ಸತ್ಯವೇ ದೇವರು (1)
ಸತ್ಯವೇ ದೇವರು (1)
ಸತ್ಯದ ಮೇಲಿರುವ ಪ್ರೇಮ ಇದು ಒಬ್ಬ ಶ್ರೇಷ್ಠ ಮಾನವನಲ್ಲಿರುವ ಅಮೂಲ್ಯವಾದ ಗುಣಗಳಲ್ಲಿ ಒಂದು. ತಮ್ಮ ಬಾಲ್ಯದಲ್ಲೂ ಕೂಡ ಅವರೆಲ್ಲ ಸತ್ಯದಿಂದ ದೇವರನ್ನು ಮೆಚ್ಚಿಸಬಹುದೆಂದು ನಂಬಿದ್ದರು. ಆ ಎಳೆ ವಯಸ್ಸಿನಲ್ಲಿದ್ದ ಸತ್ಯದ ಮೇಲಿನ ಅವರ ಪ್ರೇಮ ಅವರಿಗೆ ಜೀವನದಲ್ಲಿ ಬರುವ ಜಗತ್ತಿನ ದುಷ್ಟ ಶಕ್ತಿಗಳೊಡನೆ ಹೋರಾಡುವಂತೆ ಧೈರ್ಯ ಸ್ಥೈರ್ಯಗಳನ್ನು ತಂದುಕೊಟ್ಟವು. ನಾವು ಈ ನೀತಿಗಳನ್ನು ಸ್ವಾಮಿ ವಿವೇಕಾನಂದರಂತಹ ಸಂತರಿಂದ ಹಾಗೂ ಲೋಕಮಾನ್ಯ ತಿಲಕರಂತಹ ದೇಶಭಕ್ತರಿಂದ ತಿಳಿಯುತ್ತೇವೆ. ಇವರು ತಮ್ಮ ಬಾಲ್ಯದಲ್ಲೂ ಕೂಡ ದೇವರನ್ನು ಪ್ರೀತಿಸಿ, ಗೌರವಿಸುವ ಹಾಗೆ ಸತ್ಯವನ್ನು ಪ್ರೀತಿಸಿದರು ಮತ್ತು ಗೌರವಿಸಿದರು.
ಸ್ವಾಮಿ ವಿವೇಕಾನಂದರನ್ನು ಶಾಲೆಯ ದಿನಗಳಲ್ಲಿ ನರೇಂದ್ರನನಾಥ ದತ್ತ ಎಂದು ಕರೆಯುತ್ತಿದ್ದರು. ಅವರು ತಮ್ಮ ಎಳೆವಯಸ್ಸಿನಲ್ಲೂ ಕೂಡ ಸತ್ಯವಂತಿಕೆ ಹಾಗೂ ಧೈರ್ಯವಂತಿಕೆಯಿಂದ ಅವರ ತಂದೆ ತಾಯಿಯರು ಹೆಮ್ಮೆಪಡುವಂತೆ ಮಾಡಿದ್ದರು. ಅವರು ಎಂದಿಗೂ ಸುಳ್ಳು ಹೇಳುತ್ತಿರಲಿಲ್ಲ ಮತ್ತು ತಪ್ಪು ಮಾಡಿದರೆ ತಮ್ಮ ತಪ್ಪನ್ನು ಕೂಡಲೇ ಒಪ್ಪಕೊಂಡುಬಿಡುತ್ತಿದ್ದರು.
ಒಂದು ದಿನ ಅವರ ಗುರುಗಳು ಭೂಗೋಳದ ಮೌಖಿಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಉತ್ತರಿಸುತ್ತಿದ್ದರು. ನರೇಂದ್ರನ ಪಕ್ಕದಲ್ಲಿ ಕುಳಿತ ವಿದ್ಯಾರ್ಥಿಯ ಸರದಿ ಬಂದಾಗ ಗುರುಗಳು ಅವನಿಗೆ ತುಂಬಾ ಕ್ಲಿಷ್ಟಕರವಾದ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಅವನು ಹೆದರುತ್ತಾ ತುಂಬಾ ಮುಜುಗರದಿಂದ ಉತ್ತರಿಸಿದನು. ಆಗ ಗುರುಗಳು ಅವನನ್ನು “ಏನಿದು? ಭೂಗೋಳದ ಬಗ್ಗೆ ನಿನಗಿಷ್ಟೇ ತಿಳುವಳಿಕೆ ಇದೆಯೇ? ನಾನು ತರಗತಿಯಲ್ಲಿ ಪಾಠ ಮಾಡುವಾಗ ನೀನು ಗಮನವಿಟ್ಟು ಕೇಳುವುದಿಲ್ಲ ಮತ್ತು ಮನೆಯಲ್ಲೂ ಕೂಡ ಅಭ್ಯಾಸ ಮಾಡುವುದಿಲ್ಲ” ಎಂದು ಗದರಿದರು. ಬೆತ್ತದಿಂದ ಅವನಿಗೆ ಬಾರಿಸಲು ಕೈಯನ್ನು ಮೇಲಕ್ಕೆತ್ತಿ “ನಿನ್ನ ಕೈಯನ್ನು ಚಾಚು” ಎಂದರು.
ಬೆತ್ತವು ವಿದ್ಯಾರ್ಥಿಯ ಕೈ ತಲುಪುವ ಮುಂಚೆ ನರೇಂದ್ರ ಎದ್ದು ನಿಂತು ಧೈರ್ಯದಿಂದ ಶಿಕ್ಷಕರನ್ನು ಕುರಿತು ಹೇಳಿದ. “ಸರ್ ಅವನನ್ನು ಹೊಡೆಯದಿರಿ. ಅವನು ಸರಿಯಾಗಿಯೇ ಉತ್ತರವನ್ನು ಹೇಳಿದ್ದಾನೆ.” ಇಡೀ ತರಗತಿಯು ಸ್ಥಬ್ದವಾಯಿತು. ಆಗ ಗುರುಗಳು ಕೋಪದಿಂದ ನರೇಂದ್ರನ ಕಡೆಗೆ ತಿರುಗಿ “ನೀನು ನನಗೆ ಭೂಗೋಳವನ್ನು ಕಲಿಸುತ್ತಿಯಾ! ತಾ ಇಲ್ಲಿ ನಿನ್ನ ಕೈಯನ್ನು” ಎಂದು ಗದರಿದರು. ನರೇಂದ್ರ ತನ್ನ ಕೈಯನ್ನು ಮುಂದೆ ಚಾಚಿದ. ಗುರುಗಳು ಬೆತ್ತದಿಂದ ಅವನಿಗೆ ಬಾರಿಸ ಹತ್ತಿದರು. ಆದರೂ ಕೂಡ ನರೇಂದ್ರನು ಗುರುಗಳಿಗೆ “ಸರ್ ಅವನ ಉತ್ತರ ಸರಿಯಾಗಿದೆ” ಎನ್ನುತ್ತಲೇ ಇದ್ದ. ಅವನು ನೋವಿನಿಂದ ಅಳುತ್ತಾ ಮತ್ತೇ “ಸರ್, ದಯವಿಟ್ಟು ಪುಸ್ತಕವನ್ನು ತೆಗೆದು ನೋಡಿ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ” ಎಂದ.
ಸತ್ಯ ಎನ್ನುವ ಶಬ್ದ ಗುರುಗಳ ಹೃದಯಕ್ಕೆ ತಾಕಿತು. ಆದರೂ ಕೂಡ ನರೇಂದ್ರನು ತಪ್ಪು ಹೇಳುತ್ತಿದ್ದಾನೆ ಎಂದು ತೋರಿಸಲು ಗುರುಗಳು ಭೂಗೋಳದ ಪುಸ್ತಕವನ್ನು ತೆರೆದರು. ನಿಧಾನವಾಗಿ ಆ ಪ್ರಶ್ನೆಗೆ ಉತ್ತರ ಇರುವ ಪುಟವನ್ನು ತೆಗೆದು ಓದಲು ಪ್ರಾರಂಭಿಸಿದರು. ಎಲ್ಲ ಮಕ್ಕಳ ಗಮನ ಗುರುಗಳ ಬಾಡುತ್ತಿರುವ ಮುಖದ ಮೇಲೇ ಇತ್ತು.
