ಯಜ್ಞಸಂರಕ್ಷಣೆ:
ಆ ಕಾಲದಲ್ಲಿ ಋಷಿಗಳು ದಟ್ಟವಾದ ಕಾಡಿನಲ್ಲಿ ವಾಸಿಸುತ್ತಾ, ಭಗವಂತನ ಕೃಪೆಗಾಗಿ ತಪಸ್ಸನ್ನೂ, ಯಜ್ಞಗಳನ್ನೂ ಮಾಡುತ್ತಿದ್ದರು. ಅದೇ ಕಾಡುಗಳಲ್ಲಿ ಇರುತ್ತಿದ್ದ ದುಷ್ಟ ರಾಕ್ಷಸರು, ಋಷಿಗಳ ತಪಸ್ಸು, ಯಜ್ಞಗಳಿಗೆ ಅಡ್ಡಿಯನ್ನುಂಟುಮಾಡಿ ಕೆಡಿಸುತ್ತಿದ್ದರು. ಇದನ್ನು ಸಹಿಸಲು ಸಾಧ್ಯವಾಗದೆ, ವಿಶ್ವಾಮಿತ್ರ ಋಷಿಗಳು, ದಶರಥನಲ್ಲಿಗೆ ಬಂದು, ‘ರಾಕ್ಷಸರನ್ನು ಕೊಂದು ಋಷಿಗಳನ್ನು ಕಾಪಾಡಲು ರಾಮ ಲಕ್ಷ್ಮಣರನ್ನು ತನ್ನೊಡನೆ ಕಾಡಿಗೆ ಕಳಿಸಿಕೊಡಬೇಕೆಂದು’ ಪ್ರಾರ್ಥಿಸಿದರು. ರಾಮ ಲಕ್ಷ್ಮಣರು ಆಗಿನ್ನೂ ೧೨-೧೩ ವರ್ಷದ ಬಾಲಕರಾಗಿದ್ದರು. ದಶರಥನು ತನ್ನ ಚಿಕ್ಕ ಮಕ್ಕಳನ್ನು ಕಳಿಸಿಕೊಡಲು ಬಹಳ ಅನುಮಾನಿಸಿದನು. ಅಂತಹ ಕಾರ್ಯಗಳನ್ನು ಕೈಗೊಳ್ಳಲು ರಾಮನು ಅತ್ಯಂತ ಚಿಕ್ಕವನೆಂದು ಅವನು ವಾದಿಸಿದನು. ತನ್ನ ಎಲ್ಲ ಸೈನ್ಯವನ್ನು ವಿಶ್ವಾಮಿತ್ರನೊಂದಿಗೆ ಕಳಿಸಿಕೊಡಲು ಅವನು ಸಿದ್ಧನಾಗಿದ್ದನು. ಇದರಿಂದ ಕೋಪಗೊಂಡ ವಿಶ್ವಾಮಿತ್ರ ಋಷಿಗಳು ಹೊರಡಲು ಎದ್ದುನಿಂತರು. ‘ವಿಶ್ವಾಮಿತ್ರರ ಒಡನಾಟ ಸಿಗಬೇಕೆಂದರೆ ಅದು ಮಕ್ಕಳಪಾಲಿಗೆ ಬಹುದೊಡ್ಡ ವರವಿದ್ದಂತೆ. ಆದ್ದರಿಂದ ಮಕ್ಕಳನ್ನು ವಿಶ್ವಾಮಿತ್ರರ ಜೊತೆಗೆ ಕಳಿಸಿಕೊಡುವಂತೆ ಅಯೋಧ್ಯೆಯ ಕುಲಗುರುಗಳಾದ ವಸಿಷ್ಟರು ದಶರಥನಿಗೆ ಸಲಹೆ ನೀಡಿದರು. ಅದನ್ನು ಒಪ್ಪಿದ ದಶರಥನು ವಿಶ್ವಾಮಿತ್ರ ಋಷಿಗಳ ಯಜ್ಞರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ಭಾರವಾದ ಹೃದಯದಿಂದ ಕಳಿಸಿಕೊಟ್ಟನು.
ವಿಶ್ವಾಮಿತ್ರ ಋಷಿಗಳ ಪರ್ಣಕುಟೀರಕ್ಕೆ ‘ಸಿದ್ಧಾಶ್ರಮ’ ಎಂಬ ಹೆಸರಿತ್ತು. ಅಲ್ಲಿಗೆ ಪ್ರಯಾಣಮಾಡುವ ಮಾರ್ಗದಲ್ಲಿ ಅವರು ಸರಯೂ ನದಿಯ ದಡದಲ್ಲಿ ವಿಶ್ರಾಂತಿ ಪಡೆದರು. ಅಲ್ಲಿ ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಅನೇಕ ಶಕ್ತಿಶಾಲಿ ಮಂತ್ರಗಳನ್ನೂ ಮತ್ತು ದಿವ್ಯಾಸ್ತ್ರಗಳ(ಆಯುಧಗಳ) ಪ್ರಯೋಗವನ್ನೂ ಕಲಿಸಿದರು.
ಅವರು ಪ್ರಯಾಣವನ್ನು ಮುಂದುವರಿಸಿ, ಗಂಗಾನದಿಯನ್ನು ದಾಟಿ, ದಂಡಕಾರಣ್ಯ ಎಂಬ ಕಾಡನ್ನು ತಲುಪಿದರು.
ಅಲ್ಲಿ ಅವರಿಗೆ ಅನೇಕ ಆನೆಗಳ ಬಲವನ್ನು ಹೊಂದಿದ್ದ ‘ತಾಟಕಿ’ ಎಂಬ ರಾಕ್ಷಸಿಯು ಎದುರಾದಳು. ಅವಳು ಋಷಿಗಳಿಗೂ ಮತ್ತು ಅವರು ಮಾಡುತ್ತಿದ್ದ ಯಜ್ಞಗಳಿಗೂ ಅಪಾಯಕಾರಿಯಾಗಿದ್ದರಿಂದ ಅವಳನ್ನು ಕೊಲ್ಲುವಂತೆ ವಿಶ್ವಾಮಿತ್ರರು ರಾಮನಿಗೆ ಸೂಚಿಸಿದರು. ರಾಮನು ವಿಧೇಯನಾಗಿ ಆ ತಕ್ಷಣವೇ ಅವಳನ್ನು ವಧಿಸಿದನು.
ಕೊನೆಗೆ, ಅವರು ಸಿದ್ಧಾಶ್ರಮವನ್ನು ತಲುಪಿದರು. ಮರುದಿನ ವಿಶ್ವಾಮಿತ್ರರು ಅನೇಕ ಋಷಿಗಳ ಸಹಾಯದೊಂದಿಗೆ ಯಜ್ಞವನ್ನು ಪ್ರಾರಂಭಿಸಿದರು.
ಯಜ್ಞವು ನಡೆಯುತ್ತಿದ್ದಾಗ ಅನೇಕ ರಾಕ್ಷಸರು ಪವಿತ್ರವಾದ ಶಾಸ್ತ್ರವಿಧಿಗಳಿಗೆ ಅಡ್ಡಿಯನ್ನುಂಟುಮಾಡಲು ಪ್ರಯತ್ನಿಸಿದರು. ರಾಕ್ಷಸ ನಾಯಕರುಗಳಾದ ಮಾರೀಚ ಮತ್ತು ಸುಬಾಹುಗಳ ನೇತೃತ್ವದಲ್ಲಿ ಒಂದು ರಾಕ್ಷಸ ಸೈನ್ಯವು ಯಜ್ಞಕ್ಕೆ ರಕ್ತ, ಮಾಂಸಗಳನ್ನು ಸುರಿಯುವುದರ ಮೂಲಕ ಮಲಿನಗೊಳಿಸಲು ಪ್ರಯತ್ನಿಸಿತು. ಆದರೆ ರಾಮ, ಲಕ್ಷ್ಮಣರು ತಮ್ಮ ಅನುಕರಣೀಯವಾದ ಧೈರ್ಯ ಮತ್ತು ಬಿಲ್ವಿದ್ಯಾ ಕೌಶಲದಿಂದ ಸುಬಾಹುವನ್ನು ಕೊಂದು, ಮಾರೀಚ ಮತ್ತು ಇತರ ರಾಕ್ಷಸರನ್ನು ಬಹುದೂರಕ್ಕೆ ಅಟ್ಟಿದರು. ಇದರಿಂದಾಗಿ ಯಜ್ಞವು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಂಡಿತು.