ಭರತನ ಪುರಾಗಮನ
೩. ಭರತನ ಪುರಾಗಮನ
ರಾಮನು ವನಕ್ಕೆ ತೆರಳಿದ ಮರುಕ್ಷಣದಲ್ಲಿ ದಶರಥನಿಗೆ ಹೃದಯಾಘಾತವಾಯಿತು. ಅವನು ಹಾಸಿಗೆಯಲ್ಲಿಯೇ ಬಿದ್ದುಕೊಂಡು, ರಾಮಾ, ಸೀತಾ, ಲಕ್ಷ್ಮಣಾ ಎಂದು ಪದೇಪದೇ ಶೋಕಿಸುತ್ತಿದ್ದನು. ಆತನ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ಗಂಗಾ ಜಲದಂತೆ ಪವಿತ್ರವಾಗಿದ್ದ ರಾಮ ನಾಮವನ್ನು ಜಪಿಸುತ್ತಾ ಒಂದು ರಾತ್ರಿ ಅವನು ಪರಂಧಾಮವನ್ನೈದಿದನು.
ರಾಜ್ಯಾದ್ಯಂತ ಶೋಕ ವ್ಯಾಪಿಸಿತು. ರಾಮನ ಅಗಲುವಿಕೆಯ ಜೊತೆಗೆ ತಮ್ಮ ಪ್ರೀತಿಯ ದೊರೆಯನ್ನು ಕಳೆದುಕೊಂಡ ಪ್ರಜೆಗಳ ಹೃದಯದಲ್ಲಿ ಶೋಕಾಂಧಕಾರ ಮುಸುಕಿತು. ರಾಜಗುರುಗಳಾದ ವಸಿಷ್ಠರು ಅವರೆಲ್ಲರಿಗೂ ಸಾಂತ್ವನ ನೀಡಿ, ಕೈಕೇಯಿಯ ರಾಜ್ಯಕ್ಕೆ ತಮ್ಮ ಮಾತಾಮಹರ ಮನೆಗೆ ಹೋದ ಭರತ, ಶತ್ರುಘ್ನರಿಗೆ ಕೂಡಲೇ ಹೇಳಿ ಕಳುಹಿಸಿದರು.
ತಕ್ಷಣ ಅವರು ಹಿಂತಿರುಗಿ ಬಂದರು. ರಾಜ್ಯದ ಎಲ್ಲೆಡೆಯಲ್ಲಿಯೂ (ವಿಪರೀತ) ಅಸಹಜ ವಾತಾವರಣ ಭರತನಿಗೆ ಕಂಡು ಬಂದಿತು. ಯಾರು ಆತನನ್ನು ಮಾತನಾಡಿಸಲಿಲ್ಲ. ಅವನು ನೇರವಾಗಿ ತನ್ನ ಮಾತೆಯ ಅಂತಃಪುರವನ್ನು ಪ್ರವೇಶಿಸಿದನು. ಕೈಕೇಯಿಯು ಆತನನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ವೈಭವೋಪೇತವಾದ ಭಾರಿ ಸಿದ್ದತೆಗಳನ್ನು ಮಾಡಿದ್ದಳು. ಆಕೆಗೆ ಭರತನು ಕೇಳಿದ ಮೊದಲ ಪ್ರಶ್ನೆ, “ಯಾವಾಗಲೂ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಮುದ್ದಾಡುವ ತಂದೆಯೆಲ್ಲಿ? ರಾಮ ಲಕ್ಷ್ಮಣರೆಲ್ಲಿ? ನಾನೇಕೆ ಅವರನ್ನು ಕಾಣುತ್ತಿಲ್ಲ?” ಕೈಕೇಯಿಯು ಎಲ್ಲಾ ಪ್ರಶ್ನೆಗಳನ್ನು ಆಲಿಸಿ, ಮಂಥರೆಯನ್ನು ಕರೆದು ರಾಜಕುಮಾರನಿಗೆ ಎಲ್ಲವನ್ನೂ ವಿಶದಪಡಿಸಲು ಹೇಳಿದಳು.
ಮಂಥರೆಯು ತುಂಬಾ ಉತ್ಸಾಹದಿಂದ ಮುಂದೆ ಬಂದು ಭರತನಿಗೆ ಹೇಳಿದಳು, “ಒಲುಮೆಯ ಕಂದಾ, ನಿನಗಾಗಿ ನಾವು ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ. ಮಾರ್ಗವು ನಿರ್ಮಲವಾಗಿದೆ. ನೀನು ನೇರವಾಗಿ ಅಯೋಧ್ಯೆಯ ಸಾಮ್ರಾಟನಾಗಿ ಅಭಿಷಿಕ್ತನಾಗುವೆ. ಭಗವಂತನು ಘನವಂತ. ನಮ್ಮ ಯೋಜನೆಗಳು ಯೋಗ್ಯ ರೀತಿಯಲ್ಲಿ ನಡೆದವು. ಆದ್ದರಿಂದ ಪಟ್ಟಾಭಿಷೇಕಕ್ಕೆ ಸಿದ್ಧನಾಗು. ದುರ್ದೈವದಿಂದ ನಿನ್ನ ತಂದೆ ಆಕಸ್ಮಿಕ ನಿಧನಕ್ಕೆ ಒಳಗಾದರು.” ಭರತನಿಗೆ ಈ ಮಾತುಗಳಾವುವೂ ಅರ್ಥವಾಗಲಿಲ್ಲ. ಆದರೆ ತಂದೆಯ ಮರಣವಾರ್ತೆಯನ್ನು ಕೇಳಿ ಹೃದಯಕ್ಕೆ ಘಾತವಾಯಿತು. “ತಂದೆ ಅಂಥಾ ದಾರುಣಸ್ಥಿತಿಯಲ್ಲಿರುವಾಗ ಅವರ ಬಳಿ ಇರಲು ನನ್ನನ್ನು ಮೊದಲೇ ಏಕೆ ಕರೆಸಿಕೊಳ್ಳಲಿಲ್ಲ?” ಎಂದು ಕೂಗಾಡಿದನು.
‘ಸಾಮ್ರಾಟನಾಗಲು ಎಲ್ಲ ಅರ್ಹತೆಗಳಿರುವ ನನ್ನ ಅಗ್ರಜ ರಾಮನಿರುವಾಗ ನಾನೇಕೆ ಪಟ್ಟಾಭಿಷಿಕ್ತನಾಗಬೇಕು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನೀವೆಲ್ಲರೂ ನನ್ನನ್ನು ಹುಚ್ಚನನ್ನಾಗಿ ಮಾಡುತ್ತಿರುವಿರಿ. ಅಮ್ಮಾ, ನೀನೆಲ್ಲವನ್ನೂ ನನಗೆ ಬೇಗ ಹೇಳು.” ಕೈಕೇಯಿಯು ತನ್ನ ಮಮತೆಯ ಹಸ್ತವನ್ನು ಆತನ ಭುಜದ ಮೇಲಿಟ್ಟು, ಭರತನಿಗಾಗಬೇಕಾದ ಎಲ್ಲ ಅನುಕೂಲತೆಗಳ ಬಗೆಗೆ ಮಂಥರೆ ಯೋಜನೆಗಳನ್ನು ಹೇಗೆ ಮಾಡಿಕೊಂಡಿದ್ದಾಳೆಂಬುದನ್ನೂ, ದಶರಥ ಮಹಾರಾಜನು ತಾನು ಆಡಿದ ವಚನಗಳಿಗೆ ತಾನೇ ಹೇಗೆ ಬದ್ಧನಾಗಿ ವಿಷಮ ಪರಿಸ್ಥಿತಿಯಿಂದ ಪಾರಾಗಲಾರದ ಸ್ಥಿತಿಯಲ್ಲಿ ಸಿಕ್ಕಿಕೊಂಡನೆಂಬುದನ್ನೆಲ್ಲಾ ವಿವರಿಸಿದಳು.
