ಹಾರಿದನು ಹನುಮಂತ ಲಂಕೆಗೆ
ಹಾರಿದನು ಹನುಮಂತ ಲಂಕೆಗೆ:
ತಕ್ಷಣ ಜಾಂಬವಂತನು ಹನುಮಂತನ ಬೆನ್ನು ಚಪ್ಪರಿಸಿ ಅವನ ಅಗಾಧವಾದ ಶಕ್ತಿಯನ್ನು ನೆನಪಿಸಿದನು. ಇದು ಹನುಮಂತನ ಸುಪ್ತವಾದ ಶಕ್ತಿಯನ್ನು ಜಾಗೃತಗೊಳಿಸಿತು. ತನ್ನಲ್ಲಿ ಅಡಕವಾಗಿರುವ ಎಲ್ಲ ಶಕ್ತಿಯನ್ನೂ ಉಪಯೋಗಕ್ಕೆ ತಂದುಕೊಳ್ಳಬೇಕೆಂದು ಹನುಮಂತನು ಅರಿವು ಮಾಡಿಕೊಂಡನು. ಅವನು ಎತ್ತರೆತ್ತರಕ್ಕೆ ಬೆಳೆದು ನಿಂತನು. ಹನುಮಂತನ ಶಕ್ತಿ ಮತ್ತು ಪರಾಕ್ರಮಗಳಿಂದ ಜಾಂಬವಂತನು ಅತ್ಯಂತ ಪ್ರಭಾವಿತನಾದನು. ಹನುಮಂತನು ತಕ್ಷಣ ಶ್ರೀರಾಮನನ್ನು ಪ್ರಾರ್ಥಿಸಿ, ಸಮುದ್ರದಾಚೆಗೆ ಜಿಗಿಯಲು ನಿರ್ಧರಿಸಿದನು. ತುಟಿಗಳಲ್ಲಿ ರಾಮನಾಮವನ್ನು ಪಠಿಸುತ್ತಾ ಅವನು ಹಾರಿದನು.
ಸಮುದ್ರವನ್ನು ಹಾರುವಾಗ ಹನುಮಂತನು ಅನೇಕ ತಡೆಗಳನ್ನು ಎದುರಿಸಬೇಕಾಯಿತು. ಆದರೆ ಅವನು ಸದಾ ರಾಮನನ್ನೇ ನೆನೆಯುತ್ತಾ ಪ್ರತಿಯೊಂದನ್ನೂ ಧೈರ್ಯ ಮತ್ತು ತಾಳ್ಮೆಯಿಂದ ಎದುರಿಸಿದನು. ಕೊನೆಯಲ್ಲಿ ಅವನು ಲಂಕೆಯ ದಡವನ್ನು ತಲುಪಿದನು. ಅದು ಒಂದು ಅತ್ಯಂತ ಸುಂದರವಾದ ಮತ್ತು ಭವ್ಯವಾದ ಸ್ಥಳವಾಗಿತ್ತು. ಅವನು ಆ ಸ್ಥಳವನ್ನು ರಾತ್ರಿ ಪರಿಶೋಧಿಸಲು ನಿರ್ಧರಿಸಿದನು. ಅವನು ಒಂದು ಚಿಕ್ಕ ಗಾತ್ರದ ಕಪಿಯಾಗಿ ಕ್ಷೀಣಿಸಿ, ಲಂಕೆಯನ್ನು ಪ್ರವೇಶಿಸಲು ಗೋಡೆಯನ್ನು ಹತ್ತಲು ಪ್ರಯತ್ನಿಸಿದನು. ತಕ್ಷಣ ಲಂಕೆಯನ್ನು ಕಾಯುತ್ತಿದ್ದ ‘ಲಂಕಿಣಿ’ ಎಂಬ ರಾಕ್ಷಸಿಯು ಅವನನ್ನು ಹಿಡಿದುಕೊಂಡಳು. ಅವಳು ಅವನಮೇಲೆ ಆಕ್ರಮಣ ಮಾಡಲು ಬಂದಾಗ ಹನುಮಂತನು ಅವಳೊಡನೆ ಹೋರಾಡಿ, ಮುಷ್ಟಿಯಿಂದ ಗುದ್ದಿ ಬೀಳಿಸಿ, ಲಂಕೆಯನ್ನು ಪ್ರವೇಶಿಸಿದನು.
ಹನುಮಂತನು ಅಲ್ಲಿ ಸೀತೆಯನ್ನು ಹುಡುಕಲು ಪ್ರಾರಂಭಿಸಿದನು. ಅವನು ಅಲ್ಲಿನ ಪ್ರತಿಯೊಂದು ಕಟ್ಟಡವನ್ನೂ ಬಿಡದೆ ಸುತ್ತಿದನು. ಅದು ವಿಶ್ವಕರ್ಮನಿಂದ ನಿರ್ಮಿತವಾದ ಒಂದು ಭವ್ಯವಾದ ನಗರ. ಅಲ್ಲಿ ಅನೇಕ ದೇವಾಲಯಗಳು, ಸೌಧಗಳು, ಉದ್ಯಾನವನಗಳು ಮತ್ತು ದೊಡ್ಡ ದೊಡ್ಡ ಕಟ್ಟಡಗಳೂ ಇದ್ದವು. ವೇದಪಠಣ, ಕಾವ್ಯವಾಚನ, ಸಂಗೀತ, ನೃತ್ಯ, ರಾಜಕೀಯ ಚರ್ಚೆಗಳೇ ಮುಂತಾಗಿ ಅನೇಕ ಚಟುವಟಿಕೆಗಳು ಅಲ್ಲಿ ನಡೆಯುತ್ತಿದ್ದವು. ಆ ನಗರದ ವೈಭವವನ್ನುಕಂಡು ಅವನು ಆಶ್ಚರ್ಯಗೊಂಡನು. ಅವನು ಅರಮನೆಯ ಕೊಠಡಿಗಳನ್ನು, ಅಡುಗೆಯ ಕೋಣೆಗಳನ್ನು ಮತ್ತು ಮಲಗುವ ಕೋಣೆಗಳನ್ನೂ ಸಹ ಪ್ರವೇಶಿಸಿದನು. ಎಲ್ಲ ಕೊಠಡಿಗಳಲ್ಲೂ ಅವನು ಬಹಳ ಸುಂದರಿಯರಾದ ಹೆಂಗಸರನ್ನು ನೋಡಿದನು. ಅವುಗಳಲ್ಲಿ ಒಂದು ಕೊಠಡಿಯಲ್ಲಿ ರಾವಣನು ಮಲಗಿರುವುದನ್ನು ಅವನು ನೋಡಿದನು. ರಾವಣನ ಭವ್ಯವಾದ ಆಕೃತಿಯನ್ನು ನೋಡಿ ಹನುಮಂತನು ಮೂಕವಿಸ್ಮಿತನಾದನು. ಅಂತಹ ಸ್ಥಳದಲ್ಲಿ ಸೀತೆ ಇರುವುದಿಲ್ಲವೆಂದು ಅವನಿಗೆ ದೃಢವಾದ ನಂಬಿಕೆಯಿತ್ತು. ಆ ದೃಢವಿಶ್ವಾಸದಿಂದ ಅವನು ಅವಳನ್ನು ಹುಡುಕಲು ಅರಮನೆಯನ್ನು ಬಿಟ್ಟು ದೂರ ಬೇರೆ ಕಡೆಗೆ ಹೊರಟನು
ಅಶೋಕವನದಲ್ಲಿ ಸೀತೆ:
ಅವನು ಸುತ್ತಲೂ ಅಲೆದಾಡುತ್ತಿದ್ದಾಗ ಇದ್ದಕ್ಕಿದ್ದಂತೆ ‘ಅಶೋಕವನ’ವೆಂಬ ಉದ್ಯಾನವನವನ್ನು ನೋಡಿದನು. ರಾಮನಿಗೆ ಮೌನವಾಗಿ ಪ್ರಾರ್ಥನೆ ಸಲ್ಲಿಸಿ ಅವನು ಆ ಉದ್ಯಾನವನವನ್ನು ಪ್ರವೇಶಿಸಿದನು.
