಕ ಕ್ರೂರ ಕೆಲಸಗಳನ್ನು ಮಾಡಿರುತ್ತವೆ. ರಾಜನ ಪರಿಸ್ಥಿತಿಯೂ ಅದೇ ಆಗಿರುತ್ತದೆ. ನಂತರ ದೇವತೆಯು ಅನೇಕ ಗಣ್ಯರ, ಯೋಧರ, ಮತ್ತು ವರ್ತಕರ ಮನೆಗೆ, ‘ಅವರ ಕೈಗಳು ಉತ್ತಮವಾದ ಕಾರ್ಯಗಳನ್ನು ಮಾಡಿ, ಸೌಂದರ್ಯವನ್ನು ಗಳಿಸಿರಬಹುದೆಂದು’ ಭಾವಿಸಿ ಭೇಟಿ ನೀಡುತ್ತಾನೆ. ಆದರೆ ಆ ದೇವತೆಯು ನಿರಾಶೆಗೊಳ್ಳುತ್ತಾನೆ.
ಆಗ ದೇವತೆಯು ಕನಿಷ್ಠ ಒಬ್ಬ ಸನ್ಯಾಸಿಯಾದರೂ ಅಂದವಾದ ಕೈಗಳನ್ನು ಹೊಂದಿರುತ್ತಾರೆಂದು ಮಠದ ಕಡೆಗೆ ಸಂತೋಷದಿಂದ ತಿರುಗಿದನು. ಆದರೆ, ಅಯ್ಯೋ! ಅಲ್ಲಿಯೂ ಕೂಡ ಅವನು ನಿರಾಸೆಗೆ ಒಳಗಾದನು. ಪೌರೋಹಿತ್ಯದ ಅಡಿಯಲ್ಲಿ ಅವರ ಕೈಗಳು ಅನೇಕ ಪಾಪಗಳನ್ನು ಮಾಡಿರುವುದನ್ನು ಅವನು ಕಂಡನು. ಅವರೂ ಸಹ ಅಹಂಕಾರದಿಂದ ತುಂಬಿದ್ದರು.
ದೇವತೆಯು ಬಹಳ ದುಃಖಿತನಾಗಿದ್ದನು. ಭಾರವಾದ ಹೃದಯದಿಂದ ಅವನು ಬಯಲಿಗೆ ಬಂದು, ಒಂದು ಮರದ ಕೆಳಗೆ ಕುಳಿತನು. ತನಗೆ ಒಪ್ಪಿಸಿದ ಕಾರ್ಯವನ್ನು ಪೂರ್ಣಗೊಳಿಸದೆ ಭಗವಂತನನ್ನು ಹೇಗೆ ಎದುರಿಸುವುದೆಂದು ಅವನು ಆಲೋಚಿಸಿದನು.
ಆಗ ಇದ್ದಕ್ಕಿದ್ದಂತೆ ಒಂದು ಆಹ್ಲಾದಕರವಾದ ಪರಿಮಳವು ಎಲ್ಲಿಂದಲೋ ದೇವತೆಯ ಕಡೆಗೆ ಗಾಳಿಯಲ್ಲಿ ತೇಲಿಬಂತು. ದೇವತೆಯು ಸುತ್ತಲೂ ನೋಡಿದಾಗ ಅಲ್ಲಿ ಎಲ್ಲಿಯೂ ಸುಗಂಧಯುಕ್ತವಾದ ಹೂವಾಗಲೀ, ಮರ, ಗಿಡಗಳಾಗಲೀ ಇರಲಿಲ್ಲ. ದೇವತೆಯು ಸುತ್ತಲೂ ಎಲ್ಲಾ ಕಡೆಯೂ ಕತ್ತಲೆಯಲ್ಲಿ ಹುಡುಕಿದನು. ಒಬ್ಬ ರೈತನು ತೆರೆದ ಬಯಲಿನಲ್ಲಿ ನೆಲದಮೇಲೆ ಮಲಗಿ ನಿದ್ರಿಸುತ್ತಿರುವುದನ್ನು ಅವನು ನೋಡಿದನು. ದೇವತೆಯು ರೈತನ ಕಡೆಗೆ ಬಾಗಿ, ಅವನ ಕೈಗಳನ್ನು ನೋಡಿದನು. ಅವು ಒರಟಾಗಿ, ಕಂದು ಬಣ್ಣವನ್ನು ಹೊಂದಿದ್ದರೂ, ಒಂದು ಕಾಂತಿಯಿಂದ ಹೊಳೆಯುತ್ತಿದ್ದವು! ರೈತನು ಗಾಢವಾದ ನಿದ್ರೆಯಲ್ಲಿದ್ದನು. ಅವನ ಕೈಗಳಿಂದ ಆಹ್ಲಾದಕರವಾದ ಪರಿಮಳವು ಹೊರಹೊಮ್ಮುತ್ತಿತ್ತು ಮತ್ತು ವಾತವರಣವು ತಂಪಾಗಿ, ಹಿತಕರವಾಗಿತ್ತು.
ದೇವತೆಯು ರೈತನನ್ನು ಭಗವಂತನ ಹತ್ತಿರಕ್ಕೆ ಕೊಂಡೊಯ್ದನು ಆದರೆ ಅವನು ಸಂಪೂರ್ಣ ಗೊಂದಲಕ್ಕೆ ಒಳಗಾಗಿದ್ದನು. ಅವನು ಭಗವಂತನ ಹತ್ತಿರ, ’ರಾಜ, ರಾಣಿಯರಿಗಿಂತ ಮಿಗಿಲಾಗಿ ರೈತನು ಅತ್ಯಂತ ಅಂದವಾದ ಕೈಗಳನ್ನು ಹೊಂದಿರಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದನು. ಭಗವಂತನು ದೇವತೆಯು ಸಮರ್ಪಕವಾದ ಆಯ್ಕೆಯನ್ನು ಮಾಡಿರುವನೆಂದು ಸಂತಸಪಟ್ಟನು. ಅವನು ದೇವತೆಗೆ ‘ರೈತನು ತನಗೆ ದುಡಿಯಲು ಬಲವಾದ ಎರಡು ಕೈಗಳನ್ನು ಕೊಟ್ಟಿರುವುದಕ್ಕಾಗಿ ಭಗವಂತನಿಗೆ ಕೃತಜ್ಞನಾಗಿದ್ದಾನೆ. ಅಲ್ಲದೆ ಅವನು ತನ್ನ ಕೈಗಳು ಕೇವಲ ಉಪಕರಣಗಳು ಮತ್ತು ದೇವರು ನೀಡಿದ ಈ ಉಪಕರಣಗಳನ್ನು ಅವನ ಉದ್ದೇಶಕ್ಕೇ ಉಪಯೋಗಿಸಬೇಕು ಎಂದು ತಿಳಿದುಕೊಂಡಿದ್ದಾನೆ’ ಎಂದು ಹೇಳಿದನು.
ಆದ್ದರಿಂದ ರೈತನು ತನ್ನ ಕೈಗಳನ್ನು ಜ್ಞಾನವನ್ನು ಗಳಿಸಲು ಮತ್ತು ಆ ಜ್ಞಾನವನ್ನು ಇತರರಿಗೆ ವಿನಿಯೋಗಿಸಲು ಬಳಸಿದನು. ಅವನು ಅವುಗಳನ್ನು ಹೊಲವನ್ನು ಉಳುಮೆ ಮಾಡಲು, ಮತ್ತು ಧಾನ್ಯಗಳನ್ನು ಬೆಳೆಯಲು ಬಳಸಿದನು ಮತ್ತು ಆ ಮೂಲಕ ಯಶಸ್ಸನ್ನು ಪಡೆದನು. ಅಗತ್ಯವಿರುವವರಿಗೆ ಧಾನ್ಯವನ್ನು ನೀಡಲೂ ಸಹ ಅವನು ಅವುಗಳನ್ನು ಬಳಸಿದನು. ಅವನು ತನ್ನ ಕೈಗಳಿಂದ ಇತರರ ಗಾಯಗಳನ್ನು ಗುಣಪಡಿಸಿದನು. ಅವನು ತನ್ನ ಸಾಧನೆಗಳಿಗಾಗಿ ಎಂದೂ ಗರ್ವಪಡಲಿಲ್ಲ. ಬದಲಾಗಿ ಸದಾ ಭಗವಂತನ ಎದುರು ತನ್ನ ಕೈಗಳನ್ನು ಜೋಡಿಸುತ್ತಿದ್ದನು. ಹೀಗೆ ರೈತನು ತನ್ನ ಸ್ವಂತ ಪರಿಶ್ರಮದಿಂದ ಜ್ಞಾನವನ್ನೂ ಸಂಪತ್ತನ್ನೂ ಮತ್ತು ಯಶಸ್ಸನ್ನೂ ಗಳಿಸಿದನು. ಮತ್ತು ಈಗ ಆ ಉದಾತ್ತ ಕಾರ್ಯಗಳಿಂದಾಗಿ ಭಗವಂತನನ್ನೇ ತಲುಪಿ ಅವನಲ್ಲಿ ಲೀನವಾಗಿದ್ದಾನೆ. ಹೀಗೆ ರೈತನು ದೈವತ್ವನ್ನು ಸಾಧಿಸಿದನು.
[ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ ಟ್ರಸ್ಟ್; ಧರ್ಮಕ್ಷೇತ್ರ, ಮಹಾಕಾಳಿ ಕೇವ್ಸ್ ರೋಡ್, ಅಂಧೇರಿ(ಇ), ಮುಂಬಯಿ, ಇವರು ಪ್ರಕಟಿಸಿದ ‘ಶ್ರೀ ಸತ್ಯಸಾಯಿ ಬಾಲವಿಕಾಸ್ ಗುರೂಸ್ ಹ್ಯಾಂಡ್ ಬುಕ್. ಗ್ರೂಪ್ ೧, ಫಸ್ಟ್ ಇಯರ್, ಇದರಿಂದ ಅಳವಡಿಸಲಾಗಿದೆ.]
[Illustrations by Dhanusri, Sri Sathya Sai Balvikas Student]
[Source: Gurus Handbook – Group I First Year]