ದುಡಿಮೆಯೇ ಪುರುಷ ಲಕ್ಷಣ

Print Friendly, PDF & Email
ದುಡಿಮೆಯೇ ಪುರುಷ ಲಕ್ಷಣ

ಒಂದು ಸಂಜೆ ನಾಲ್ವರು ಹುಡುಗರು ಬಯಲಿನಲ್ಲಿ ಆಟವಾಡುತ್ತಿದ್ದರು. ಆಡುತ್ತಾ ಆಡುತ್ತಾ ಆ ಬಯಲಿನ ಅಂಚಿಗೆ ಬಂದಾಗ ಅವರಿಗೆ ನೆಲೆದೊಳಗಿನಿಂದ ಒಂದು ದನಿ ಕೇಳಿಸಿತು. “ನೆಲವನ್ನು ಅಗೆದು ನನ್ನನ್ನು ಹೊರತೆಗೆಯಿರಿ. ನೀವು ಬೇಡಿದ್ದನ್ನೆಲ್ಲ ನಾನು ಕೊಡುತ್ತೇನೆ,” ಎನ್ನುತ್ತಿತ್ತು ಆ ಸಣ್ಣ ದನಿ.

ಹುಡುಗರು ಕುತೂಹಲದಿಂದ ಆ ಸ್ಥಳದಲ್ಲಿ ನೆಲವನ್ನು ಅಗೆದರು. ಸ್ವಲ್ಪ ಕೆಳಗೆ ಅವರಿಗೊಂದು ಹಣತೆ ಕಾಣಿಸಿತು. ಅದು ಹೇಳಿತು: “ನಾನು ಅಲ್ಲಾವುದ್ದೀನನ ದೀಪ. ನನ್ನ ಹೆಸರನ್ನು ನೀವು ಕೇಳಿಲ್ಲವೆ? ನಿಮ್ಮಲ್ಲಿ ಒಬ್ಬೊಬ್ಬರೂ ಏನು ಬೇಕೋ ಕೇಳಿ, ನಾನು ಕೊಡುತ್ತೇನೆ.”

ಮೊದಲನೆಯ ಹುಡುಗ ಹೇಳಿದನು: “ನನಗೆ ಆಟ ತುಂಬಾ ಇಷ್ಟ. ಕ್ರಿಕೆಟ್ ಬ್ಯಾಟು, ಚೆಂಡು, ವಿಕೆಟ್ಟು ಇವೆಲ್ಲ ಬೇಕು. ಬೇರೆ ಬೇರೆ ಆಟದ ಸಾಮಾನುಗಳೂ ಬೇಕು”. ಎರಡನೆಯವನು ಹೇಳಿದನು: “ಪ್ರತಿದಿನ ನಮ್ಮ ಉಪಾಧ್ಯಾಯರು ತುಂಬಾ ಮನೆಕೆಲಸ ಕೊಡುತ್ತಾರೆ. ನನ್ನ ಕೈಲಿ ಅದನ್ನು ಪೂರೈಸೋಕೇ ಆಗೋದಿಲ್ಲ. ನೀನು ದಿನಾಲು ಬಂದು ಅವುಗಳನ್ನು ಮಾಡಿಕೊಟ್ಟು ಹೋಗು.” ಮೂರನೆಯವನು ಹೇಳಿದನು: “ನನಗೇನೂ ಬೇಡ. ಅಲ್ಲಿ ನೋಡು, ಈ ಊರಿನ ಬೀದಿಬೀದಿಗಳಲ್ಲಿ ಭಿಕ್ಷುಕರಿದ್ದಾರೆ. ಪಾಪ, ಅವರಿಗೆ ನೀನು ಸಾಕಷ್ಟು ಹಣ ಕೊಡು.”

ನಾಲ್ಕನೆಯವನು ನುಡಿದನು: “ಓ ಮಾಯಾದೀಪವೆ, ನಮಗೆ ನೀನು ಏನನ್ನೂ ಕೊಡಬೇಡ. ಈಗಲೇ ಮಾಯಾವಾಗಿ ಬಿಡು. ನಾವು ಜಾಣತನದಿಂದ ಕಷ್ಟಪಟ್ಟು ಕೆಲಸಮಾಡಿ, ದುಡಿದು ಸಂಪಾದಿಸಲು ದೇವರು ನಮಗೆ ಕೈ, ಕಾಲು, ನಾಲಿಗೆ, ಕಣ್ಣು, ಮೂಗು ಮೊದಲಾದ ಅವಯವಗಳನ್ನು ಕೊಟ್ಟಿದ್ದಾನೆ. ಅವುಗಳನ್ನು ಬಳಸಿಕೊಂಡು ನಾವೂ ಸುಖವಾಗಿರಬೇಕು, ಇತರರನ್ನೂ ಸುಖವಾಗಿಡಬೇಕು. ಸ್ವತಃ ದುಡಿಯುವುದರಲ್ಲೇ ಮನುಷ್ಯನ ಹಿರಿಮೆಯಿದೆ. ದುಡಿಮೆಯೇ ಪುರುಷ ಲಕ್ಷಣ. ಹಾಗಿರುವಾಗ ನಾವೇಕೆ ನಿನ್ನೆದುರಿಗೆ ಭಿಕ್ಷುಕರ ಹಾಗೆ ಕೈ ಒಡ್ಡಿ ಅಂಗಲಾಚಬೇಕು? ದೇವರು ಕೊಟ್ಟಿರುವಾಗ ಈ ಅಮೂಲ್ಯ ವರಗಳನ್ನು ಏಕೆ ಕಳೆದುಕೊಳ್ಳಬೇಕು?”

ನಾಲ್ಕನೆಯ ಹುಡುಗನು ಆಡಿದ ಈ ಮಾತು ದೀಪಕ್ಕೆ ತುಂಬಾ ಮೆಚ್ಚುಗೆಯಾಯಿತು. ಆ ಕ್ಷಣವೇ ಅದು ಅಲ್ಲಿಂದ ಮಾಯಾವಾಗಿ ಬಿಟ್ಟಿತು.

ಪ್ರಶ್ನೆಗಳು:
  1. ಮೊದಲ ಮೂರು ಹುಡುಗರು ಕೇಳಿಕೊಂಡ ಕೋರಿಕೆಯಲ್ಲಿ ಏನು ತಪ್ಪಿತ್ತು? ಪ್ರತಿಯೊಬ್ಬರ ಬಗ್ಗೆ ನಿಮ್ಮ ಅನಿಸಿಕೆಯನ್ನು ಬರೆಯಿರಿ.
  2. ಏಕೆ ಮಾಯಾದೀಪ ನಾಲ್ಕನೇ ಹುಡುಗನ ಕೋರಿಕೆಯನ್ನು ಇಷ್ಟಪಟ್ಟಿತು?
  3. ನಿಮ್ಮ ಮುಂದೆ ಮಾಯಾದೀಪ ಪ್ರತ್ಯಕ್ಷವಾದರೆ, ನೀವು ಏನು ಕೇಳುವಿರಿ?

[Narration: Ms. Shreya Pulli, Sri Sathya Sai Balvikas Alumna]

Leave a Reply

Your email address will not be published. Required fields are marked *