ಅವನು ಸುತ್ತಲೂ ನೋಡಿದಾಗ ಕೆಲವರು ರಾಕ್ಷಸ ಸ್ತ್ರೀಯರು ಅಲ್ಲಿ ಸುತ್ತಾಡುತ್ತಿರುವುದು ಅವನಿಗೆ ಕಾಣಿಸಿತು. ಕೆಲವರು ನೋಡಲು ಬಹಳ ಭಯಾನಕವಾಗಿದ್ದರು. ಅವನು ಆ ಕಡೆಗೇ ಗಮನ ಹರಿಸಿದಾಗ ಒಂದು ಶಿಂಶುಪಾ ವೃಕ್ಷದ ಕೆಳಗೆ ನಿಶ್ಯಕ್ತಳಾದ, ಆದರೆ ಸೌಂದರ್ಯವತಿಯಾದ, ಸರಳವಾದ ಉಡುಗೆ ಗಳನ್ನು ಧರಿಸಿದ್ದ, ಊದಿದ ಕಣ್ಣುಗಳ, ಬಳಲಿದಂತೆ ಕಾಣುವ ಒಬ್ಬ ಸ್ತ್ರೀಯು ಕುಳಿತಿರುವುದು ಕಾಣಿಸಿತು. ಹನುಮಂತನಿಗೆ ಇವಳೇ ಸೀತೆಯಾಗಿರಬೇಕೆಂಬ ಬಲವಾದ ಭಾವನೆ ಉಂಟಾಯಿತು. ಅವನು ಆ ಮರದ ಮೇಲೆ ಹಾರಿ ಸಮೀಪದಿಂದ ಅವಳನ್ನು ಗಮನಿಸಿದನು. ಅವನು ರಾಮನ ಜನನದಿಂದ ಪ್ರಾರಂಭಿಸಿ ‘ರಾಮಕಥೆ’ಯನ್ನು ಹಾಡತೊಡಗಿದನು. ಒಂದು ಕಪಿಯು ಮನುಷ್ಯನಂತೆ ಉಚ್ಚರಿಸುವುದನ್ನು ಕಂಡು ಸೀತೆಗೆ ಆಶ್ಚರ್ಯವಾಯಿತು. ಇದು ರಾಕ್ಷಸರ ಕುತಂತ್ರವಿರಬಹುದೆಂದು ಅವಳಿಗೆ ಅನುಮಾನವಾಯಿತು. ಅಷ್ಟರಲ್ಲಿ ಹನುಮಂತನು ಮರದಿಂದ ಕೆಳಕ್ಕೆ ಹಾರಿ, ಅವಳ ಮುಂದೆ ಕೈಮುಗಿದು ಕೊಂಡು ನಿಂತನು. ಆ ಕೂಡಲೇ ಸೀತೆಯು ರಾವಣನೇ ಈ ರೂಪಧರಿಸಿ ಅವಳನ್ನು ಮೋಸಗೊಳಿಸಲು ಬಂದಿರಬೇಕು ಎಂದು ಕೊಂಡಳು. ಆಗ ಹನುಮಂತನು ಅತ್ಯಂತ ಪೂಜ್ಯ ಭಾವನೆಯಿಂದ, ತನ್ನನ್ನು ಅನುಮಾನಿಸಬಾರದೆಂದೂ, ತಾನು ರಾಮನ ಸೇವಕನೆಂದೂ ಹೇಳಿ, ರಾಮನು ಕೊಟ್ಟ ಉಂಗುರವನ್ನು ಅವಳಿಗೆ ತೋರಿಸಿದನು. ಆಗ ಸೀತೆಯು ತುಂಬಾ ಭಾವೋದ್ವೇಗಕ್ಕೆ ಒಳಗಾದಳು. ಉಂಗುರವನ್ನು ತನ್ನ ಹೃದಯದ ಹತ್ತಿರ ಇಟ್ಟುಕೊಂಡು, ರಾಮನ ಹೆಸರನ್ನು ಕರೆಯುತ್ತಾ, ಹೃದಯ ಬಿರಿಯುವಂತೆ ರೋಧಿಸಿದಳು.
ಈಗ ಅವಳ ಅನುಮಾನಗಳು ಬಗೆಹರಿದಿದ್ದವು. ಹನುಮಂತನು ಅವಳನ್ನು ತನ್ನ ಹೆಗಲಮೇಲೆ ಹೊತ್ತುಕೊಂಡು ಲಂಕೆಯಿಂದ ದೂರ ಕರೆದುಕೊಂಡು ಹೋಗುವುದಾಗಿಯೂ ಸಹ ಹೇಳಿದನು. ಆದರೆ ಸೀತೆಯು, “ವತ್ಸಾ, ನಾನು ಕಳ್ಳರಂತೆ ಓಡಿಹೋಗಲಾರೆ; ರಾಮನು ಮೊದಲು ರಾವಣನನ್ನು ಜಯಿಸಿ, ನಂತರ ನನ್ನನ್ನು ಕರೆದೊಯ್ಯಬೇಕು. ಆ ದಿನಕ್ಕಾಗಿ ನಾನು ಕಾಯುತ್ತೇನೆ” ಎಂದು ಉತ್ತರಿಸಿದಳು. ಆ ತಕ್ಷಣವೇ ಸೀತೆಯು ತನ್ನ ತಲೆಯಲ್ಲಿ ಧರಿಸಿದ್ದ ಚೂಡಾಮಣಿಯನ್ನು ರಾಮನಿಗೆ ತಲುಪಿಸಲು ಹನುಮಂತನಿಗೆ ಒಪ್ಪಿಸಿದಳು.
