ಶ್ರೀರಾಮ ಪಟ್ಟಾಭಿಷೇಕ – ರಾಮರಾಜ್ಯ
ಯುದ್ಧವು ಮುಗಿಯುವಷ್ಟರಲ್ಲಿ ಹದಿನಾಲ್ಕು ವರ್ಷಗಳು ಪೂರ್ಣಗೊಂಡಿದ್ದರಿಂದ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತ, ಇವರುಗಳು ಸುಂದರವಾದ ‘ಪುಷ್ಪಕ ವಿಮಾನ’ ದಲ್ಲಿ ಕುಳಿತು ಅಯೋಧ್ಯೆಯನ್ನು ತಲುಪಿದರು. ರಾಮನ ಆಗಮನಕ್ಕಾಗಿ ತವಕದಿಂದ ಕಾಯುತ್ತಿದ್ದ ಭರತ, ತಾಯಿಯರು ಮತ್ತು ಅಯೋಧ್ಯೆಯ ಜನರಿಗೆ ಅಪಾರ ಸಂತೋಷವಾಯಿತು. ಶುಭ ಮುಹೂರ್ತದಲ್ಲಿ ರಾಮನಿಗೆ ಅಯೋಧ್ಯೆಯ ಮಹಾರಾಜನಾಗಿ ಪಟ್ಟಾಭಿಷೇಕವಾಯಿತು. ರಾಮನು ಪ್ರಜೆಗಳನ್ನು ತನ್ನ ಮಕ್ಕಳಂತೆ ರಕ್ಷಿಸುತ್ತಿದ್ದುದರಿಂದ, ಜನರು ಬಹಳ ಸುಖ, ಸಂತೋಷದಿಂದ ಇದ್ದರು. ಆದ್ದರಿಂದ ಅವನ ಆಡಳಿತವು “ರಾಮರಾಜ್ಯ” ಎಂದು ಪ್ರಸಿದ್ಧವಾಯಿತು.
‘ಉತ್ತರಕಾಂಡ’ವು ನಂತರ ಸೇರಿಸಲ್ಪಟ್ಟ ಅಧ್ಯಾಯವಾಗಿದೆ. ಇದು ರಾಮನು ಅಯೋಧ್ಯೆಯ ರಾಜನಾಗಿ ಅಭಿಷಿಕ್ತನಾದಮೇಲೆ ಅವನ ಬದುಕಿನಲ್ಲಿ ನಡೆದ ಘಟನೆಗಳನ್ನು ಒಳಗೊಂಡಿದೆ.
ರಾಮಾಯಣದ ಕಥೆಯು ೨೪,೦೦೦ ಶ್ಲೋಕಗಳಿಂದ ರಚಿತವಾಗಿದೆ. ಈ ಕೆಳಗೆ ಒಂದು ಚಿಕ್ಕ ಶ್ಲೋಕವನ್ನು ಕೊಟ್ಟಿದೆ. ಅದು ಕೆಲವೇ ಸಾಲುಗಳಲ್ಲಿ ರಾಮಾಯಣದ ಪ್ರಮುಖ ಘಟನೆಗಳಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಮಹಾಕಾವ್ಯದ ಸಂಪೂರ್ಣ ಕಥೆಯನ್ನು ಒಳಗೊಂಡಿದೆ.
ಶ್ಲೋಕ:
ಪೂರ್ವಂ ರಾಮ ತಪೋವನಾಭಿಗಮನಮ್ ಹತ್ವಾ ಮೃಗಂ ಕಾಂಚನಮ್|
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ ||
ವಾಲೀನಿಗ್ರಹಣಂ ಸಮುದ್ರತರಣಂ ಲಂಕಾಪುರೀ ದಾಹನಂ |
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ ||
ಅರ್ಥ: ಪ್ರಭು ಶ್ರೀರಾಮನು ತನ್ನ ತಂದೆಯು, ಪತ್ನಿಯರಲ್ಲಿ ಒಬ್ಬಳಾದ ಕೈಕೇಯಿಗೆ ಕೊಟ್ಟ ವಚನಪಾಲನೆಗಾಗಿ ಕಾಡಿಗೆ ಹೋದನು. ಕಾಡಿನಲ್ಲಿ ಸೀತೆಯು ಬಂಗಾರದ ಜಿಂಕೆಯಿಂದ ಆಕರ್ಷಿತಳಾದಳು. ಆ ಜಿಂಕೆಯನ್ನು ಹಿಡಿಯಲು ರಾಮನು ಹೋದನು. ಅದೇ ಸಮಯದಲ್ಲಿ ದುಷ್ಟ ರಾವಣನು ಸೀತೆಯನ್ನು ಅಪಹರಿಸಿದನು. ಜಟಾಯುವು ಸೀತೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ರಾವಣನಿಂದ ಕೊಲ್ಲಲ್ಪಟ್ಟನು. ನಂತರ ಶ್ರೀರಾಮನು ಸುಗ್ರೀವನಿಗೆ ಮಿತ್ರನಾಗಿ, ಅಧರ್ಮಿಯಾದ ವಾಲಿಯನ್ನು ಕೊಂದನು. ಅವನು ಸಮುದ್ರವನ್ನು ದಾಟಿ, ಲಂಕೆಯನ್ನು ಪ್ರವೇಶಿಸಿದನು. ನಂತರ ಅವನು ಲಂಕಾನಗರವನ್ನು ನಾಶಮಾಡಿ, ರಾವಣ, ಕುಂಭಕರ್ಣ ಮೊದಲಾದ ದುಷ್ಟ ರಾಕ್ಷಸರನ್ನು ಕೊಂದು ಸೀತೆಯನ್ನು ಬಿಡಿಸಿಕೊಂಡನು. ಇದೇ ರಾಮಾಯಣದ ಕಥೆ.