ಭರತನು ನಿಧಾನವಾಗಿ ಎಲ್ಲವನ್ನೂ ಅರಿತುಕೊಂಡನು. ಕ್ರೋಧದಿಂದ ಕೆಂಪಾಗಿ, ತನ್ನ ತಾಯಿಯನ್ನು ಜೋರಾಗಿ ಪಕ್ಕಕ್ಕೆ ನೂಕಿದನು. “ಎಂಥಾ ಹೆಂಗಸು ನೀನು? ಪಾಷಾಣ ಹೃದಯಿ! ನಿನ್ನ ಈ ವರ್ತನೆಯಿಂದಲೇ ತಂದೆಯ ಮರಣ ಸಂಭವಿಸಿತೆಂಬ ಅರಿವು ನಿನಗೆ ಆಗಲಿಲ್ಲವೆ? ರಾಮನಿಗೆ ಕೇಡನ್ನುಂಟು ಮಾಡುವ ಯೋಚನೆಯಾದರೂ ನಿನಗೆ ಹೇಗೆ ಬಂತು? ನಿನ್ನನ್ನು ತನ್ನ ಸ್ವಂತ ತಾಯಿಯಂತೆ ಆತ ಕಾಣಲಿಲ್ಲವೆ? ಪವಿತ್ರಳಾದ ಆ ಸೀತೆಗೆ ನೀನು ಎಂಥ ದುಃಖವನ್ನು ಉಂಟು ಮಾಡಿದೆ ಎಂಬುದನ್ನು ಬಲ್ಲೆಯಾ? ಸೀತಾರಾಮರಿಲ್ಲದ, ಕೆಲಸಕ್ಕೆ ಬಾರದ ಈ ರಾಜ್ಯವನ್ನು ನಾನು ಆಶಿಸುವೆನೆಂದು ಬಗೆದೆಯಾ? ನಿನ್ನ ಮಗ ಭರತನು ಕ್ಷಣ ಕಾಲವಾದರೂ ರಾಮನಿಂದ ಅಗಲುವ ಯೋಚನೆ ಮಾಡುವನೆಂದು ನೀನು ನಿಜವಾಗಿ ಊಹಿಸಿದ್ದೆಯಾ? ಹಾಗೇನಾದರೂ ಯೋಚಿಸಿದ್ದೇ ಆದರೆ ನೀನು ನನ್ನ ತಾಯಿಯೇ ಅಲ್ಲ. ನನಗೆ ನಿನ್ನ ಮುಖವನ್ನೇ ತೋರಿಸಬೇಡ, ಇಕ್ಷ್ವಾಕು ವಂಶವನ್ನು ನೀನು ಹಾಳು ಮಾಡಿರುವುದನ್ನು ಕಾಣುತ್ತಿಲ್ಲವೇ? ರಾಮಚರಣಗಳಿಲ್ಲದೆ ನನಗೆ ಅನ್ಯಪೂಜಾ ಸ್ಥಾನವಿಲ್ಲ. ರಾಮನನ್ನು ಹಿಂದಕ್ಕೆ ಕರೆತರಲು ನಾನೀಗಲೇ ಕಾಡಿಗೆ ಹೊರಡುತ್ತೇನೆ.”
ಹೀಗೆ ಹೇಳಿ, ಅವರಿಂದ ದೂರ ಸರಿದು ಕೋಪಾಗ್ನಿಯಿಂದ ಭರತನು ಭುಸುಗುಟ್ಟುತ್ತಿರುವಾಗ, ಶತ್ರುಘ್ನನು ಮಂಥರೆಯನ್ನು ಹಿಡಿದು ತಂದು ಆಕೆಯ ಕೂದಲನ್ನೆಳೆದು ಬಡಿಯ ತೊಡಗಿದನು. ಆಗ ಭರತನ ಕೋಪವಡಗಿತ್ತು. ಇಂಥ ಅನರ್ಥವನ್ನೆಸಗಿದ ಗೂನು ಬೆನ್ನಿನ ಆ ಹೆಂಗಸನ್ನು ಹೊಡೆಯುತ್ತಿರುವ ತನ್ನ ತಮ್ಮನನ್ನು ತಡೆದನು. ಸಂಪೂರ್ಣ ಹತಾಶಳಾದ ಕೌಸಲ್ಯೆಯ ಬಳಿಗೆ ಸೋದರರಿಬ್ಬರೂ ಹೋಗಿ ಕಾಲಿಗೆರಗಿದರು. ತನ್ನ ತಾಯಿ ಮಾಡಿದ ಈ ಒಳಸಂಚು ತನಗೆ ಗೊತ್ತಿರಲಿಲ್ಲವೆಂದೂ ತನ್ನಲ್ಲಿ ಅಪಾರ್ಥವನ್ನೆಣಿಸಬಾರದೆಂದೂ ಆಕೆಯಲ್ಲಿ ಭರತನು ಮೊರೆಯಿಟ್ಟನು. ಆತನ ಪ್ರೇಮಮಯ ಸ್ವಭಾವವನ್ನು ತಾನು ಬಲ್ಲೆನೆಂದು ಕೌಸಲ್ಯೆಯು ಅಕ್ಕರೆಯಿಂದ ಹೇಳಿದಳು. “ಇದಕ್ಕಾಗಿ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ನನಗೆ ನಿನ್ನ ಮೇಲೆ ಸದಾ ಪ್ರೀತಿ ಇದೆ,” ಎಂದಳು.
ಹಿರಿಯ ಸಭಾಸದರಿಂದ ಕೂಡಿದ ಆಸ್ಥಾನಕ್ಕೆ ವಸಿಷ್ಠರು ಭರತನನ್ನು ಕರೆಸಿದರು. ಪರಿಸ್ಥಿತಿಯನ್ನು ಸ್ಥಿಮಿತಕ್ಕೆ ತರಲು ಕೈಕೊಳ್ಳಬೇಕಾದ ಅಗತ್ಯತೆಗಳ ಬಗೆಗೆ ಮಾತನಾಡಿ, ಭರತನು ರಾಜ್ಯವನ್ನು ಆಳಬೇಕು ಮತ್ತು ರಾಮನು ಹಿಂತಿರುಗಿ ಬಂದ ಮೇಲೆ ಅದನ್ನು ಆತನಿಗೆ ಒಪ್ಪಿಸಬೇಕು ಎಂದು ತಿಳಿಸಿದರು. ಸಭೆಯ ನಿರ್ಣಯಗಳನ್ನು ಆಲಿಸಿದ ಮೇಲೆ ಭರತನು ಖಡಾಖಂಡಿತವಾಗಿ ಹೇಳಿದನು, “ನಿಮ್ಮೆಲ್ಲರ ಬಗ್ಗೆ ನನಗೆ ಗೌರವವಿದೆ. ನೀವಾಡಿದ ಸ್ನೇಹಪೂರ್ಣ ಮಾತುಗಳಿಗೆ ನಾನು ತುಂಬ ಋಣಿಯಾಗಿದ್ದೇನೆ. ಆದರೆ ನನ್ನನ್ನು ಕ್ಷಮಿಸಿ. ವಿರಾಗಿಯಂತೆ ರಾಮನು ಕಾಡಿನಲ್ಲಿ ಅಲೆಯುತ್ತಿರುವಾಗ ನಾನಿಲ್ಲಿ ರಾಜನಾಗಿ ಬಾಳಲಾರೆ.
ನನ್ನದೊಂದೇ ಒಂದು ಅಭಿಲಾಷೆ. ನಾನು ಹೋಗುತ್ತೇನೆ. ರಾಮನ ಪಾದಗಳ ಮೇಲೆ ಬಿದ್ದು, ಅವನು ಹಿಂತಿರುಗಿ ಬಂದು ರಾಜ್ಯವನ್ನು ಮರಳಿ ಪಡೆಯಲು ಬೇಡಿಕೊಳ್ಳುತ್ತೇನೆ. ರಾಮನನ್ನು ಕರೆತರಲು ನೀವೆಲ್ಲರೂ ನನ್ನ ಜೊತೆಗೆ ಕಾಡಿಗೆ ಬರಬೇಕೆಂದು ಪ್ರಾರ್ಥಿಸುತ್ತೇನೆ.”
ಭರತನ ತ್ಯಾಗಬುದ್ದಿ, ವಿಧೇಯತೆ ಮತ್ತು ಭಕ್ತಿಯನ್ನು ಕಂಡು ಪ್ರತಿಯೊಬ್ಬರೂ ಬೆರಗಾದರು. ರಾಮನು ಅಯೋಧ್ಯೆಗೆ ಹಿಂತಿರುಗುವ ನಿರೀಕ್ಷೆಯಿಂದ ಅವರೆಲ್ಲರೂ ಅತ್ಯಂತ ಆನಂದಭರಿತರಾದರು. ರಾಮನ ಭೇಟಿಗೆ ಕಾಡಿಗೆ ಹೋಗಲು ಸರ್ವಸಿದ್ಧತೆಗಳನ್ನೂ ಮಾಡಲು ಹಾಗೂ ಅಗತ್ಯ ಬಿದ್ದಲ್ಲಿ ಕಾಡಿನಲ್ಲಿಯೇ ರಾಮನಿಗೆ ಪಟ್ಟಾಭಿಷೇಕ ಮಾಡಲು, ಭರತನು ಎಲ್ಲ ಪ್ರಧಾನಿಗಳಿಗೆ ಸಂದೇಶ ನೀಡಿದನು.
ಪ್ರಶ್ನೆಗಳು:
- ಅಯೋಧ್ಯೆಗೆ ಹಿಂತಿರುಗಿದ ಮೇಲೆ ಭರತನ ಪ್ರತಿಕ್ರಿಯೆ ಏನು?
- ರಾಜ್ಯವನ್ನಾಳಬೇಕೆಂದು ಎಲ್ಲರೂ ಪ್ರಾರ್ಥಿಸಿದಾಗ ಭರತನು ಏನು ಮಾಡಿದನು?