ಯದ್ಧದ ಆರಂಭ
ರಾಮನು ಮುಖ್ಯ ಸೇನಾಧಿಪತಿಯನ್ನು ಕರೆದು, ೪ ದ್ವಾರಗಳಿಂದ ಮುತ್ತಿಗೆ ಹಾಕಲು ನಿರ್ದೇಶಿಸಿದನು. ವಾನರರ ಸೇನಾಧಿಪತಿಯಾದ ಸುಗ್ರೀವ, ಕರಡಿಗಳ ಸೇನಾಧಿಪತಿಯಾದ ಜಾಂಬವಂತ ಮತ್ತು ರಾಕ್ಷಸರ ಸೇನಾಧಿಪತಿಯಾದ ವಿಭೀಷಣ ಎಲ್ಲರೂ ಕೂಡಿ ೪ ವಿಭಾಗಗಳನ್ನಾಗಿ ಮಾಡಿ, ೪ ನಾಯಕರ ಮಾರ್ಗದರ್ಶನದಲ್ಲಿ ಯುದ್ಧಕ್ಕೆ ಹೊರಡಲು ಸಿದ್ಧರಾದರು. ಶ್ರೀ ರಾಮನ ಪಾದಗಳಿಗೆ ನಮಸ್ಕರಿಸಿ, ಆಶಿರ್ವಾದವನ್ನು ಪಡೆದು ಧಾಳಿ ಪ್ರಾರಂಭಿಸಲು ಸೈನ್ಯಕ್ಕೆ ಆದೇಶ ನೀಡಿದರು. ವಾನರರು ಬಂಡೆಗಳನ್ನು, ಗಿಡಗಳನ್ನು ಹೊತ್ತು ತಂದು ಹಾಕಿದರು. ‘ರಾಮ ರಾಮ’ ಎಂದು ಹೃದಯದಿಂದ ನಾಲಿಗೆಯಲ್ಲಿ ಜಪಿಸುತ್ತಾ ಲಂಕೆಯ ಕಡೆಗೆ ನಡೆದರು. ನಲನ ಸೈನ್ಯವು ಬಿರುಗಾಳಿಯಂತೆ ಪೂರ್ವದ ದ್ವಾರದಿಂದ ಮುನ್ನುಗ್ಗಿತು. ದಕ್ಷಿಣದ ದ್ವಾರವು ಅಂಗದನ ನಿರ್ದೇಶನದಲ್ಲಿ ಇತ್ತು. ಪಶ್ಚಿಮದಿಂದ ಹನುಮಂತನ ಸೈನ್ಯವು ಮುನ್ನುಗ್ಗಿದವು. ಪಟ್ಟಣದ ಉತ್ತರ ದ್ವಾರವು ರಾವಣನ ಕಾವಲಿನಲ್ಲಿ ಇತ್ತು. ರಾಮನೇ ಸ್ವತಃ ರಾವಣನ ವಿರುದ್ಧ ಯುದ್ಧ ಪ್ರಾರಂಭಿಸಿದನು. ರಾಕ್ಷಸರ ಚಟುವಟಿಕೆಗಳು ರಾತ್ರಿ ನಡೆಯುವುದರಿಂದ ರಾತ್ರಿಯಾದೊಡನೆ ರಾಕ್ಷಸರ ಮಾಯಾವಿ ಶಕ್ತಿ ಹೆಚ್ಚಾಯಿತು. ಆಗ ರಾಮ ಅಗ್ನಿ ಅಸ್ತ್ರವನ್ನು ಉಪಯೋಗಿಸಿ ಕತ್ತಲಲ್ಲಿ ಬೆಳಕನ್ನು ತುಂಬಿದನು. ವಾನರರು ಮತ್ತು ಕರಡಿಗಳು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದರು. ಶತ್ರುಗಳನ್ನು ದ್ವಿಗುಣ ಶಕ್ತಿ ಮತ್ತು ಉತ್ಸಾಹದಿಂದ ನಾಶಮಾಡಿದರು.