ತಾಯಿಯೇ ದೇವರು

Print Friendly, PDF & Email
ತಾಯಿಯೇ ದೇವರು

ಸಂಜೆ ನಾಲ್ಕು ಗಂಟೆಯ ಸಮಯ. ಆಕಾಶದ ತುಂಬ ಮೋಡಗಳು ತುಂಬಿದ್ದವು. ಆಗ ತಾನೆ ಮಳೆ ಬಂದು ರಸ್ತೆಗಳೆಲ್ಲ ನೆನೆದಿದ್ದವು. ಶಾಲೆ ಮುಗಿದು ಗಂಟೆ ಬಾರಿಸಿದುದರಿಂದ ಹುಡುಗರು ಗುಂಪು ಗುಂಪಾಗಿ ಹೊರ ಬಂದು ಬೇಗ ಬೇಗ ಮನೆಯ ಕಡೆ ಅಥವಾ ಆಟದ ಬಯಲಿನ ಕಡೆ ಹೋಗುತ್ತಿದ್ದರು.

ಶಾಲೆಯ ಗೇಟಿನ ಬಳಿ ಒಬ್ಬ ಮುದುಕಿ ಬಹು ಹೊತ್ತಿನಿಂದ ನಿಂತುಕೊಂಡಿದ್ದಳು. ಆಕೆ ರಸ್ತೆಯನ್ನು ದಾಟಬೇಕಾಗಿತ್ತು. ಅವಳು ಮಳೆಯಲ್ಲಿ ಪೂರ್ತಿ ತೊಯ್ದು ಹೋಗಿದ್ದಳು. ಅಶಕ್ತವಾದ ಹಣ್ಣಾದ ಅಕೆಯ ಶರೀರ ಚಳಿ ತಡೆಯಲಾರದೆ ನಡುಗುತಿತ್ತು. ಆ ಸ್ಥಿತಿಯಲ್ಲಿ ಜಾರುವ ರಸ್ತೆಯನ್ನು ಯಾರ ಸಹಾಯವೂ ಇಲ್ಲದೆ ದಾಟಲು ಅವಳಿಗೆ ಧೈರ್ಯವಾಗಲಿಲ್ಲ. ಆದರೆ ಅವಳ ಪಕ್ಕದಿಂದಲೇ ಹೋಗುತ್ತಿದ್ದ ಯಾರೊಬ್ಬರೂ ಅವಳಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಅನೇಕ ಹುಡುಗರು ಹಾಗೆಯೇ ಹೊರಟು ಹೋದರು.

ಕೊನೆಗೆ ಮೋಹನನು ಬಂದನು. ಗೇಟು ದಾಟುತ್ತಿದ್ದಂತೆಯೇ ಚಳಿಯಿಂದ ತತ್ತರಿಸುತ್ತಿದ್ದ ಈ ಮುದುಕಿ ಅವನ ಕಣ್ಣಿಗೆ ಬಿದ್ದಳು. ಸ್ವಲ್ಪ ಹೊತ್ತು ಅವಳನ್ನೇ ನೋಡುತ್ತಾ ವಿಚಾರ ಮಾಡುತ್ತಾ ಅವನು ನಿಂತುಕೊಂಡನು. ಅವನಿಗೆ ಬಹಳ ಕೆಡುಕೆನಿಸಿತು. ಆಟಕ್ಕೆ ಬೇಗ ಬರಬೇಕೆಂದು ಗೆಳೆಯರು ಕಿರುಚುತ್ತಿದ್ದರು. ಆದರೆ ಅದಾವುದೂ ಅವನ ಕಿವಿಗೆ ಬೀಳಲೇ ಇಲ್ಲ. ನಿಧಾನವಾಗಿ ಆ ಮುದುಕಿಯ ಬಳಿ ಹೋಗಿ, ಮಧುರವಾಗಿ ಪ್ರೀತಿಯಿಂದ ಅವಳನ್ನು ಕೇಳಿದನು. “ಅಮ್ಮ, ನೀನು ತುಂಬಾ ದುರ್ಬಲಳಾಗಿದ್ದಿಯೇ, ಚಳಿಯಲ್ಲಿ ನಡುಗುತ್ತಿದ್ದೀಯೆ. ನಾನೇನಾದರೂ ಸಹಾಯ ಮಾಡಬಹುದೆ?”

ಈ ಮಾತುಗಳನ್ನು ಕೇಳಿ ಮುದುಕಿಯ ಮುಖ ಅರಳಿತು. ಸ್ವಲ್ಪ ಹೊತ್ತಿಗೆ ಮುಂಚೆ ಈ ಜಗತ್ತಿನಲ್ಲಿ ತನ್ನವರು ಯಾರು ಇಲ್ಲ ಎಂದುಕೊಂಡಿದ್ದಳು. ಈಗ ಈ ಹುಡುಗ ‘ಅಮ್ಮಾ’ ಎಂದು ಪ್ರೀತಿಯಿಂದ ಕರೆಯುತ್ತಿದ್ದಾನೆ. ಸಹಾಯ ಮಾಡಲೇ? ಎಂದು ಕೇಳುತ್ತಿದ್ದಾನೆ! ಆಕೆ ಹೇಳಿದಳು, “ಮುದ್ದು ಮಗು, ಈ ಜಾರುವ ರಸ್ತೆಯನ್ನು ದಾಟಿ ಆಚೆ ಬದಿಗೆ ಹೋಗಲು ನನಗೆ ಸಹಾಯ ಮಾಡುವಿಯಾ? ಅಲ್ಲೇ ಹತ್ತಿರ ಆ ಅಂಗಡಿಯ ಹಿಂದೆ ನನ್ನ ಮನೆ ಇದೆ.”

ಮೋಹನನು ಆಗಲಿ ಎಂದು ಆ ಮುದುಕಿಯ ನಡುಗುತ್ತಿದ್ದ ಕೈಯನ್ನು ತನ್ನ ಹೆಗಲಮೇಲೆ ಹಾಕಿಕೊಂಡು, “ಬಾ ಅಮ್ಮ, ಸಾವಕಾಶವಾಗಿ ನಡೆ. ನಿನ್ನ ಮನೆಯವರೆಗೂ ನಾನು ಬರುತ್ತೇನೆ,” ಎಂದನು.

ಹಾಗೆ ಅವರಿಬ್ಬರೂ ಕೂಡಿ ನಡೆಯುತ್ತಿರುವಾಗ ಮುದುಕಿಯು ಮೋಹನನೊಡನೆ ಪ್ರೀತಿಯಿಂದ ಮಾತನಾಡುತ್ತಿದ್ದಳು. ಅವನನ್ನು ಹೊಗಳುತ್ತಿದ್ದಳು. ಅವನ ತಂದೆ ತಾಯಿಯರ ಬಗ್ಗೆ ವಿಚಾರಿಸುತ್ತಿದ್ದಳು.

ಮನೆ ಬಂದಿತು. ಮುದುಕಿಯನ್ನು ಬಾಗಿಲು ಬಳಿ ನಿಲ್ಲಿಸಿ ಮೋಹನನು ಹೆಗಲ ಮೇಲಿನ ಕೈಯನ್ನು ನಿಧಾನವಾಗಿ ಕೆಳಗಿಳಿಸಿದನು. ಮುದುಕಿಯು ಕೃತಜ್ಞತೆಯಿಂದ ಕಣ್ತುಂಬ ನೀರು ತುಂಬಿಕೊಂಡು ಹೇಳಿದಳು, “ಮಗು, ದೇವರು ನಿನಗೆ ಒಳ್ಳೆಯದು ಮಾಡಲಿ, ಆತನು ನಿನ್ನನ್ನು ಸದಾ ಸುಖಿಯನ್ನಾಗಿಡಲಿ.”

ಆ ಮಾತುಗಳನ್ನು ಕೇಳಿ ಮೋಹನನಿಗೆ ತನ್ನಲ್ಲಿ ಹೊಸ ಶಕ್ತಿ ಹೊಸ ಸಂತೋಷ ತುಂಬಿದಂತೆ ಅನ್ನಿಸಿತು, ಆಮೇಲೆ ಗೆಳೆಯರನ್ನು ಕೂಡಿಕೊಳ್ಳಲು ಅವನು ಆಟದ ಬಯಲಿಗೆ ಹೋದಾಗ ಗುರುತು ಪರಿಚಯ ಇಲ್ಲದ ಮುದುಕಿಗಾಗಿ ಅವನು ಅಷ್ಟೊಂದು ತೊಂದರೆ ತೆಗೆದುಕೊಂಡದ್ದಾದರೂ ಏಕೆ? ಎಂದು ಅವರು ಕೇಳಿದರು. ಮೋಹನನು ಗಂಭೀರವಾಗಿ ಆಕೆ ಯಾರಿಗಾದರೂ ತಾಯಿಯಾಗಿರಬೇಕೆಂಬ ಭಾವನೆಯಿಂದ ಸಹಾಯ ಮಾಡಿದುದಾಗಿ ಉತ್ತರ ಕೊಟ್ಟನು.

ಪ್ರಶ್ನೆಗಳು:
  1. ಮೋಹನನಂತೆ ಎಲ್ಲರೂ ಹೇಗೆ ತಮ್ಮ ತಾಯಿಯನ್ನು ಪ್ರೀತಿಸಬೇಕು?
  2. ಮುದುಕಿಗೆ ಏಕೆ ಸಂತೋಷವಾಯಿತು? ಮೋಹನನಿಗೆ ಏಕೆ ಸಂತೋಷವಾಯಿತು?
  3. ನಿಮ್ಮ ಪಾಲಕರು ಸಂತೋಷಗೊಳ್ಳುವಂತೆ ನೀವು ಮಾಡಿದ ಯಾವುದಾದರೂ ಒಂದು ಒಳ್ಳೆಯ ಕೆಲಸದ ಬಗ್ಗೆ ಬರೆಯಿರಿ.

[Narration: Ms. Shreya Pulli, Sri Sathya Sai Balvikas Alumna]

Leave a Reply

Your email address will not be published. Required fields are marked *