ಜ್ಯೋತಿ ಧ್ಯಾನ

Print Friendly, PDF & Email
ಜ್ಯೋತಿ ಧ್ಯಾನ

ಧ್ಯಾನದ ತಂತ್ರವನ್ನು ವಿವಿಧ ಗುರುಗಳು ಹಾಗು ತರಬೇತಿದಾರರು ವಿವಿಧ ರೀತಿಯಿಂದ ವಿವರಿಸಿದ್ದಾರೆ. ಆದರೆ ನಾನೀಗ ಅತ್ಯಂತ ಸಾರ್ವತ್ರಿಕ ಹಾಗೂ ಅತ್ಯಂತ ಪರಿಣಾಮಕಾರಿ ಬಗೆಯನ್ನು ತಿಳಿಸುತ್ತೇನೆ. ಆಧ್ಯಾತ್ಮಿಕ ಶಿಸ್ತಿನಲ್ಲಿ ಇದೇ ಮೊದಲ ಹೆಜ್ಜೆ. ಮೊದಲಿಗೆ ಪ್ರತಿ ದಿವಸ ಕೆಲವು ನಿಮಿಷಗಳನ್ನು ಧ್ಯಾನಕ್ಕಾಗಿ ಮೀಸಲಾಗಿಡಿ. ಕಾಲ ಕ್ರಮೇಣ ಆನಂದದ ಅನುಭವ ಬಂದಾಗ ಧ್ಯಾನದ ಕಾಲವಧಿಯನ್ನು ಹೆಚ್ಚಿಸಿರಿ.

ಸೂರ್ಯೋದಯವು ಧ್ಯಾನಕ್ಕೆ ಸೂಕ್ತ ಸಮಯ, ಏಕೆಂದರೆ ಆಗ ರಾತ್ರಿಯ ನಿದ್ರೆಯ ನಂತರ ನಿಮ್ಮ ಶರೀರ ವಿಶ್ರಾಂತವಾಗಿರುತ್ತದೆ ಹಾಗು ದೈನಂದಿನ ಕಾರ್ಯಕ್ರಮಗಳು ಇನ್ನೂ ನಿಮ್ಮ ಬೆನ್ನುಹತ್ತಿರುವುದಿಲ್ಲ. ನಿಮ್ಮ ಮುಂದೆ ಸ್ಥಿರವಾಗಿ ಹಾಗು ನೇರವಾಗಿ ಉರಿಯುವ ಜ್ವಾಲೆಯುಳ್ಳ ದೀಪವನ್ನೊ ಅಥವಾ ಮೊಂಬತ್ತಿಯನ್ನೊ ಇಟ್ಟುಕೊಳ್ಳಿ. ದೀಪದ ಮುಂದೆ ಪದ್ಮಾಸನದಲ್ಲಿ ಅಥವಾ ನಿಮಗೆ ಆರಾಮದಾಯಕ ಆಸನದಲ್ಲಿ ಕುಳಿತುಕೊಳ್ಳಿರಿ. ಕೆಲವು ನಿಮಿಷ ಆ ಜ್ವಾಲೆಯನ್ನು ಸ್ಥಿರವಾಗಿ ನೋಡಿ, ಆಮೇಲೆ ಕಣ್ಣುಗಳನ್ನು ಮುಚ್ಚಿ, ಆ ಜ್ವಾಲೆ ನಿಮ್ಮೊಳಗೆ ಹುಬ್ಬುಗಳ ಮಧ್ಯೆ ಇರುವಂತೆ ಭಾವಿಸಿರಿ. ಆ ಜ್ವಾಲೆ ಸಾವಕಾಶವಾಗಿ ಚಲಿಸುವ ಮಾರ್ಗವನ್ನು ಬೆಳಗಿಸುತ್ತಾ, ಹೃದಯ ಪದ್ಮಕ್ಕೆ ಜಾರಿ ಬರಲಿ. ಅದು ನಿಮ್ಮ ಹೃದಯವನ್ನು ಪ್ರವೇಶಮಾಡಿದಾಗ ಪದ್ಮದಳ ಒಂದೊಂದಾಗಿ ಅರಳುತ್ತಿದೆ ಎಂದು ಭಾವಿಸಿ, ಅದು ನಿಮ್ಮ ಎಲ್ಲಾ ಆಲೋಚನೆಗಳನ್ನು ಅನಿಸಿಕೆಗಳನ್ನು ಮತ್ತು ಭಾವನೆಗಳನ್ನು ಪ್ರಕಾಶದಿಂದ ತೋಯಿಸಿ, ಅಂಧಕಾರವನ್ನು ಅವುಗಳಿಂದ ತೆಗೆಯುತ್ತಿರುವಂತೆ ಭಾವಿಸಿರಿ. ಈಗ ಅಂಧಕಾರಕ್ಕೆ ಅವಿತುಕೊಳ್ಳಲು ಸ್ಥಳವೇ ಇಲ್ಲ. ಆ ಜ್ವಾಲೆಯ ಪ್ರಕಾಶ ಇನ್ನಷ್ಟು ವಿಸ್ತಾರವೂ, ಪ್ರಕಾಶಮಾನವೂ ಆಗುತ್ತಿದೆ. ಅದು ನಿಮ್ಮ ಕೈ ಕಾಲುಗಳನ್ನು ಆವರಿಸಲಿ. ಈಗ ಆ ಕೈ ಕಾಲುಗಳು ಎಂದೆಂದಿಗೂ ನಿಂದನೀಯ, ಸಂಶಯಾಸ್ಪದ ಮತ್ತು ದುಷ್ಕರ್ಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಅವುಗಳ ಪ್ರಕಾಶ ಹಾಗೂ ಪ್ರೇಮದ ಉಪಕರಣಗಳಾಗುತ್ತವೆ. ಪ್ರಕಾಶ ನಾಲಿಗೆಯನ್ನು ತಲುಪಿದಾಕ್ಷಣ ಅಸತ್ಯ ಅದರಿಂದ ಕಣ್ಮರೆಯಾಗುತ್ತದೆ. ಅದು ನಿಮ್ಮ ನೇತ್ರ ಹಾಗು ಶ್ರವಣೇಂದ್ರಿಯವನ್ನು ತಲುಪಿ, ಅವುಗಳಿಗೆ ಆಸಕ್ತಿ ಇರುವ ಹಾಗು ನಿಮ್ಮನ್ನು ವಿಕೃತ ದೃಶ್ಯಗಳನ್ನು ನೋಡಲು ಮತ್ತು ಬಾಲಿಶ ಸಂಭಾಷಣೆ ಮಾಡಲು ಉತ್ತೇಜಿಸುವ, ಎಲ್ಲಾ ನಿಂದನೀಯ ಆಸೆಗಳನ್ನು ನಾಶ ಮಾಡಲಿ. ನಿಮ್ಮ ಶಿರಸ್ಸು ಪ್ರಕಾಶಮಯವಾಗಲಿ. ಆಗ ಎಲ್ಲಾ ದುರಾಲೋಚನೆಗಳು ಅಲ್ಲಿಂದ ಮಾಯವಾಗುತ್ತವೆ. ನಿಮ್ಮಲ್ಲಿ ಪ್ರಕಾಶ ಇನ್ನಷ್ಟು ತೀವ್ರವಾಗಿದೆ ಎಂದು ಭಾವಿಸಿರಿ. ಅದು ನಿಮ್ಮ ಸುತ್ತಲೂ ಮಿನುಗಲಿ ಹಾಗು ನಿಮ್ಮಿಂದ ಇನ್ನಷ್ಟು ವಿಶಾಲವಲಯದಲ್ಲಿ ಹರಡಿ, ನಿಮ್ಮ ಪ್ರೀತಿಪಾತ್ರರನ್ನು, ನಿಮ್ಮ ಬಂಧು ಬಳಗದವರನ್ನು, ನಿಮ್ಮ ಮಿತ್ರರನ್ನು ಹಾಗು ಸಂಗಡಿಗರನ್ನು, ನಿಮ್ಮ ಶತ್ರುಗಳನ್ನೂ, ಪ್ರತಿ ಸ್ಪರ್ಧಿಗಳನ್ನೂ, ಅಪರಿಚಿತರನ್ನು, ಸಮಸ್ತ ಜೀವರಾಶಿಗಳನ್ನು, ಜಗತ್ತೆಲ್ಲವನ್ನೂ ಆವರಿಸಲಿ. ಆ ಜ್ಯೋತಿ ಪ್ರತಿ ದಿನ ಇಂದ್ರಿಯಗಳನ್ನು ಅತ್ಯಂತ ಆಳವಾಗಿ ಹಾಗೂ ಅತ್ಯಂತ ವ್ಯವಸ್ಥಿತವಾಗಿ ಬೆಳಗಿಸಿ, ಆ ಮೂಲಕ ಅತಿ ಶೀಘ್ರ ನಿಂದನೀಯ ಹಾಗು ಕೆಟ್ಟ ದೃಶ್ಯಗಳ ಬಗ್ಗೆ ಅಭಿರುಚಿ, ನಿಂದನೀಯ ಹಾಗೂ ಕೆಟ್ಟ ಕಥೆಗಳ ಹಂಬಲ, ಕೀಳು, ಹಾನಿಕಾರಕ, ಅತ್ಯಂತ ವಿಷಕಾರಿ ಆಹಾರ ಹಾಗೂ ಪಾನೀಯಗಳ ಕಡು ಬಯಕೆ, ಅವಹೇಳನಕಾರಿ, ಕೊಳಕು ವಿಷಯಗಳಲ್ಲಿ ಪ್ರವೃತ್ತಿ, ಕುಖ್ಯಾತಿ ಹಾಗೂ ಅಪಾಯಕಾರಿ ಸ್ಥಳಗಳ ಸಾನಿಧ್ಯ ಅಥವಾ ಇತರರಿಗೆ ಯಾವುದೇ ಸಮಯದಲ್ಲಿ ಕೆಟ್ಟದ್ದನ್ನು ಮಾಡುವ ಪ್ರವೃತ್ತಿಯಿಂದ ಮುಕ್ತಗೊಳಿಸುತ್ತದೆ. ಪ್ರಕಾಶವನ್ನು ಎಲ್ಲೆಡೆಯಲ್ಲಿ ನೊಡುವ ರೋಮಾಂಚನಕಾರಿ ಅನುಭವದಲ್ಲಿ ಸ್ಥಿರವಾಗಿ ಇದ್ದುಬಿಡಿ. ನೀವು ಭಗವಂತನನ್ನು ಯಾವುದೇ ರೂಪದಲ್ಲಿ ಆರಾಧಿಸುತ್ತಿದ್ದರೆ, ಆ ಭಗವಂತನನ್ನು ಎಲ್ಲೆಲ್ಲಿಯೂ ವ್ಯಾಪಕವಾಗಿರುವ ಪ್ರಕಾಶದಲ್ಲಿ ದೃಶ್ಯೀಕರಿಸಿಕೊಳ್ಳಿರಿ. ಏಕೆಂದರೆ ಪ್ರಕಾಶವೇ ಭಗವಂತ. ಭಗವಂತನೇ ಪ್ರಕಾಶ.

