ವಿಭೀಷಣನ ಶರಣಾಗತಿ:
ಈ ಮಧ್ಯೆ ಲಂಕೆಯಲ್ಲಿ ರಾವಣನು, ವಾನರ ಸೈನ್ಯವು ಲಂಕೆಯಮೇಲೆ ಆಕ್ರಮಣ ಮಾಡಬಹುದೆಂದು ನಿರೀಕ್ಷಿಸಿದನು. ಅವನು ಅದಕ್ಕಾಗಿ ಸಿದ್ಧನಾಗುತ್ತಿದ್ದನು. ರಾವಣನ ತಮ್ಮನಾದ ವಿಭೀಷಣನು, ಸೀತೆಯನ್ನು ರಾಮನಿಗೆ ಹಿಂತಿರುಗಿಸಿ ಅವನ ಕ್ಷಮೆ ಕೇಳಬೇಕೆಂದು ರಾವಣನಿಗೆ ಸಲಹೆ ನೀಡಲು ಪ್ರಯತ್ನಿಸಿದನು. ಆದರೆ ಅತ್ಯಂತ ಅಹಂಕಾರಿಯಾದ ರಾವಣನಿಗೆ ಈ ಸಲಹೆ ಹಿತವಾಗಲಿಲ್ಲ. ಅವನು ವಿಭೀಷಣನನ್ನು ಸಭೆಯಿಂದ ಹೊರದೂಡಿ ಅವಮಾನಮಾಡಿದನು.
ರಾಮನ ಭಕ್ತನಾಗಿದ್ದ ವಿಭೀಷಣನು ರಾಮನನ್ನು ಬಿಟ್ಟು ಬೇರೆ ಏನನ್ನೂ ಯೋಚಿಸುತ್ತಿರಲಿಲ್ಲ. ಆದ್ದರಿಂದ ಅವನು ರಾಮನ ಪಾದಗಳ ಮೇಲೆ ಬಿದ್ದು ಶರಣಾಗತನಾಗಲು ಬಂದನು. ವಿಭೀಷಣನನ್ನು ಯಾರೂ ನಂಬದೇ ಇದ್ದರೂ, ರಾಮನೊಬ್ಬನು ಮಾತ್ರ ಅವನ ಸಂಪೂರ್ಣ ಶರಣಾಗತಿಯಿಂದಾಗಿ ಹೃತ್ಪೂರ್ವಕವಾಗಿ ಅವನನ್ನು ಸ್ವೀಕರಿಸಿದನು. ರಾಮನು ಅವನಿಗೆ ತನ್ನ ಸ್ನೇಹದ ಭರವಸೆ ನೀಡಿ ಅವನನ್ನು ಲಂಕೆಯ ಚಕ್ರವರ್ತಿಯನ್ನಾಗಿ ಮಾಡಿ ವಿಧಿವತ್ತಾಗಿ ಪಟ್ಟಾಭಿಷೇಕಮಾಡಿದನು.