ಕೆಲಸದಲ್ಲಿ ಮೇಲು ಮತ್ತು ಕೀಳು ಎಂಬುದಿಲ್ಲ
ಕೆಲಸದಲ್ಲಿ ಮೇಲು ಮತ್ತು ಕೀಳು ಎಂಬುದಿಲ್ಲ
ಭಾರತೀಯರು ಮಹಾತ್ಮಾಗಾಂಧಿಯವರನ್ನು ‘ರಾಷ್ಟ್ರಪಿತ’ ಎಂದು ಗೌರವಿಸುತ್ತಾರೆ. ಅದೇ ರೀತಿಯಲ್ಲಿ ಅಮೆರಿಕಾದವರು ಜಾರ್ಜ್ ವಾಷಿಂಗ್ ಟನ್ ರವರನ್ನು ತಮ್ಮ ದೇಶದ ‘ರಾಷ್ಟ್ರಪಿತ’ ಎಂದು ಗೌರವ ಸಲ್ಲಿಸುತ್ತಾರೆ. ಅವರು ಉದಾತ್ತ ಹೃದಯದ ಧೈರ್ಯಶಾಲಿ ಯೋಧರಾಗಿದ್ದರು. ದೇಶ ಸೇವೆ ಮತ್ತು ಜನಸೇವೆ ಅವರ ಮಹತ್ವಾಕಾಂಕ್ಷೆಯಾಗಿತ್ತು.
ಅಮೆರಿಕಾದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜಾಜ್ ರವರು ದೇಶದ ಸೇನಾ ಮುಖ್ಯಸ್ಥರಾದರು. ಒಂದು ದಿನ, ಸೇನಾಶಿಬಿರದಲ್ಲಿ ಎಲ್ಲವೂ ಸಮರ್ಪಕವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಕುದುರೆಯೇರಿ ಸುತ್ತಾಡುತ್ತಿದ್ದರು. ಶಿಬಿರದ ಒಂದು ತುದಿಯಲ್ಲಿ ಒಂದು ಹೊಸಕಟ್ಟಡ ನಿರ್ಮಾಣವಾಗುತ್ತಿತ್ತು. ಉದ್ದವಾದ ಮತ್ತು ಭಾರವಾಗಿದ್ದ ಒಂದು ಕಬ್ಬಿಣದ ತೊಲೆಯನ್ನು ಕಟ್ಟಡದ ಮೇಲ್ತುದಿಗೆ ಎತ್ತಲು ಒಬ್ಬ ಸೇನಾ ಕ್ಯಾಪ್ಟನ್ನನು ಆರುಮಂದಿ ಸೈನಿಕರಿಗೆ ಆಜ್ಞೆ ಮಾಡುತ್ತಿದ್ದನು. ತೊಲೆಯು ಆರು ಮಂದಿ ಸೈನಿಕರಿಂದ ಎತ್ತಲಾಗದಷ್ಟು ಭಾರವಾಗಿದ್ದುದರಿಂದ, ಸೈನಿಕರು ಆಜ್ಞೆ ಪಾಲಿಸಲಾಗದೆ ಕಷ್ಟಪಡುತ್ತಿದ್ದರು. ಆದರೆ ಕ್ಯಾಪ್ಟನ್ನನು ತನ್ನ ಸೈನಿಕರ ಬಗ್ಗೆ ಯಾವ ಪರಿಗಣನೆಯೂ ಇಲ್ಲದವನಂತೆ ಕಾಣಿಸುತ್ತಿದ್ದನು. ಅವರಿಗೆ ಸಹಾಯ ಮಾಡಲು ಹೋಗುವ ಬದಲಾಗಿ ಅವನು ಕೇವಲ, ‘ ಬನ್ನಿ, ಎತ್ತಿರಿ, ಎತ್ತಿರಿ’ ಎಂದು ದೂರದಿಂದಲೇ ಕಿರಿಚುತ್ತಿದ್ದನು.
ಜಾರ್ಜ್ಗೆ ಈ ದೃಶ್ಯವನ್ನು ನೋಡಿ ಸಹಿಸಲಾಗಲಿಲ್ಲ. ಅವನು ಕ್ಯಾಪ್ಟನ್ ಹತ್ತಿರ ಹೋಗಿ ನಿಂತು, ‘ತೊಲೆ ಬಹಳ ಭಾರವಾಗಿದೆ. ನೀವೇಕೆ ಅವರಿಗೆ ಸ್ವಲ್ಪ ಸಹಾಯ ಮಾಡಬಾರದು?’ಎಂದು ಕೇಳಿದನು. “ಓಹ್, ಅದು ಸೈನಿಕರ ಕೆಲಸ. ನಾನು ಕ್ಯಾಪ್ಟನ್, ನಿನಗೆ ಕಾಣಿಸುತ್ತಿಲ್ಲವೇ?” ಎಂದು ಉತ್ತರ ಬಂತು. ‘ಹೌದೇ, ಕ್ಷಮಿಸಿ, ನನಗೆ ಗೊತ್ತಿರಲಿಲ್ಲ’ ಎಂದು ಹೇಳಿದ ಜಾರ್ಜ್, ಕುದುರೆಯಿಂದ ಇಳಿದು, ಸೈನಿಕರ ಜೊತೆ ಸೇರಿ, ತೊಲೆಯು ಮೇಲೇರುವವರೆಗೂ ಅದನ್ನು ಎತ್ತಲು ಅವರಿಗೆ ಸಹಾಯ ಮಾಡಿದನು. ನಂತರ ಕ್ಯಾಪ್ಟನ್ನ ಕಡೆಗೆ ತಿರುಗಿ, ‘ ಕ್ಯಾಪ್ಟನ್, ಮುಂದಿನ ಸಾರಿ ನಿನಗೆ ಇಂತಹ ಕೆಲಸವಿದ್ದು, ಸಾಕಷ್ಟು ಸೈನಿಕರಿಲ್ಲದಿದ್ದರೆ ನನಗೆ ಹೇಳಿ ಕಳಿಸು. ನಾನು ಅಮೆರಿಕನ್ ನೆಯ ಮುಖ್ಯಸ್ಥ, ಸಂತೋಷದಿಂದ ಬರುತ್ತೇನೆ’ ಎಂದು ಹೇಳಿದನು.
ಈ ಮಾತುಗಳನ್ನು ಕೇಳಿದ ಕ್ಯಾಪ್ಟನ್ ನಿಬ್ಬೆರಗಾದನು. ಅವನು ಇನ್ನೊಂದು ಉತ್ತರವನ್ನು ಹೇಳುವ ಮೊದಲೇ, ಜಾರ್ಜ್ ಕುದುರೆಯನ್ನೇರಿ ತನ್ನ ಡೇರೆಯ ಕಡೆಗೆ ವೇಗವಾಗಿ ಹೊರಟು ಹೋಗಿದ್ದನು. ಅಹಂಕಾರಿಯಾದ ಕ್ಯಾಪ್ಟನ್ಗೆ ಜಾರ್ಜ್ ಒಂದು ದೊಡ್ಡ ಪಾಠವನ್ನು ಕಲಿಸಿದ್ದನು.
ಉದ್ಯೋಗ ಅಥವಾ ಕರ್ತವ್ಯಗಳು ಯಾವುದೇ ಆಗಿರಲಿ, ಎಲ್ಲಾ ಮಾನವರೂ ಸಮಾನರು. ಆದ್ದರಿಂದ ಪ್ರತಿಯೊಬ್ಬರನ್ನೂ ಪ್ರೇಮದಿಂದ ನೋಡಬೇಕು ಮತ್ತು ಗೌರವಿಸಬೇಕು. ಮಾನವನನ್ನು ಶ್ರೇಷ್ಠ ಅಥವಾ ಕನಿಷ್ಠನನ್ನಾಗಿ ಮಾಡುವುದು ಅವನ ಒಳ್ಳೆಯ ಅಥವಾ ಕೆಟ್ಟ ಗುಣಗಳೇ ವಿನಃ ಅವನು ಮಾಡುವ ಉದ್ಯೋಗವಲ್ಲ.
ಪ್ರಶ್ನೆಗಳು:
- ಕ್ಯಾಪ್ಟನ್ ಮಾಡಿದ ತಪ್ಪು ಯಾವುದು?
- ಜಾರ್ಜ್ ವಾಷಿಂಗ್ಟನ್ರವರ ಮಾತುಗಳನ್ನು ಕೇಳಿ ಕ್ಯಾಪ್ಟನ್ ಏಕೆ ನಿಬ್ಬೆರಗಾದನು?
- ಕ್ಯಾಪ್ಟನ್ನ ಸ್ಥಾನದಲ್ಲಿ ನೀವೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?
- ಮನುಷ್ಯನನ್ನು ‘ಶ್ರೇಷ್ಠ’ ನನ್ನಾಗಿಮಾಡುವ ಕೆಲವು ಒಳ್ಳೆಯ ಗುಣಗಳನ್ನೂ ಮತ್ತು ‘ಕನಿಷ್ಠ’ ನನ್ನಾಗಿ ಮಾಡುವ ಕೆಲವು ಕೆಟ್ಟಗುಣಗಳನ್ನೂ ತಿಳಿಸಿ.