ಲೋಭ (ಜಿಪುಣತೆ)
ಲೋಭ (ಜಿಪುಣತೆ)
ಲೋಭ ಅಥವಾ ಜಿಪುಣತನ ಯಾರನ್ನೂ ಸಂತೋಷವಾಗಿರಲು ಬಿಡದು. ಜಿಪುಣ ತನ್ನ ಸಂಪತ್ತನ್ನು ತಾನೂ ಉಪಯೋಗಿಸುವುದಿಲ್ಲ, ಇತರರಿಗೆ ಅನುಭವಿಸಲೂ ಬಿಡುವುದಿಲ್ಲ. ಆಸ್ತಿ ನಷ್ಟ ಭಯ ಮತ್ತು ಸಂಪತ್ತಿನ ಹಾನಿ ಭಯದಿಂದಾಗಿ ಆತ ಯಾವ ಕಾರ್ಯಕ್ಕೂ ಕೈಹಾಕುವುದಿಲ್ಲ. ಪ್ರತಿಯೊಂದು ಕೆಲಸಕ್ಕೂ ಆತ ಹಿಂದೇಟು ಹಾಕುತ್ತಾನೆ. ಇದಕ್ಕೆ ದೃಷ್ಟಾಂತವಾಗಿ ಒಂದು ಸಣ್ಣ ಕಥೆಯಿದೆ.
ಒಂದೂರಿನಲ್ಲಿ ಲೋಭಿ ಮತ್ತು ಕಡು ಲೋಭಿ ಎಂಬ ಇಬ್ಬರು ಸಹೋದರರು ಇದ್ದರು. ಅವರು ಹೆಸರಿಗೆ ತಕ್ಕಂತೆ ತುಂಬ ಜಿಪುಣರಾಗಿದ್ದರು. ಎಷ್ಟು ಜಿಪುಣರೆಂದರೆ ತಮ್ಮ ದೇಹ ಪೋಷಣೆಗೆ ಅವಶ್ಯಕವಾದ ಆಹಾರವನ್ನೂ ಸರಿಯಾಗಿ ಸೇವಿಸುತ್ತಿರಲಿಲ್ಲ. ಪ್ರಾಪಂಚಿಕ ಸುಖಕ್ಕಾಗಿ ದೇವರನ್ನು ಪೂಜಿಸುವ, ಪ್ರಾರ್ಥಿಸುವ ಸಂದರ್ಭದಲ್ಲಿ ಸರಿಯಾಗಿ ನೈವೇದ್ಯವನ್ನೂ ಅರ್ಪಿಸುತ್ತಿರಲಿಲ್ಲ. ದೇವರ ಮುಂದಿರಿಸಿದ ನೈವೇದ್ಯವನ್ನು ಮರುಕ್ಷಣದಲ್ಲಿ ಅಲ್ಲಿಂದ ತೆಗೆಯುತ್ತಿದ್ದರು. ದೇವರ ಕೃಪಾದೃಷ್ಟಿ ನೈವೇದ್ಯದ ಮೇಲೆ ಬೀಳುವುದಕ್ಕೂ ಅವಕಾಶಕೊಡದೆ ಅಲ್ಲಿಂದ ಅದನ್ನು ತೆಗೆದು, ತಿನ್ನುತ್ತಿದ್ದರು. ಕಾರಣ ನೈವೇದ್ಯಕ್ಕಿಟ್ಟ ಸಕ್ಕರೆ ಅಚ್ಚು ಇರುವೆಗಳ ಪಾಲಾಗಬಹುದೆಂಬ ಭಯ. ಇರುವೆಗಳ ಬಾಯಿಂದ ಸಕ್ಕರೆ ಅಚ್ಚನ್ನು ತಪ್ಪಿಸುವ ಸಲುವಾಗಿ, ದೇವರ ಪೀಠದ ಮೇಲೆ ಹೆಚ್ಚು ಹೊತ್ತು ನೈವೇದ್ಯ ಇರಿಸುತ್ತಿರಲಿಲ್ಲ.
ಒಂದು ದಿನ, ಈ ಲೋಭಿಗಳ ಹತ್ತಿರದ ಬಂಧುವೊಬ್ಬರು ಮಡಿದ ಸುದ್ದಿ ಬಂತು. ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಹಿರಿಯ ಸಹೋದರನಾದ ಕಡುಲೋಭಿ ಅಲ್ಲಿಗೆ ಹೋಗಲು ನಿರ್ಧರಿಸಿದ. ಮರುದಿನ ಬಸ್ಸಲ್ಲಾಗಲೀ, ರೈಲಲ್ಲಾಗಲೀ ಹೋದರೆ ಹಣ ಖರ್ಚಾಗುವುದೆಂದೂ, ಅದು ತುಂಬಾ ದುಬಾರಿ ಎಂದು ಯೋಚಿಸಿದ. ಉಳಿತಾಯ ಮಾಡುವ ಯೋಚನೆಯಿಂದ ಮತ್ತು ಅನವಶ್ಯಕ ಹೊರೆಯಿಂದ ಸಂಸಾರವನ್ನು ಉಳಿಸುವ ಸಲುವಾಗಿ, ಆ ರಾತ್ರಿಯೇ ಕಾಲ್ನಡಿಗೆಯಲ್ಲಿ ಹೊರಟ.
ಹಿರಿಯ ಸಹೋದರ ಕಡುಲೋಭಿ ಬಂಧುವಿನ ಮನೆಗೆ ಹೊರಟ ತಕ್ಷಣ ಕಿರಿಯ ಸಹೋದರ ಲೋಭಿ ದೀಪ ಆರಿಸಿ, ದೀಪದ ಬುಡ್ಡಿಯನ್ನು ಕಿಟಕಿಯ ಸಂಧಿಯಲ್ಲಿ ಇರಿಸಿದ. ಆಗ ಆ ಕತ್ತಲೆಯಲ್ಲಿ ಕೆಟ್ಟ ಚೇಳೊಂದು ಅವನ ಕೈಯನ್ನು ಕಡಿಯಿತು. ಅಸಹನೀಯ ನೋವಿನಿಂದ ನರಳಾಡಿದ. ಅಷ್ಟು ಹೊತ್ತಿಗೆ ಕಡು ಲೋಭಿ ಕೆಲವು ಮೈಲುಗಳ ದೂರ ಕ್ರಮಿಸಿದ್ದ. ತಕ್ಷಣ ಏನೋ ನೆನಪಾದವನಂತೆ ಅವಸರವಸರವಾಗಿ ಮನೆಯ ಕಡೆ ಧಾವಿಸಿ ಬಂದ.
ಆಕಸ್ಮಿಕವಾಗಿ ಹಿಂತಿರುಗಿ ಬಂದ ಅಣ್ಣನನ್ನು, ತನ್ನ ನೋವಿನ ನಡುವೆಯೂ ತಮ್ಮ, ಕಾರಣ ಕೇಳಿದ. ಆಗ ಕಡು ಲೋಭಿ, ”ಎಲೈ ಸಹೋದರ, ಹಚ್ಚಿದ ದೀಪವನ್ನು ನಂದಿಸಲು ನೀನು ಮರೆತಿರಬಹುದು, ಅನವಶ್ಯಕವಾಗಿ ಎಣ್ಣೆ ಖರ್ಚು ಎಂದು, ನಿನಗೆ ನೆನಪಿಸುವುದಕ್ಕಾಗಿ ಮರಳಿ ಬಂದೆ” ಎಂದ. ಆಗ ಚೇಳುಕಡಿತದ ನೋವಿನ ನಡುವೆಯೂ ತಮ್ಮ ಲೋಭಿ ದುಃಖದಿಂದ, “ಅಯ್ಯೋ ಅಣ್ಣ, ಎಣ್ಣೆ ವ್ಯರ್ಥವಾಗಬಾರದೆಂಬ ನಿನ್ನ ಆಶಯ ಸಹಜ, ಪ್ರಶಂಸನೀಯ. ಆದರೆ, ನೀನು ವಾಪಸ್ಸು ಬಂದದ್ದರಿಂದ ನಿನ್ನ ಪಾದರಕ್ಷೆ ಎಷ್ಟು ಸವೆಯಿತಲ್ಲ! ಛೇ, ಎಂಥ ಕೆಲಸವಾಯಿತಲ್ಲ!” ಎಂದ. ಆಗ ಕಡು ಲೋಭಿ, ”ನನ್ನ ಪ್ರೀತಿಯ ತಮ್ಮ, ಚಿಂತಿಸದಿರು. ಬರುವಾಗ ನಾನು ಪಾದರಕ್ಷೆಯನ್ನು ಕೈಯಲ್ಲಿ ಹಿಡಿದು, ಬರಿಗಾಲಲ್ಲೇ ನಡೆದು ಬಂದೆ’ ಎಂದು ಹೇಳಿದ.
ಲೋಭ – ಜಿಪುಣತನ ತರುವ ಕೇಡು ಈ ತರಹದ್ದು!!!
ಪ್ರಶ್ನೆಗಳು:
- ದೇವರ ವಿಷಯದಲ್ಲಿ ಸಹೋದರರ ಜಿಪುಣತನ ಯಾವ ರೀತಿಯದ್ದು?
- ಮನೆಯಲ್ಲಿ ಸಹೋದರರ ಜಿಪುಣತನ ಎಂಥದ್ದು?
- ಕಡುಲೋಭಿ ಏನು ಮಾಡಿದ? ಆತನ ಯೋಜನೆ ಏನಾಗಿತ್ತು?
[ಮೂಲ:- ಮಕ್ಕಳಿಗಾಗಿ ಕಥೆಗಳು-೨
ಶ್ರೀ ಸತ್ಯಸಾಯಿ ಪುಸ್ತಕ ಪ್ರಕಾಶನ, ಪ್ರಶಾಂತಿ ನಿಲಯಂ]