ಅಳಗಿ
ಕ್ರಿ.ಶ ೯೧೫ರಿಂದ ೧೦೮೪ರ ವರೆಗೆ ರಾಜ್ಯವಾಳಿದ ೧ನೇ ರಾಜರಾಜನು ಒಬ್ಬ ಶಕ್ತಿಶಾಲಿ ಚಕ್ರವರ್ತಿಯಾಗಿದ್ದನು. ಪೂರ್ಣ ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳು ಅವನ ಪ್ರಭುತ್ವಕ್ಕೆ ಒಳಪಟ್ಟಿದ್ದವು. ಅವನು ಒಂದು ದೊಡ್ಡ ನೌಕಾಪಡೆಯನ್ನು ಹೊಂದಿದ್ದು, ಪೂರ್ಣ ಈಗಿನ ಮಲೇಶಿಯ, ಇಂಡೋನೇಶಿಯ ಮತ್ತು ಬರ್ಮಾದ ಕೆಲವು ಭಾಗಗಳು ಅವನ ಆಳ್ವಿಕೆಗೆ ಒಳಪಟ್ಟಿದ್ದವು. ಅಂತಹ ಉನ್ನತವಾದ ಅಧಿಕಾರ ಮತ್ತು ವೈಭವಗಳಿದ್ದರೂ, ಅವನು ಭಗವಂತನಿಗೆ ವಿನಮ್ರನಾಗಿದ್ದನು.
೧೦೦೩ರಲ್ಲಿ ನಿರ್ಮಾಣ ಆರಂಭವಾಗಿ, ೧೦೦೯ರಲ್ಲಿ ಪೂರ್ಣಗೊಂಡು ಪವಿತ್ರೀಕರಿಸಲ್ಪಟ್ಟ ಒಂದು ದೇವಾಲಯಕ್ಕೆ ಸಂಬಂಧಪಟ್ಟಂತೆ ಒಂದು ಕುತೂಹಲಕರ ಕಥೆಯಿದೆ. ಅದು ಇಂದಿಗೂ ಚೋಳ ರಾಜರ ಪರಾಕ್ರಮದೊಂದಿಗೆ. ದೈವಭಕ್ತಿಗೂ ಸ್ಮಾರಕವಾಗಿ ನಿಂತಿದೆ. ಈಗಲೂ ದಕ್ಷಿಣ ಭಾರತಕ್ಕೆ ಭೇಟಿ ನೀಡುವ ಭಾರತೀಯ ಮತ್ತು ವಿದೇಶೀ ಪ್ರವಾಸಿಗರಿಗೆ ಆಕರ್ಷಣೆಯ ಮೂಲವಾಗಿದೆ. ಅಳಗಿ (ಸುಂದರ ಕನ್ಯೆ ಎಂದು ಅರ್ಥ) ಯು ಆ ನಗರದ ಒಬ್ಬಳು ವೃದ್ಧೆಯಾಗಿದ್ದು, ಧರ್ಮನಿಷ್ಠಳಾದ, ಸೌಮ್ಯಸ್ವಭಾವದ ವಿನಮ್ರ ಭಕ್ತಳಾಗಿದ್ದಳು. ಆದರೆ ಅವಳು ಭಗವಂತನಿಂದ ಯಾವುದೇ ನೆರವನ್ನು ಪಡೆಯಲು ನಿರೀಕ್ಷಿಸುತ್ತಿರಲಿಲ್ಲ. ಅಂತಹ ಯಾವುದೇ ಅನುಗ್ರಹಗಳ ಬಗ್ಗೆ ಆಕಾಂಕ್ಷೆ ಪಡಲು ತಾನು ತೀರಾ ಕಡಿಮೆ ಮಟ್ಟದವಳು ಎಂದು ಅವಳು ಭಾವಿಸಿದ್ದಳು. ಅವಳು ತನ್ನ ಸಹವರ್ತಿಗಳೊಡನೆ ಪ್ರಾಮಾಣಿಕವಾದ ಮತ್ತು ವಾತ್ಸಲ್ಯಪೂರ್ಣವಾದ ಪ್ರೇಮವನ್ನು ಹೊಂದಿದ್ದಳು. ಎಲ್ಲ ಮಾನವರನ್ನೂ ಅವಳು ಭೂಮಿಯ ಮೇಲಿನ ದೇವರ ಸ್ವರೂಪವೆಂದು ಭಾವಿಸುತ್ತಿದ್ದಳು ಮತ್ತು ಅದರಿಂದಾಗಿ, ಮಾನವಸೇವೆಗೆ ಅದರಲ್ಲೂ ದೈವಭಕ್ತರಿಗೆ ಸೇವೆ ಸಲ್ಲಿಸುವ ಒಂದು ಚಿಕ್ಕ ಅವಕಾಶ ದೊರೆತರೂ, ಅದನ್ನು ನೆರವೇರಿಸಲು ಅವಳು ಹಿಂಜರಿಯುತ್ತಿರಲಿಲ್ಲ.
ರಾಜನು ಭಗವಂತನಿಗೆ ಒಂದು ದೊಡ್ಡ ದೇವಾಲಯವನ್ನು ಕಟ್ಟಿಸುತ್ತಿರುವನೆಂಬುದು ಅವಳಿಗೆ ತಿಳಿದಿತ್ತು. ಪ್ರತಿದಿನ ಅವಳು ದೇವಾಲಯ ನಿರ್ಮಾಣ ಸ್ಥಳಕ್ಕೆ ಹೋಗಿ, ನಿರ್ಮಾಣದ ಕೆಲಸಕ್ಕೆ ನೇಮಿಸಲ್ಪಟ್ಟ ಶಿಲ್ಪಿಗಳನ್ನು, ಗಾರೆ ಕೆಲಸದವರನ್ನು, ಮರದ ಕೆಲಸದವರನ್ನು ಮತ್ತು ನಿರ್ಮಾಣ ತಜ್ಞರನ್ನು ಗಮನಿಸುತ್ತಿದ್ದಳು. ಅವಳು ಅವರ ಸೇವೆಯನ್ನು ಕಂಡು ಅಸೂಯೆಪಡುತ್ತಿದ್ದಳು ಮತ್ತು ತಾನೂ ಸಹ ಅವರ ಕೆಲಸಕ್ಕೆ ಹೇಗಾದರೂ ಉಪಯುಕ್ತಳಾಗಬೇಕೆಂದು ಬಯಸುತ್ತಿದ್ದಳು. ಆದರೆ ಅವಳ ಇಳಿವಯಸ್ಸಿನಿಂದಾಗಿ, ಅವರಿಗೆ ಅವಳನ್ನು ನೇಮಿಸಿಕೊಳ್ಳಲು ಆಗುತ್ತಿರಲಿಲ್ಲ. ಅವಳ ಧರ್ಮನಿಷ್ಠವಾದ ಮನಸ್ಸು, ಆ ಕೆಲಸದಲ್ಲಿ ಹೇಗಾದರೂ ಸಹಾಯ ಮಾಡಬಹುದಾದ ಮಾರ್ಗವನ್ನು ಹುಡುಕುತ್ತಿತ್ತು. ಸಹಜೀವಿಗಳೊಡನೆ ಅವಳಿಗಿದ್ದ ಪ್ರೇಮವು ಅವಳಿಗೆ ಒಂದು ಮಾರ್ಗವನ್ನು ತೋರಿಸಿತು.
ಬೆಳಗಿನ ತಂಪು ಹೊತ್ತಿನಲ್ಲಿ, ಮಧ್ಯಾಹ್ನದ ಸುಡು ಬಿಸಿಲಿನ ಹೊತ್ತಿನಲ್ಲಿ ಮತ್ತು ತಂಪುಗಾಳಿಯ ಸಂಜೆಯ ಹೊತ್ತಿನಲ್ಲಿ, ಹೀಗೆ ಎಲ್ಲ ಸಮಯದಲ್ಲಿಯೂ ಅವಳು ನಿರ್ಮಾಣದ ಕೆಲಸ ನಡೆಯುವಲ್ಲಿಗೆ ಭೇಟಿ ನೀಡುತ್ತಿದ್ದಳು. ಮಧ್ಯಾಹ್ನದ ಬಿಸಿಲಿನ ಹೊತ್ತಿನಲ್ಲಿ ಕೆಲಸ ಗಾರರು ಬಾಯಾರಿಕೆಯಿಂದ ಬಳಲುವುದನ್ನು ಅವಳು ಗಮನಿಸಿದಳು. ಆ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಅವಳು ಯೋಚಿಸಿದಳು. ಕೆಲವು ಕೊಡಗಳಷ್ಟು ಮಜ್ಜಿಗೆಯನ್ನು ತೆಗೆದುಕೊಂಡು, ಅದಕ್ಕೆ ಶುಂಟಿಯ ಖಾರ ಸೇರಿಸಿ, ಸಾಸಿವೆ, ಕರಿಬೇವು ಇತ್ಯಾದಿಗಳ ಒಗ್ಗರಣೆ ಹಾಕಿ, ಕೆಲಸ ನಡೆಯುವ ಸ್ಥಳಕ್ಕೆ ಹೋಗಿ ಪ್ರತಿಯೊಬ್ಬ ಕೆಲಸಗಾರನಿಗೂ ತಂಪಾದ ಮಜ್ಜಿಗೆಯನ್ನು ನೀಡಿದಳು. ಇದು ಅವರಿಗೆ ಅಪೇಕ್ಷಣೀಯವಾಗಿತ್ತು. ಅವಳು ಆಲೋಚಿಸಿ ಮಾಡಿದ ಸೇವೆಗೆ ಅವರು ಕೃತಜ್ಞರಾಗಿದ್ದರು. ತಂಪು ಪಾನೀಯವು ಅವರಿಗೆ ಹೊಸ ಚೈತನ್ಯವನ್ನು ನೀಡಿದ್ದರಿಂದ, ದಿನದ ಉಳಿದ ಸಮಯದಲ್ಲಿ ಆಯಾಸವಿಲ್ಲದೆ ಕೆಲಸವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಯಿತು.
ಈ ಸೇವೆಯನ್ನು ಅವಳು ಬಹಳ ಕಾಲದವರೆಗೆ ಮಾಡುತ್ತಿದ್ದಳು. ಅಂತಿಮವಾಗಿ, ನಿರ್ಮಾಣ ಕಾರ್ಯವು ಮುಕ್ತಾಯದ ಹಂತಕ್ಕೆ ತಲುಪಿತು. ಪ್ರಧಾನ ದೇಗುಲದ ೨೧೬ ಅಡಿ ಎತ್ತರದ ಭವ್ಯವಾದ ಗೋಪುರ ವಿಮಾನದ ನಿರ್ಮಾಣ ಮುಗಿಯುವುದರಲ್ಲಿತ್ತು. ಆಗ ಅವಳಿಗೆ ಒಂದು ಆಲೋಚನೆ ಬಂತು.
ಅವಳು, “ಮಿತ್ರರೇ, ನಿಮ್ಮಲ್ಲಿ ನನ್ನ ಒಂದು ಚಿಕ್ಕ ಕೋರಿಕೆ ಇದೆ. ಈ ಮುದುಕಿಯ ಕೋರಿಕೆಯನ್ನು ನೀವು ದಯಮಾಡಿ ಒಪ್ಪಿಕೊಳ್ಳುವಿರಾ?” ಎಂದು ಕೆಲಸಗಾರರನ್ನು ಕೇಳಿದಳು. ಅನೇಕ ವರ್ಷಗಳಿಂದ ಅವರ ಬಗ್ಗೆ ಅವಳು ತೋರಿಸುತ್ತಿದ್ದ ಕನಿಕರಕ್ಕೆ ಶಿಲ್ಪಿಗಳು, ಮೇಸ್ತ್ರಿಗಳು ಎಲ್ಲರೂ ಕೃತಜ್ಞರಾಗಿದ್ದರು. ಆದ್ದರಿಂದ ಅವರು ಸಹಜವಾಗಿ ಅವಳ ಯಾವುದೇ ಕೋರಿಕೆಯನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುವವರಾಗಿದ್ದರು. ಆದ್ದರಿಂದ ಅವರ ಮುಖ್ಯಸ್ಥನು, “ಅಜ್ಜೀ, ನೀವು ನಿಮ್ಮ ಆಸೆಯೇನೆಂದು ಹೇಳಬೇಕು ಅಷ್ಟೇ. ನಾವೆಲ್ಲರೂ ಅದನ್ನು ಸಂತೋಷದಿಂದ ನಡೆಸಿಕೊಡುತ್ತೇವೆ” ಎಂದು ಹೇಳಿದನು.
ಅವಳು, “ನಮ್ಮ ಮನೆ ಅಂಗಳದಲ್ಲಿ ಒಂದು ದೊಡ್ಡ ಗ್ರಾನೈಟ್ ಕಲ್ಲು ಇದೆ. ನನಗೆ ಅದರಿಂದ ಏನೂ ಉಪಯೋಗವಿಲ್ಲ. ದೇಗುಲದ ಕೇಂದ್ರ ಭಾಗದ ಗೋಪುರಕ್ಕೆ ಆಧಾರಶಿಲೆಯಾಗಿ ಅದನ್ನು ಬಳಸಬಹುದೆಂದು ನನಗನ್ನಿಸುತ್ತದೆ. ನೀವು ಪರಿಶೀಲಿಸಿ. ನನಗೂ ಭಗವಂತನ ಸೇವೆ ಮಾಡಬೇಕೆಂಬ ಆಸೆ. ನೀವು ಅದನ್ನು ಇಲ್ಲಿಗೆ ತಂದು, ಅದನ್ನು ಆಧಾರಶಿಲೆಯಾಗಿ ಬಳಸಬಲ್ಲಿರಾ? ಆಗ ನನಗೆ ತೃಪ್ತಿಯಾಗುತ್ತದೆ.” ಎಂದು ಹೇಳಿದಳು.
“ಈ ದಿನವೇ ನಾವು ಅದನ್ನು ಮಾಡುತ್ತೇವೆ” ಎಂದು ಅವನು ಹೇಳಿದನು. ಕೆಲಸಗಾರರ ಒಂದು ತಂಡದೊಂದಿಗೆ ಅವನು ಅವಳ ಮನೆಗೆ ಹೋಗಿ, ಆ ಕಲ್ಲನ್ನು ಪರೀಕ್ಷಿಸಿದನು. ಅದು ತಮ್ಮ ಉದ್ದೇಶಕ್ಕೆ ಸಾಕಷ್ಟು ಚೆನ್ನಾಗಿದೆ ಎಂಬುದನ್ನು ಗಮನಿಸಿ, ಅದನ್ನು ದೇವಾಲಯಕ್ಕೆ ತಂದನು. ಉಳಿಯಿಂದ ಕೆತ್ತಿ ಅದಕ್ಕೆ ರೂಪಕೊಟ್ಟು, ಸರಿಯಾದ ಸಮಯದಲ್ಲಿ ಅದನ್ನು ಗೋಪುರದಲ್ಲಿ ಸ್ಥಾಪಿಸಿದನು.
ನಿರ್ಮಾಣ ಕಾರ್ಯವು ಪೂರ್ತಿಯಾಗಿ ಮುಗಿದು, ರಾಜ ಪುರೋಹಿತರು ದೇವಾಲಯದ ಪ್ರತಿಷ್ಠೆಗೆ ಒಂದು ಶುಭದಿನವನ್ನು ನಿಗದಿ ಮಾಡಿದರು. ಹಿಂದಿನ ದಿನ ರಾಜನು ಎಂದಿನಂತೆ ಕೆಲಸಗಳ ಪರಿಶೀಲನೆ ಮಾಡಿದನು. ಶಿವನ ಅಂತಹ ಭವ್ಯವಾದ ದೇವಾಲಯದ ನಿರ್ಮಾಣ ಅಂತೂ ಮುಗಿದಿರುವುದಕ್ಕೆ ಅವನಿಗೆ ಸಂತೋಷವಾಗಿತ್ತು. ಅಂತಹ ಮಹತ್ಕಾರ್ಯಕ್ಕೆ ಭಗವಂತನು ತನ್ನನ್ನು ಸಾಧನವನ್ನಾಗಿ ಆಯ್ಕೆಮಾಡಿ ಕೊಂಡಿರುವುದಕ್ಕೆ ಅವನಿಗೆ ಹೆಮ್ಮೆಯಾಗಿತ್ತು. ಆಗಲೇ ಆ ದೇವಾಲಯವು ಭವ್ಯವಾದ ದೇವಾಲಯವೆಂದು ಹೆಸರು ಪಡೆದಿತ್ತು. ಎಲ್ಲವೂ ಕ್ರಮವಾಗಿರುವುದನ್ನು ಗಮನಿಸಿ, ಮಂತ್ರಿಗಳಿಗೆ ಮರುದಿನದ ಪ್ರತಿಷ್ಠಾ ಸಮಾರಂಭದ ಬಗ್ಗೆ ಅಗತ್ಯವಾದ ಕೊನೆಯ ಕ್ಷಣದ ಸೂಚನೆಗಳನ್ನು ನೀಡಿ, ಅವನು ಅರಮನೆಗೆ ಹಿಂದಿರುಗಿದನು. ರಾತ್ರಿ ಅವನಿಗೆ ಕನಸಿನಲ್ಲಿ ಪ್ರಭು ಬೃಹದೀಶ್ವರನ ದರ್ಶನವಾಯಿತು.
ಭಗವಂತನು, “ನನ್ನ ರಾಜನೇ, ಆ ಬೃಹತ್ ದೇವಾಲಯದಲ್ಲಿ ವೃದ್ಧ ಮಹಿಳೆ ಅಳಗಿಯು ನಮಗೆ ಒದಗಿಸಿರುವ ಆಶ್ರಯದಲ್ಲಿ ನೆಲೆಸಲು ನಮಗೆ ಹರ್ಷವಾಗುತ್ತದೆ” ಎಂದು ಹೇಳಿದನು.
ದೊರೆ ರಾಜರಾಜನು ಎಚ್ಚರಗೊಂಡನು. ಅವನಿಗೆ ತನ್ನ ಕಿವಿಗಳನ್ನು ನಂಬುವುದು ಕಷ್ಟವಾಯಿತು. ‘ಭಗವಂತನು ಮುದುಕಿಯ ಆಶ್ರಯದಲ್ಲಿ ನೆಲೆಸುವುದೇ! ಸಾಧ್ಯವೇ ಇಲ್ಲ! ಈ ಬೃಹತ್ ದೇವಾಲಯವನ್ನು ತಾನು ಕಟ್ಟಿಸಿದ್ದಲ್ಲವೇ? ದೇವಾಲಯದ ಪರಿಕಲ್ಪನೆ, ಸಂಪೂರ್ಣ ಯೋಜನೆ, ಮಾನವ ಮತ್ತು ದ್ರವ್ಯ ರೂಪದ ಎಲ್ಲ ಸಂಪನ್ಮೂಲಗಳನ್ನು ಒಗ್ಗೂಡಿಸಿದ್ದು, ನಿರ್ವಹಣೆ ಮತ್ತು ಪೂರ್ಣಗೊಳಿಸಿದ್ದು, ಇದೆಲ್ಲವೂ ತನ್ನದೇ ಆಗಿದ್ದು, ಬೇರೆ ಯಾರದೂ ಅಲ್ಲ. ಅದರಲ್ಲಿ ಯಾವ ವೃದ್ಧ ಮಹಿಳೆಯ ಪಾತ್ರವೂ ಇಲ್ಲ. ಆದರೆ ಭಗವಂತನೇ ಸ್ವಯಂ ಹಾಗೆ ಹೇಳಿದ್ದಾನೆ! ಆದ್ದರಿಂದ ಅದು ನಿಜವಾಗಿರಲೇಬೇಕು’ ಎಂದು ಅವನು ಯೋಚಿಸಿದನು.
ಪೂರ್ಣ ವಿನಮ್ರತೆಯಿಂದ ಅವನು ದೇವಾಲಯಕ್ಕೆ ಹೋಗಿ, ಅದರ ನಿರ್ಮಾಣದಲ್ಲಿ ಸ್ವಲ್ಪವಾದರೂ ಪಾತ್ರವಹಿಸಿರುವ ಯಾರಾದರೂ ಮುದುಕಿ ಇರುವಳೇ ಎಂದು ಹುಡುಕಲು ಪ್ರಯತ್ನಿಸಿದನು. ಆದರೆ ಅಲ್ಲಿ ಅಂತಹ ಯಾವ ಮಹಿಳೆಯೂ ಇರುವಂತೆ ಕಾಣಿಸಲಿಲ್ಲ. ಅವನು ಆ ವೃದ್ಧ ಮಹಿಳೆ ಯಾರೇ ಆಗಿದ್ದರೂ, ಅವಳನ್ನು ಹುಡುಕಬೇಕೆಂದು ತನ್ನ ಮಂತ್ರಿಗಳಿಗೆ ಆದೇಶ ನೀಡಿದನು. ಸುದೀರ್ಘವಾದ ಶೋಧನೆಯ ನಂತರ ಅವರು ಅವಳ ವಿಷಯವನ್ನು ತಿಳಿದುಕೊಂಡರು. ನಂತರ ಅವರು ರಾಜನಿಗೆ, ‘ಅಳಗಿ ಎಂಬ ವೃದ್ಧ ಮಹಿಳೆ ನಿರ್ಮಾಣದ ಕೆಲಸ ನಡೆಯುತ್ತಿದ್ದ ಅಷ್ಟೂ ವರ್ಷ, ಬಿಸಿಲಿನ ಹೊತ್ತಿನಲ್ಲಿ ಕೆಲಸಗಾರರಿದ್ದಲ್ಲಿಗೆ ಹೋಗಿ, ಅವರಿಗೆ ತಂಪಾದ ಮಜ್ಜಿಗೆಯನ್ನು ಹಂಚುತ್ತಿದ್ದಳು’ ಎಂಬ ಮಾಹಿತಿಯನ್ನು ತಿಳಿಸಿದರು. ಆ ಕ್ಷಣದಲ್ಲಿ ರಾಜನಿಗೆ ಅವಳ ಈ ಚಿಕ್ಕ ಸೇವೆಯು, ಭಗವಂತನು ‘ತನಗೆ ಅವಳು ಆಶ್ರಯವನ್ನು ಒದಗಿಸಿದ್ದಾಳೆ!’ ಎಂದು ಹೇಳು ವಷ್ಟು ಸಂತೋಷವನ್ನುಂಟುಮಾಡಿದೆಯೆಂಬ ಅರಿವಾಯಿತು. ಅವನು ಚಿಕ್ಕ ಗುಡಿಸಿಲಿನಲ್ಲಿದ್ದ ಅವಳನ್ನು ಹುಡುಕಿ, ಕೈಮುಗಿದುಕೊಂಡು ದೇವಾಲಯಕ್ಕೆ ಕರೆತಂದು, ಜನರ ಎದುರು ಅವಳನ್ನು ಸನ್ಮಾನಿಸಿದನು. ನಂತರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಂದುವರಿದನು.
ಅಲಗಿಯು ಎಂದಿನಂತೆ ವಿನೀತಳಾಗಿ, ತನ್ನ ವಿನಮ್ರವಾದ ಅಷ್ಟೊಂದು ಪ್ರಮುಖವಲ್ಲದ ಸೇವೆಯನ್ನೂ ಗುರುತಿಸಿದ್ದಕ್ಕಾಗಿ ಭಗವಂತನ ಮುಂದೆ ತಲೆ ಬಾಗಿದಳು. ಅವಳು ತನ್ನ ಉಳಿದ ಜೀವಿತಾವಧಿಯನ್ನು ಭಗವಂತನ ಮತ್ತು ಭಗವದ್ಭಕ್ತರ ಸೇವೆಯಲ್ಲೇ ಕಳೆದಳು. ಅವಳ ಚಿಕ್ಕ ಸೇವೆಯನ್ನು ಭಗವಂತನು ಹೇಗೆ ಆಪ್ತವಾಗಿ ಪರಿಗಣಿಸಿದ್ದಾನೆ ಎಂಬ ಅರಿವಾದಾಗ ಜನರು ಆಶ್ಚರ್ಯಚಕಿತರಾದರು. ಅವರು ಅವಳ ಭಕ್ತಿಯನ್ನು ಜನಪದಗಳು ಮತ್ತು ದಂತಕತೆಗಳ ಮೂಲಕ ಕೊಂಡಾಡಿದ್ದಾರೆ. ಅವಳು ವಾಸಿಸುತ್ತಿದ್ದ ಸ್ಥಳವು ‘ಅಳಗಿ ಗಾರ್ಡನ್ಸ್’ ಎಂದು ಮತ್ತು ಅವಳ ಗುಡಿಸಿಲಿನ ಮುಂದೆ ಇದ್ದ ಚಿಕ್ಕ ಕೊಳವು ‘ಅಳಗಿ ಟ್ಯಾಂಕ್’ ಎಂದೂ ಈಗ ಪ್ರಸಿದ್ಧವಾಗಿವೆ. ೧೧ನೇ ಶತಮಾನದಲ್ಲಿ ಅವಳ ಗುಡಿಸಿಲನ್ನು ಹೊಂದಿದ್ದ ನಿವೇಶನವು, ಈಗ ೨೦ನೇ ಶತಮಾನದಲ್ಲಿ ಸಿಟಿ ಮುನ್ಸಿಪಲ್ ಆಫೀಸ್ನ ಕಟ್ಟಡಗಳನ್ನು ಹೊಂದಿದೆ.
ಪ್ರಶ್ನೆಗಳು:
- ಅಳಗಿ ಯಾರು?
- ದೇವಾಲಯದ ನಿರ್ಮಾಣದಲ್ಲಿ ಅವಳು ಹೇಗೆ ಸಹಾಯ ಮಾಡಿದಳು ಮತ್ತು ಹೇಗೆ ಉಪಯುಕ್ತಳೆನಿಸಿದಳು?
- ಅವಳ ಒಂದೇ ಒಂದು ಆಸೆ ಯಾವುದಾಗಿತ್ತು?
- ರಾಜನ ಕನಸಿನಲ್ಲಿ ಅವನಿಗೆ ಭಗವಂತನು ಏನು ಹೇಳಿದನು?
- ಅಳಗಿಯ ಕತೆಯಿಂದ ೧ನೇ ರಾಜರಾಜನು ಯಾವ ಪಾಠವನ್ನು ಕಲಿತನು?
[ಆಕರ: ಸ್ಟೋರೀಸ್ ಫಾರ್ ಚಿಲ್ಡ್ರನ್ – II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]