ಬಾಲಕ ಮತ್ತು ಭಲ್ಲೂಕ (ಕರಡಿ)
ಬಾಲಕ ಮತ್ತು ಭಲ್ಲೂಕ (ಕರಡಿ)
ಒಂದು ಹೊಳೆಯ ದಡ. ಮಕ್ಕಳ ಗುಂಪೊಂದು ದನ ಕಾಯುವ ಕೆಲಸದಲ್ಲಿ ನಿರತವಾಗಿತ್ತು. ಅದು ಮಳೆಗಾಲದ ಸಮಯ. ಇದ್ದಕ್ಕಿದ್ದಂತೆ ಮಳೆ ಜೋರಾಗಿ, ನದಿಯಲ್ಲಿ ನೀರಿನ ಪ್ರವಾಹ ಉಕ್ಕೇರಿತು. ಅದು ಭಯಂಕರ, ಮಹಾಪ್ರವಾಹ. ಭಲ್ಲೂಕವೊಂದು ಜಾರಿ ನದಿಗೆ ಬಿತ್ತು. ಅದು ನೀರಿನಲ್ಲಿ ಮುಳುಗುತ್ತಾ ಏಳುತ್ತಾ ಮಹಾಪ್ರವಾಹದ ಸೆಳೆತಕ್ಕೆ ಸಿಕ್ಕಿ ಒದ್ದಾಡುತ್ತಿತ್ತು. ನದಿ ಮಧ್ಯಕ್ಕೆ ಸೆಳೆಯಲ್ಪಟ್ಟ ಕರಡಿ ಸಾವು ಬದುಕಿನ ನಡುವೆ ಸೆಣಸಾಡುತ್ತಿತ್ತು. ಒಬ್ಬ ಬಾಲಕ ನೀರಿನಲ್ಲಿ ತೇಲುತ್ತಿರುವ ವಸ್ತುವಿನ ರಾಶಿಯನ್ನು ನೋಡಿದ. ದೂರದಲ್ಲಿದ್ದ ಆತನಿಗೆ ಅದು ಕಂಬಳಿಯ ರಾಶಿಯಂತೆ ಕಂಡಿತು. ಬಾಲಕ ತನ್ನ ಸಂಗಡಿಗರನ್ನು ಕರೆದು, ”ಸ್ನೇಹಿತರೇ, ನಾನು ನೀರಿಗೆ ಧುಮುಕಿ ಆ ಕಂಬಳಿಯ ಮೂಟೆಯನ್ನು ತರುತ್ತೇನೆ” ಎಂದ. ತಕ್ಷಣ ನೀರಿಗೆ ಧುಮುಕಿದ.
ಬಾಲಕ ಕಂಬಳಿಯ ಮೂಟೆಯೆಂದು ತಪ್ಪಾಗಿ ತಿಳಿದಿದ್ದ.ಅವನು ಅಪ್ಪಿಕೊಂಡದ್ದು ಕಂಬಳಿಯ ಮೂಟೆಯಾಗಿರದೆ, ಅದು ನಿಜವಾದ ಭಲ್ಲೂಕವೇ ಆಗಿತ್ತು. ಆ ಭಲ್ಲೂಕ ಕೂಡಾ ಬಾಲಕನನ್ನು ಬಿಗಿಯಾಗಿ ಅಪ್ಪಿಕೊಂಡಿತು. ಬಾಲಕ ಎಷ್ಟೇ ಪ್ರಯತ್ನಪಟ್ಟರೂ ಭಲ್ಲೂಕದ ಬಿಗಿಮುಷ್ಠಿಯಿಂದ ಬಿಡಿಸಿಕೊಳ್ಳಲಾಗಲಿಲ್ಲ. ದಡದಲ್ಲಿದ್ದ ಬಾಲಕರು, ”ಓ ನಮ್ಮ ಪ್ರೀತಿಯ ಗೆಳೆಯ, ಆ ಮೂಟೆಯನ್ನು ಬಿಟ್ಟು ಬಾ” ಎಂದು ಗಟ್ಟಿಯಾಗಿ ಕೂಗಿ ಹೇಳಿದರು. ಗೆಳೆಯರ ಸಲಹೆಗೆ ಆತ, ”ನಾನೆಷ್ಟು ಪ್ರಯತ್ನಪಟ್ಟರೂ ಈ ಬಿಗಿ ಮುಷ್ಠಿಯಿಂದ ಬಿಡಿಸಿಕೊಳ್ಳಲಾಗುತ್ತಿಲ್ಲ, ಪಾರಾಗುವುದು ಕಷ್ಟ” ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ. ಬಾಲಕ ಕರಡಿಯ ಬಿಗಿ ಹಿಡಿತದಿಂದ ಪಾರಾಗಲು ಸತತ ಪ್ರಯತ್ನ ಮಾಡಿದ.
ಪ್ರಶ್ನೆಗಳು:
- ಬಾಲಕ ನದಿಯಲ್ಲಿ ಏನನ್ನು ನೋಡಿದ?
- ಆಗ ಆತ ಏನು ಮಾಡಿದ?
- ಬಾಲಕನ ಸಂಗಡಿಗರು ಏನು ಸಲಹೆ ನೀಡಿದರು?
- ಹುಡುಗನಿಗೆ ಏನಾಯಿತು?
[ಮೂಲ:- ಮಕ್ಕಳಿಗಾಗಿ ಕಥೆಗಳು-೨
ಶ್ರೀ ಸತ್ಯಸಾಯಿ ಪುಸ್ತಕ ಪ್ರಕಾಶನ, ಪ್ರಶಾಂತಿ ನಿಲಯಂ]