ಭೂಮಿ – 1
ಭೂಮಿ – 1
ಪರಿಚಯ
ಎಲ್ಲ ಪಂಚಭೂತಗಳೂ ದೇವರ ದಿವ್ಯ ಘಟಕಗಳು. ಆದ್ದರಿಂದಲೇ ನಮ್ಮ ಪೂರ್ವಜರು ಯಾವಾಗಲೂ ಪಂಚಭೂತಗಳನ್ನು ದೇವರೆಂದು ಪೂಜಿಸುತ್ತಿದ್ದರು. ನಾವು ಭೂಮಿಯನ್ನು ‘ಭೂದೇವಿ’ ಅಥವಾ ‘ಭೂಮಾತಾ’ ಎಂದೇ ಆರಾಧಿಸುತ್ತೇವೆ. ನಾವು ಯಾವಾಗಲೂ ನಮ್ಮ ಅಗತ್ಯಗಳ ಮೇಲೆ ನಿಯಂತ್ರಣವನ್ನು ಹೇರಿಕೊಂಡು, ಮತ್ತು ಒಳ್ಳೆಯ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು, ಭೂಮಿಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.
ಗುಣಲಕ್ಷಣಗಳು
ಭೂಮಿಗೆ ‘ಶಬ್ದ’, ‘ಸ್ಪರ್ಶ’, ‘ರೂಪ’, ‘ರಸ’, ‘ಗಂಧ’ ಎಂಬ ಐದು ಗುಣಲಕ್ಷಣಗಳಿವೆ. ಭೂಮಿಯು ನಮಗೆ ಚೈತನ್ಯ (ಶಕ್ತಿ) ವನ್ನೂ ಮತ್ತು ಆಹಾರವನ್ನೂ ನೀಡುತ್ತದೆ. ನಮ್ಮ ಜೀವನದ ಏಳಿಗೆ ಭೂಮಿಯಿಂದ ಮಾತ್ರ ಸಾಧ್ಯ. ಇದು ನಮಗೆ ವಿಶಾಲ ಮನೋಭಾವನೆ ಮತ್ತು ಸಹಿಷ್ಣುತೆಯನ್ನು ಕಲಿಸುತ್ತದೆ. ಭೂಮಿಯ ಮೇಲೆ ಎಲ್ಲಾ ಹಗುರ ಮತ್ತು ಭಾರವಾದ ವಾಹನಗಳು ಚಲಿಸುತ್ತವೆ. ಭೂಮಿಯನ್ನು ನಾವು ಮನಬಂದ ಹಾಗೆ ಅಗೆಯುತ್ತೇವೆ. ನೇಗಿಲುಗಳನ್ನು ಬಳಸುತ್ತೇವೆ. ಎಲ್ಲಾ ತರಹದ ತೊಂದರೆ ಮತ್ತು ಗಾಯಗಳನ್ನು ಮಾಡುತ್ತೇವೆ. ಆದರೂ ಅದು ಬಹಳ ಶಾಂತಿಯುತವಾಗಿ ತಡೆದುಕೊಳ್ಳುತ್ತದೆ. ಬದಲಾಗಿ ಅದು ನಮಗೆ ಆಹಾರವನ್ನು ಮಾತ್ರವಲ್ಲದೆ, ಅವಶ್ಯಕ ವಸ್ತುಗಳಾದ ಮರ, ಕಲ್ಲಿದ್ದಲು, ಖನಿಜಗಳು, ಇತ್ಯಾದಿಗಳನ್ನು ನೀಡುತ್ತದೆ.
ಕಥೆ
ಒಬ್ಬ ಫ್ರೆಂಚ್ ಬಾಲಕನು ಪಕ್ಷಿ ಪ್ರೇಮಿಯಾಗಿದ್ದನು. ಅವನು ವಿಶೇಷವಾಗಿ, ಮಧುರ ಧ್ವನಿಗೆ ಹೆಸರಾದ ಲಾವೋ ಪಕ್ಷಿಯನ್ನು ಪ್ರೀತಿಸುತ್ತಿದ್ದನು. ಫ್ರೆಂಚ್ ಜನರು ಲಾವೋನ ಮಾಂಸವನ್ನು ಬಹಳ ಇಷ್ಟಪಡುತ್ತಾರೆ. ಒಂದು ದಿನ ಆ ಬಾಲಕನಿಗೆ ಲಾವೋ ಪಕ್ಷಿಯ ಧ್ವನಿ ಕೇಳಿಸಿತು. ಸುತ್ತಲೂ ನೋಡಿದಾಗ ಒಬ್ಬ ವ್ಯಕ್ತಿಯು ಅದನ್ನು ಮಾರಲು ಪಂಜರದ ಒಳಗೆ ಇಟ್ಟುಕೊಂಡಿರುವುದು ಕಾಣಿಸಿತು. ‘ಇದನ್ನು ಕೊಂಡುಕೊಳ್ಳುವವರು ಯಾರಾದರೂ ಇರಬಹುದು, ಅವರು ಇದನ್ನು ಕೊಂದು, ಅದರ ಮಾಂಸವನ್ನು ತಿನ್ನುತ್ತಾರೆ’ ಎಂದು ಅವನಿಗೆ ತಿಳಿದಿತ್ತು. ಲಾವೋ ಪಕ್ಷಿಯು ಸಹಾಯ ಬೇಡುತ್ತಿದೆಯೋ ಎಂಬಂತೆ, ಬಾಲಕನನ್ನೇ ನೋಡುತ್ತಿತ್ತು.
ಬಾಲಕ ಆ ವ್ಯಕ್ತಿಯ ಹತ್ತಿರ ಪಕ್ಷಿಯ ಬೆಲೆಯನ್ನು ಕೇಳಿದ. ವ್ಯಕ್ತಿ ಹೇಳಿದ ಬೆಲೆಯಷ್ಟು ಹಣ ಬಾಲಕನ ಕಿಸೆಯಲ್ಲಿ ಇರಲಿಲ್ಲ. ಅವನು ಆ ವ್ಯಕ್ತಿಯ ಹತ್ತಿರ, “ನನ್ನ ಹತ್ತಿರ ಇರುವಷ್ಟು ಹಣವನ್ನು ತೆಗೆದುಕೊಂಡು ಆ ಪಕ್ಷಿಯನ್ನು ನನಗೆ ಕೊಡು” ಎಂದು ಪ್ರಾರ್ಥಿಸಿದ. ಆದರೆ ಆ ವ್ಯಕ್ತಿಯು ಒಪ್ಪಲಿಲ್ಲ. ಬಾಲಕ ಅಮ್ಮನಿಂದ ಹಣ ಕೇಳಿ ತರೋಣವೆಂದು ಯೋಚಿಸಿದ. ಆಗ ತುಂಬಾ ಬಿಸಿಲಿತ್ತು. ಆದರೂ ಆ ಬಿಸಿಲಿನಲ್ಲಿಯೇ ಅವನು ಮನೆಗೆ ಓಡಿದ. ಆದರೆ, ಅವರ ಅಮ್ಮ ಮನೆಯಲ್ಲಿರಲಿಲ್ಲ. ಅಷ್ಟರಲ್ಲೇ ಬೇರೆ ಯಾರಾದರೂ ಪಕ್ಷಿಯನ್ನು ಕೊಂಡು ತಿಂದುಬಿಟ್ಟರೆ,
ಎಂದು ಬಾಲಕನಿಗೆ ಹೆದರಿಕೆ ಶುರುವಾಯ್ತು. ಅವನು ಉಳಿದ ಹಣಕ್ಕಾಗಿ ತನ್ನ ಶಿಕ್ಷಕರ ಬಳಿಗೆ ಓಡಿದ. ಶಿಕ್ಷಕರು ತಕ್ಷಣವೇ ಅವನಿಗೆ ಬೇಕಾಗಿದ್ದಷ್ಟು ಹಣವನ್ನು ನೀಡಿದರು. ಅವನು ಹಿಂತಿರುಗಿ ಅಲ್ಲಿಗೆ ಓಡಿ ಹೋದಾಗ, ಒಬ್ಬ ಮಹಿಳೆಯು ಆ ಪಕ್ಷಿಯನ್ನು ಕೊಳ್ಳಲು, ಚೌಕಾಸಿ ಮಾಡುತ್ತಿರುವುದನ್ನು ನೋಡಿದ. ಬಾಲಕ ಹಣವನ್ನು ನೀಡಿ ಆ ಪಕ್ಷಿಯನ್ನು ಪಡೆದ. ತನಗೆ ಅತ್ಯಂತ ಪ್ರಿಯವಾದ ಆಪಕ್ಷಿಯ ಜೀವವನ್ನು ಉಳಿಸಿದ್ದಕ್ಕಾಗಿ ಅವನಿಗೆ ಸಂತೋಷವಾಯಿತು. ತಕ್ಷಣ ಅವನು ಆ ಪಕ್ಷಿಯನ್ನು ನೋಡಿದ. ಪಕ್ಷಿಯೂ ಸಹ ಆತಂಕದಿಂದ ಅವನನ್ನೇ ನೋಡುತ್ತಿತ್ತು. ಅವನು ಲಾವೋವನ್ನು ತಬ್ಬಿಕೊಂಡ. ಲಾವೋ ಕೂಡ ಅದರ ಮಧುರವಾದ ಧ್ವನಿಯಿಂದ ಅವನಿಗೆ ವಂದನೆ ಸಲ್ಲಿಸಿತು. ಬಾಲಕ, ಪಂಜರವನ್ನು ಯಾರೂ ಇಲ್ಲದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಅದನ್ನು ತೆರೆದ. ಪಕ್ಷಿಯು ಪ್ರೀತಿಯ ನೋಟದ ಧನ್ಯವಾದಗಳೊಂದಿಗೆ ಆಗಸಕ್ಕೆ ಹಾರಿತು. ಬಾಲಕನಿಗಾದ ಆನಂದವನ್ನು ಯಾರಿಗೆ ತಾನೇ ಊಹಿಸಲು ಸಾಧ್ಯ?
ಉದ್ಧರಣ
ಅಥರ್ವ ವೇದವು ಹೇಳಿರುವಂತೆ, ನಾವು ಮಾನಸಿಕವಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಭೂಮಿ ನನ್ನ ತಾಯಿ; ನಾನು ಭೂಮಾತೆಯ ಮಗ, ಇದಕ್ಕೆ ಹೆಚ್ಚು ಒತ್ತು ನೀಡಬೇಕು. ಇದನ್ನು ಹಲವುಸಲ ಹೇಳಿಕೊಳ್ಳುತ್ತಿರಬೇಕು. ಮತ್ತು ಆಗಾಗ ಇದನ್ನು ಮನನ ಮಾಡಿಕೊಳ್ಳಬೇಕು. ನಮ್ಮ ವರ್ತನೆಯು ಮೇಲೆ ಹೇಳಿದಂತೆ ಇದ್ದರೆ, ಖಂಡಿತವಾಗಿಯೂ ನಾವು ಭೂಮಾತೆಯನ್ನು ಸ್ವಚ್ಛವಾಗಿ ಮತ್ತು ಶುದ್ಧವಾಗಿಟ್ಟುಕೊಂಡು ಸಂರಕ್ಷಿಸಬಹುದಾಗಿದೆ
ಮೌನಾಸನ
ಹಳ್ಳಿಗಾಡು ಪ್ರದೇಶಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿರಿ. ಅವರು ಅಲ್ಲಿ ಮೈದಾನದಲ್ಲಿ ನೇರವಾಗಿ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿಕೊಳ್ಳಲಿ. ಈ ಕೆಳಗೆ ಹೇಳಿರುವುದನ್ನು ಯೋಚಿಸಲಿ ಮತ್ತು ಆನಂದ ಪಡೆಯಲಿ.
- ಸುತ್ತಮುತ್ತ ಎಲ್ಲ ಮರಗಿಡಗಳೂ, ಪೊದೆಗಳೂ ಇವೆ. ಮೇಲೆ ಹೊಳೆಯುತ್ತಿರುವ ಸೂರ್ಯ; ಹಿತವಾದ ತಂಪುಗಾಳಿ ಬೀಸುತ್ತಿದೆ.
- ಆ ಪ್ರದೇಶವನ್ನು ಟ್ರ್ಯಾಕ್ಟರ್ ನಿಂದ ಉಳಲಾಗುತ್ತಿದೆ. ಕೊಳವೆ ಬಾವಿಯಿಂದ ನೀರು ಹರಿಯುತ್ತಿದೆ.
- ಮತ್ತೊಂದು ಕಡೆ, ಹೊಲದಲ್ಲಿ ಧಾನ್ಯಗಳನ್ನು ಬೆಳೆಯಲಾಗಿದೆ. ಧಾನ್ಯಗಳಿಂದ ಹಿಟ್ಟನ್ನು ತಯಾರಿಸಿ, ಅದನ್ನು ನಾದಿ, ರೊಟ್ಟಿ ಹಾಗೂ ಇತರ ಆಹಾರವಸ್ತುಗಳನ್ನು ತಯಾರಿಸಲಾಗುತ್ತಿದೆ.
- ನಮಗೆ ಬದುಕಲು ಬೇಕಾದ ಅವಶ್ಯಕ ವಸ್ತುಗಳೆಲ್ಲವೂ ನಮ್ಮ ಸುತ್ತಮುತ್ತಲೂ ಇವೆ. ನಾವು ಅವುಗಳನ್ನು ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಿಕೊಳ್ಳಬೇಕು. ದಾಸ್ತಾನು ಮಾಡುವ ಅಗತ್ಯವಿಲ್ಲ.
- ಇದು ಎಲ್ಲರಿಗೂ ಪ್ರೇಮಭರಿತವಾದ ಸುವರ್ಣ ಪ್ರದೇಶವಾಗಿದೆ. ಮುಕ್ತವಾಗಿರುವ ಈ ವಾತಾವರಣದಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳು ಸಂತೋಷದಿಂದಿವೆ.