ಲಂಕಾದಹನ:
ಸೀತೆಯನ್ನು ಭೇಟಿಮಾಡಲು ಸಾಧ್ಯವಾದುದಕ್ಕೆ ಹನುಮಂತನಿಗೆ ಸಂತೋಷವಾಯಿತು. ಆದರೆ ಲಂಕೆಯನ್ನು ಬಿಡುವ ಮೊದಲು ರಾವಣನಿಗೆ ಒಂದು ಪಾಠ ಕಲಿಸಬೇಕೆಂದು ಅವನು ಯೋಚಿಸಿದನು. ಅವನು ಆ ತಕ್ಷಣ ಸುತ್ತಲೂ ಓಡಾಡಿ, ಮರಗಳನ್ನು ಬುಡಮೇಲು ಮಾಡಿದನು, ಉದ್ಯಾನವನವನ್ನು ನಾಶಮಾಡಿ, ಅರಮನೆಯ ಸುತ್ತಲೂ ಬಹಳಷ್ಟು ಹಾನಿಯನ್ನುಂಟುಮಾಡಿದನು. ಉದ್ಯಾನವನದ ರಕ್ಷಕರು ರಾವಣನಿದ್ದಲ್ಲಿಗೆ ಭರದಿಂದ ಓಡಿ, ‘ಒಂದು ದೊಡ್ಡ ಮಂಗವು ಉದ್ಯಾನವನವನ್ನೆಲ್ಲಾ ನಾಶಪಡಿಸುತ್ತಿದ್ದು, ಒಟ್ಟು ಆ ಸ್ಥಳವನ್ನೇ ಹಾಳುಮಾಡುತ್ತಿದೆ’ ಎಂದು ದೂರು ನೀಡಿದರು. ತಕ್ಷಣ ರಾವಣನು ಕಪಿಯನ್ನು ಎದುರಿಸಲು ತನ್ನ ಕಾವಲು ಪಡೆಯನ್ನು ಕಳಿಸಿದನು. ಹನುಮಂತನು ಅವರೆಲ್ಲರನ್ನೂ ಕೊಂದುಹಾಕಿದನು. ಆಗ ರಾವಣನು ತನ್ನ ಮಗ ಇಂದ್ರಜಿತುವನ್ನು ಕಳಿಸಿದನು. ಅವನು ಹನುಮಂತನ ಮೇಲೆ ಅತ್ಯಂತ ಶಕ್ತಿಯುತವಾದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಬ್ರಹ್ಮದೇವನ ಮೇಲಿನ ಗೌರವದಿಂದ ಹನುಮಂತನು ತಾನಾಗಿ ಆ ಅಸ್ತ್ರದ ಬಂಧನಕ್ಕೆ ಒಳಗಾದನು. ಇಂದ್ರಜಿತುವು ಹನುಮಂತನನ್ನು ರಾವಣನ ಸಭೆಗೆ ಎಳೆದುಕೊಂಡು ಹೋದನು. ರಾವಣನು ಹನುಮಂತನನ್ನು ‘ಅವನು ಯಾರು? ಮತ್ತು ಏತಕ್ಕಾಗಿ ಲಂಕೆಗೆ ಬಂದಿರುವನೆಂದು’ ಪ್ರಶ್ನೆ ಮಾಡಿದನು. ಆಗ ಹನುಮಂತನು, “ನಾನು ಪ್ರಭು ಶ್ರೀರಾಮನ ಸೇವಕ. ನೀನು ಅವನ ಹೆಂಡತಿಯನ್ನು ಮೋಸದಿಂದ ಕದ್ದು ತಂದಿರುವುದರಿಂದ, ಅದರ ಘೋರ ಪರಿಣಾಮಗಳ ಬಗ್ಗೆ ನಿನಗೆ ಎಚ್ಚರಿಕೆ ನೀಡಲು ಬಂದಿದ್ದೇನೆ” ಎಂದು ಉತ್ತರ ನೀಡಿದನು. ರಾವಣನು ತುಂಬ ಕೋಪಗೊಂಡು, ಅವನನ್ನು ಕೊಲ್ಲುವಂತೆ ಆಜ್ಞೆ ಮಾಡಿದನು. ಆಗ ರಾವಣನ ತಮ್ಮನಾದ ವಿಭೀಷಣನು ಮಧ್ಯೆ ಪ್ರವೇಶಿಸಿ, ಒಬ್ಬ ದೂತನನ್ನು ಕೊಲ್ಲುವುದು ಸರಿಯಲ್ಲ ಎಂದು ರಾವಣನಿಗೆ ಹೇಳಿದನು. ಆದ್ದರಿಂದ ಅವರು ಅವನಿಗೆ ತೊಂದರೆ ಕೊಡಲು ನಿರ್ಧರಿಸಿದರು. ಅವರು ಹನುಮಂತನ ಬಾಲಕ್ಕೆ ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ಸುತ್ತಿ, ನಂತರ ಬೆಂಕಿ ಹಚ್ಚಿದರು.
ಹನುಮಂತನು ತಕ್ಷಣ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾರುತ್ತಾ, ಲಂಕೆಯ ಎಲ್ಲಾ ಕಡೆಗೂ ಓಡಿ ಅನೇಕ ಮನೆಗಳಿಗೆ, ಮರಗಳಿಗೆ, ಉದ್ಯಾನವನಗಳಿಗೆ ಬೆಂಕಿ ತಗುಲಿಸಿದನು. ಸ್ವಲ್ಪ ಹೊತ್ತಿನಲ್ಲಿಯೇ ಲಂಕಾನಗರದ ಬಹುಭಾಗ ಭಸ್ಮವಾಯಿತು. ಕೊನೆಯಲ್ಲಿ ಅವನು ತನ್ನ ಬಾಲವನ್ನು ನೀರಿನಲ್ಲಿ ಅದ್ದಲು ಸಮುದ್ರಕ್ಕೆ ಓಡಿದನು. ತಕ್ಷಣ ಅವನಿಗೆ ತಾನೆಂತಹ ಘೋರವಾದ ಕೆಲಸ ಮಾಡಿದ್ದೇನೆಂಬ ಅರಿವಾಯಿತು. ಅವನಿಗೆ ಸೀತಾಮಾತೆಯ ಬಗ್ಗೆ ಬಹಳ ಆತಂಕವಾಯಿತು. ಸೀತೆ ಹೇಗಿರುವಳೆಂದು ನೋಡಲು ಅವನು ಧಾವಿಸಿದನು. ಅವಳು ಕ್ಷೇಮವಾಗಿರುವುದನ್ನು ಕಂಡು ಅವನಿಗೆ ತುಂಬ ಸಮಾಧಾನವಾಯಿತು.
ಹನುಮಂತನು ಸ್ವಲ್ಪವೂ ತಡಮಾಡದೆ ಜಾಂಬವಂತ, ಅಂಗದ ಮೊದಲಾದವರು ಕಾಯುತ್ತಿದ್ದ ಸಮುದ್ರ ತೀರಕ್ಕೆ ಹಾರಿ ತಲುಪಿದನು.
ರಾಮನಿಗೆ ಶುಭವಾರ್ತೆ:
ಸೀತೆಯನ್ನು ಹುಡುಕುವ ಕಾರ್ಯವು ಮುಗಿಯುತ್ತಿದ್ದಂತೆ, ಹನುಮಂತನಿಗೆ ಆ ಶುಭವಾರ್ತೆಯನ್ನು ರಾಮನಿಗೆ ತಿಳಿಸಬೇಕೆಂಬ ಕಾತುರ ಉಂಟಾಯಿತು. ಅವನು ಮೊದಲು ರಾಮನನ್ನು ಕಾಣಲು ಬಯಸಿದನು. ರಾಮನನ್ನು ನೋಡುತ್ತಿದ್ದಂತೆ ಹನುಮಂತನು ಅವನ ಪಾದಗಳಿಗೆ ಎರಗಿ, ಸೀತೆಯನ್ನು ಕಂಡುಬಂದ ಶುಭವಾರ್ತೆಯನ್ನು ತಿಳಿಸಿ, ಸೀತೆಯು ಕೊಟ್ಟ ಚೂಡಾಮಣಿಯನ್ನು ರಾಮನ ಕೈಯೊಳಗಿಟ್ಟನು. ಅಗಲಿಕೆಯ ನೋವಿನ ಕಣ್ಣೀರು ರಾಮನ ಕೆನ್ನೆಯ ಮೇಲೆ ಹರಿಯಿತು. ಸೀತೆಯನ್ನು ಹುಡುಕಿದ ಹನುಮಂತನ ಬಗ್ಗೆ ರಾಮನಿಗೆ ತುಂಬಾ ಸಂತೋಷವಾಯಿತು. ಅಕ್ಕರೆಯಿಂದ ಅವನನ್ನು ಆಲಂಗಿಸಿಕೊಂಡು, ತನ್ನ ಹೃತ್ಪೂರ್ವಕವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದನು.