ಕರ್ತವ್ಯ

Print Friendly, PDF & Email
ಕರ್ತವ್ಯ


 

ಧರ್ಮದ ತತ್ವಗಳಿಗೆ ಅನುಸಾರವಾಗಿ ನಡೆಸುವ ಕ್ರಿಯೆಗಳನ್ನು (ಕರ್ಮಗಳನ್ನು) ಕರ್ತವ್ಯ ಎಂದು ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ ‘ಕರ್ತವ್ಯ’ ಎಂದರೆ ಒಬ್ಬ ವ್ಯಕ್ತಿಯ ನಿಯೋಜಿತ ಕೆಲಸ. ವಿದ್ಯಾರ್ಥಿಯ ಕರ್ತವ್ಯವೆಂದರೆ ಅಧ್ಯಯನ, ವೈದ್ಯನ ಕರ್ತವ್ಯ ತನ್ನ ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದು ಮತ್ತು ರೈಲ್ವೆ ಬುಕಿಂಗ್ ಗುಮಾಸ್ತನ ಕರ್ತವ್ಯವೆಂದರೆ ಟಿಕೆಟ್ ನೀಡುವುದು.

ಮಕ್ಕಳಾಗಿ ನಮ್ಮ ಪ್ರಮುಖ ಕರ್ತವ್ಯಗಳು ಯಾವುವು?
  1. ಹೆತ್ತವರ ಬಗೆಗಿನ ಕರ್ತವ್ಯ– ನಮ್ಮ ಹೆತ್ತವರಿಗೆ ಪ್ರೀತಿ, ಗೌರವ, ವಿಧೇಯತೆ ಮತ್ತು ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಪ್ರಥಮ ಕರ್ತವ್ಯ.
  2. ಹಿರಿಯರ ಪ್ರತಿ ಕರ್ತವ್ಯ– ಪೋಷಕರು, ಹಿರಿಯರು ಮತ್ತು ವೃದ್ಧರಿಗೆ ಪ್ರೀತಿಯ ಸೇವೆ ಮತ್ತು ಪೋಷಣೆ- ನಾವು ಮಾಡಲೇ ಬೇಕಾದ ಕರ್ತವ್ಯ.
  3. ಶಿಕ್ಷಕರು ಮತ್ತು ಗುರುಗಳ ಪ್ರತಿ ಕರ್ತವ್ಯ– ನಮಗೆ ಜ್ಞಾನವನ್ನು ದಯಪಾಲಿಸುವ ಶಿಕ್ಷಕರನ್ನು ಮತ್ತು ಮಾನವೀಯ ಮೌಲ್ಯಗಳನ್ನು ಅರಳಿಸಿ ನಮ್ಮ ಮನಸ್ಸನ್ನು ದೇವರ ಕಡೆಗೆ ತಿರುಗಿಸುವ ಗುರುಗಳನ್ನು ನಾವು ಗೌರವಿಸಬೇಕು, ಆದರಿಸಬೇಕು.
  4. ಸಾಮಾಜಿಕ ಕರ್ತವ್ಯ– ನಾವು ಸಮಾಜದಿಂದ ದೈಹಿಕ, ಬೌದ್ಧಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಕೌಶಲ್ಯಗಳನ್ನು ಪಡೆದುಕೊಳ್ಳುತ್ತೇವೆ. ಅಂತಹ ಕೌಶಲ್ಯಗಳನ್ನು ಪಡೆದ ನಂತರ, ನಾವು ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡಬೇಕು. ಸಮಾಜದಲ್ಲಿರುವ ನಮ್ಮ ಸಹಯೋಗಿಗಳ ಸಹಕಾರವಿಲ್ಲದೆ ನಾವು ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
  5. ಕೃತಜ್ಞರಾಗಿರಲು ಉತ್ತಮ ಮಾರ್ಗವೆಂದರೆ ಎಲ್ಲರನ್ನು ಪ್ರೀತಿಸುವುದು ಮತ್ತು ಎಲ್ಲರ ಸೇವೆ ಮಾಡುವುದು ಎಂದು ಸ್ವಾಮಿ ಹೇಳುತ್ತಾರೆ. ‘Help ever hurt never’ ಎಂಬ ಅಣಿಮುತ್ತಿನ ನಿಜವಾದ ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕು. ಸಮಾಜದಲ್ಲಿ ಇತರರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಗೌರವಿಸುವುದು ನಮ್ಮ ಕರ್ತವ್ಯ. ನಮ್ಮ ಚಲನೆ, ಮಾತು, ನಡವಳಿಕೆ ಅಥವಾ ಚಟುವಟಿಕೆಗಳಿಂದ ಯಾರಿಗೂ ತೊಂದರೆಯಾಗಬಾರದು ಅಥವಾ ಹಾನಿಯಾಗಬಾರದು ಎಂಬ ಜವಾಬ್ದಾರಿಯಿಂದ ವರ್ತಿಸುವುದೇ ನಮ್ಮ ಕರ್ತವ್ಯವಾಗಿದೆ. ನಾವು ದೊಡ್ಡ ಕೋಲನ್ನು ಬೀಸುತ್ತಾ ಬೀದಿಯಲ್ಲಿ ನಡೆಯುವಾಗ ಹಿಂದೆ ನಡೆಯುವ ವ್ಯಕ್ತಿಯ ಬಗ್ಗೆ ಜಾಗರೂಕರಾಗಿರಬೇಕು.
  6. ಭೂಮಿ ತಾಯಿಯ ಬಗೆಗಿನ ಕರ್ತವ್ಯ– ನಾವು ನಮ್ಮ ಆಹಾರ, ಉಡುಗೆ ಮತ್ತು ಆಶ್ರಯವನ್ನು ನೈಸರ್ಗಿಕ ಸಂಪನ್ಮೂಲಗಳಿಂದ ಪಡೆದುಕೊಂಡಿದ್ದೇವೆ. ಆದ್ದರಿಂದ ನಿಸರ್ಗದ ಸಂಪತ್ತನ್ನು ಸಂರಕ್ಷಿಸಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕು. ಪರಿಸರವನ್ನು ಕಲುಷಿತಗೊಳಿಸಿ ನಾವು ಪ್ರಕೃತಿಮಾತೆಯನ್ನು ಎಂದಿಗೂ ಅವಮಾನಿಸಬಾರದು.
  7. ಮಾತೃಭೂಮಿಯ ಬಗೆಗಿನ ಕರ್ತವ್ಯ– ನಾವು ನಮ್ಮ ತಾಯ್ನಾಡನ್ನು ಪ್ರೀತಿಸಬೇಕು ಮತ್ತು ಅದರ ಸಾರ್ವಭೌಮತ್ವಕ್ಕೆ ಕುಂದು ತರಿಸುವ ಶಕ್ತಿಗಳನ್ನು ತಡೆಯಬೇಕು. ನಾವು ಆದರ್ಶ ಪ್ರಜೆಗಳಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು.
  8. ದೈವಿಕ ಪೋಷಕನ ಪ್ರತಿ ಕರ್ತವ್ಯ– ನಾವೆಲ್ಲಾ ದೇವರ ಮಕ್ಕಳು. ಆದ್ದರಿಂದ ನಾವು ನಮ್ಮ ಆದರ್ಶ ನಡವಳಿಕೆಯಿಂದ ದೇವರನ್ನು ಮೆಚ್ಚಿಸಬೇಕು. ನಾವು ನಮ್ಮ ಚಿಂತನೆ, ಮಾತು ಮತ್ತು ಕೃತಿಗಳ ಸಾಮರಸ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು (ತ್ರಿಕರಣ ಶುದ್ಧಿ).

ನಮ್ಮ ಜೀವಿತಾವಧಿಯಲ್ಲಿ ನಮ್ಮ ಕರ್ತವ್ಯಗಳನ್ನು ಪೂರೈಸಬೇಕು, ಅವುಗಳನ್ನು ಹೃತ್ಪೂರ್ವಕವಾಗಿ ಮಾಡಬೇಕು ಮತ್ತು ಅವುಗಳನ್ನು ಭಗವಂತನಿಗೆ ಅರ್ಪಿಸಬೇಕು ಎಂದು ಬಾಬಾ ಹೇಳುತ್ತಾರೆ. ಆಗ ಮಾತ್ರ ನಮ್ಮ ಕೆಲಸ (ಕರ್ತವ್ಯ) ವನ್ನು ಪೂಜೆ ಎಂದು ಕರೆಯಬಹುದಾಗಿದೆ.

ಸ್ವಾಮಿಯ ಜೀವನ, ಅವರ ಬಾಲ್ಯದ ದಿನಗಳು, ಅವರು ತಮ್ಮ ತಾಯಿ ಈಶ್ವರಮ್ಮನವರಿಗೆ ನೀಡಿದ ವಾಗ್ದಾನಗಳನ್ನು ಹೇಗೆ ಪೂರೈಸಿದರು, ಕುಟುಂಬಕ್ಕೆ ನೀರನ್ನು ಹೇಗೆ ಒದಗಿಸುತ್ತ್ತಿದ್ದರು ಇತ್ಯಾದಿ ವಿಷಯಗಳನ್ನು ಗುರುಗಳು ನಿರೂಪಿಸಬಹುದು. ಇದರಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವಾಮಿ ಹೇಗೆ ಬಾಲ್ಯ ಕಾಲದಿಂದಲೇ ತಮ್ಮ ಕರ್ತವ್ಯವನ್ನು ಅನುಸರಿಸುವಲ್ಲಿ ಒಂದು ಉದಾಹರಣೆಯಾಗಿದ್ದರು ಎಂದು ಮಕ್ಕಳು ಅರ್ಥಮಾಡಿಕೊಳ್ಳುವರು.

Leave a Reply

Your email address will not be published. Required fields are marked *