ಶೂರ್ಪನಖಿಯಿಂದ ತೊಂದರೆ
ಶೂರ್ಪನಖಿಯಿಂದ ತೊಂದರೆ:
ಚಿತ್ರಕೂಟದಲ್ಲಿ ತಾವು ಇರುವ ವಿಚಾರ, ಈಗ ಅಯೋಧ್ಯೆಯ ಜನರಿಗೆ ತಿಳಿದಿರುವುದರಿಂದ ಅವರು ಮತ್ತೆ ಮತ್ತೆ ತಮ್ಮನ್ನು ನೋಡಲು ಬರಬಹುದೆಂದು ರಾಮ, ಸೀತಾ, ಲಕ್ಷ್ಮಣರು ಯೋಚಿಸಿದರು. ಆದ್ದರಿಂದ ಅವರು ಆ ಸ್ಥಳವನ್ನು ಬಿಟ್ಟು, ಅಲ್ಲಿಂದ ಬಹಳ ದೂರದಲ್ಲಿದ್ದ, ಪ್ರಶಾಂತ ರಮಣೀಯ ತಾಣವಾದ ಪಂಚವಟಿಗೆ ಹೋಗಿ ನೆಲೆಸಿದರು.
ಆ ಕಾಡಿನಲ್ಲಿ ಅನೇಕ ಘಟನೆಗಳು ಸಂಭವಿಸಿದವು. ರಾವಣನ ತಂಗಿಯಾದ ಶೂರ್ಪನಖಿಯು ಬಂದು ರಾಮ, ಲಕ್ಷ್ಮಣರಿಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ತೊಂದರೆಯನ್ನುಂಟು ಮಾಡಿದಳು. ಅವಳು ಸೀತೆಯೊಡನೆ ಅತ್ಯುಗ್ರವಾಗಿ ವರ್ತಿಸಿದಳು. ಅವಳ ಕೆಟ್ಟನಡತೆಯಿಂದಾಗಿ ಲಕ್ಷ್ಮಣನು ಅವಳನ್ನು ವಿರೂಪಗೊಳಿಸುವಂತಾಯಿತು. ಅವನು ಅವಳ ಕಿವಿ, ಮೂಗುಗಳನ್ನು ಕತ್ತರಿಸಿದನು. ಶೂರ್ಪನಖಿಯು ಕೋಪ, ಅವಮಾನ, ದುಃಖ ಮತ್ತು ದ್ವೇಷದಿಂದ ಕುದಿಯುತ್ತಿದ್ದಳು. ಇದರಿಂದ ಅವಳು ದ್ವೇಷ ತೀರಿಸಲು ಬಯಸಿ, ಲಂಕೆಯ ರಾಜನಾದ ತನ್ನ ಅಣ್ಣ ರಾವಣನಿಗೆ ದೂರು ನೀಡಲು ನಿರ್ಧರಿಸಿದಳು. ಅವಳು ರಾವಣನಿಗೆ ಸೀತೆಯ ಬಗ್ಗೆ ಹೇಳಿದುದಲ್ಲದೆ, ಅವಳನ್ನು ಅಲ್ಲಿಂದ ದೂರಮಾಡಿ ಲಂಕೆಗೆ ತರಬೇಕೆಂದು ದುರ್ಬೋಧನೆ ಮಾಡಿದಳು.