ಗುರುಗಳು ಆ ಇಬ್ಬರು ವಿದ್ಯಾರ್ಥಿಗಳ ಸಮೀಪಕ್ಕೆ ಬಂದು “ನನ್ನನ್ನು ಕ್ಷಮಿಸಿ. ನಾನು ಅವನ ಉತ್ತರವನ್ನು ತಪ್ಪಾಗಿ ಭಾವಿಸಿದೆ. ಅವನು ಹೇಳಿದ್ದು ಸರಿ”. ಎಂದು ಹೇಳುತ್ತಾ ನರೇಂದ್ರನ ಕಡೆಗೆ ತಿರುಗಿ “ಮಗು ನಿನ್ನ ಧೈರ್ಯ ಮತ್ತು ಸತ್ಯದ ಮೇಲಿರುವ ನಿನ್ನ ಪ್ರೀತಿಗೆ ಮೆಚ್ಚಿದೆ. ನೀನೊಬ್ಬ ಆದರ್ಶ ವಿದ್ಯಾರ್ಥಿ”. ಎಂದರು. ಇದನ್ನು ಕೇಳುತ್ತಿದ್ದಂತೆಯೇ ನರೇಂದ್ರನ ಪೆಟ್ಟು ತಿಂದ ಅಂಗೈ ನೋವು ಮಾಯವಾಗಿ, ಕೊನೆಗೂ ಸತ್ಯಕ್ಕೆ ಜಯವಾಯಿತೆಂದು ಸಂತೋಷಪಟ್ಟ.
ಈ ಸತ್ಯದ ಮೇಲಿನ ಪ್ರೇಮವು ನರೇಂದ್ರನನ್ನು, ಭಗವಂತನ ಕುರಿತು ಸತ್ಯವನ್ನರಿಯಲು ಮತ್ತು ಭಗವಂತನ ಸೃಷ್ಟಿಯನ್ನು ಕುರಿತು ತಿಳಿದುಕೊಳ್ಳಲು ಶ್ರೀ ರಾಮಕೃಷ್ಣ ಪರಮಹಂಸರ ಕಡೆಗೆ ಕರೆದುಕೊಂಡು ಹೋಯಿತು. ನರೇಂದ್ರ ಯಾವಾಗ ಸ್ವಾಮಿ ವಿವೇಕಾನಂದರಾದರೋ ಆಗ ಅವರು ಪ್ರತಿಯೊಬ್ಬ ಮಾನವನೂ ವಿದ್ಯಾವಂತವನಾಗಿ, ಸಂತೋಷದಿಂದ ಜೀವನವನ್ನು ನಡೆಸಬೇಕೆಂಬ ಉದ್ದೇಶದಿಂದ, ಈ ಸತ್ಯವನ್ನು ಜಗತ್ತಿನಾದ್ಯಂತ ಹರಡಲು ತುಂಬಾ ಶ್ರಮವಹಿಸಿದರು.
ಪ್ರಶ್ನೆಗಳು:
- ತನ್ನ ಸಹಪಾಠಿಯನ್ನು ಗುರುಗಳ ಬೆತ್ತದೇಟಿನಿಂದ ತಪ್ಪಿಸಲು ನರೇಂದ್ರನಿಗೆ ಹೇಗೆ ಧೈರ್ಯ ಬಂದಿತು?
- ಗುರುಗಳು ನರೇಂದ್ರನನ್ನು ಬೆತ್ತದಿಂದ ಹೊಡೆಯುತ್ತಿರುವುದನ್ನು ಯಾವ ಕಾರಣಕ್ಕಾಗಿ ನಿಲ್ಲಿಸಿದರು?
- ನೀವು ಎಂದಾದರೂ ಸತ್ಯ ಹೇಳಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದೀರಾ?
- ನೀವು ಎಂದಾದರೂ ಸತ್ಯ ಹೇಳಿ ಸಂತೋಷಿಸಿದ್ದೀರಾ? ನಿಮ್ಮ ಅನುಭವವನ್ನು ಸಂಪೂರ್ಣವಾಗಿ ವಿವರಿಸಿ.