ಸೀತಾಪಹರಣ

Print Friendly, PDF & Email
ಸೀತಾಪಹರಣ

Abduction of Sita

ಒಂದು ಕುತಂತ್ರವನ್ನು ಮಾಡಲಾಯಿತು. ಒಂದು ಬಂಗಾರದ ಜಿಂಕೆಯ ರೂಪದಲ್ಲಿ ದಂಡಕಾರಣ್ಯದ ಕಾಡಿನಲ್ಲಿ ತಿರುಗಾಡಿ, ಸೀತೆಯ ಗಮನ ಸೆಳೆದು ಆಕರ್ಷಿಸುವಂತೆ ರಾವಣನು ರಾಕ್ಷಸನಾದ ಮಾರೀಚನಿಗೆ ಆಜ್ಞೆಮಾಡಿದನು. ಇದರಿಂದ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ಮಾರೀಚನು ಬುದ್ಧಿವಾದ ಹೇಳಿದರೂ, ರಾವಣನು ಅದನ್ನು ಕೇಳಲು ಸಿದ್ಧನಿರಲಿಲ್ಲ.

ಆಗ ವಸಂತಕಾಲ. ಎಲ್ಲ ಕಡೆಯೂ ಹಸಿರು ವ್ಯಾಪಿಸಿತ್ತು. ಕುಟೀರದ ಹೊರಗಡೆ ಕುಳಿತಿದ್ದ ಸೀತೆಯು ಇದ್ದಕ್ಕಿದ್ದಂತೆ, ಮರಗಳ ನಡುವೆ ಓಡಾಡುತ್ತಿದ್ದ ಒಂದು ಬಂಗಾರದ ಬಣ್ಣದ ಜಿಂಕೆಯನ್ನು ನೋಡಿದಳು. ಅವಳು ಅದರಿಂದ ಬಹಳ ಆಕರ್ಷಿತಳಾದಳು. ಅವಳು ರಾಮನ ಹತ್ತಿರ ಅದನ್ನು ತಂದು ಕೊಡುವಂತೆ ಪ್ರಾರ್ಥಿಸಿದಳು. ರಾಮನು ಅವಳ ಅಪೇಕ್ಷೆಯನ್ನು ಈಡೇರಿಸಲು ನಿರ್ಧರಿಸಿದನು. ಏಕೆಂದರೆ ಸೀತೆಯು ಇದುವರೆಗೆ ಏನನ್ನೂ ಅಪೇಕ್ಷಿಸಿರಲಿಲ್ಲ ಮತ್ತು ರಾಮನ ಹತ್ತಿರ ಅದನ್ನು ಈಡೇರಿಸಿಕೊಡುವಂತೆ ಕೇಳಿಯೂ ಇರಲಿಲ್ಲ. ತಾನು ಹಿಂತಿರುಗಿ ಬರುವವರೆಗೂ ಸೀತೆಗೆ ಕಾವಲಾಗಿರುವಂತೆ ಲಕ್ಷ್ಮಣನಿಗೆ ತಿಳಿಸಿ, ರಾಮನು ಆ ಬಂಗಾರದ ಜಿಂಕೆಯನ್ನು ಹಿಂಬಾಲಿಸಿ ಹೊರಟನು. ಲಕ್ಷ್ಮಣನು ಸೀತೆಯ ರಕ್ಷಣೆಗಾಗಿ ಕುಟೀರದ ಬಾಗಿಲನ್ನು ಕಾಯುತ್ತಿದ್ದನು.

ಬಂಗಾರದ ಜಿಂಕೆಯ ರೂಪ ತಾಳಿದ್ದ ಮಾರೀಚನು ಮುಂದೆ ಮುಂದೆ ಓಡುತ್ತಿದ್ದನು. ಆದ್ದರಿಂದ ರಾಮನು ಅದಕ್ಕೆ ಬಾಣ ಹೊಡೆಯಲು ನಿರ್ಧರಿಸಿದನು. ಅವನು ಒಂದು ಬಾಣ ಪ್ರಯೋಗಿಸಿದಾಗ, ಅದು ಜಿಂಕೆಗೆ ತಗುಲಿತು. ಮಾರೀಚನು ತನ್ನ ಮೊದಲಿನ ರೂಪತಾಳಿ, ‘ಓ ಲಕ್ಷ್ಮಣಾ! ಓ ಸೀತಾ!!’ ಎಂದು ಕೂಗುತ್ತಾ ಕೆಳಗೆ ಬಿದ್ದನು. ಸೀತೆಗೆ ಈ ಧ್ವನಿಯು ಕೇಳಿಸಿತು. ರಾಮನು ಅಪಾಯದಲ್ಲಿ ಸಿಲುಕಿರಬೇಕೆಂಬ ಆಲೋಚನೆಯಿಂದ ಅವಳಿಗೆ ಭಯವಾಯಿತು. ರಾಮನ ಸಹಾಯಕ್ಕೆ ಹೋಗಬೇಕೆಂದು ಲಕ್ಷ್ಮಣನನ್ನು ಬಲವಂತದಿಂದ ಕಳುಹಿಸಿದಳು.