ನಾನು ಉಪದೇಶಿಸಿದ ಈ ಧ್ಯಾನವನ್ನು ಪ್ರತಿದಿನವೂ ಅಭ್ಯಾಸಮಾಡಿರಿ. ಉಳಿದ ಸಮಯದಲ್ಲಿ ಸದಾ ಆ ಭಗವಂತನ ಅಪಾರ ಶಕ್ತಿ, ಕರುಣೆ ಹಾಗು ಔದಾರ್ಯ, ಈ ದಿವ್ಯಗುಣಗಳ ಪ್ರಜ್ಞೆಯೊಂದಿಗೆ ಭಗವನ್ ನಾಮಸ್ಮರಣೆ ಮಾಡಿರಿ (ಭಗವಂತನ ಯಾವುದೇ ಮಹಿಮೆಯ ಸುವಾಸನೆಯಿಂದ ಘಮಘಮಿಸುವ ದಿವ್ಯ ನಾಮ).

[ಶ್ರೀ ಸತ್ಯಸಾಯಿ ಸ್ಪೀಕ್ಸ್ ಹತ್ತನೇ ಸಂಪುಟ, ಪುಟ ೩೪೮-೩೫೦, ಶಿವರಾತ್ರಿ ೧೯೭೯ ದಿವ್ಯೋಪನ್ಯಾಸ.]

error: