ವಚನ ಪಾಲನೆ

Print Friendly, PDF & Email
ವಚನ ಪಾಲನೆ

ಧನಿಯಿಂದಲೇ ತಾನು ಪ್ರಥಮ ಭಿಕ್ಷೆ ಸ್ವೀಕರಿಸುವುದಾಗಿ ಹೇಳಿದ, ಬಾಲಕ ಗದಾಯ್.

ಅದು ಸಾಧ್ಯವಿಲ್ಲವೆಂದು ಎಲ್ಲರೂ ಹೇಳಿದರೂ, ಗದಾಯ್ ನ ನಿರ್ಧಾರ ಬದಲಾಗಲಿಲ್ಲ. ವಿಧಿಯಿಲ್ಲದೇ, ಎಲ್ಲರೂ ಅದಕ್ಕೆ ಒಪ್ಪಿಗೆ ಕೊಡಲೇ ಬೇಕಾಯಿತು.

Gadai wants Dhani to give alms

ಗದಾಯ್ ಒಂಬತ್ತು ವರ್ಷದವನಿದ್ದಾಗ, ಅವನಿಗೆ ಉಪನಯನ ಮಾಡಲು ಸಿದ್ಧತೆ ನಡೆಯಿತು. ಅವನ ಅಣ್ಣ ರಾಮಕುಮಾರನೇ ಕುಟುಂಬದ ಯಜಮಾನ. ಆತನೇ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದ. ಧನಿಯು ಕಮ್ಮಾರ ಜಾತಿಗೆ ಸೇರಿದ ಹೆಂಗಸು. ಗದಾಯ್ ನ ಜನನದ ಸಮಯದಲ್ಲಿ, ಅವನ ತಾಯಿ ಚಂದ್ರಮಣಿಗೆ ಬಹಳ ಸಹಾಯಕವಾಗಿದ್ದಳು. ಅವಳನ್ನು ‘ಅಮ್ಮ’ ಎಂದೇ ಗದಾಯ್ ಕರೆಯುತ್ತಿದ್ದುದು. ಹಾಗಾಗಿ, ವಳಿಂದಲೇ ಪ್ರಥಮ ಭಿಕ್ಷೆ ಸ್ವೀಕರಿಸುವೆನೆಂದು ಗದಾಯ್ ಹೇಳಿದಾಗ, ರಾಮ ಕುಮಾರ ಅದನ್ನು ಬಲವಾಗಿ ವಿರೋಧಿಸಿದ. ಏಕೆಂದರೆ, ಖುಧಿರಾಮನ ಕುಟುಂಬದ ಸಂಪ್ರದಾಯದಂತೆ, ಕೇವಲ ಬ್ರಾಹ್ಮಣ ಸ್ತ್ರೀಯರು ಮಾತ್ರ ‘ಮೊದಲ ಭಿಕ್ಷೆ’ ನೀಡಬಹುದಾಗಿತ್ತು.

ಅಣ್ಣನನ್ನು ಕುರಿತು ಗದಾಯ್ ಹೀಗೆ ನುಡಿದ, “ನಾನು ಧನಿಯನ್ನು ‘ಅಮ್ಮ’ ಎಂದೇ ಕರೆಯುತ್ತಿದ್ದೇನೆ. ಅಲ್ಲದೇ, ಅವಳಿಂದಲೇ ನಾನು ‘ಮೊದಲ ಭಿಕ್ಷೆ’ ತೆಗೆದುಕೊಳ್ಳುವುದಾಗಿ ಮಾತು ಕೊಟ್ಟಿದ್ದೇನೆ. ಕೊಟ್ಟ ಮಾತಿಗೆ ತಪ್ಪಲಾರೆ. ಆದ್ದರಿಂದ ಅದರಂತೆಯೇ ನಡೆಯಬೇಕು,” ಎಂದು.

ಗದಾಯ್ ಚಿಕ್ಕವನಿದ್ದಾಗ, ಒಮ್ಮೆ ಧನಿ ಅವನನ್ನು ಕೇಳಿದ್ದಳು, “ಗದಾಯ್! ನಿನ್ನ ಉಪನಯನದ ಸಂದರ್ಭದಲ್ಲಿ ನನ್ನಿಂದ ‘ಮಾತೃ ಭಿಕ್ಷೆಯನ್ನು ಸ್ವೀಕರಿಸುವೆಯಾ?” ಎಂದು. ‘ಖಂಡಿತವಾಗಿ’ ಎಂದು ವಾಗ್ದಾನ ಮಾಡಿದ್ದ, ಬಾಲಕ ಗದಾಯ್.

Dhani gives first alms to Gadai

ಇಂತಹ ವಾಗ್ದಾನಗಳಿಗೆ ಯಾವ ಬೆಲೆಯೂ ಇಲ್ಲವೆಂದು ಎಲ್ಲರು ವಾದಿಸಿದರು. ಆದರೆ ಬಾಲಕ ಗದಾಯ್, ತನ್ನ ಮಾತಿನ ಮೇಲೆ ಸ್ಥಿರವಾಗಿ ನಿಂತ. ತಾನು ಕೊಟ್ಟ ಮಾತಿನಂತೆ ನಡೆಯದೆ ಹೋದರೆ, ಅದು ಅಸತ್ಯವನ್ನು ನುಡಿದಂತಾಗುವುದೆಂದು ಹಠ ಹಿಡಿದ.

ಬೇರೇನೂ ಮಾಡಲಾಗದೇ, ಎಲ್ಲರು ಅದಕ್ಕೆ ಒಪ್ಪಿಗೆ ಕೊಡಲೇ ಬೇಕಾಯಿತು. ಉಪನಯನದ ಸಮಾರಂಭದಲ್ಲಿ, ಧನಿಯು ಪ್ರಥಮ ಭಿಕ್ಷೆ ನೀಡಿದಳು. ಆಕೆಯ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ‘ಉಪನಯನ’ದ ನಂತರ, ದೇವರು ರಘುವೀರ ಮತ್ತು ಶೀತಲಾ ದೇವಿಯ ಪೂಜೆ ಮಾಡುವ ಅರ್ಹತೆಯು, ಗದಾಯ್ ಗೆ ದೊರೆಯಿತು. ಪೂಜೆ ಮಾಡುವುದೆಂದರೆ ಅವನಿಗೆ ಬಹು ಆಸಕ್ತಿ. ರಘುವೀರನ ಪೂಜೆ ಮಾಡುವಾಗ, ಅವನ ಮನಸ್ಸು ದೇವರಲ್ಲೇ ತನ್ಮಯವಾಗುತ್ತಿತ್ತು. ಆಗ ಹೊರಜಗತ್ತನ್ನೇ ಮರೆತು, ತನ್ನ ಹೃದಯದಲ್ಲೇ ಆ ಭಗವಂತನನ್ನು ಗದಾಯ್ ಕಾಣುತ್ತಿದ್ದ.

ಪ್ರಶ್ನೆಗಳು
  1. ಉಪನಯನದ ಸಂದರ್ಭದಲ್ಲಿ, ಗದಾಯ್ ಪ್ರಥಮ ಭಿಕ್ಷೆಯನ್ನು ಯಾರಿಂದ ಸ್ವೀಕರಿಸಿದನು?
  2. ರಾಮಕುಮಾರನು ಅದನ್ನು ಏಕೆ ವಿರೋಧಿಸಿದನು?
  3. ಅದಕ್ಕೆ ಗದಾಯ್ ನೀಡಿದ ಉತ್ತರವೇನು?
  4. ಈ ಕಥೆಯಲ್ಲಿ, ಗದಾಯ್ ನಲ್ಲಿ ಕಂಡುಬಂದ ಯಾವುದಾದರೂ ಎರಡು ಉತ್ತಮ ಗುಣಗಳನ್ನು ಗುರ್ತಿಸಿ, ತಿಳಿಸಿ.

[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್–2]

[ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ]

error: