ಓಂ ಸರ್ವೇ ವೈ ಶ್ಲೋಕ – ಚಟುವಟಿಕೆ
ಚಟುವಟಿಕೆ
ಸಂತೋಷದ ಸ್ಥಳಗಳಲ್ಲಿ ಜಿಗಿತ
ಮೌಲ್ಯಗಳು:
ಯಾವಾಗಲೂ ಸಂತೋಷದಿಂದಿರಿ.
ಬೇಕಿರುವ ಸಾಮಗ್ರಿಗಳು:
ಸಂಗೀತ ಹಾಕಲು ಒಂದು ಉಪಕರಣ (ಗುರುವೇ ಭಜನೆ ಹಾಡಬಹುದು).
ಪೂರ್ವಸಿದ್ಧತೆ:
ಈ ಆಟವನ್ನು ವಿಶಾಲವಾದ ಸ್ಥಳದಲ್ಲಿ ಆಡಿದರೆ ಒಳ್ಳೆಯದು. ಕೇಂದ್ರಬಿಂದು ಒಂದೇ ಇರುವ ಒಂದು ಚಿಕ್ಕ ವೃತ್ತ ಹಾಗೂ ಒಂದು ದೊಡ್ಡ ವೃತ್ತವನ್ನು ಬರೆಯಬೇಕು. ಎರಡು ವೃತ್ತಗಳ ಮಧ್ಯಮಾರ್ಗದಲ್ಲಿ ವಿಭಾಗಗಳನ್ನು ಮಾಡಿ (ಚಿತ್ರದಲ್ಲಿರುವಂತೆ). ಮಕ್ಕಳ ಸಂಖ್ಯೆಯನ್ನು ನೋಡಿಕೊಂಡು ಅಷ್ಟು ವಿಭಾಗಗಳನ್ನು ಮಾಡಿ. ಪ್ರತಿಯೊಂದು ವಿಭಾಗದಲ್ಲೂ ನಗುವ ಅಥವಾ ಅಳುವ ಚಿತ್ರ ಬರೆಯಿರಿ. ಚಿತ್ರ ಸಿದ್ಧವಾದ ನಂತರ ಒಂದು ವಿಭಾಗದಲ್ಲಿ ಒಂದು ಮಗು ನಿಲ್ಲುವಂತೆ ಹೇಳಿ.
ಆಡುವ ವಿಧಾನ:- ಸಂಗೀತ ಶುರುವಾದ ತಕ್ಷಣ ಮಕ್ಕಳು ಪ್ರದಕ್ಷಿಣಾಕಾರವಾಗಿ ಒಂದೊಂದೇ ವಿಭಾಗದಲ್ಲಿ ಜಿಗಿದುಕೊಂಡು ಹೋಗಬೇಕು. ನಡೆಯಬಾರದು. ಒಂದೇ ವಿಭಾಗದಲ್ಲಿ ಮತ್ತೆ ಮತ್ತೆ ಜಿಗಿಯುವುದು ಅಥವಾ ಒಂದು ವಿಭಾಗ ಬಿಟ್ಟು ನಂತರದ್ದಕ್ಕೆ ಜಿಗಿಯುವ ಹಾಗಿಲ್ಲ. ವೃತ್ತದ ಹೊರಗೆ ಸಹ ಹೋಗುವಂತಿಲ್ಲ. ಸಂಗೀತದ ಜೊತೆ ಎಲ್ಲ ಮಕ್ಕಳು ಒಂದೊಂದೇ ವಿಭಾಗದಲ್ಲಿ ಜಿಗಿದುಕೊಂಡು ಹೋಗುತ್ತಿರಬೇಕು. ಸಂಗೀತ ನಿಲ್ಲಿಸಿದ ತಕ್ಷಣ ಎಲ್ಲರೂ ಅವರು ನಿಂತಿರುವ ವಿಭಾಗದಲ್ಲಿ ಹಾಗೇ ನಿಲ್ಲಬೇಕು. ಯಾರು ಅಳುವ ಚಿತ್ರದಲ್ಲಿ ನಿಂತಿರುತ್ತಾರೋ ಅವರು ಆಟದಿಂದ ಹೊರಗೆ ಬರುತ್ತಾರೆ. ಆಟ ಮುಂದುವರೆದು ಕೊನೆಯಲ್ಲಿ ಉಳಿದ ಒಂದೇ ಮಗು ಈ ಆಟದ ವಿಜೇತನಾಗುತ್ತಾನೆ/ತ್ತಾಳೆ.