ಸತ್ಯವೇ ದೇವರು (III)
ಹೋದವಾರ ನಮ್ಮ ಶಾಲೆಯಲ್ಲಿ ಒಂದು ಘಟನೆ ನಡೆಯಿತು. ಅದು ನನ್ನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿದೆ. ನಾನು ಗಣಿತದ ಶಿಕ್ಷಕ. ಅದೇ ತಾನೆ ಜನ್ನಾಪುರದಿಂದ ವರ್ಗವಾಗಿ ಇಲ್ಲಿಗೆ ಬಂದಿದ್ದೆ. ಮೊದಲನೆಯ ದಿನ ಮೊದಲನೆಯ ತರಗತಿಗೆ ಹೋದೆ. ಅದು ಎಂಟನೆಯ ತರಗತಿ. ಬೋಡಿನ ಮೇಲೆ ಎರಡು ಲೆಕ್ಕಗಳನ್ನು ಬರೆದು ಎಲ್ಲರೂ ಅವುಗಳನ್ನು ಬಿಡಿಸಿ ತರಬೇಕೆಂದು ಹೇಳಿದೆ. ಎಲ್ಲರೂ ಲೆಕ್ಕಗಳನ್ನು ಬರೆದುಕೊಂಡರು. ಆದರೆ ಸುಮ್ಮನೆ ಮುಖ ಮುಖ ನೋಡುತ್ತಾ ಕುಳಿತರು. ಅಲ್ಲಲ್ಲೇ ಗುಜುಗುಜು ಪ್ರಾರಂಭವಾಯಿತು.
‘ಇದೇನು ಮಾಡ್ತಿದ್ದೀರಿ? ನಾನು ನಿಮಗೆ ಲೆಕ್ಕ ಮಾಡೋಕೆ ಹೇಳಿದೆ, ಮಾತಾಡೋಕಲ್ಲ,’ಅಂತ ಜಬರಿಸಿದೆ. ಒಬ್ಬ ಹುಡುಗ ಎದ್ದು ನಿಂತು ಸರ್, “ಈ ಲೆಕ್ಕ ನಮಗೆ ಹೇಳಿಕೊಟ್ಟಿಲ್ಲ” ಅಂದ. ‘ಹೌದು ಸರ್, ಇನ್ನೂ ಈ ಭಾಗಕ್ಕೆ ಬಂದಿರಲಿಲ್ಲ,’ ಎಲ್ಲರೂ ಹೇಳಿದರು.
ಹಾಗೋ ಸರಿ ಬಿಡಿ, ಈಗ ನಾನು ತೋರಿಸಿಕೊಡುತ್ತೇನೆ ಎಂದು ಹೇಳಿ ಎಲ್ಲರನ್ನೂ ಒಮ್ಮೆ ಗಮನಿಸಿದೆ. ಎಲ್ಲರೂ ಸುಮ್ಮನೆ ಕುಳಿತಿದ್ದರೆ ಒಬ್ಬ ಹುಡುಗ ಮಾತ್ರ ಲೆಕ್ಕ ಮಾಡುತ್ತಿದ್ದ. ನಾನು ನಿಧಾನವಾಗಿ ಅವನ ಬಳಿಗೆ ಹೋಗಿ ನಿಂತೆ. ನಾನು ಅಲ್ಲಿಗೆ ಹೋದದ್ದೂ ಅವನಿಗೆ ತಿಳಿಯಲಿಲ್ಲ. ಅಷ್ಟುಮಟ್ಟಿಗೆ ಅವನು ಲೆಕ್ಕದಲ್ಲಿ ಮುಳುಗಿಹೋಗಿದ್ದ. ಹಾಗೇ ಗಮನಿಸಿ ನೋಡಿದೆ. ಎಲ್ಲ ಹಂತಗಳನ್ನೂ ಸರಿಯಾಗಿಯೇ ಮಾಡಿದ್ದ. ಪೂರ್ತಿ ಮಾಡಿ ಮುಗಿಸುವವರೆಗೂ ಕಾದಿದ್ದು ಅಮೇಲೆ ಅವನ ಬೆನ್ನುತಟ್ಟಿದೆ. ‘ಶಹಭಾಸ್ ಮಗು, ನೀನು ಈ ಲೆಕ್ಕಗಳನ್ನು ಸರಿಯಾಗಿ ಮಾಡಿದ್ದೀಯೆ’ ಎಂದೆ. ಅವನು ದಡಕ್ಕನೆ ಮೇಲೆದ್ದು ನಿಂತ. ‘ಇಡೀ ತರಗತಿಯ ಮಕ್ಕಳು ಈ ಲೆಕ್ಕಗಳನ್ನು ಮಾಡಲಾರದೆ ಸುಮ್ಮನೆ ಕುಳಿತರು, ನೀನು ಮಾಡಿದೆ. ನೀನು ಬಹಳ ಬುದ್ಧಿವಂತ. ಮೊದಲನೆಯ ಬೆಂಚಿಗೆ ಹೋಗಿ ಕುಳಿತುಕೋ.’
ಅವನು ವಿನಯದಿಂದ ನುಡಿದ: ‘ಸರ್ ಕ್ಷಮಿಸಬೇಕು. ನನಗೂ ಈ ಲೆಕ್ಕಗಳು ಬರುತ್ತಿರಲಿಲ್ಲ. ನಮ್ಮ ಉಪಾಧ್ಯಾಯರು ಇನ್ನೂ ಈ ಭಾಗಕ್ಕೆ ಬಂದಿರಲಿಲ್ಲ. ಆದರೆ ಈಗ ನಾಲ್ಕು ದಿನಗಳ ಹಿಂದೆ ನಮ್ಮ ಮನೆಗೆ ನನ್ನ ಚಿಕ್ಕಪ್ಪನ ಮಗ ಬಂದಿದ್ದಾನೆ.
ಅವನಿಗೆ ಗಣಿತ ತುಂಬ ಇಷ್ಟ. ಅವನು ಮೊನ್ನೆ ಈ ಲೆಕ್ಕಗಳನ್ನು ಮಾಡಿ ತೋರಿಸಿಕೊಟ್ಟ, ನನಗೆ ಕಲಿಸಿದ. ಆದ್ದರಿಂದಲೇ ಈಗ ಇದನ್ನು ಬಿಡಿಸಲು ಸಾಧ್ಯವಾಯಿತು.’ ನನಗೆ ಈ ಮಾತು ಕೇಳಿ ಹಿಡಿಸಲಾರದಷ್ಟು ಸಂತೋಷವಾಯಿತು. ಏನೂ ಮಾಡದೆಯೆ ಎಲ್ಲವನ್ನೂ ಮಾಡಿದೆ ಎಂದು ಹೇಳಿಕೊಳ್ಳುವ ಜನರಿರುವ ಈ ಕಾಲದಲ್ಲಿ ಇಷ್ಟು ಸತ್ಯವಂತನಾದ ಬಾಲಕ ಇದ್ದಾನಲ್ಲ ಎಂದು ನಾನು ಸಂತೋಷಪಟ್ಟೆ. ‘ನಿನ್ನ ಹೆಸರೇನು ಮಗು?’ ಎಂದು ಕೇಳಿದೆ. ‘ಗೋಪಾಲ ಸರ್’ ನಿನ್ನ ಸತ್ಯ ಪ್ರೀತಿ ನಿನ್ನನ್ನು ಎಂದೆಂದೂ ಕಾಪಾಡುತ್ತದೆ. ನಿನಗೆ ಒಳ್ಳೆಯದಾಗಲಿ,’ ಎಂದೆ.
ಮುಂದೆ ಮಹಾತ್ಮಾ ಗಾಂಧೀಜಿಯವರು ತಮ್ಮ ಗುರುವೆಂದು ಗೌರವಿಸಿದ ‘ಗೋಪಾಲಕೃಷ್ಣ ಗೋಖಲೆ’ ಈ ಬಾಲಕನೇ. ಅವರು ಸುಪ್ರಸಿದ್ಧ ಸಮಾಜ ಸುಧಾರಕರು. ನಮ್ಮ ದೇಶದಲ್ಲಿ ದೀನದಲಿತರ ಸೇವೆಯನ್ನು ಬಹು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ‘ಭಾರತ ಸೇವಕ ಸಮಾಜ’ ಎಂಬ ಸಂಸ್ಧೆಯನ್ನು ಅನರು ಸ್ಧಾಪಿಸಿದರು.
ಪ್ರಶ್ನೆಗಳು:
- ಗೋಪಾಲನ ಮಾತು ಕೇಳಿ ಶಿಕ್ಷಕರು ಏಕೆ ಸಂತೋಷಗೊಂಡರು?
- ನಾವು ಮಾಡಿರದ ಕೆಲಸಕ್ಕೆ ಏಕೆ ಹೊಗಳಿಕೆ ಸ್ವೀಕರಿಸಬಾರದು? ಸ್ವೀಕರಿಸಿದರೆ ಏನಾಗುತ್ತದೆ?
- ‘ಸತ್ಯವೇ ದೇವರು’ ಶೀಷಿಕೆಯಲ್ಲಿ ಬಂದ ಮೂರು ಕಥೆಗಳಿಂದ ನೀವು ಏನು ಕಲಿಯುತ್ತೀರಿ?