ಅಹಮಾತ್ಮಾ – ಹೆಚ್ಚಿನ ಓದುವಿಕೆ
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯ ಸ್ಥಿತಃ
ಅಹಮಾದಿಶ್ಚ ಮಧ್ಯಂ ಚ ಭೂತಾನಾಂ ಅಂತ ಏವ ಚ
(ಅಧ್ಯಾಯ 10, ಶ್ಲೋಕ 20)
ಓ ಅರ್ಜುನ, ನಾನು ಸಮಸ್ತ ಪ್ರಾಣಿಗಳ ಹೃದಯದಲ್ಲಿರುವ ಆತ್ಮ,
ಸಮಸ್ತ ಭೂತಗಳ ಆದಿ, ಮಧ್ಯ ಮತ್ತು ಅಂತ್ಯ ಕೂಡಾ ನಾನೇ.
ಭಗವಾನ್ ಶ್ರೀ ಕೃಷ್ಣ ಹೇಳುತ್ತಾನೆ, “ಓ ಅರ್ಜುನ, ನಾನು ಸಮಸ್ತ ಜೀವಿಗಳ ಹೃದಯದಲ್ಲಿರುವ ಆತ್ಮ, ಸಕಲ ಜೀವಿಗಳ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಕಾರಣ ನಾನೇ, ಅಂದರೆ ಎಲ್ಲಾ ಜೀವಿಗಳು ನನ್ನಿಂದ ಸೃಷ್ಟಿಸಲ್ಪಡುತ್ತಾರೆ,ನನ್ನಿಂದ ಪೋಷಿಸಲ್ಪಡುತ್ತಾರೆ ಮತ್ತು ಅಂತಿಮವಾಗಿ ನನ್ನಲ್ಲೇ ಐಕ್ಯ ಹೊಂದುತ್ತಾರೆ.” ಇಲ್ಲಿ ಹೇಳಲಾಗಿರುವ ಹೃದಯವು ಭೌತಿಕ ಅಂಗವಲ್ಲ, ಆದರೆ ನಮ್ಮೊಳಗಿನ ದೈವಿಕ ತತ್ವವಾಗಿದೆ. ಕೃಷ್ಣನು ಅರ್ಜುನನ್ನು ‘ಗುಡಾಕೇಶ’ ಎಂದು ಕರೆಯುತ್ತಾನೆ, ಇದರರ್ಥ ‘ನಿದ್ರೆಯನ್ನು ಗೆದ್ದವನು’ ಎಂದು. ಇದು ಅಜ್ಞಾನದ ನಿದ್ರೆ. ಅರ್ಜುನನು ಅಜ್ಞಾನದಿಂದ ಮೇಲಕ್ಕೇರಿ ಭಗವಂತನ ಅಸ್ತಿತ್ವದ ಬಗೆಗಿನ ಜ್ಞಾನವನ್ನು ಹೊಂದಿದ್ದಾನೆ.
ಬಾಬಾ ಹೇಳುತ್ತಾರೆ: “ಭಗವಂತನು ಸಮಸ್ತ ಜೀವಿಗಳ ಅಂತರಾತ್ಮ. ಪಂಚಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶವು ಕೂಡಾ ಅವನ ರೂಪಗಳು. ಸ್ಥೂಲದಿಂದ ಸೂಕ್ಷ್ಮದವರೆಗಿನ ಪ್ರತಿಯೊಂದೂ ಅವನೇ ಆಗಿದ್ದಾನೆ. ಅವನಿಲ್ಲದ ವಸ್ತುವಿಲ್ಲ. ಅವನದಲ್ಲದ ಹೆಸರಿಲ್ಲ. ಅವನೇ ಎಲ್ಲರ ತಂದೆ ಮತ್ತು ತಾಯಿ. ಎಲ್ಲವೂ ಅವನಿಂದಲೇ ಉತ್ಪತ್ತಿಯಾಗುತ್ತದೆ, ಅವನ ಅಸ್ತಿತ್ವದಲ್ಲೇ ಇದೆ ಮತ್ತು ಅಂತಿಮವಾಗಿ ಅವನಲ್ಲೇ ಐಕ್ಯಗೊಳ್ಳುತ್ತದೆ.”
ಭಗವಂತನು ಆತ್ಮರೂಪದಲ್ಲಿರುವುದರಿಂದಲೇ ಕಣ್ಣುಗಳಿಗೆ ಕಾಣಲು, ಕಿವಿಗಳಿಗೆ ಕೇಳಲು, ಮೂಗಿಗೆ ಆಘ್ರಾಣಿಸಲು, ನಾಲಗೆಗೆ ರುಚಿ ನೋಡಲು ಮತ್ತು ಚರ್ಮಕ್ಕೆ ಸಂವೇದನೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಕೈಕಾಲುಗಳಿಗೆ ಚಲಿಸುವ ಶಕ್ತಿಯನ್ನು ನೀಡುವವನು ಅವನೇ. ಮಾತನಾಡಲು, ಅನುಭವಿಸಲು, ಆಲೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಶಕ್ತಿಯನ್ನು ನೀಡುವವನು ಅವನೇ. ಜೈವಿಕ ವ್ಯವಸ್ಥೆಗಳನ್ನು (ಉಸಿರಾಟ, ಪರಿಚಲನೆ, ಜೀರ್ಣಕ್ರಿಯೆ, ವಿಸರ್ಜನೆ ಮತ್ತು ನರಮಂಡಲದ ವ್ಯವಸ್ಥೆಗಳು) ಕಾರ್ಯನಿರ್ವಹಿಸುವಂತೆ ಮಾಡುವವನು ಅವನೇ.
ಭಗವಂತನ ನಿಜವಾದ ವಿಳಾಸ ಯಾವುದು?
ಬಾಬಾ ಹೇಳುತ್ತಾರೆ, “ಮನುಷ್ಯ ನಿರ್ಮಿಸಿದ ದೇವಸ್ಥಾನಗಳಲ್ಲಿ ಭಗವಂತನು ಇರುವುದಿಲ್ಲ, ಅದು ಅವನ ತಾತ್ಕಾಲಿಕ ವಿಳಾಸ ಅಷ್ಟೇ. ಭಗವಂತನು ತಾನೇ ನಿರ್ಮಿಸಿದ ದೇವಾಲಯದಲ್ಲಿ ವಾಸಿಸುತ್ತಾನೆ. ಅವನು ಎಲ್ಲಾ ಜೀವಿಗಳಲ್ಲಿ, ಜಗತ್ತಿನ ಎಲ್ಲಾ ವಸ್ತುಗಳಲ್ಲಿ, ಪಶು, ಪಕ್ಷಿ, ಗಿಡಮರಗಳಲ್ಲಿ ಹಾಗೂ ಪ್ರತಿಯೊಂದು ಜೀವಿಗಳಲ್ಲಿಯೂ ವಾಸಿಸುತ್ತಾನೆ.”
ಭಗವಂತನು ಸಕಲ ಜೀವಿಗಳಲ್ಲಿ ವಾಸಿಸುತ್ತಾನೆ ಎಂಬುದನ್ನು ಶಿರಡಿಯಲ್ಲಿ ವಾಸಿಸುತ್ತಿದ್ದ ಶ್ರೀಮತಿ ತರ್ಕಡ್ ಅವರು ತಮ್ಮ ಕಥೆಯಲ್ಲಿ ವಿವರಿಸುತ್ತಾರೆ.
ಒಂದು ದಿನ ಮಧ್ಯಾಹ್ನ ಅವರು ಊಟ ಬಡಿಸುತ್ತಿರುವಾಗ ನಾಯಿಯೊಂದು ಬಂದು ಹಸಿವಿನಿಂದ ಕುಂಯ್ಗುಡಲಾರಂಭಿಸಿತು, ಶ್ರೀಮತಿ ತರ್ಕಡ್ ಅವರು ಎದ್ದು ಬಂದು ನಾಯಿಗೆ ಚಪಾತಿಯೊಂದನ್ನು ಹಾಕಿದರು, ನಾಯಿಯು ಅದನ್ನು ಖುಷಿಯಿಂದ ತಿಂದು ಹೊರಟುಹೋಯಿತು.
ಮಧ್ಯಾಹ್ನ ಅವರು ದ್ವಾರಕಾಮಾಯಿಗೆ ಹೋಗಿ ತುಸು ದೂರದಲ್ಲಿ ಕುಳಿತ್ತಿದ್ದಾಗ, ಬಾಬಾ ಅವರು,“ತಾಯಿ, ನೀನು ನನಗೆ ರುಚಿಕರವಾದ ಊಟವನ್ನು ನೀಡಿದ್ದೀಯೆ. ಸರ್ವಜೀವವಾಸಿಯಾದ ನನಗೆ ತೃಪ್ತಿಯಾಗಿದೆ. ಯಾವಾಗಲೂ ಇದೇ ರೀತಿಯಾಗಿ ನಡೆದುಕೊ, ಇದು ನಿನಗೆ ಒಳ್ಳೆಯದನ್ನು ಮಾಡುತ್ತದೆ. ನನ್ನ ಮೇಲೆ ಯಾವಾಗಲೂ ಇದೇ ರೀತಿ ಕರುಣೆಯನ್ನು ತೋರು. ಮೊದಲು ಹಸಿದವರಿಗೆ ಊಟ ಹಾಕು, ನಂತರ ನೀನು ಊಟ ಮಾಡು” ಎಂದರು.
ಬಾಬಾ ಏನು ಹೇಳುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಲಿಲ್ಲ. ಆಗ ಬಾಬಾ ಅವರು “ನೀನು ಆಹಾರ ಕೊಟ್ಟ ನಾಯಿಯಲ್ಲಿ ಇರುವವನು ನಾನೇ, ಅದೇ ರೀತಿಯಾಗಿ ನಾನು ಸಕಲ ಜೀವಿಗಳಲ್ಲಿಯೂ ವಾಸಿಸುತ್ತಿದ್ದೇನೆ. ನಾನು ಅವುಗಳ ರೂಪದಲ್ಲಿ ಓಡಾಡುತ್ತಿದ್ದೇನೆ. ಎಲ್ಲಾ ಜೀವಿಗಳಲ್ಲಿ ನನ್ನನ್ನು ನೋಡುವವನು ನನಗೆ ಪ್ರೀತಿಪಾತ್ರನು, ಆದ್ದರಿಂದ ದ್ವಂದ್ವ ಪ್ರಜ್ಞೆಯನ್ನು ತ್ಯಜಿಸಿ ಇಂದು ನೀನು ಮಾಡಿದಂತೆ ನನ್ನ ಸೇವೆ ಮಾಡು” ಎಂದು ಹೇಳುತ್ತಾರೆ.