ಇದೆಲ್ಲವೂ ಬೆಕ್ಕಿಗಾಗಿ

Print Friendly, PDF & Email
ಇದೆಲ್ಲವೂ ಬೆಕ್ಕಿಗಾಗಿ

ಅಂದು ೧೯೭೨ನೆಯ ಇಸವಿ ನವಂಬರ್ ೨೪ನೆಯ ತಾರೀಕು. ದೂರದ ಅಸ್ಸಾಂ ರಾಜ್ಯದ ರಾಜಧಾನಿ ಗೌಹಾತಿಯಿಂದ ಪ್ರಯಾಣ ಮಾಡಿ, ಭಕ್ತರ ದೊಡ್ಡ ಗುಂಪು ಪುಟ್ಟಪರ್ತಿಯಲ್ಲಿ ಹುಟ್ಟುಹಬ್ಬದ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ್ದಿತು. ಅವರಿಗೆ ವಾಪಸ್ ಹೊರಡುವ ಸಮಯ. ಬಾಬಾರವರು ಅವರೆಲ್ಲರಿಗೂ ಪ್ರೇಮದಿಂದ ವಿಭೂತಿ ಪ್ಯಾಕೆಟ್‌ಗಳನ್ನು ಹಂಚುತ್ತಿದ್ದರು. ಆ ಗುಂಪಿನಲ್ಲಿದ್ದ ಲಾಖೀ ಎಂಬ ಬಾಲಕಿಗೆ ವಿಭೂತಿಯನ್ನು ಕೊಟ್ಟು ಮುಂದೆ ಹೊರಟರು. ಎರಡು ಹೆಜ್ಜೆ ಕೂಡಾ ಮುಂದೆ ಹೋಗಿರಲಿಲ್ಲ, ಇದ್ದಕ್ಕಿದ್ದಂತೆ ಹಿಂತಿರುಗಿ ಅವಳ ಕಡೆ ನೋಡಿ, ಮತ್ತೆ ಸ್ವಲ್ಪ ವಿಭೂತಿ ಪೊಟ್ಟಣಗಳನ್ನು ಅವಳ ಕೈ ಸೇರುವಂತೆ ಮೇಲೆ ಹಾರಿಸಿ, “ಯೇ ಬಿಲ್ಲಿಕೇಲಿಯೇ (ಇವು ಬೆಕ್ಕಿಗಾಗಿ),” ಎಂದು ಹೇಳಿದರು. ಬಾಬಾರವರ ಕೃಪೆಯನ್ನು ಸಂಪಾದಿಸಿದ ಆ ಅದೃಷ್ಟವಂತ ಬೆಕ್ಕು ಯಾವುದು? ಆ ಬೆಕ್ಕಿನ ಹೆಸರು ‘ಮಿಂಕಿ’. ಮಳೆ ಸುರಿಯುತ್ತಿದ್ದ ಒಂದು ದಿನ ನಗರದ ರಸ್ತೆ ಪಕ್ಕದ ಮೋರಿಯಲ್ಲಿ ಬಿದ್ದಿದ್ದ ಅದನ್ನು ಲಾಖಿಯು ರಕ್ಷಿಸಿ ಮನೆಗೆ ತಂದು ಊಟ ಕೊಟ್ಟು, ಬೆಚ್ಚಗಿರುವಂತೆ ಮಾಡಿ, ಮನೆಯಲ್ಲಿ ಅದನ್ನು ಪೋಷಿಸುತ್ತಿದ್ದಳು. ಅವಳ ದೊಡ್ಡ ಅಕ್ಕನಿಗೆ ಬೆಕ್ಕುಗಳನ್ನು ಕಂಡರೆ ಅಷ್ಟಕ್ಕಷ್ಟೆ. ಆದ್ದರಿಂದ ಬೆಕ್ಕನ್ನು ಮನೆಗೆ ತಂದದ್ದಕ್ಕಾಗಿ, “ನೋಡಲು ಭಯಂಕರವಾಗಿದೆ. ಇದನ್ನು ಮನೆಯಲ್ಲಿ ಸಾಕುವುದೇ?” ಎಂದು ಲಾಖಿಯನ್ನು ತರಾಟೆಗೆ ತೆಗೆದುಕೊಂಡಳು.

ಒಂದು ದಿನ ರಾತ್ರಿ ಅವಳ ಅಕ್ಕಂದಿರು, ಕೆಲವು ಅತಿಥಿಗಳನ್ನು ಊಟಕ್ಕೆ ಕರೆದಿದ್ದರು. ಮಿಂಕಿಯು ಅಲ್ಲಿ ನಡೆಯುವುದನ್ನೆಲ್ಲಾ ಗಮನಿಸುತ್ತಾ ಕುಳಿತಿತ್ತು. ತಟ್ಟೆಯ ತುಂಬಾ ಇಟ್ಟಿದ್ದ ಮೀನಿನ ಭಕ್ಷ್ಯವು ಪ್ರಲೋಭನೆಯನ್ನುಂಟು ಮಾಡಿತು. ಬೆಕ್ಕಿಗೆ ತಡೆದು ಕೊಳ್ಳಲಾಗಲಿಲ್ಲ. ಸದ್ದಿಲ್ಲದೆ ತನ್ನ ಆಸೆಯನ್ನು ತೀರಿಸಿಕೊಳ್ಳಬೇಕೆಂದು ಕೊಂಡಿತು. ಒಂದು ಮೀನಿನ ತುಂಡನ್ನು ಕದ್ದು, ಓಡಿತು. ದೊಡ್ಡಕ್ಕನು ಲಾಖಿಯನ್ನು ರೇಗಿದಳು. ಲಾಖಿಯು ಆ ಬೆಕ್ಕನ್ನು ಹಿಡಿದು ಬೆತ್ತದಿಂದ ಥಳಿಸಿದಳು. ಪಾಪ! ಆ ಬೆಕ್ಕು ನೋವಿನಿಂದ ನರಳಿತು. ಇದ್ದಕ್ಕಿದ್ದಂತೆ ಪೂಜಾ ಮಂದಿರದಲ್ಲಿದ್ದ ಬಾಬಾರವರ ಫೋಟೋ ಮತ್ತು ಮನೆಯ ಇತರ ಕೆಲವು ವಸ್ತುಗಳೂ ರಹಸ್ಯ ರೀತಿಯಲ್ಲಿ ಅಲುಗಾಡಲಾರಂಭಿಸಿದುವು. ಭೂಕಂಪವಿರಬೇಕೆಂದು ಎಲ್ಲರೂ ಮನೆಯಿಂದ ಹೊರಗೆ ಬಂದರು. ಕ್ರಮೇಣ ಪ್ರಾಣಿದಯೆಯ ಬಗ್ಗೆ ಬಾಬಾರವರು ತನಗೆ ಪಾಠ ಕಲಿಸುತ್ತಿರುವ ರೀತಿ ಇದಿರಬೇಕೆಂದು ಲಾಖಿಗೆ ತೋಚಿತು. ಅವಳ ಅಕ್ಕಂದಿರಿಗೂ ಪಶ್ಚಾತ್ತಾಪದಿಂದ ಅಳು ಬಂದಿತು. ನಡುಗುತ್ತಿದ್ದ ಬೆಕ್ಕನ್ನು ಲಾಖಿಯು ತನ್ನ ತೊಡೆಯ ಮೇಲಿರಿಸಿಕೊಂಡು ಬೆನ್ನು ಸವರಿದಳು. ಬೆನ್ನಿನ ಮೇಲೆಲ್ಲಾ ಘಮಘಮಿಸುವ ವಿಭೂತಿಯನ್ನು ಕಂಡಳು. ಬಾಬಾರವರ ಸರ್ವವ್ಯಾಪಿತ್ವವನ್ನೂ ಬೆಕ್ಕಿನ ಬಗ್ಗೆ ಅವರ ಪ್ರೇಮವನ್ನೂ ಈ ಘಟನೆಯು ತೋರಿಸಿತು.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *