ಯಾವುದೂ ನಿರುಪಯುಕ್ತವಲ್ಲ

Print Friendly, PDF & Email
ಯಾವುದೂ ನಿರುಪಯುಕ್ತವಲ್ಲ

ಹಿಂದಿನ ಕಾಲದಲ್ಲಿ ಬಾಲಕರು ತಮ್ಮ ವಿದ್ಯಾಭ್ಯಾಸಕ್ಕಾಗಿ ಗುರುಕುಲಗಳಿಗೆ ತೆರಳುತ್ತಿದ್ದರು. ಅಲ್ಲಿ ಗುರುಗಳೊಂದಿಗೆ ಅನೇಕ ವರ್ಷಗಳವರೆಗೆ ವಾಸಿಸುತ್ತಿದ್ದರು.ತಾವು ಬಯಸಿದ ಜ್ಞಾನವನ್ನು ಗಳಿಸಿದ ಮೇಲೆ,ಗುರುಗಳ ಆಶೀರ್ವಾದ ಪಡೆದು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಬದುಕಿನಲ್ಲಿ ನೆಲೆಗೊಳ್ಳುತ್ತಿದ್ದರು. ಒಮ್ಮೆ ಗುರುಕುಲ ದಿಂದ ಮನೆಗೆ ಹೊರಡಬೇಕಿದ್ದ ಇಬ್ಬರು ಶಿಷ್ಯರು ಗುರುಗಳ ಬಳಿಗೆ ಬಂದು, “ಗುರುದೇವ, ಗುರುದಕ್ಷಿಣೆಯಾಗಿ ನಾವು ನಿಮಗೆ ಏನನ್ನು ಕೊಡಬಹುದು? ದಯ ವಿಟ್ಟು ತಿಳಿಸಿ” ಎಂದು ಕೇಳಿದರು. ಶಿಷ್ಯರ ಪ್ರೀತಿ ಮತ್ತು ಕೃತಜ್ಞತೆಗಳನ್ನು ಕಂಡು ಗುರುಗಳು ಸಂತೋಷಪಟ್ಟರು. ಶಿಷ್ಯರ ಭಕ್ತಿ, ಶಿಸ್ತು ಮತ್ತು ಕರ್ತವ್ಯಪ್ರಜ್ಞೆ ಗಳಿಂದಾಗಿ ಗುರುಗಳೂ ಸಹ ಅವರನ್ನು ಪ್ರೀತಿಸುತ್ತಿದ್ದರು. ಆದ್ದರಿಂದ ಅವರು ಶಿಷ್ಯರಿಂದ ಏನನ್ನೂ ನಿರೀಕ್ಷಿಸಲಿಲ್ಲ.

ಆದರೂ ಅವರು ತಮ್ಮ ಶಿಷ್ಯರ ತಿಳವಳಿಕೆಯನ್ನುಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದರು. ಆದ್ದರಿಂದ ಅವರು, “ಪ್ರೀತಿಯ ಮಕ್ಕಳೇ, ನಮ್ಮ ಗುರುಕುಲದ ಹಿಂದಿರುವ ಕಾಡಿಗೆ ಹೋಗಿ, ಯಾರಿಗೂ ಯಾವುದೇ ಉಪಯೋಗವಿಲ್ಲದ ಕೆಲವು ಒಣ ಎಲೆಗಳನ್ನು ನನಗೆ ತಂದುಕೊಡಿ” ಎಂದು ಹೇಳಿದರು. ತಮ್ಮ ಗುರುಗಳು ಈ ವಿಚಿತ್ರ ಉಡುಗೊರೆಯನ್ನು ಏಕೆ ಕೇಳಿದ್ದಾರೆಂದು ಶಿಷ್ಯರು ಆಶ್ಚರ್ಯಪಟ್ಟರು. ಆದರೆ ಅವರು ಗುರುಗಳಿಗೆ ತುಂಬಾ ವಿಧೇಯರಾಗಿದ್ದುದರಿಂದ, ತಮ್ಮ ಗುರುಗಳ ಆಜ್ಞೆಯಂತೆ ಕಾಡಿಗೆ ತೆರಳಿದರು.

ಅವರು ಕಾಡಿಗೆ ಪ್ರವೇಶಿಸಿದ ತಕ್ಷಣವೇ ಒಂದು ಮರದ ಕೆಳಗಿದ್ದ, ಒಣ ಎಲೆಗಳ ಒಂದು ಚಿಕ್ಕ ರಾಶಿಯ ಹತ್ತಿರ ಬಂದರು. ಅವುಗಳಲ್ಲಿ ಕೆಲವನ್ನು ಅವರು ಆರಿಸಿಕೊಳ್ಳುತ್ತಿರುವಾಗ, ಒಬ್ಬ ವಯಸ್ಸಾದ ರೈತನು ಅವರ ಬಳಿ ಓಡಿಬಂದು, “ದಯವಿಟ್ಟು ಆ ಎಲೆಗಳನ್ನು ಮತ್ತೆ ರಾಶಿಗೆ ಹಾಕಿ. ನಾನು ಅವುಗಳನ್ನು ಸಂಗ್ರಹಿಸಿದ್ದೇನೆ. ಹೊಲಕ್ಕೆ ತೆಗೆದುಕೊಂಡು ಹೋಗುತ್ತೇನೆ. ಅವುಗಳನ್ನು ಸುಟ್ಟಾಗ, ದೊರೆಯುವ ಬೂದಿಯು ಉತ್ತಮ ಗೊಬ್ಬರವಾಗಿ, ಆಹಾರ ಧಾನ್ಯಗಳ ಸಮೃದ್ಧ ಬೆಳೆಯನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದು ಹೇಳಿದನು.

ಶಿಷ್ಯರು ಆಗ ಕಾಡಿನಲ್ಲಿ ಇನ್ನೂ ಸ್ವಲ್ಪ ಮುಂದಕ್ಕೆ ಹೋದರು. ಅವರು ಒಂದು ಎತ್ತರವಾದ ಮರದ ಕೆಳಗೆ ಕೆಲವು ಒಣ ಎಲೆಗಳನ್ನು ನೋಡಿದರು.ಅವರಿಬ್ಬರೂ ಅದನ್ನು ನೋಡುತ್ತಿರುವಾಗ, ಒಂದು ದೊಡ್ಡ ಪಕ್ಷಿಯು ಕೆಳಕ್ಕೆ ಎರಗಿ, ಒಂದು ಎಲೆಯನ್ನು ಎತ್ತಿಕೊಂಡು ಹಾರಿಹೋಯಿತು. ಆ ಹಕ್ಕಿಯು ಹತ್ತಿರದಲ್ಲಿದ್ದ ಒಂದು ಚಿಕ್ಕ ಮರದ ಮೇಲ್ತುದಿಗೆ ಎಲೆಯನ್ನು ಎತ್ತಿಕೊಂಡು ಹೋಗುವುದನ್ನು ಅವರು ಗಮನಿಸಿದರು. ಅಲ್ಲಿ ಅದು ತನಗಾಗಿ ಗೂಡು ಕಟ್ಟಿಕೊಳ್ಳಲು ಒಣ ಎಲೆಯನ್ನು ಉಪಯೋಗಿಸುತ್ತಿತ್ತು.

ಶಿಷ್ಯರು ಆ ರಾಶಿಯನ್ನು ಬಿಟ್ಟು ಇನ್ನೂ ಸ್ವಲ್ಪ ಮುಂದೆ ಕಾಡಿನೊಳಕ್ಕೆ ಹೋದರು. ಅಲ್ಲಿ ಅವರು ಮೂವರು ಮಹಿಳೆಯರು ಒಣ ಎಲೆಗಳನ್ನು ಸಂಗ್ರಹಿಸಿ ತಮ್ಮ ಬುಟ್ಟಿಗಳಿಗೆ ಹಾಕುತ್ತಿರುವುದನ್ನು ನೋಡಿದರು. ‘ನೀವು ಈ ಒಣ ಎಲೆಗಳಿಂದ ಏನು ಮಾಡುತ್ತೀರಿ?’ ಎಂದು ಅವರನ್ನು ಕೇಳಿದರು. ಆಗ ಅವರಲ್ಲಿ ಒಬ್ಬ ಮಹಿಳೆ, “ಪ್ರಿಯ ಸೋದರರೆ, ನಾನು ಇವುಗಳನ್ನು, ಸ್ನಾನ ಮಾಡಲು ಮತ್ತು ಬಟ್ಟೆ ಒಗೆಯಲು ಬಳಸುವ ನೀರನ್ನು ಕಾಯಿಸಲು ಇಂಧನವಾಗಿ ಉಪಯೋಗಿಸುತ್ತೇನೆ” ಎಂದು ಹೇಳಿದಳು. ಎರಡನೆ ಮಹಿಳೆಯು, “ನಾವು ಉತ್ತಮವಾದ ಎಲೆಗಳಿಂದ ಪತ್ರಾವಳಿಗಳನ್ನು ತಯಾರಿಸುತ್ತೇವೆ. ಅವುಗಳನ್ನು ಆಶ್ರಮ ಮತ್ತು ದೇವಾಲಯಗಳಲ್ಲಿ ಊಟದ ತಟ್ಟೆಗಳನ್ನಾಗಿ ಬಳಸುತ್ತಾರೆ. ಇದರಿಂದ ನನ್ನ ಮಕ್ಕಳ ಆಹಾರಕ್ಕಾಗಿ ಸ್ವಲ್ಪ ಹಣ ಸಂಪಾದಿಸುತ್ತೇನೆ” ಎಂದು ಹೇಳಿದಳು. ಮೂರನೆ ಮಹಿಳೆಯು, “ನಾನು ಈ ನಿರ್ದಿಷ್ಟ ಮರದ ಒಣ ಎಲೆಗಳನ್ನು ಸಂಗ್ರಹಿಸಿದ ನಂತರ, ವೈದ್ಯರಾದ ನನ್ನ ಪತಿಯು ಇವುಗಳಿಂದ ಕೆಲವು ಗಿಡಮೂಲಿಕಾ ಔಷಧಿ ಗಳನ್ನು ತಯಾರಿಸಿ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತಾರೆ” ಎಂದು ಹೇಳಿದಳು.

ಹುಡುಗರಿಬ್ಬರೂ ಗುರುಕುಲಕ್ಕೆ ಹಿಂದಿರುಗಲು ನಿರ್ಧರಿಸಿದರು. ದಾರಿಯಲ್ಲಿ ಅವರು ಒಂದು ಸಣ್ಣ ಕೊಳವನ್ನು ನೋಡಿದರು. ಅದರಲ್ಲಿ ಒಂದು ದೊಡ್ಡ ಒಣ ಎಲೆ ನೀರಿನ ಮೇಲೆ ತೇಲುತ್ತಿತ್ತು. “ಅಲ್ಲೊಂದು ದೊಡ್ಡ ಒಣ ಎಲೆ ಇದೆ, ಅದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ” ಎಂದು ಅವರಲ್ಲೊಬ್ಬ ಹೇಳಿದ. ಅವರು ಕೊಳದ ಬಳಿ ಹೋಗಿ ಆ ಎಲೆಯನ್ನು ಎತ್ತಿಕೊಂಡರು. ಆದರೆ ಆಶ್ಚರ್ಯವೆಂಬಂತೆ, ಎರಡು ದೊಡ್ಡ ಕೆಂಪು ಇರುವೆಗಳು ಅದರ ಮೇಲೆ ಚಲಿಸುತ್ತಿರುವುದನ್ನು ಅವರು ಕಂಡರು. ಶಿಷ್ಯರಲ್ಲೊಬ್ಬನು ಎಲೆಯನ್ನು ಕೈಯಲ್ಲಿ ಹಿಡಿದಿದ್ದರಿಂದ ಇರುವೆಗಳು, ‘ಈ ಒಣಎಲೆ ನಮ್ಮ ಬದುಕಿನ ದೋಣಿಯಾಗಿದೆ; ಇದು ಇಲ್ಲವಾಗಿದ್ದಲ್ಲಿ ನಾವು ಕೊಳದಲ್ಲಿ ಮುಳುಗಿ ಹೋಗುತ್ತಿದ್ದೆವು” ಎಂದು ಹೇಳುತ್ತಿವೆಯೋ ಎಂಬಂತೆ ಚಲಿಸುವುದನ್ನು ನಿಲ್ಲಿಸಿದವು.

ಆ ನಂತರ ಶಿಷ್ಯರು ತಮ್ಮ ವ್ಯರ್ಥ ಪ್ರಯತ್ನವನ್ನು ಬಿಟ್ಟು, ಗುರುಕುಲಕ್ಕೆ ಹಿಂದಿರುಗಿದರು. ಅವರು, ‘ಗುರುದೇವಾ, ಒಣ ಎಲೆಗಳೂ ಸಹ ಅನೇಕ ಉಪಯೋಗ ಗಳನ್ನು ಹೊಂದಿವೆಯೆಂಬುದನ್ನು ನಾವು ಕಂಡುಕೊಂಡೆವು.

ನಾವು ನೋಡಿದ ಎಲ್ಲ ಒಣ ಎಲೆಗಳೂ ಒಂದಲ್ಲ ಒಂದು ಉದ್ದೇಶಕ್ಕೆ ಬಳಸಲ್ಪಡುತ್ತಿದ್ದವು, ಅದರಿಂದಾಗಿ ನಮ್ಮಿಂದ ನಿಮಗೆ ಅವುಗಳನ್ನು ತಂದುಕೊಡಲಾಗಲಿಲ್ಲ; ನೀವು ಕೇಳಿದ ಗುರುದಕ್ಷಿಣೆಯನ್ನು ತಂದುಕೊಡಲಾಗದಿದ್ದುದಕ್ಕೆ ದಯವಿಟ್ಟು ಕ್ಷಮಿಸಿರಿ” ಎಂದು ದುಃಖದ ಧ್ವನಿಯಲ್ಲಿ ಹೇಳಿದರು.

ಪ್ರಶ್ನೆಗಳು:
  1. ನಿರುಪಯುಕ್ತ ಒಣ ಎಲೆಗಳನ್ನು ಹುಡುಕುತ್ತ ಕಾಡಿಗೆ ಹೋದ ಇಬ್ಬರು ಶಿಷ್ಯರು, ನಿರಾಸೆಯಿಂದ ಏಕೆ ಹಿಂತಿರುಗಿದರು?
  2. ಒಣ ಎಲೆಗಳು ಮತ್ತು ಮಾನವ ದೇಹದ ಬಗ್ಗೆ ಇಬ್ಬರು ಶಿಷ್ಯರಿಗೆ ಗುರುಗಳು ಕಲಿಸಿದ ಪಾಠ ಯಾವುದು?
  3. ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಪರಿಗಣಿಸಲ್ಪಟ್ಟಿರುವ, ಆದರೆ ಅವುಗಳನ್ನು ಉತ್ತಮ ಬಳಕೆಗೆ ತರಬಲ್ಲವರ ಕೈಯಲ್ಲಿ ಉಪಯುಕ್ತವಾಗುವ ಇತರ ಎರಡು ವಸ್ತುಗಳ ಬಗ್ಗೆ ವಿವರ ನೀಡಿ.

Leave a Reply

Your email address will not be published. Required fields are marked *

error: