ಸೀತಾ ಸ್ವಯಂವರ:
ವಹಿಸಿದ ಕಾರ್ಯವನ್ನು ಕಾಡಿನಲ್ಲಿ ಸಮರ್ಪಕವಾಗಿ ಮುಗಿಸಿದ ನಂತರ ವಿಶ್ವಾಮಿತ್ರರು ಅವರನ್ನು ತಮ್ಮೊಡನೆ ಜನಕ ಮಹಾರಾಜನ ರಾಜ್ಯವಾದ ಮಿಥಿಲೆಗೆ ಬರುವಂತೆ ಸೂಚಿಸಿದರು. ರಾಮ, ಲಕ್ಷ್ಮಣರು ವಿಧೇಯರಾಗಿ ಅವರನ್ನು ಅನುಸರಿಸಿದರು.
ಜನಕರಾಜನಿಗೆ ‘ಸೀತಾ’ಎಂಬ ಸುಂದರಿಯಾದ ಮಗಳಿದ್ದಳು. ಜನಕನ ಮಗಳಾದ್ದರಿಂದ ಅವಳಿಗೆ ‘ಜಾನಕಿ’ ಎಂದೂ ಹೆಸರಿತ್ತು. ಜನಕನ ಅರಮನೆಯಲ್ಲಿ ಅತ್ಯಂತ ಪ್ರಸಿದ್ಧವಾದ ಮತ್ತು ಭಾರವಾದ ‘ಶಿವಧನುಸ್ಸು’ ಇತ್ತು. ಅವನು ತನ್ನ ಮಗಳು ಸೀತೆಗೆ ಒಂದು ಸ್ವಯಂವರವನ್ನು ಏರ್ಪಡಿಸಿದನು. ಎಲ್ಲಾ ರಾಜರುಗಳಿಗೂ ಆಮಂತ್ರಣ ನೀಡಿ, “ಯಾರು ಶಿವಧನುಸ್ಸನ್ನು ಮೇಲಕ್ಕೆ ಎತ್ತುತ್ತಾರೋ, ಅವರಿಗೆ ಸೀತೆಯನ್ನು ಕೊಟ್ಟು ಮದುವೆ ಮಾಡಿಕೊಡುವುದಾಗಿ” ಘೋಷಣೆ ಮಾಡಿದನು. ಲಂಕೆಯ ದೊರೆ ರಾವಣನೂ ಸೇರಿದಂತೆ ಯಾವ ರಾಜರಿಗೂ ಆ ‘ಶಿವಧನುಸ್ಸನ್ನು’ ಅಲುಗಾಡಿಸಲೂ ಸಹ ಆಗದೆ, ಸ್ಪರ್ಧೆಯಲ್ಲಿ ಸೋತರು.
ಆ ಸಂದರ್ಭದಲ್ಲಿ ವಿಶ್ವಾಮಿತ್ರರು ರಾಮನಿಗೆ ‘ಹೋಗಿ ಪ್ರಯತ್ನಿಸು’ ಎಂದು ಹೇಳಿದರು. ರಾಮನು ಅದನ್ನು ಯಶಸ್ವಿಯಾಗಿ ಮೇಲೆತ್ತಿದ್ದೂ ಅಲ್ಲದೆ, ಆ ಬಿಲ್ಲನ್ನು ಬಾಗಿಸಿ ಮುರಿದುಬಿಟ್ಟನು. ಜನಕರಾಜನಿಗೆ ಬಹಳ ಸಂತೋಷವಾಯಿತು. ತಕ್ಷಣ, ಜನಕನು ರಾಮನ ತಂದೆ ತಾಯಿಗಳಿಗೆ ಈ ಸಂತೋಷದ ಸುದ್ದಿಯನ್ನು ಹೇಳಿಕಳಿಸಿದನು ಮತ್ತು ಅವರನ್ನು ಮಿಥಿಲೆಗೆ ಬರುವಂತೆ ಆಹ್ವಾನಿಸಿದನು. ದಶರಥ ಮಹಾರಾಜನ ಹರ್ಷಕ್ಕೆ ಮಿತಿಯೇ ಇರಲಿಲ್ಲ. ಅವನು ತನ್ನ ರಾಣಿಯರು, ಮಂತ್ರಿಗಳು ಮತ್ತು ಅನೇಕ ಪರಿವಾರದವರೊಂದಿಗೆ ಮಿಥಿಲೆಗೆ ಹೊರಟನು.
ಅವರ ಸಮ್ಮುಖದಲ್ಲಿ ರಾಮನು ಸೀತೆಯನ್ನು ಮದುವೆಯಾದನು. ಅದೊಂದು ಬಹಳ ವೈಭವದ ಸಂದರ್ಭವಾಗಿತ್ತು. ಅದೇ ಸಮಯದಲ್ಲಿ ರಾಮನ ತಮ್ಮಂದಿರಿಗೂ ವಿವಾಹ ನಡೆಸಲಾಯಿತು. ಲಕ್ಷ್ಮಣನು ಊರ್ಮಿಳೆಯನ್ನೂ, ಭರತನು ಮಾಂಡವಿಯನ್ನೂ ಮತ್ತು ಶತ್ರುಘ್ನನು ಶ್ರುತಕೀರ್ತಿಯನ್ನೂ ವಿವಾಹವಾದರು. ಅಲ್ಲಿ ಎಲ್ಲೆಲ್ಲಿಯೂ ಸುಖ ಸಂತೋಷಗಳು ತುಂಬಿದ್ದವು. ನವ ವಧೂವರರೊಂದಿಗೆ ಅವರೆಲ್ಲರೂ ಅಯೋಧ್ಯೆಗೆ ಹಿಂದಿರುಗಿದರು. ಅಯೋಧ್ಯೆಯ ಪ್ರಜೆಗಳ ಸಂತೋಷಕ್ಕೆ ಮೇರೆ ಇರಲಿಲ್ಲ. ಎಲ್ಲಾ ಕಡೆಗಳಲ್ಲೂ ಸಂತೋಷ ಸಮಾರಂಭಗಳೂ, ಉತ್ಸವಗಳೂ ನಡೆದವು. ಸಂತೋಷದಿಂದ ದಿನಗಳು ಕಳೆಯುತ್ತಿದ್ದವು.