ಲಕ್ಷ್ಮಣನು ಹೊರಡುತ್ತಿದ್ದಂತೆ, ರಾವಣನು ಒಬ್ಬ ಯತಿಯ ವೇಷದಲ್ಲಿ ಅಲ್ಲಿಗೆ ಬಂದು ಭಿಕ್ಷೆಯನ್ನು ಯಾಚಿಸಿದನು. ಸೀತೆಯು ಭಿಕ್ಷೆಯನ್ನು ನೀಡಲು ಹೊರಗೆ ಬಂದು, ಅವಳ ರಕ್ಷಣೆಗಾಗಿ ಲಕ್ಷ್ಮಣನು ಎಳೆದಿದ್ದ ‘ಲಕ್ಷ್ಮಣರೇಖೆ’ ಯನ್ನು ದಾಟಿದಳು. ಆಗ ರಾವಣನು ಅವಳನ್ನು ಬಲವಂತದಿಂದ ಅಪಹರಿಸಿ, ತನ್ನ ಪುಷ್ಪಕ ವಿಮಾನದಲ್ಲಿ ಕರೆದುಕೊಂಡು ಹೋದನು. ಸೀತೆಯು ಅಸಹಾಯಕಳಾಗಿ ಸಹಾಯಕ್ಕಾಗಿ ಜೋರಾಗಿ ಕರೆದು ರೋಧಿಸುತ್ತಿದ್ದಳು.

ಲಕ್ಷ್ಮಣನು ರಾಮನಿದ್ದ ಸ್ಥಳಕ್ಕೆ ಬಂದನು. ಅವರಿಗೆ ದುಷ್ಟ ಮಾರೀಚನು ಆಡಿದ ವಂಚನೆಯ ನಾಟಕದ ಅರಿವಾಯಿತು. ಅವರಿಗೆ ಸೀತೆಯ ಸುರಕ್ಷತೆಯ ಬಗ್ಗೆ ಚಿಂತೆಯುಂಟಾಗಿ, ಕುಟೀರದ ಕಡೆಗೆ ಧಾವಿಸಿದರು. ಅವರ ಭಯ ನಿಜವಾಯಿತು. ಅವರಿಗೆ ಸೀತೆಯು ಅಲ್ಲಿ ಕಾಣಿಸಲಿಲ್ಲ.

ಜಟಾಯುವಿನ ನಿಸ್ವಾರ್ಥ ಸೇವೆ:

ರಾಮನು ಅತ್ಯಂತ ದುಃಖಿತನಾದನು. ಅವರಿಬ್ಬರು ಎಲ್ಲಾ ಕಡೆಯಲ್ಲಿಯೂ ಸೀತೆಗಾಗಿ ಹುಡುಕಲಾರಂಭಿಸಿದರು. ಅದೇ ಪ್ರಯತ್ನದಲ್ಲಿ ಅವರು ದಕ್ಷಿಣದ ಕಡೆಗೆ ಹೊರಟರು. ಕಾಡಿನಲ್ಲಿ ಒಂದು ಕಡೆಯಲ್ಲಿ ಜಟಾಯು ಎಂಬ ಒಂದು ಹದ್ದು, ಉಸಿರಾಡಲು ಕಷ್ಟಪಡುತ್ತಾ ಬಿದ್ದಿರುವುದನ್ನು ಅವರು ನೋಡಿದರು. ಅವರು ಅವನ ಗಾಯವನ್ನು ತೊಳೆದು ಆರೈಕೆ ಮಾಡಿದರು. ಜಟಾಯುವು ರಾಮನಿಗೆ, ರಾವಣನು ಸೀತೆಯನ್ನು ಆಕಾಶಮಾರ್ಗದಲ್ಲಿ ಒಂದು ರಥದಲ್ಲಿ ಕೂರಿಸಿಕೊಂಡು ಹೋಗಿದ್ದನ್ನು ತಾನು ನೋಡಿದೆನೆಂದು ಹೇಳಿದನು.

ಅವನನ್ನು ತಡೆಯಲು ತಾನು ಹೇಗೆ ಶಕ್ತಿಮೀರಿ ಪ್ರಯತ್ನಿಸಿದೆ ಎಂಬುದನ್ನು ವಿವರಿಸಿದ ಜಟಾಯುವು, ಆದರೆ ತನ್ನ ವೃದ್ಧಾಪ್ಯದ ಕಾರಣದಿಂದಾಗಿ ಅದು ಸಾಧ್ಯವಾಲಿಲ್ಲ ಎಂದು ತಿಳಿಸಿದನು. ರಾವಣನು ತನ್ನ ರೆಕ್ಕೆಗಳನ್ನು ಕತ್ತರಿಸಿದಾಗಿನಿಂದಲೂ ತಾನು ಇಲ್ಲಿಯೇ ಬಿದ್ದಿರುವುದಾಗಿಯೂ ಅವನು ಹೇಳಿದನು. ಈ ಸುದ್ದಿಯನ್ನು ತಿಳಿಸುವ ಸಲುವಾಗಿ ತಾನು ಇಷ್ಟು ದಿನಗಳವರೆಗೆ ಕಾಯುತ್ತಿದ್ದುದಾಗಿ ರಾಮನಿಗೆ ತಿಳಿಸಿ, ಜಟಾಯುವು ಶಾಂತಿಯಿಂದ ಮರಣ ಹೊಂದಿದನು. ರಾಮ ಮತ್ತು ಲಕ್ಷ್ಮಣರು ಜಟಾಯುವಿನ ದೇಹಕ್ಕೆ ಸಂಸ್ಕಾರವನ್ನು ಮಾಡಿ ತಮ್ಮ ಪ್ರಯಾಣವನ್ನು ಪುನಃ ಪ್ರಾರಂಭಿಸಿದರು.

Leave a Reply

Your email address will not be published. Required fields are marked *

error: