ಸಂಬಂಧಿತ ಕಥೆಗಳು

Print Friendly, PDF & Email
ಸಂಬಂಧಿತ ಕಥೆಗಳು

ಭಗವಂತನ ನಾಮವು ವಿಷವನ್ನು ಅಮೃತವನ್ನಾಗಿ ಪರಿವರ್ತಿಸಬಲ್ಲದು. ಮೀರಾ ಕೃಷ್ಣನಾಮವನ್ನು ನಿರಂತರವಾಗಿ ಧ್ಯಾನಿಸುತ್ತಿದ್ದಳು. ಮೀರಾಳ ಸ್ಥಿತಿ ಮತ್ತು ಜೀವನ ಶೈಲಿಯನ್ನು ನೋಡಿ, ರಾಜನಾದ ಆಕೆಯ ಪತಿ ಮಹಾರಾಣ, ಆಕೆಯ ಹುಚ್ಚಾಟವನ್ನು ಹೋಗಲಾಡಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಿದನು. ಆಕೆಗೆ ಯಾರ ಬಗ್ಗೆಯೂ ಭೇದಭಾವವಿರಲಿಲ್ಲ.

ಆಕೆಯು ರಾಜರ ನಡುವೆ, ಬೀದಿಗಳಲ್ಲಿರುವ ಸಂತರೊಂದಿಗೆ, ಸಾಮಾನ್ಯ ಜನರ ಮಧ್ಯೆಯೂ ಕೂಡ ಕೃಷ್ಣನಾಮವನ್ನು ಹಾಡುತ್ತಾ ಎಲ್ಲಿಗಾದರೂ ಸಂಚರಿಸುತ್ತಿದ್ದಳು. ಮಹಾರಾಣ ಇದನ್ನೆಲ್ಲ ನೋಡಿ, ‘ನಾನೊಬ್ಬ ರಾಜ. ನನ್ನ ಪತ್ನಿ ಭಿಕ್ಷುಕಿಯಂತೆ ತಂಬೂರಿ ಮೀಟುತ್ತ ಕೃಷ್ಣನ ಭಜನೆ ಮಾಡುತ್ತ ಯಾವುದೇ ಹಿಂಜರಿಕೆಯಿಲ್ಲದೆ ಸಾಮಾನ್ಯ ಜನರು, ಸಂತರು ಮತ್ತು ಇತರ ಸಾಮ್ರಾಜ್ಯಗಳ ರಾಜರೊಂದಿಗೆ ಒಡನಾಡುವಳು’ ಎಂದು ಯೋಚಿಸತೊಡಗಿದ. ಮೀರಾ ಆತನಿಗೆ ಹಲವು ಬಾರಿ ಹೇಳಿದಳು, “ಭಗವಂತನ ನಾಮವನ್ನು ಹಾಡುವುದು ಅವಮಾನಕರವಲ್ಲ. ಆತನ ಮಹಿಮೆಯನ್ನು ಹಾಡುವುದು ಒಂದು ಗೌರವದ ಸಂಗತಿ. ದೇವರ ನಾಮವನ್ನು ಹಾಡದಿದ್ದರೆ ಅದುವೇ ಅವಮಾನಕರ. ನೀವು ಇತರರ ಪ್ರತಿಕ್ರಿಯೆಗೆ ಗಮನ ಕೊಟ್ಟರೆ ನಿಮ್ಮ ಆತ್ಮದ ಅರಿವನ್ನು ಕಳೆದುಕೊಳ್ಳುವಿರಿ. ನೀವು ಪ್ರೀತಿ, ಆಸಕ್ತಿ ಮತ್ತು ಧೈರ್ಯದಿಂದ ದೇವರ ನಾಮವನ್ನು ಜಪಿಸಬೇಕು, ಅದು ನಿಮ್ಮ ಕರ್ತವ್ಯ ಹಾಗೂ ಆಸಕ್ತಿಯಾಗಿರಬೇಕು.” ಎಂದಳು. ಹೀಗೆ, ಮೀರಾ ತನ್ನ ಹಾದಿಯಲ್ಲಿ ಸ್ಥಿರವಾಗಿದ್ದಳು ಮತ್ತು ತನ್ನ ನಿಲುವನ್ನು ಬದಲಿಸಲಿಲ್ಲ. ಮಹಾರಾಣ ಆಕೆಗೆ ಅನೇಕ ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದ. ಆತನು ಆಕೆಗೆ ಹೇಳಿದ, “ಮೀರಾ, ನೀನು ಭಜನೆಗಳನ್ನು ಹಾಡುತ್ತಾ ಹೋದರೆ, ಜಗತ್ತು ನಿನ್ನನ್ನು ಹುಚ್ಚಿಯೆಂದು ಭಾವಿಸುತ್ತದೆ. ನಿನ್ನ ಸುತ್ತಮುತ್ತಲಿರುವ ಜನರು ನಿನ್ನ ಬೆನ್ನ ಹಿಂದೆ ಟೀಕೆ ಮಾಡಲು ಪ್ರಾರಂಭಿಸುತ್ತಾರೆ” ಎಂದನು. ಆಗ ಮೀರಾ ಉತ್ತರಿಸಿದಳು, “ಮಹಾರಾಣ, ಕಾಗೆಗಳು ಕೂಗಿದರೆ, ಕೋಗಿಲೆ ಹಾಡುವುದನ್ನು ನಿಲ್ಲಿಸುವುದಿಲ್ಲ. ನಮ್ಮ ಸುತ್ತಲಿನ ಜನರು ಕಾಗೆಗಳಂತೆ. ದೇವರ ನಾಮವನ್ನು ಹಾಡುವುದು ಕೋಗಿಲೆಯ ಹಾಡಿನಂತೆ. ನಾಯಿಗಳು ನಕ್ಷತ್ರಗಳತ್ತ ಬೊಗಳಿದರೆ ಅವು ಭೂಮಿಗೆ ಬೀಳುವುದಿಲ್ಲ. ತುಟಿಯಲ್ಲಿ ದೇವರ ನಾಮವಿರುವವರು, ಕೀಳು ಮಟ್ಟದ ಕಾರ್ಯದಲ್ಲಿ ತೊಡಗಿರುವವರಿಗೆ ಏಕೆ ಶರಣಾಗಬೇಕು?” ಎಂದಳು. ಮೀರಾ ಆತನೊಂದಿಗೆ ವಾದಿಸುತ್ತಿದ್ದಂತೆ ಮಹಾರಾಣನು ಕೋಪಗೊಂಡನು. ರಾಜನು ರಾಜಾಸಿಕ ಸ್ವಭಾವದವನಾಗಿದ್ದನು. ದೈವಭಕ್ತರು ಸಾತ್ವಿಕ ವ್ಯಕ್ತಿತ್ವ ಹೊಂದಿರುತ್ತಾರೆ. ಈ ಎರಡು ಸ್ವಭಾವಗಳ ನಡುವೆ ಹೊಂದಾಣಿಕೆ- ಸಾಮರಸ್ಯಗಳಿರಲು ಸಾಧ್ಯವಿಲ್ಲ. ನೀರು ಮತ್ತು ಬೆಂಕಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಮೀರಾಳ ಸ್ವಭಾವವು ಮಧುರವಾದ ಖರ್ಜೂರದಂತೆ ಸಿಹಿಯಾಗಿತ್ತು, ಆದರೆ ಮಹಾರಾಣನು ಹುಣಸೆಹಣ್ಣಿನ ಸ್ವಭಾವವನ್ನು ಹೊಂದಿದ್ದನು. ಒಮ್ಮೆ ಖರ್ಜೂರದ ರುಚಿ ನೋಡಿದವರು ಹುಣಸೆಹಣ್ಣನ್ನು ತಿನ್ನಲು ಬಯಸಲಾರರು. ಅದೇ ರೀತಿಯಲ್ಲಿ, ಹುಣಸೆಹಣ್ಣಿನ ರುಚಿಯನ್ನು ಇಷ್ಟಪಡುವ ವ್ಯಕ್ತಿಯು ಖರ್ಜೂರದ ರುಚಿಯನ್ನು ಇಷ್ಟಪಡುವುದಿಲ್ಲ. ಅಜೀರ್ಣ ಇರುವವನಿಗೆ ಹಸಿವಿನ ಅನುಭವವಾಗುವುದಿಲ್ಲ. ವಿಪರೀತ ಹಸಿವನ್ನು ಹೊಂದಿರುವವನಿಗೆ ಅಜೀರ್ಣವೆಂದರೆ ಏನೆಂಬುದೇ ಗೊತ್ತಿರುವುದಿಲ್ಲ. ದೇವರನ್ನು ಇಷ್ಟಪಡದವರು ಅಜೀರ್ಣದಿಂದ ಬಳಲುತ್ತಿರುವವರಂತೆ. ದೇವರನ್ನು ಇಷ್ಟಪಡುವವರು ಮತ್ತು ಆತನಿಗಾಗಿ ಯಾವುದೇ ಕಷ್ಟವನ್ನು ಸ್ವೀಕರಿಸುವವರು ಎಂದಿಗೂ ತಣಿಯದ ಕ್ಷುಧೆಯುಳ್ಳವರು(ಹಸಿವಿರುವವರು). ಈರ್ವರ ನಡುವೆ ಯಾವುದೇ ಹೊಂದಾಣಿಕೆ ಇರಲು ಸಾಧ್ಯವಿಲ್ಲ. ಮೀರಾ ಮತ್ತು ಮಹಾರಾಣ ಹಾಗೆ ಇದ್ದರು.

ಮೀರಾಳ ನಡವಳಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಮೀರಾ ಬದುಕಿರುವವರೆಗೂ ತನಗೆ ಅವಮಾನ ತಪ್ಪಿದ್ದಲ್ಲ ಎಂದು ಮಹಾರಾಣ ಅರಿತುಕೊಂಡ. ಆದ್ದರಿಂದ ರಾಜನು ಮೀರಾಳ ಜೀವ ತೆಗೆಯಲು ನಿರ್ಧರಿಸಿದ. ಆತನು, ಹಾಲಿನಲ್ಲಿ ವಿಷ ಬೆರೆಸಿ ತನ್ನ ಸಹೋದರಿಯ ಮೂಲಕ ಮೀರಾಳಿಗೆ ಕಳುಹಿಸಿದನು. ಮೀರಾ ಆಹಾರವನ್ನು ಸೇವಿಸುವ ಮೊದಲು ದೇವರಿಗೆ ಅರ್ಪಿಸುತ್ತಿದ್ದಳು. ಅದರಲ್ಲಿರುವ ವಿಷದ ಬಗ್ಗೆ ಅರಿವಿಲ್ಲದೆ, ಮೀರಾ ತನಗೆ ನೀಡಿದ ಹಾಲನ್ನು ಕೃಷ್ಣನಿಗೆ ಅರ್ಪಿಸಿ ಅದನ್ನು ಸೇವಿಸಿದಳು. ವಿಷಪೂರಿತ ಹಾಲನ್ನು ಕೃಷ್ಣನಿಗೆ ಅರ್ಪಿಸಿದಾಗ ಮೂರ್ತಿಯು ನೀಲಿ ಬಣ್ಣದ್ದಾಯಿತು ಮತ್ತು ವಿಷರಹಿತ ಬಿಳಿ ಹಾಲು ಮೀರಾಳ ಪಾಲಾಯಿತು. ಆ ಕ್ಷಣದಲ್ಲಿ ಮಹಾರಾಣ ಒಳಗೆ ಬಂದು ಕೂಗಿದನು, “ನೀನು ಇನ್ನು ಮುಂದೆ ಇಲ್ಲಿರಲು ಸಾಧ್ಯವಿಲ್ಲ. ನಾನು ರಾಜ. ನೀನು ನನಗೆ ಅಪಕೀರ್ತಿ ತಂದಿರುವೆ. ನಾನು ಈ ಅರಮನೆಯನ್ನು ಕಟ್ಟಿಸಿರುವೆನು. ನಾನು ಕಟ್ಟಿಸಿದ ಈ ಅರಮನೆಯಲ್ಲಿ ನೀನು ಇರಲು ಸಾಧ್ಯವಿಲ್ಲ “ಎಂದು ಗದರಿದನು. ಆದರೆ ಮೀರಾ ಕೃಷ್ಣನ ವಿಗ್ರಹಕ್ಕೆ ಸಂಭವಿಸಿದ ಬದಲಾವಣೆಯ ಬಗ್ಗೆ ಯೋಚಿಸುತ್ತ ದುಃಖಿತಳಾಗಿದ್ದಳು. ಆಕೆ ಧೈರ್ಯವನ್ನು ತಂದುಕೊಂಡು ಮಹಾರಾಣನಿಗೆ ಹೇಳಿದಳು, “ನೀವು ಈ ಅರಮನೆಯನ್ನು ನಿರ್ಮಿಸಿರುವುದು ಮತ್ತು ಈ ವಿಗ್ರಹವನ್ನು ಇಲ್ಲಿ ಸ್ಥಾಪಿಸಿದಿರುವುದು ನಿಜ. ಆದರೆ ಕೃಷ್ಣನಿರುವ ನನ್ನ ಹೃದಯ ಮಂದಿರವನ್ನು ನೀವು ಕಟ್ಟಿಸಿಲ್ಲ. ಇದನ್ನು ನನ್ನ ಕೃಷ್ಣ ನಿರ್ಮಿಸಿದ್ದಾನೆ. ಆತನು ನನ್ನೊಳಗೆ ಇದ್ದಾನೆ. ನನ್ನ ಹೃದಯದಲ್ಲಿರುವ ಕೃಷ್ಣನಿಗೆ ನನ್ನೊಂದಿಗಿರಬೇಡ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ” ಎಂದಳು. ಆಕೆ, “ಓ ಮನಸ್ಸೇ! ನಿನಗೇಕೆ ಇಷ್ಟೊಂದು ಬಾಂಧವ್ಯ? ಆ ಬಾಂಧವ್ಯದಿಂದಲೇ ನೀನು ದುಃಖ-ದುಮ್ಮಾನಗಳನ್ನು ಅನುಭವಿಸುತ್ತಿರುವೆ.”

