ಪ್ರಾಮಾಣಿಕತೆ
ಪ್ರಾಮಾಣಿಕತೆ
ಒಂದೂರಿನಲ್ಲಿ ರಾಮಚಂದ್ರ ಎಂಬ ಗೌಳಿಗನಿದ್ದನು. ಅವನು ನ್ಯಾಯದಿಂದ, ಸತ್ಯದಿಂದ, ಪ್ರಾಮಾಣಿಕತೆಯಿಂದ ಜೀವನ ಮಾಡುತ್ತಿದ್ದನು. ಅವನಿಗೆ ಇಬ್ಬರು ಮಕ್ಕಳು. ದೊಡ್ಡವನು ಸೂಯಕಾಂತ. ಚಿಕ್ಕವನು ಚಂದ್ರಕಾಂತ. ಯಾವಾಗಲೂ ರಾಮಚಂದ್ರನು ಮಕ್ಕಳಿಗೆ ಹೀಗೆ ಬುದ್ಧಿಮಾತು ಹೇಳುತ್ತಿದ್ದನು, “ಮಕ್ಕಳೇ, ಯಾರಿಗೂ ವಂಚನೆ ಮಾಡಬೇಡಿ, ಯಾರಿಗೂ ಅನ್ಯಾಯ ಮಾಡಬೇಡಿ. ಪ್ರಾಮಾಣಿಕವಾದ ದುಡಿಮೆಯಿಂದ ಜೀವನದಲ್ಲಿ ನಿಜವಾದ ಶಾಂತಿ ಸಮಾಧಾನಗಳು ದೊರಕುತ್ತವೆ.” ಒಂದು ದಿನ ದೊಡ್ಡ ಮಗ ಸೂಯಕಾಂತನು ಸಕಾಲಕ್ಕೆ ದನಗಳನ್ನು ಮೇಯಿಸಲು ಅಟ್ಟಿಕೊಂಡು ಹೋಗಲಿಲ್ಲ ಎಂದು ತಂದೆಗೆ ತುಂಬಾ ಕೋಪ ಬಂತು. ಮಗನನ್ನು ಚೆನ್ನಾಗಿ ಬೈದು ಬಿಟ್ಟನು. ಸೂಯಕಾಂತನಿಗೆ ಇದರಿಂದ ಮನಸ್ಸಿಗೆ ತುಂಬಾ ನೋವಾಗಿ ಮನೆಗೆ ಹಿಂದಿರುಗುವುದೇ ಬೇಡ ಎಂದು ನಿಧರಿಸಿಕೊಂಡು ಹೊರಟು ಹೋದನು.
ಮಗನನ್ನು ಹುಡುಕಿ ಹುಡುಕಿ ರಾಮಚಂದ್ರನು ಬಳಲಿ ಹೋದನು. ಎಷ್ಟು ಕಷ್ಟಪಟ್ಟರೂ ಅಲೆದಾಡಿದರೂ ಮಗ ಸಿಕ್ಕಲಿಲ್ಲ. ಅದೇ ದುಃಖದಲ್ಲೇ ಕೃಶನಾಗಿ ಕೊನೆಗೆ ಸಾಯುವ ಸ್ಥಿತಿಗೆ ಬಂದನು. ಕಿರಿಯ ಮಗ ಚಂದ್ರಕಾಂತನನ್ನು ಹತ್ತಿರ ಕೂಡಿಸಿಕೊಂಡು, “ಮಗು, ಚಂದ್ರ, ನಿನ್ನ ಅಣ್ಣನನ್ನು ಹುಡುಕು. ನಿನ್ನ ಕೈಲಾದಷ್ಟು ಪ್ರಯತ್ನ ಮಾಡು. ಅವನ ಹಣೆಯ ಮೇಲೆ ದೊಡ್ಡದೊಂದು ಕಪ್ಪು ಮಚ್ಚೆ ಇದೆ. ಅದರಿಂದ ನೀನು ಅವನನ್ನು ಗುರುತು ಹಿಡಿಯಬಹುದು. ಎಂದಾದರೂ ಅವನು ಸಿಕ್ಕಿದರೆ, ಅವನನ್ನು ಪ್ರೀತಿಯಿಂದ ಆದರಿಸಿ ನಮ್ಮ ಬಳಿ ಇರುವ ಹತ್ತು ದನಗಳಲ್ಲಿ ಐದನ್ನು ಅವನಿಗೆ ಕೊಡು. ಅದು ಅವನ ಭಾಗ. ಇದನ್ನು ಮರೆಯಬೇಡ, ಉದಾಸೀನ ಮಾಡಬೇಡ.” ಇಷ್ಟು ಹೇಳಿ ರಾಮಚಂದ್ರನು ಕೊನೆಯುಸಿರೆಳೆದನು. ಕಾಲ ಉರುಳಿತು. ಚಂದ್ರಕಾಂತನು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಅಣ್ಣನನ್ನು ಹುಡುಕುತ್ತಲೇ ಇದ್ದನು.
ಒಂದು ದಿನ ಹಸುಗಳನ್ನು ಮೇಯಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ದಾರಿಯ ಪಕ್ಕದ ಮರದ ಕೆಳಗೆ ಒಬ್ಬ ವ್ಯಕ್ತಿಯು ಕುಳಿತಿರುವುದನ್ನು ನೋಡಿದನು. ಅವನ ಹಣೆಯ ಮೇಲೆ ದೊಡ್ಡದಾದ ಕಪ್ಪು ಮಚ್ಚೆ ಇತ್ತು. ಅವನು ತನ್ನ ಅಣ್ಣನೇ ಇರಬೇಕೆಂದು ಚಂದ್ರಕಾಂತನಿಗೆ ತುಂಬಾ ಸಂತೋಷವಾಯಿತು. ಆದರೆ ಅವನಿದ್ದ ಸ್ಥಿತಿ, ಧರಿಸಿದ್ದ ಚಿಂದಿ ಉಡುಪುಗಳನ್ನು ನೋಡಿ ದುಃಖವೂ ಆಯಿತು. “ಸೂಯಣ್ಣ, ಇದೇನು ಹೀಗಾಗಿ ಬಿಟ್ಟಿದ್ದೀಯೆ? ನಿನ್ನನ್ನು ಹುಡುಕುವುದಕ್ಕೋಸ್ಕರ ನಾನೆಷ್ಟು ಕಷ್ಟಪಟ್ಟೆ ಗೊತ್ತಾ? ಅಪ್ಪ ಕೂಡ ನಿನ್ನ ಚಿಂತೆಯಲ್ಲೇ ಕಣ್ಣು ಮುಚ್ಚಿದರು. ಏಳು, ಮನೆಗೆ ಹೋಗೋಣ,” ಎಂದನು.
ಚಂದ್ರಕಾಂತನು ಅಣ್ಣನನ್ನು ಪ್ರೀತಿಯಿಂದ ಮನೆಗೆ ಕರೆ ತಂದನು. ವಿಧವಿಧವಾಗಿ ಆದರಿಸಿದನು. “ನಿನ್ನ ಪಾಲಿನ ಐದು ದನಗಳನ್ನು ಸುರಕ್ಷಿತವಾಗಿ ಕಾಪಾಡಿದ್ದೇನೆ. ತೆಗೆದುಕೋ,” ಎಂದನು. ಒಟ್ಟಿಗೆ ಊಟ ಮಾಡಿ, ಒಂದೇ ಕಂಬಳಿಯನ್ನು ಹೊದ್ದು ಬೆಚ್ಚಗೆ ಮಲಗಿಕೊಂಡರು. ಮರುದಿನ ಬೆಳಿಗ್ಗೆ ಎದ್ದು ನೋಡುವಾಗ ಸೂಯಕಾಂತ ಇರಲಿಲ್ಲ. ಅವನು ಯಾವಾಗ ಎದ್ದು ಹೋಗಿದ್ದನೋ ಚಂದ್ರಕಾಂತನಿಗೆ ತಿಳಿಯಲಿಲ್ಲ. ತನ್ನ ಪಾಲಿನ ಐದು ದನಗಳನ್ನೂ ಹೊಡೆದುಕೊಂಡು ಹೋಗಿದ್ದನು. ಚಂದ್ರನಿಗೆ ತುಂಬಾ ಆಶ್ಚಯವಾಯಿತು. ತಾನು ಅಣ್ಣನಿಗೆ ಏನೂ ಅನ್ನಲಿಲ್ಲವಲ್ಲ, ಆದರೂ ಅವನು ಏಕೆ ಹೀಗೆ ಮಾಡಿದ? ಅಥವಾ ಬೇರೆ ಯಾರಾದರೂ ಸೂಯಣ್ಣನ ಹಾಗೆ ಬಂದು ತನ್ನನ್ನು ಮೋಸಗೊಳಿಸಿದರೇ? ಏನೂ ತಿಳಿಯದೆ ಚಂದ್ರಕಾಂತ ಕಳವಳಪಟ್ಟನು. ‘ಏನಾದರೇನು, ನಾನಂತೂ ಅಪ್ಪ ಹೇಳಿದಂತೆ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ ಎಂದುಕೊಂಡನು.’
ಇದಾದ ಒಂದೆರಡು ತಿಂಗಳ ನಂತರ ಒಂದು ದಿನ ಚಂದ್ರಕಾಂತನ ಮನೆಯ ಮುಂದೆ ಒಂದು ಎತ್ತಿನ ಬಂಡಿ ಬಂದು ನಿಂತಿತು. ಶ್ರೀಮಂತನಂತೆ ಉಡುಗೆ ಧರಿಸಿದ ಒಬ್ಬ ವ್ಯಕ್ತಿಯು ಬಂಡಿಯಿಂದ ಇಳಿದು ಮನೆಯೊಳಕ್ಕೆ ಬಂದನು. ಚಂದ್ರಕಾಂತ ನೋಡುತ್ತಾನೆ, ಇವನ ಹಣೆಯ ಮೇಲೂ ಕಪ್ಪನೆಯ ದೊಡ್ಡ ಮಚ್ಚೆಯಿದೆ! ಬೆಪ್ಪಾಗಿ ನಿಂತ ಇವನ ಹತ್ತಿರಕ್ಕೆ ಮುಗುಳುನಗುತ್ತಾ ಬಂದು ನಿಂತು ಅವನು ಹೇಳಿದನು, “ಚಂದ್ರು, ನಾನು ಯಾರೆಂದು ಗೊತ್ತಾಗಲಿಲ್ಲವೆ?” ಚಂದ್ರಕಾಂತನ ಕಣ್ಣು ತುಂಬಾ ನೀರು ತುಂಬಿಕೊಂಡಿತು. ಅಣ್ಣ ನಿನ್ನನ್ನು ಚೆನ್ನಾಗಿ ಗುರುತಿಸಬಲ್ಲೆ ಆದರೆ ನಾನು ಒಂದು ದೊಡ್ಡ ತಪ್ಪು ಮಾಡಿಬಿಟ್ಟಿದ್ದೇನೆ. ಈಗ ಎರಡು ತಿಂಗಳ ಹಿಂದೆ ಬೇರೊಬ್ಬ ವ್ಯಕ್ತಿ ನಿನ್ನ ಹಾಗೆ ಹಣೆಯ ಮೇಲೆ ಗುರುತಿದ್ದವನು ನನಗೆ ಕಾಣಿಸಿದ. ಅವನು ನೀನೆ ಅಂತ ತಿಳಿದುಕೊಂಡು ಮನೆಗೆ ಕರೆತಂದು ಊಟ ಮಾಡಿಸಿ ನಿನ್ನ ಪಾಲಿಗೆ ಸಲ್ಲಬೇಕಾಗಿದ್ದ ಐದು ದನಗಳನ್ನು ಅವನಿಗೆ ಕೊಟ್ಟುಬಿಟ್ಟೆ. ಅವನು ಬೆಳಗಾಗುವಷ್ಟರಲ್ಲಿ ದನಗಳನ್ನು ಹೊಡೆದುಕೊಂಡು ಹೊರಟುಹೋಗಿ ಬಿಟ್ಟಿದ್ದನು. ನಾನು ಎಂತಹ ತಪ್ಪು ಮಾಡಿಬಿಟ್ಟೆ ಅನ್ನುವುದು ಈಗ ನನಗೆ ತಿಳಿಯುತ್ತಿದೆ. ನನ್ನ ಅವಿವೇಕದಿಂದ ನಿನಗೆ ಅನ್ಯಾಯ ಆಗಬಾರದು. ನಾವು ಪ್ರಾಮಾಣಿಕರೂ, ನ್ಯಾಯಪರರೂ ಆಗಿರಬೇಕೆಂದು ಅಪ್ಪ ಹೇಳುತ್ತಿರಲಿಲ್ಲವೇ? ನನ್ನ ಪಾಲಿನ ಐದು ದನಗಳನ್ನು ನಿನಗೆ ಕೊಟ್ಟುಬಿಡುತ್ತೇನೆ, ನೀನು ಸುಖವಾಗಿರು.”
ತಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡು ಸೂಯಕಾಂತನು ಆನಂದದ ಕಣ್ಣೀರು ಹರಿಸಿದನು. “ನನ್ನ ಪ್ರೀತಿಯ ಚಂದ್ರು, ನೀನು ಯಾವ ತಪ್ಪನ್ನೂ ಮಾಡಲಿಲ್ಲ. ಎರಡು ತಿಂಗಳ ಹಿಂದೆ ಬಂದಿದ್ದವನು ನಾನೇ. ನಿನ್ನ ಪ್ರಾಮಾಣಿಕತೆಯನ್ನು ಪರೀಕ್ಷೆ ಮಾಡಲೆಂದು ಹಾಗೆ ಚಿಂದಿ ಧರಿಸಿ ಬಂದಿದ್ದೆ. ನೀನು ಧಮವನ್ನು ಬಿಡಲಿಲ್ಲ. ಅಪ್ಪನ ಹಾಗೆಯೇ ನೀನು ಸತ್ಯವಂತ. ನೋಡು ಚಂದ್ರು, ಅಪ್ಪನ ಆಶೀವಾದದಿಂದ ನಾನು ಹಣ್ಣು ತರಕಾರಿ ವ್ಯಾಪಾರ ಆರಂಭಿಸಿ ಸಾಕಷ್ಟು ಮಾಡಿಕೊಂಡಿದ್ದೇನೆ, ಶ್ರೀಮಂತನಾಗಿದ್ದೇನೆ. ನಗರದಲ್ಲಿ ನನಗೊಂದು ಮನೆಯೂ ಇದೆ. ಹಣ್ಣಿನ ತೋಟವಿದೆ, ಎತ್ತಿನ ಬಂಡಿಯಿದೆ. ನಿನ್ನನ್ನು ಕರೆದುಕೊಂಡು ಹೋಗಲೆಂದೇ ನಾನೀಗ ಬಂದಿದ್ದೇನೆ. ನಿನಗೋಸ್ಕರವೇ ಒಂದು ಚಿಕ್ಕ ಮನೆ ಮಾಡಿದ್ದೇನೆ. ನೀನು ಅಲ್ಲಿ ಹಾಲು, ಮಿಠಾಯಿ ಮಾರುವ ಅಂಗಡಿ ತೆರೆದು ಸುಖವಾಗಿರಬಹುದು.”
ಇಬ್ಬರೂ ಕೈ ಹಿಡಿದುಕೊಂಡು ತಂದೆಯ ಭಾವಚಿತ್ರದೆದುರಿಗೆ ನಿಂತು ಭಕ್ತಿಯಿಂದ ಕೈಮುಗಿದರು. “ಅಪ್ಪ ನೀನು ಹೇಳಿಕೊಟ್ಟ ಪಾಠ ನಮಗಿಂದು ದಾರಿದೀಪವಾಗಿದೆ. ಪ್ರಾಮಾಣಿಕತೆ ನಮ್ಮ ಬಾಳಿನಲ್ಲಿ ಫಲ ಕೊಟ್ಟಿದೆ. ಎಣೆಯಿಲ್ಲದ ಶಾಂತಿ ಸಮಾಧಾನಗಳು ನಮಗೆ ದೊರೆತಿವೆ.”
ಪ್ರಶ್ನೆಗಳು:
- ಚಂದ್ರಕಾಂತ ಪ್ರಾಮಾಣಿಕನಾಗಿದ್ದುದರಿಂದ ಯಾವ ಲಾಭ ಪಡೆದನು?
- ಸೂಯಕಾಂತ ಪ್ರಾಮಾಣಿಕನಾಗಿದ್ದುದರಿಂದ ಪಡೆದ ಲಾಭವೇನು?
- ಇಬ್ಬರು ಸಹೋದರರು ತಮ್ಮ ತಂದೆಯಿಂದ ಯಾವ ಪಾಠ ಕಲಿತರು? ಅವರು ತಮ್ಮ ತಂದೆಗೆ ಏಕೆ ಕೃತಜ್ಞರಾಗಿದ್ದರು?
[Narration: Ms. Shreya Pulli, Sri Sathya Sai Balvikas Alumna]