ಸಮ್ಯಕ್ ದೃಷ್ಟಿ: ಬುದ್ಧರು ಹೇಳುವಂತೆ ಜೀವನವನ್ನು ನಾವು ಬುದ್ಧಿವಂತಿಕೆ ಹಾಗೂ ಸಹಾನುಭೂತಿಯಿಂದ ಕಾಣಬೇಕು.
ಸಮ್ಯಕ್ ಆಲೋಚನೆ: ನಾವು ಹೇಗೆ ಆಲೋಚಿಸುತ್ತೇವೋ ಹಾಗೆಯೇ ಇರುತ್ತೇವೆ. ಸ್ಪಷ್ಟ ಮತ್ತು ದಯೆಯಂದ ಕೂಡಿದ ಆಲೋಚನೆಗಳು ನಮ್ಮನ್ನು ಒಳ್ಳೆಯ ನಡತೆಯುಳ್ಳವರನ್ನಾಗಿ ಮಾಡುತ್ತವೆ.
ಸಮ್ಯಕ್ ಮಾತು: ದಯೆ ಹಾಗು ಉಪಯುಕ್ತತೆಯಿಂದ ಕೂಡಿದ ಮಾತು ನಮ್ಮನ್ನು ಎಲ್ಲೆಡೆ ಗೌರವ ಹಾಗೂ ನಂಬಿಕಸ್ಥರನ್ನಾಗಿ ಮಾಡುತ್ತದೆ.
ಸಮ್ಯಕ್ ನಡವಳಿಕೆ: ನಾವು ಏನು ಮಾತನಾಡುತ್ತೇವೆ ಎಂಬುದು ಮುಖ್ಯ ಅಲ್ಲ. ನಮ್ಮ ನಡವಳಿಕೆಯಿಂದಲೇ ಜನರು ನಮ್ಮನ್ನು ಗುರುತಿಸುತ್ತಾರೆ. ಇನ್ನೊಬ್ಬರನ್ನು ಟೀಕಿಸುವ ಮೊದಲು, ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಅರಿತಿರಬೇಕು.
ಸಮ್ಯಕ್ ಜೀವನ: ಸಮ್ಯಕ್ ಜೀವನ ಎಂದರೆ ಮತ್ತೊಬ್ಬರಿಗೆ ನೋವಾಗದಂತಹ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವುದು. ಬುದ್ಧರು ಹೇಳುತ್ತಾರೆ ಇನ್ನೊಬ್ಬರಿಗೆ ನೋವುಂಟು ಮಾಡಿ ಸಂಪಾದನೆಯನ್ನು ಮಾಡುವುದು ಸರಿಯಲ್ಲ. ಇನ್ನೊಬ್ಬರಿಗೆ ದುಃಖವುಂಟುಮಾಡಿ ಸಂತೋಷವನ್ನು ಕಾಣಬೇಡಿರಿ.
ಸಮ್ಯಕ್ ಪ್ರಯತ್ನ: ಯೋಗ್ಯವಾದ ಜೀವನ ಎಂದರೆ ಪ್ರತಿಬಾರಿಯೂ ನಮ್ಮಿಂದಾದಷ್ಟು ಪ್ರಯತ್ನವನ್ನು ಮಾಡುವುದು ಹಾಗೂ ಇನ್ನೊಬ್ಬರಿಗೂ ಒಳ್ಳೆಯದನ್ನು ಬಯಸುವುದು. ಇದರ ಅರ್ಥ ಏನೆಂದರೆ ನಮಗೆ ಮತ್ತು ಇತರರಿಗೆ ಕೇಡು ಉಂಟುಮಾಡುವ ಯಾವುದೇ ಕೆಲಸವನ್ನು ಮಾಡದಿರುವುದು.
ಸಮ್ಯಕ್ ಎಚ್ಚರಿಕೆ: ಇದರ ಅರ್ಥ ಏನೆಂದರೆ, ನಾವು ನಮ್ಮ ಯೋಚನೆ ಮತ್ತು ಕೆಲಸದ ಮೇಲೆ ಸದಾ ಎಚ್ಚರಿಕೆಯಿಂದ ಇರುವುದು.
ಸಮ್ಯಕ್ ಚಿಂತನೆ: ಏಕ ಕಾಲದಲ್ಲಿ ಒಂದೇ ವಸ್ತು ಅಥವಾ ಆಲೋಚನೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು. ಹೀಗೆ ಮಾಡುವುದರಿಂದ ನಿಜವಾದ ಮನಶ್ಶಾಂತಿಯನ್ನು ಪಡೆಯಲು ಸಾದ್ಯ. ಈ ಅಷ್ಟಾಂಗ ಮಾರ್ಗಗಳನ್ನು ನಾವು ಒಂದು ಹೂದೋಟವನ್ನು ಬೆಳೆಸುವುದಕ್ಕೆ ಹೋಲಿಸಬಹುದು ಆದರೆ ಬೌದ್ಧ ಧರ್ಮದಲ್ಲಿ ಇವುಗಳು ಜ್ಞಾನವನ್ನು ವೃದ್ಧಿಸುವ ಮಾರ್ಗಗಳು. ಮನಸ್ಸು ಎಂಬುದು ಮೈದಾನ ಇದ್ದಂತೆ. ಆಲೋಚನೆಗಳು ಬೀಜಗಳು ಇದ್ದಂತೆ. ಕರ್ಮ ಫಲಗಳು ಈ ಹೂದೋಟದ ರಕ್ಷಣೆಯನ್ನು ಮಾಡುವ ದಾರಿಗಳು. ನಮ್ಮ ತಪ್ಪುಗಳು ಹೂದೋಟದ ಕಳೆಗಿಡಗಳು. ಅಂತಹ ತಪ್ಪುಗಳನ್ನು ಕಿತ್ತು ತೆಗೆಯುವುದೇ ಹೂದೋಟದ ಕಳೆಗಿಡಗಳನ್ನು ತೆಗೆದಂತೆ. ಕೊನೆಗೆ ಸಿಗುವ ಬೆಳೆ ಅಥವಾ ಫಸಲು, ‘ಶಾಶ್ವತ ಸಂತೋಷ.