ಪಂಚ ಭೂತಗಳು – ಪರಿಚಯ

Print Friendly, PDF & Email
ಪಂಚ ಭೂತಗಳು – ಪರಿಚಯ

ಮಳೆಯ ನಂತರ ಸಾಮಾನ್ಯವಾಗಿ ಎಲ್ಲರೂ ಆಕಾಶದಲ್ಲಿ ಮಳೆಬಿಲ್ಲನ್ನು ಗಮನಿಸಿದ್ದೇವೆ. ಇದಕ್ಕೆ ನೇರಳೆ, ಆಕಾಶ ನೀಲಿ (ಇಂಡಿಗೊ), ನೀಲಿ, ಹಸಿರು, ಹಳದಿ, ಕೆಂಪು ಎಂಬ ಏಳು ಬಣ್ಣಗಳಿವೆ. ಈ ಎಲ್ಲ ಬಣ್ಣಗಳು, ಬಿಳಿಯ ಬಣ್ಣದ ಕಿರಣದಿಂದ ಬಂದಿವೆ. ನಮಗೆ ಈ ಏಳು ಬಣ್ಣಗಳಿಂದ ಉಂಟಾದ ಮಳೆಬಿಲ್ಲು ಕೊಡುವ ಆನಂದವು, ಕೇವಲ ಬಿಳಿ ಕಿರಣಗಳಿಂದ ಸಿಗುವುದಿಲ್ಲ. ಆದರೆ ಬಿಳಿಕಿರಣ ಇಲ್ಲದಿದ್ದರೆ, ಮಳೆಬಿಲ್ಲಿನ ಅಸ್ತಿತ್ವ ಸಾಧ್ಯವಿರುತ್ತಿರಲಿಲ್ಲ. ಅದರಂತೆ, ಇಡೀ ಸೃಷ್ಟಿಯ ರಚನೆಯನ್ನು ನೋಡಿ ನಾವು ಸಂತೋಷಪಡುತ್ತೇವೆ. ಆದರೆ ಈ ಸೃಷ್ಟಿಯ ಮೂಲ ನಿರ್ಮಾತೃವಾದ ಭಗವಂತನ ಕಡೆಗೇ ದೃಷ್ಟಿ ಹರಿಸಲು ನಾವು ವಿಫಲರಾಗುತ್ತೇವೆ.

ಚಿಕ್ಕ ಚಿಕ್ಕ ಮಳೆಹನಿಗಳು, ಪಟ್ಟಕಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಸೂರ್ಯನ ಬಿಳಿಕಿರಣಗಳನ್ನು ಮಳೆಬಿಲ್ಲಿನ ಏಳು ಬಣ್ಣಗಳನ್ನಾಗಿ ಪರಿವರ್ತಿಸುತ್ತವೆ. ಅದೇ ರೀತಿಯಲ್ಲಿ ನಮ್ಮ ಮನಸ್ಸೂ ಸಹ ಪಟ್ಟಕದಂತೆ ಕಾರ್ಯ ನಿರ್ವಹಿಸಿ, ಭಗವಂತನ ದಿವ್ಯ ಪ್ರಭೆಯಿಂದ ಹೊರ ಹೊಮ್ಮುವ ಮತ್ತು ಪಂಚಭೂತಗಳಿಂದ ಸೃಷ್ಟಿಯಾದ, ಬ್ರಹ್ಮಾಂಡದಲ್ಲಿರುವ ವಿವಿಧತೆಯನ್ನು ಆಸ್ವಾದಿಸಲು ಅನುವುಮಾಡಿಕೊಡುತ್ತದೆ.

ಸೃಷ್ಟಿಯಲ್ಲಿರುವ ಪಂಚಭೂತಗಳಲ್ಲಿ ಸಹಜವಾಗಿ ನಿಖರವಾದ ಹೊಂದಾಣಿಕೆ ಇದೆ. ನಮ್ಮ ದೇಹವೂ ಸಹ ಪಂಚ ಭೂತಗಳಿಂದ ಮಾಡಲ್ಪಟ್ಟಿದೆ. ನಮ್ಮ ದೇಹದಲ್ಲಿರುವ ಪಂಚಭೂತಗಳಲ್ಲಿ ಸಮತೋಲನವನ್ನು ನಿರ್ವಹಿಸಿದರೆ, ನಾವೂ ಸಹ ಆರೋಗ್ಯವಾಗಿರಬಹುದು. ಅಷ್ಟೇ ಅಲ್ಲದೆ ಸೃಷ್ಟಿಯಲ್ಲಿರುವ ಪಂಚಭೂತಗಳ ಸಮತೋಲನವನ್ನೂ ಕಾಪಾಡಬಹುದು.

ಕಥೆ

ಒಂದು ಸೀಸೆಯಲ್ಲಿ ಅರ್ಧಭಾಗ ಸೇಂಗಾಬೀಜ ತುಂಬಿ, ಒಂದು ಮೇಜಿನ ಮೇಲೆ ಇಟ್ಟಿದೆ. ಒಬ್ಬ ಬಾಲಕ ಅದನ್ನು ಆಸೆಯ ಕಣ್ಣುಗಳಿಂದ ನೋಡುತ್ತ ಸೀಸೆಯ ಬಳಿ ಬಂದನು. ಆ ಸೀಸೆಯ ಒಳಗೆ ಕೈಯನ್ನು ತೂರಿಸಿ, ಎಷ್ಟು ಸಾಧ್ಯವೋ ಅಷ್ಟು ಸೇಂಗಾಬೀಜವನ್ನು ಮುಷ್ಟಿಕಟ್ಟಿ ಕೊಂಡು, ಕೈಯನ್ನು ಹೊರತೆಗೆಯಲು ಪ್ರಯತ್ನಿಸಿದ. ದುರದೃಷ್ಟವಶಾತ್, ಆ ಸೀಸೆಯ ಬಾಯಿ ಕಿರಿದಾಗಿದ್ದು, ಮುಷ್ಟಿ ತುಂಬಾ ಸೇಂಗಾಬೀಜ ತುಂಬಿದ್ದರಿಂದ ಕೈಯನ್ನು ಹೊರತೆಗೆಯಲಾಗಲಿಲ್ಲ. ಬಾಲಕ ಅಳುವುದಕ್ಕೇ ಪ್ರಾರಂಭಿಸಿದ. ಪಕ್ಕದಲ್ಲಿಯೇ ಕುಳಿತಿದ್ದ ಅವನ ತಂದೆ ಅವನಿಗೆ ಕೈಯಲ್ಲಿರುವ ಅಷ್ಟೂ ಸೇಂಗಾ ಬೀಜವನ್ನು ಸೀಸೆಗೆ ಹಾಕಿ, ಅವನ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತನ್ನ ಪುಟ್ಟ ಕೈಯಲ್ಲಿ ಇಟ್ಟುಕೊಳ್ಳುವಂತೆ ತಿಳಿಸಿದರು. ಅದರಂತೆ ಬಾಲಕ, ಸ್ವಲ್ಪವೇ ಸೇಂಗಾಬೀಜವನ್ನು ಹಿಡಿದುಕೊಂಡು ಬಹಳ ಸಂತೋಷದಿಂದ ತನ್ನ ಕೈಯನ್ನು ಹೊರತೆಗೆದ.

ಹಾಡು

ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ಭಗವಂತ ಸೃಷ್ಟಿಸಿದ ಪಂಚ ಭೂತಗಳು, ಅದೇ ಪಂಚಭೂತಗಳ ಅಂಶಗಳು ನಾವು, ಹೇಗೆ ಪ್ರಕೃತಿ ಮಾತೆಯೋ, ಹಾಗೆಯೇ ಸಕಲ ಜೀವಿಗಳು.

ರಸಪ್ರಶ್ನೆ

ಪಂಚಭೂತಗಳನ್ನು ಈ ಕೆಳಗೆ ನೀಡಲಾಗಿದೆ. ಪ್ರತಿಯೊಂದಕ್ಕೂ ನಾಲ್ಕು ಆಯ್ಕೆಗಳಿವೆ. ಸರಿಹೊಂದಿಸಬಹುದಾದ ಒಂದು ಪದವನ್ನು ಸೂಚಿಸಿ.

ಆಕಾಶ: ಬ್ರಹ್ಮಾಂಡ, ಆಗಸ, ಪರ್ವತ, ಮೋಡ
ವಾಯು: ಗಾಳಿ, ಮಣ್ಣು, ಬಂಡೆ, ಮಳೆ
ಅಗ್ನಿ: ಹೊಗೆ, ಲಾವ, ಇಂಧನ, ಬೆಂಕಿ
ಜಲ: ಕೊಳ, ನೀರು, ಹೊಂಡ, ಬಾವಿ
ಪೃಥ್ವಿ: ಕಲ್ಲು, ಮರಳು, ಭೂಮಿ, ಸಿಮೆಂಟ್

ಪ್ರಾರ್ಥನೆ

ಜೀವ ವಿತ್ತಿಹ, ಬೆಳಕು ನೀಡಿಹ ಆ ಸೃಷ್ಟಿಕರ್ತನಿಗೆ ಇಂದಿನ ದಿನ, ಈ ಸುಂದರ ಪ್ರಪಂಚ ಎಲ್ಲವೂ ಅವನ ಕೊಡುಗೆ ಮೇಲೇರಬಹುದಾದ ಬೆಟ್ಟ ಗುಡ್ಡಗಳು, ಈಜಬಹುದಾದಂತಹ ಆಳವಾದ ನೀರು, ಒಣ ಮಣ್ಣಿನ ಮೇಲೆ ಬೀಳುವ ಮಳೆಹನಿಗಳ ಕಂಪು, ಹೃದಯವನ್ನು ಒಂದೇ ಉಸಿರಿಗೆ ಸ್ವರ್ಗದೆತ್ತರಕ್ಕೆ ಒಯ್ಯುವ ಸಂಗೀತದ ಇಂಪು, ನಮ್ಮ ಕೈ ಹಿಡಿಯುವ ಆತ್ಮೀಯ ಗೆಳೆಯರ ಗುಂಪು, ಇವೆಲ್ಲ ಕೊಡುಗೆಗಳ ಎಮಗೆ ಕರುಣಿಸಿದವಗೆ, ಇದೋ ನಮ್ಮ ಕೃತಜ್ಞತೆಗಳ ಮಾಲಾರ್ಪಣೆ.

ಮೌನಾಸನ

ವಿದ್ಯಾರ್ಥಿಗಳು ಸುಖಾಸನದಲ್ಲಿ ನೇರವಾಗಿ ಕುಳಿತು ಕಣ್ಮುಚ್ಚಿ ಕೊಳ್ಳಬೇಕು. ಮತ್ತು ನಿಸರ್ಗ ಸೌಂದರ್ಯದ ಆನಂದವನ್ನು ದೃಶ್ಯೀಕರಣದ ಮೂಲಕ ಆಸ್ವಾದಿಸಬೇಕು. ಹಿನ್ನೆಲೆಯಲ್ಲಿ ಸೌಮ್ಯವಾದ ಸಂಗೀತವಿರಬೇಕು.

Leave a Reply

Your email address will not be published. Required fields are marked *