ನಂತರ ಆಕೆ ತನ್ನ ಮನಸ್ಸಿಗೆ ಗಂಗೆ ಮತ್ತು ಯಮುನಾ ನದಿಗಳು ಸಂಧಿಸುವ ಸ್ಥಳವಾದ (ಚಲೋ ರೇ ಮನ್ ಗಂಗಾ ಯಮುನಾ ತೀರ್) ಪ್ರಯಾಗಕ್ಕೆ ಹೋಗುವಂತೆ ಹಾಡನ್ನು ಹಾಡಲಾರಂಭಿಸಿದಳು. ಆಕೆಯು ಭೌಗೋಳಿಕ ಸ್ಥಳದ ಎಂಬಂತೆ ಅರ್ಥೈಸಲಿಲ್ಲ. ಎರಡು ಹುಬ್ಬುಗಳ ನಡುವೆ ಎರಡು ನದಿಗಳು ವಿಲೀನವಾಗುವ ಸ್ಥಳವಿದೆ- ‘ಇಡಾ’ ನರವು ಗಂಗಾ ನದಿ ಮತ್ತು ‘ಪಿಂಗಳಾ’ ನರವು ಯಮುನಾ ನದಿ. ಈ ಎರಡರ ನಡುವಿನ ನರವು ‘ಸುಷುಮ್ನಾ’, ಇದು ಪ್ರಯಾಗ ಸಂಗಮ. ಆಕೆಯು ತನ್ನ ಮನಸ್ಸನ್ನು ಎರಡು ಹುಬ್ಬುಗಳ ನಡುವೆ ಕೇಂದ್ರೀಕರಿಸಿದಾಗ ಆಕೆಯ ಮನಸ್ಸು ಆ ಸ್ಥಳದಲ್ಲಿ ಸ್ಥಿರವಾಯಿತು. ಆ ಕ್ಷಣವೇ ಆಕೆ ಕೃಷ್ಣನಲ್ಲಿ ವಿಲೀನಗೊಂಡಳು. ಮೀರಾಳ ಶ್ರದ್ಧೆ ಮತ್ತು ದೇವರ ನಾಮಸ್ಮರಣೆಯಿಂದಲೇ ಆಕೆ ಅಷ್ಟು ಪರಿಶುದ್ಧವಾದ ಸ್ಥಾನವನ್ನು ಗಳಿಸಿದಳು.

[Illustrations by B.G.Sai Pratheem, Sri Sathya Sai Balvikas Student.]
[ಮೂಲ: ಭಗವಂತನ ಹೆಸರನ್ನು ಪಠಿಸಿ ಪ್ರವಚನ ೧೭, ನನ್ನ ಪ್ರೀತಿಯ ವಿದ್ಯಾರ್ಥಿಗಳು – ಸಂಪುಟ ೪]

Leave a Reply

Your email address will not be published. Required fields are marked *

error: