ಮಂಥರೆಯ ಕುಟಿಲತಂತ್ರ

Print Friendly, PDF & Email
ಮಂಥರೆಯ ಕುಟಿಲತಂತ್ರ :

Two Boons of Kaikeyi

ದಶರಥನಿಗೆ ವಯಸ್ಸಾದ್ದರಿಂದ ಅವನು ರಾಮನನ್ನು ರಾಜನನ್ನಾಗಿ ಪಟ್ಟಾಭಿಷೇಕ ಮಾಡಬೇಕೆಂದು ನಿರ್ಧರಿಸಿದನು. ಈ ನಿರ್ಧಾರದಿಂದ ಎಲ್ಲರಿಗೂ ಸಂತೋಷವಾಯಿತು. ಈ ಸಂತೋಷದ ಸಂದರ್ಭಕ್ಕಾಗಿ ವೈಭವದ ವ್ಯವಸ್ಥೆ ಮಾಡಲಾಯಿತು. ರಾಮನು ರಾಜನಾಗುತ್ತಾನೆಂದು ಎಲ್ಲರೂ ಸಂತೋಷ ಪಡುತ್ತಿರುವಾಗ, ರಾಣಿ ಕೈಕೇಯಿಯ ದಾಸಿಯಾದ ಮಂಥರೆಗೆ ಮಾತ್ರ ಇದು ಇಷ್ಟವಾಗಲಿಲ್ಲ. ಅವಳು ಕೈಕೇಯಿಯ ಮನಸ್ಸಿನಲ್ಲಿ ವಿಷದಬೀಜ ಬಿತ್ತಲು ಪ್ರಾರಂಭಿಸಿದಳು. ಕೈಕೇಯಿಗೆ ರಾಮನಲ್ಲಿ ಭರತನ ಮೇಲಿರುವಷ್ಟೇ ಪ್ರೀತಿ ಇತ್ತು. ಆದರೆ ಮಂಥರೆಯು ತನ್ನ ಎಲ್ಲ ಕುಟಿಲತೆ ಮತ್ತು ಬುದ್ಧಿಚಾತುರ್ಯಗಳಿಂದ ರಾಮನಿಗೆ ಬದಲಾಗಿ ಭರತನನ್ನು ರಾಜನನ್ನಾಗಿ ಮಾಡಿ ಪಟ್ಟಾಭಿಷೇಕ ಮಾಡಬೇಕೆಂದು ಒಪ್ಪಿಸಿದಳು.

ದಶರಥನು ಬಹಳ ಕಾಲದ ಹಿಂದೆ ಒಂದು ಸಂದರ್ಭದಲ್ಲಿ ಕೈಕೇಯಿಗೆ ಎರಡು ವರಗಳನ್ನು ನೀಡಿದ್ದನು. ಆದರೆ ಅವಳು ಆಗ ಆ ವರಗಳನ್ನು ಕೇಳಿರಲಿಲ್ಲ. ಮಂಥರೆಯು, ಈಗ ಆ ಎರಡು ವರಗಳ ಬಗ್ಗೆ ಕೈಕೇಯಿಗೆ ನೆನಪಿಸಿದಳು. ಆ ವರಗಳನ್ನು ನೀಡುವುದರ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ರಾಜನನ್ನು ಕೇಳಬೇಕೆಂದು ಕೈಕೇಯಿಯನ್ನು ಒತ್ತಾಯಿಸಿದಳು

ದಶರಥ ಮಹಾರಾಜನು ಸಂತೋಷದ ಸುದ್ದಿಯನ್ನು ತಿಳಿಸುವುದಕ್ಕಾಗಿ ಕೈಕೇಯಿಯ ಕೊಠಡಿಗೆ ಬಂದನು. ಆದರೆ ಅವಳು ಬಹಳ ಕೋಪದಿಂದ ನೆಲದ ಮೇಲೆ ಮಲಗಿರುವುದನ್ನು ನೋಡಿದನು. ಅದಕ್ಕೆ ಕಾರಣವನ್ನು ತಿಳಿಯಲು ಅವನು ಬಹಳ ಪ್ರಯತ್ನಿಸಿದನು. ನಂತರ, ನಯವಾಗಿ ಬಹಳ ಒತ್ತಾಯಿಸಿದ ಮೇಲೆ ಅವಳು ಎದ್ದು ಕುಳಿತು, ಎರಡು ವರಗಳನ್ನು ನೀಡುವುದರ ಮೂಲಕ ಕೊಟ್ಟ ವಚನವನ್ನು ಪೂರ್ಣಗೊಳಿಸಬೇಕೆಂದು ದಶರಥನಿಗೆ ಹೇಳಿದಳು.

ಅವಳ ದುಷ್ಟ ಉದ್ದೇಶಗಳ ಅರಿವಿಲ್ಲದೆ ಅವನು ಕೂಡಲೆ ಒಪ್ಪಿ ಮಾತುಕೊಟ್ಟನು. ಅದರಂತೆ ಕೈಕೇಯಿಯು ದಶರಥನಲ್ಲಿ ಈ ಎರಡು ವರಗಳನ್ನು ಕೇಳಿದಳು…ರಾಮನಿಗೆ ಬದಲಾಗಿ ತನ್ನ ಮಗ ಭರತನಿಗೆ ರಾಜ್ಯ ಪಟ್ಟಾಭಿಷೇಕಮಾಡಬೇಕು; ಮತ್ತು ರಾಮನನ್ನು ೧೪ ವರ್ಷಗಳ ಕಾಲ ವನವಾಸ ಮಾಡಲು ಕಾಡಿಗೆ ಕಳಿಸಬೇಕು;

ದಶರಥನಿಗೆ ಆಘಾತವಾಯಿತು. ಅವನಿಗೆ ತನ್ನ ಕಿವಿಗಳನ್ನು ನಂಬಲಾಗಲಿಲ್ಲ. ಬರಸಿಡಿಲು ಎರಗಿದಂತಾಗಿತ್ತು. ಅವನೀಗ ದೊಡ್ಡ ಇಕ್ಕಟ್ಟಿನಲ್ಲಿ ಸಿಲುಕಿದ್ದನು. ಮತ್ತೊಮ್ಮೆ ಯೋಚಿಸುವಂತೆ ಅವನು ಕೈಕೇಯಿಯನ್ನು ಪ್ರಾರ್ಥಿಸಿದನು. ಆದರೆ ಅವಳು ಕೇಳಲು ಸಿದ್ಧಳಿರಲಿಲ್ಲ. ದಶರಥನು ಕೈಕೇಯಿಗೆ ಕೊಟ್ಟ ಮಾತಿಗೆ ಬದ್ಧನಾಗಿದ್ದ, ಅದರಿಂದಾಗಿ ಅವನು ರಾಮನನ್ನು ಕಾಡಿಗೆ ಕಳಿಸಲು ಒಪ್ಪಲೇ ಬೇಕಾಗಿತ್ತು. ರಾಮನಿಗೆ ಅಲ್ಲಿಗೆ ಬರುವಂತೆ ಹೇಳಿ ಕಳಿಸಿದಾಗ, ಉಮ್ಮಳಿಸುವ ದುಃಖದಿಂದಾಗಿ ಅವನಿಗೆ ಮಾತನಾಡಲೂ ಸಹ ಆಗುತ್ತಿರಲಿಲ್ಲ. ಆಗ ಕೈಕೇಯಿಯು ರಾಮನಿಗೆ ನಡೆದುದೆಲ್ಲವನ್ನೂ ಹೇಳಿದಳು.

Leave a Reply

Your email address will not be published. Required fields are marked *

error: