ಮೂರು ಅತ್ತ್ಯುತ್ತಮ ವಿಷಯಗಳು

Print Friendly, PDF & Email
ಮೂರು ಅತ್ತ್ಯುತ್ತಮ ವಿಷಯಗಳು

ಹಿಂದೆ ಒಬ್ಬ ರಾಜನಿದ್ದ. ಆತ ತಾನು ಭೇಟಿ ಮಾಡುತ್ತಿದ್ದ ಎಲ್ಲರ ಹತ್ತಿರ ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದ.

ಅವು ಯಾವುವೆಂದರೆ, ಮೊದಲನೆಯದಾಗಿ, ಅತ್ಯಂತ ಉತ್ತಮ ವ್ಯಕ್ತಿಯು ಯಾರು? ಎರಡನೆಯದಾಗಿ, ಅತ್ಯಂತ ಉತ್ತಮ ಸಮಯವು ಯಾವುದು? ಹಾಗೂ, ಮೂರನೆಯದಾಗಿ, ಅತ್ಯಂತ ಉತ್ತಮ ಕಾರ್ಯವು ಯಾವುದು?

ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಪಡೆಯಲು ರಾಜನು ಕಾತುರನಾಗಿದ್ದ. ಅವನ ಮನಸ್ಸಿಗೆ ಒಪ್ಪಿಗೆಯಾಗುವಂತಹ ಉತ್ತರಗಳು ಇನ್ನೂ ದೊರೆತಿರಲಿಲ್ಲ.

king sees Sadhu treating the wounds of a man

ಒಂದು ದಿನ, ಕಾಡಿಗೆ ಹೋಗಿದ್ದ ಆ ರಾಜನು, ಬೆಟ್ಟ-ಗುಡ್ಡಗಳ ನಡುವೆ ಓಡಾಡುತ್ತಿದ್ದಾಗ, ಅಲ್ಲೊಂದು ಆಶ್ರಮವು ಕಂಡು ಬಂದಿತು. ಸ್ವಲ್ಪ ಸಮಯ ದಣಿವಾರಿಸಿಕೊಳ್ಳುವ ಉದ್ದೇಶದಿಂದ, ರಾಜನು ಆ ಆಶ್ರಮವನ್ನು ಸಮೀಪಿಸಿದಾಗ, ಗಿಡಗಳಿಗೆ ನೀರೆರೆಯುತ್ತಿದ್ದ ಒಬ್ಬ ಸಾಧುವನ್ನು ಕಂಡನು. ರಾಜನನ್ನು ನೋಡಿದ ಆ ಸಾಧುವು ಕೂಡಲೇ ಬಂದು, ಆತನನ್ನು ಆದರದಿಂದ ಬರಮಾಡಿಕೊಂಡು, ಹಣ್ಣುಗಳನ್ನೂ ಕುಡಿಯಲು ತಂಪಾದ ನೀರನ್ನೂ ಕೊಟ್ಟು ಉಪಚರಿಸಿದನು.

ಆ ಸಮಯದಲ್ಲೇ, ಮೈಯೆಲ್ಲಾ ಗಾಯಗೊಂಡಿದ್ದ ಒಬ್ಬ ವ್ಯಕ್ತಿಯನ್ನು, ಇನ್ನೊಬ್ಬ ಸಾಧುವು ಅಲ್ಲಿಗೆ ಕರೆತಂದನು. ಅವನನ್ನು ಕಂಡ ಕೂಡಲೇ, ರಾಜನ ಬಳಿ ಕುಳಿತಿದ್ದ ಸಾಧುವು ಎದ್ದುಹೋಗಿ, ಆ ವ್ಯಕ್ತಿಯ ಗಾಯಗಳನ್ನು ಸ್ವಚ್ಛ ಮಾಡುತ್ತಾ, ಅದಕ್ಕೆ ಗಿಡಮೂಲಿಕೆಗಳಿಂದಾದ ಮುಲಾಮನ್ನು ಸವರುತ್ತಾ, ಅವನಿಗೆ ಶುಶ್ರೂಷೆ ಮಾಡುತ್ತಿದ್ದು, ಅವನೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಅವನನ್ನು ಸಾಂತ್ವನ ಗೊಳಿಸುತ್ತಲೂ ಇದ್ದನು.

ರಾಜನು ಆ ಸಾಧುವಿಗೆ ಕೃತಜ್ಞತೆ ಸಲ್ಲಿಸಿ, ಅಲ್ಲಿಂದ ಹೊರಡೋಣವೆಂದು, ಆತನ ಬಳಿ ಹೋದನು. ಆ ಸಾಧುವು ರಾಜನನ್ನು ಆಶೀರ್ವದಿಸಿ ಹೊರಡಲು ಒಪ್ಪಿಗೆ ಕೊಟ್ಟನು. ಆಗ ರಾಜನು ತನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಮೂರು ಪ್ರಶ್ನೆಗಳಿಗೆ, ಆ ಸಾಧುವಿನಿಂದ ಒಳ್ಳೆಯ ಉತ್ತರಗಳು ದೊರೆಯಬಹುದೇನೋ ಎಂಬ ಭಾವನೆಯಿಂದ, ಆ ಪ್ರಶ್ನೆಗಳನ್ನು ಆತನ ಮುಂದೆ ಇಟ್ಟನು.

ಆಶ್ರಮದಲ್ಲಿ ರಾಜನು ನೋಡಿದ ಮೂರು ಕಾರ್ಯಗಳಲ್ಲೇ, ಅವುಗಳ ಉತ್ತರಗಳು ಅಡಗಿವೆ ಎಂದು ಸಾಧುವು ಸೂಚಿಸಿದನು.

ಹೇಗೆಂದು ರಾಜನು ವಿನಂತಿಸಿದಾಗ, ಸಾಧುವು ಅದರ ಬಗ್ಗೆ ಒಂದು ಸ್ಪಷ್ಟ ವಿವರಣೆಯನ್ನು ಕೊಟ್ಟನು. ಅದು ಹೀಗಿದ್ದಿತು.

ರಾಜನು ಆಶ್ರಮಕ್ಕೆ ಬಂದಾಗ, ಸಾಧುವು ಗಿಡಗಳಿಗೆ ನೀರೆರೆಯುತ್ತಿದ್ದನು. ಆಗ ಅದೇ ಆತನ ಮುಖ್ಯ ಕರ್ತವ್ಯವಾಗಿತ್ತು.

ರಾಜನನ್ನು ಕಂಡಾಗ, ಆ ಕೆಲಸವನ್ನು ಅಲ್ಲಿಗೆ ನಿಲ್ಲಿಸಿ, ದಣಿದು ಬಂದಿದ್ದ ರಾಜನಿಗೆ ತಿನ್ನಲು ಹಣ್ಣುಗಳನ್ನೂ, ಕುಡಿಯಲು ನೀರನ್ನೂ ಕೊಟ್ಟು ಆದರದಿಂದ ಸತ್ಕರಿಸಿದನು. ಧರ್ಮಶಾಸ್ತ್ರಗಳ ಪ್ರಕಾರ, ಅತಿಥಿ ಸತ್ಕಾರ ಮಾಡಬೇಕಾಗಿದ್ದುದು ಆಗಿನ ಮುಖ್ಯ ಕರ್ತವ್ಯ.

ರಾಜನ ಹಸಿವು ಮತ್ತು ಬಳಲಿಕೆಯನ್ನು ಪರಿಹರಿಸುತ್ತಿದ್ದ ಸಮಯದಲ್ಲೇ, ಆಶ್ರಮಕ್ಕೆ ಗಾಯಗೊಂಡಿದ್ದ ವ್ಯಕ್ತಿಯನ್ನು ಕರೆತಂದಾಗ, ಸಾಧುವು ಅವನ ಶುಶ್ರೂಷೆ ಮಾಡಿ ಸೇವೆ ಮಾಡತೊಡಗಿದನು.

‘ಹಾಗಾಗಿ, ನಿಮ್ಮ ಸೇವೆ ಮತ್ತು ಸಹಾಯಗಳನ್ನು ಅಪೇಕ್ಷಿಸುತ್ತಾ ಯಾರೇ ಬಂದರೂ, ಆತನೇ ಆ ಸಮಯದಲ್ಲಿ ಅತ್ಯುತ್ತಮ ವ್ಯಕ್ತಿ. ಅಂತಹವರ ಸೇವೆ ಮಾಡುತ್ತಾ, ಅವರನ್ನು ಸಂತೋಷಪಡಿಸಿ ತೃಪ್ತಿ ಗೊಳ್ಳುವಂತೆ ಮಾಡುವುದೇ, ಅತ್ತ್ಯುತ್ತಮ ಕೆಲಸ. ಏನಾದರು ಮಾಡಬಹುದಾದರೆ, ವರ್ತಮಾನ ಕಾಲವೇ ಅತ್ಯುತ್ತಮ ಸಮಯ.’

ಪ್ರಶ್ನೆಗಳು
  1. ರಾಜನು ಎಲ್ಲರನ್ನು ಕೇಳುತ್ತಿದ್ದ ಮೂರು ಪ್ರಶ್ನೆಗಳು ಯಾವುವು?
  2. ರಾಜನು ಸಾಧುವಿನ ಆಶ್ರಮದಲ್ಲಿ ಏನನ್ನು ಕಂಡನು?
  3. ರಾಜನ ಮೂರು ಪ್ರಶ್ನೆಗಳಿಗೆ, ಸಾಧುವು ಹೇಗೆ ಸಮರ್ಪಕ ಉತ್ತರಗಳನ್ನು ಕೊಟ್ಟನು?

Leave a Reply

Your email address will not be published. Required fields are marked *

error: