ಹನುಮಂತನ ಮೊದಲ ಭೇಟಿ:
ಅವರು ಬಹಳ ಬೇಗ ಪಂಪಾನದೀ ತೀರವನ್ನು ಸೇರಿದರು. ಅವರೀಗ ಋಷ್ಯಮೂಕ ಪರ್ವತದ ಹತ್ತಿರ ಬಂದಿದ್ದರು. ಅದು ವಾಲಿಯ ತಮ್ಮನಾದ ಸುಗ್ರೀವನ ವಾಸಸ್ಥಾನವಾಗಿತ್ತು. ಅವರ ನಡುವಿನ ತಪ್ಪು ತಿಳುವಳಿಕೆಯಿಂದ ಸುಗ್ರೀವನು ವಾಲಿಯಿಂದ ಗಡೀಪಾರು ಮಾಡಲ್ಪಟ್ಟಿದ್ದನು. ಸುಗ್ರೀವನು ತನ್ನ ಕೆಲವು ನಂಬುಗೆಯ ಸಂಗಡಿಗರೊಂದಿಗೆ ಅಲ್ಲಿ ವಾಸಿಸುತ್ತಿದ್ದನು. ಹನುಮಂತನು ಅವರೆಲ್ಲರಲ್ಲಿ ಅತ್ಯಂತ ಪ್ರಮುಖನಾಗಿದ್ದನು.
ರಾಮ, ಲಕ್ಷ್ಮಣರು ಆ ಸ್ಥಳದಲ್ಲಿ ಸುತ್ತಾಡುತ್ತಿದ್ದುದನ್ನು, ಸುಗ್ರೀವ ಮತ್ತು ಅವನ ಸಂಗಡಿಗರು ದೂರದಿಂದ ನೋಡಿ, ಅವರು ಯಾರಿರಬಹುದೆಂದು ಆಶ್ಚರ್ಯಪಟ್ಟರು. ಅವರನ್ನು ವಾಲಿಯು ಕಳಿಸಿರಬಹುದೆಂದು ಸುಗ್ರೀವನ ಗುಂಪಿಗೆ ಭಯವಾಯಿತು. ಬಲಶಾಲಿ ಮತ್ತು ಬುದ್ಧಿವಂತ ಮಂತ್ರಿಯಾಗಿದ್ದ ಹನುಮಂತನು ಮಾತ್ರ ಅವರು ಅಪಾಯಕಾರಿಗಳಲ್ಲವೆಂದು ದೃಢವಾಗಿ ನಂಬಿದನು. ಕೂಡಲೇ, ಹನುಮಂತನು ಬೆಟ್ಟವನ್ನಿಳಿದು, ಅವರು ಯಾರೆಂದು ವಿಚಾರಿಸಲು ರಾಮ, ಲಕ್ಷ್ಮಣರ ಬಳಿಗೆ ಹೋದನು. ಹನುಮಂತನು ಆಕ್ಷಣದಲ್ಲಿಯೇ ರಾಜಕುಮಾರರಿಂದ ಆಕರ್ಷಿತನಾದನು. ಅವನು ಅವರನ್ನು ಸುಗ್ರೀವನ ಬಳಿಗೆ ಕರೆದುಕೊಂಡು ಹೋದನು.
ಸುಗ್ರೀವನೊಂದಿಗೆ ಮೈತ್ರಿ:
ಸುಗ್ರೀವನು ಅವರನ್ನು ಶುದ್ಧಭಾವದಿಂದ ಸ್ವಾಗತಿಸಿ ಆತಿಥ್ಯವನ್ನು ನೀಡಿದನು. ನಂತರ ಅವನು ತನಗೆ ತನ್ನ ಅಣ್ಣ ವಾಲಿಯೊಂದಿಗೆ ಇರುವ ಹೋರಾಟ ಮತ್ತು ತನ್ನ ಹೆಂಡತಿಯನ್ನು ವಾಲಿಯು ಹೇಗೆ ಅಪಹರಿಸಿದನೆಂಬ ಕಥೆಯನ್ನು ವಿವರಿಸಿದನು. ಆಗ ರಾಮನು ತಾನೂ ಅದೇ ರೀತಿಯ ಸಂಕಟದಲ್ಲಿರುವುದಾಗಿ ತಿಳಿಸಿದನು. ಆದ್ದರಿಂದ ಅವರು ತಾವಿಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಸಹಾಯಮಾಡಬೇಕೆಂದು ಒಪ್ಪಂದ ಮಾಡಿಕೊಂಡರು.
ಒಬ್ಬ ಸ್ತ್ರೀಯನ್ನು ದಕ್ಷಿಣದ ಕಡೆಗೆ ಬಲವಂತವಾಗಿ ಕೊಂಡೊಯ್ಯುತ್ತಿದ್ದುದನ್ನು ತಾವು ನೋಡಿದ್ದಾಗಿಯೂ, ಆಕೆಯು ಒಂದು ಆಭರಣದ ಗಂಟನ್ನು ತಮ್ಮ ಕಡೆಗೆ ಎಸೆದುದಾಗಿಯೂ ಸುಗ್ರೀವನು ತಿಳಿಸಿದನು. ಅವನು ಆ ಆಭರಣದ ಗಂಟನ್ನು ತರುವಂತೆ ವಾನರರಿಗೆ ಆಜ್ಞೆ ಮಾಡಿ, ಅದನ್ನು ರಾಮನಿಗೆ ತೋರಿಸಿದನು. ಆಭರಣಗಳನ್ನು ನೋಡಿದಾಗ ರಾಮನು ಬಹಳ ದುಃಖಿತನಾದನು. ಸ್ವಲ್ಪ ಹೊತ್ತಿನ ನಂತರ, ಅವನು ಚೇತರಿಸಿಕೊಂಡ ಮೇಲೆ, ಅವು ಸೀತೆಯ ಆಭರಣಗಳೆಂದು ಅವನು ಗುರುತಿಸಿದನು. ಲಕ್ಷ್ಮಣನು ಪ್ರತಿನಿತ್ಯ ಸೀತಾಮಾತೆಯ ಪಾದಕ್ಕೆ ನಮಸ್ಕರಿಸುತ್ತಿದ್ದುದರಿಂದ ಅವನಿಗೆ ಸೀತೆಯ ಪಾದದ ಆಭರಣವನ್ನು ಮಾತ್ರ ಗುರುತಿಸಲು ಸಾಧ್ಯವಾಯಿತು. ಅವನ ಭಕ್ತಿ ಮತ್ತು ಸನ್ನಡತೆಯನ್ನು ಕಂಡು ವಾನರರು ಮೂಕವಿಸ್ಮಿತರಾದರು.
ವಾಲಿ ವಧೆ:
ಸುಗ್ರೀವನು ರಾಮನಿಗೆ ವಾಲಿಯ ಶಕ್ತಿಯನ್ನು ವಿವರಿಸಿ, ರಾಮನಿಂದ ಅವನನ್ನು ಎದುರಿಸಲು ಸಾಧ್ಯವೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದನು. ರಾಮನು ‘ಒಂದೇ ಸಾಲಿನಲ್ಲಿದ್ದ ಏಳು ತಾಳೆ ಮರಗಳನ್ನು ಕತ್ತರಿಸಿ, ಪುನಃ ತನ್ನ ಬಳಿಗೇ ಬರುವಂತೆ’ ಒಂದು ಬಾಣವನ್ನು ಪ್ರಯೋಗಿಸಿ, ತನ್ನ ಅಸಾಧಾರಣ ಸಾಮರ್ಥ್ಯವನ್ನು ಸ್ಪಷ್ಟಪಡಿಸಿದನು. ಇದು ಸುಗ್ರೀವನಿಗೆ ಅಪಾರ ವಿಶ್ವಾಸವನ್ನು ತಂದುಕೊಟ್ಟಿತು.
ರಾಮನು ವಾಲಿಯನ್ನು ಕೊಲ್ಲುತ್ತಾನೆಂದು ಭಾವಿಸಿ, ಸುಗ್ರೀವನು ವಾಲಿಯನ್ನು ಹೋರಾಟಕ್ಕೆ ಆಹ್ವಾನಿಸಿದನು. ಆದರೆ ವಾಲಿ ಮತ್ತು ಸುಗ್ರೀವರು ಒಂದೇ ರೀತಿಯಲ್ಲಿ ಕಾಣಿಸುತ್ತಿದ್ದುದರಿಂದ ರಾಮನು ಬಾಣ ಪ್ರಯೋಗಿಸಲಿಲ್ಲ. ಆದ್ದರಿಂದ ಆ ಹೋರಾಟದಲ್ಲಿ ಸುಗ್ರೀವನು ವಾಲಿಯಿಂದ ಹೀನಾಯವಾಗಿ ಪೆಟ್ಟು ತಿನ್ನಬೇಕಾಯಿತು. ಇದರಿಂದ ಸುಗ್ರೀವನಿಗೆ ರಾಮನ ಮೇಲೆ ಬಹಳ ಕೋಪ ಬಂತು. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲವೆಂದು ಅವನು ರಾಮನನ್ನು ನಿಂದಿಸಿದನು. ಇಬ್ಬರೂ ಒಂದೇ ರೀತಿಯಲ್ಲಿ ಕಾಣಿಸುತ್ತಿದ್ದುದರಿಂದ ತನಗೆ ಬಾಣ ಪ್ರಯೋಗಿಸಲು ಆಗಲಿಲ್ಲವೆಂದು, ರಾಮನು ಕಾರಣವನ್ನು ವಿವರಿಸಿದನು. ನಂತರ ಅವನು ಸುಗ್ರೀವನಿಗೆ ಒಂದು ಹಾರವನ್ನು ಧರಿಸುವಂತೆ ಸಲಹೆ ನೀಡಿದನು. ಪುನಃ ಮುಂದಿನ ಹೋರಾಟದಲ್ಲಿ ವಾಲಿಯು ಸುಗ್ರೀವನನ್ನು ಸೋಲಿಸಲು ಬಹಳ ಸಾಮರ್ಥ್ಯದಿಂದ ಹೋರಾಡಿದನು. ವಾಲಿಯು ಧರ್ಮಕ್ಕೆ ವಿರುದ್ಧವಾಗಿ ಒಂದು ಮೃಗಕ್ಕಿಂತ ಕೀಳಾಗಿ ವರ್ತಿಸಿದ್ದರಿಂದ, ರಾಮನು ಒಂದು ಮರದ ಹಿಂದೆ ನಿಂತು ಒಬ್ಬ ಬೇಟೆಗಾರನು ಕ್ರೂರ ಮೃಗವನ್ನು ಕೊಲ್ಲುವಂತೆ ಬಾಣ ಪ್ರಯೋಗ ಮಾಡಿ ಅವನನ್ನು ವಧಿಸಿದನು.
ಸೀತೆಯನ್ನು ಹುಡುಕುವ ಪ್ರಯತ್ನ:
ಸುಗ್ರೀವನನ್ನು ವಾನರರ ರಾಜನನ್ನಾಗಿ ಮಾಡಲಾಯಿತು. ಅವನು ಸೀತೆಯನ್ನು ಹುಡುಕುವ ಬಗ್ಗೆ ಏನೂ ಮಾಡದೆ, ರಾಜತ್ವದ ಸುಖವನ್ನು ಸಂತೋಷವಾಗಿ ಅನುಭವಿಸುವುದರಲ್ಲಿ ತೊಡಗಿದ್ದನು. ಕೊನೆಗೆ ಹನುಮಂತನು ಸುಗ್ರೀವನಿಗೆ, ‘ಅವನು ರಾಮನಿಗೆ ನೀಡಿದ ವಚನದ ಬಗ್ಗೆ’ ನೆನಪಿಸಿದನು. ಆಗ ಸುಗ್ರೀವನು ಒಂದು ಸಭೆಯನ್ನು ಕರೆದು, ಕಪಿಗಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿ, ನಾಲ್ಕು ದಿಕ್ಕುಗಳಲ್ಲಿಯೂ ಸೀತೆಯನ್ನು ಹುಡುಕಲು ಕಳಿಸಿದನು. ಹನುಮಂತ, ಜಾಂಬವ, ಅಂಗದ ಮತ್ತು ನೀಲರು ದಕ್ಷಿಣದ ಕಡೆಗೆ ಹೊರಟರು. ಹನುಮಂತನು ಸೀತೆಯ ಬಗ್ಗೆ ಒಳ್ಳೆಯ ಸುದ್ದಿಯನ್ನು ತರುತ್ತಾನೆಂದು ರಾಮನಿಗೆ ಬಲವಾದ ನಂಬಿಕೆಯಿತ್ತು. ಆದ್ದರಿಂದ ಅವನು ಸೀತೆಗೆ ಕೊಡಬೇಕಾದ ಮುದ್ರೆಯುಂಗುರವನ್ನು ಹನುಮಂತನ ಹತ್ತಿರ ಕೊಟ್ಟನು. ಹನುಮಂತನು ಆ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಕೈಗೊಂಡನು. ಸೀತೆಯನ್ನು ಹುಡುಕುವುದರ ಮೂಲಕ ರಾಮನನ್ನು ಸಂತೋಷ ಪಡಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು.
ದಕ್ಷಿಣದ ಬೆಟ್ಟಗಳು ಮತ್ತು ಇಳಿಜಾರುಗಳಲ್ಲಿ ಸಾಕಷ್ಟು ಹುಡುಕಿದ ನಂತರ ಗುಂಪು ಸಮುದ್ರದ ದಡವನ್ನು ಸೇರಿತು. ಸಂಪಾತಿ ಎಂಬ ಒಂದು ಮಹಾನ್ ಶಕ್ತಿಶಾಲಿ ಹದ್ದು ಈ ವಾನರರನ್ನು ಒಂದು ಬೆಟ್ಟದ ತುದಿಯಿಂದ ಗಮನಿಸುತ್ತಿತ್ತು. ಅದು ಜಟಾಯುವಿನ ಬಗ್ಗೆ ಈ ಗುಂಪು ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿತು. ಅದು ಜಟಾಯುವಿನ ಸೋದರನಾಗಿದ್ದರಿಂದ, ಗುಂಪನ್ನು ತನ್ನ ಬಳಿಗೆ ಕರೆದು ನಡೆದುದೆಲ್ಲವನ್ನೂ ಕೇಳಿ ತಿಳಿದುಕೊಂಡಿತು. ಜಟಾಯುವು ರಾವಣನಿಂದ ಕೊಲ್ಲಲ್ಪಟ್ಟಿರುವುದನ್ನು ತಿಳಿದು ಅದಕ್ಕೆ ಬಹಳ ದುಃಖವಾಯಿತು. ರಾಮನ ಸಹಾಯಕ್ಕೆ ತಾನು ಮುಡಿಪಾಗಿರುವುದಾಗಿ ಅದು ತಿಳಿಸಿತು. ಸೀತೆಯು ಲಂಕೆಯಲ್ಲಿ ಸಿಗುವಳೆಂಬ ಸೂಚನೆಯನ್ನು ಅದು ನೀಡಿತು. ಲಂಕೆಯು ದಕ್ಷಿಣದಲ್ಲಿ ಸಮುದ್ರದಾಚೆ ಇದೆಯೆಂದು ಅದು ಹೇಳಿತು. ಇಂತಹ ವಿಸ್ತಾರವಾದ ಸಮುದ್ರವನ್ನು ಹೇಗೆ ದಾಟುವುದೆಂದು ಅಂಗದನಿಗೆ ಆಶ್ಚರ್ಯವಾಯಿತು. ಪ್ರತಿಯೊಬ್ಬರೂ ಈ ಬಗ್ಗೆ ಗಂಭೀರವಾದ ಯೋಚನೆಯಲ್ಲಿದ್ದರು. ಸಮುದ್ರವನ್ನು ದಾಟುವಷ್ಟು ಬಲ ಯಾರಿಗಿದೆ? ಎಂದು ಪ್ರತಿಯೊಬ್ಬರೂ ಆಶ್ಚರ್ಯಪಟ್ಟರು.