ಲೂಯಿಸ್ ಪಾಶ್ಚರ್
ಕುಲುಮೆಯ ಮುಂದೆ ನಿಂತಿದ್ದ ಚಿಕ್ಕ ಬಾಲಕನು ಒಳಗೆ ನಡೆದಿದ್ದ ಭಯಾನಕ ದೃಶ್ಯವನ್ನು ಬೆರಗು ಮತ್ತು ಕನಿಕರದಿಂದ ಗಮನಿಸುತ್ತಿದ್ದನು. ಹುಚ್ಚು ನಾಯಿ ಕಚ್ಚಿದ್ದ ಒಬ್ಬ ಮನುಷ್ಯನನ್ನು ಕಮ್ಮಾರನ ಹತ್ತಿರ ಕತರೆತರಲಾಗಿತ್ತು. ಕಮ್ಮಾರನು ಒಂದು ಕಬ್ಬಿಣದ ಸರಳನ್ನು ಕೆಂಪಾಗುವವರೆಗೂ ಕಾಯಿಸಿದನು. ಅವನ ಸಹಾಯಕರು ಆ ವ್ಯಕ್ತಿಯನ್ನು ಕೆಳಕ್ಕೆ ಅದುಮಿ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ, ಹುಚ್ಚುನಾಯಿ ಕಡಿದು ಉಂಟು ಮಾಡಿದ್ದ ಗಾಯದ ಒಳಕ್ಕೆ ಅದನ್ನು ತೂರಿಸಿದನು. ಆ ಮನುಷ್ಯನು ನರಳಲೂ ಸಾಧ್ಯವಾಗದಷ್ಟು ನಿತ್ರಾಣನಾಗುವವರೆಗೂ ನೋವಿನಿಂದ ಕಿರಿಚುತ್ತಿದ್ದನು.
ಅದು ೧೮೩೧ನೇ ಇಸವಿಯಾಗಿತ್ತು ಮತ್ತು ಆ ಬಾಲಕನು ಜೀನ್ ಜೋಸೆಫ್ ಪಾಶ್ಚರ್ ಎಂಬ ಚರ್ಮಕಾರನ ಮಗನಾಗಿದ್ದನು. ಅವನು ಕುಲುಮೆಯಲ್ಲಿ ನೋಡಿದ ದೃಶ್ಯವು, ಮುಂದೆ ರೇಬಿಸ್ ಎಂಬ ಮಾರಕ ರೋಗವಾಗಿ ಪರಣಮಿಸುತ್ತಿದ್ದ ಹುಚ್ಚುನಾಯಿ ಕಡಿತಕ್ಕೆ ಆಗ ಅದೊಂದೇ ಚಿಕಿತ್ಸೆಯಾಗಿತ್ತು. ಅರ್ಧ ಶತಮಾನದ ನಂತರ ಈ ಬಾಲಕನು ಆ ಮಾರಕ ರೋಗಕ್ಕೆ ಪರಿಹಾರವನ್ನು ಕಂಡುಹಿಡಿದು ದೊಡ್ಡ ವಿಜ್ಞಾನಿಯಾದನು.
ರೆಬೀಸ್, ಇದು ನಾಯಿಗಳು, ತೋಳಗಳು, ನರಿಗಳು ಮತ್ತು ಬಾವಲಿಗಳಿಂದ ಸಹ ಅದರಲ್ಲಿಯೂ ನಾಯಿಗಳಿಂದ ಹೆಚ್ಚಾಗಿ ಹರಡುವ ರೋಗವಾಗಿದೆ. ರೋಗಗ್ರಸ್ತ ನಾಯಿಗಳಿಗೆ ಹುಚ್ಚು ಹಿಡಿಯುತ್ತದೆ. ಅವು ತಮ್ಮ ವ್ಯಾಪ್ತಿಯಲ್ಲಿ ಓಡುತ್ತಿರುತ್ತವೆ ಮತ್ತು ಪ್ರತಿಯೊಬ್ಬರನ್ನೂ ಕಚ್ಚುತ್ತವೆ. ರೋಗವು ನಾಯಿಗಳಿಂದ ಇತರ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಹರಡುತ್ತದೆ. ಚಿಕಿತ್ಸೆ ನಡೆಸದೆ ಬಿಟ್ಟರೆ ಅವೆಲ್ಲವೂ ಬಹಳ ಭಯಾನಕವಾಗಿ ಸಾಯುತ್ತವೆ.
ಈ ರೋಗಕ್ಕೆ ಕಾರಣ ಮತ್ತು ಗುಣ ಪಡಿಸುವ ವಿಧಾನವನ್ನು ಪಾಶ್ಚರ್ ಕಂಡುಹಿಡಿಯುವ ಮೊದಲು, ಚಿಕಿತ್ಸೆಯು ಕಾವು ಕೊಡುವುದು ಅಥವಾ ಗಾಯವನ್ನು ಕೆಂಪಗೆ ಕಾದ ಕಬ್ಬಿಣದಿಂದ ಸುಡುವುದನ್ನು ಒಳಗೊಂಡಿತ್ತು. ಸುಡುವುದರಿಂದ ರೋಗವು ಎಂದಿಗೂ ಗುಣವಾಗುತ್ತಿರಲಿಲ್ಲ, ಬದಲಾಗಿ ಅನುಭವಿಸುವವನ ನೋವನ್ನು ಹೆಚ್ಚು ಮಾಡುತ್ತಿತ್ತು.
ಲೂಯಿಸ್ ಪಾಶ್ಚರ್ನು ಫ್ರಾನ್ಸ್ನ ದೊಲೆ ಹಳ್ಳಿಯಲ್ಲಿ ೧೮೨೨ರಲ್ಲಿ ಜನಿಸಿದನು. ಬಾಲಕ ಲೂಯಿಸ್ನ ಬಗ್ಗೆ ವಿಶೇಷವೇನೂ ಇರಲಿಲ್ಲ. ಅವನನ್ನು ತಿಳಿದರ್ಯಾರೂ, ಅವನು ಒಂದು ದಿನ ಪ್ರಸಿದ್ಧನಾಗುತ್ತಾನೆ ಮತ್ತು ಜಗತ್ತಿನಾದ್ಯಂತ ಕೃತಜ್ಞತೆಯಿಂದ ಸ್ಮರಿಸಲ್ಪಡುತ್ತಾನೆ ಎಂದು ಭಾವಿಸಿರಲಿಲ್ಲ.
ಆದರೆ ಯುವಕನಾಗಿದ್ದಾಗ ಅವನು ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರದಲ್ಲಿ ತುಂಬಾ ಆಸಕ್ತಿಯನ್ನು ತಾಳಿದನು. ಅವನು ಈ ವಿಷಯಗಳಲ್ಲಿ ಸಮಗ್ರವಾದ ಜ್ಞಾನವನ್ನು ಪಡೆಯಲು ಸಮರ್ಥನಾದನು ಮತ್ತು ಪ್ರಸಿದ್ಧವಾದ ದ್ರಾಕ್ಷಿ ಬೆಳೆಯ ವಲಯವಾದ ಲಿಲೆ ನಗರದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ಅವನು ತನ್ನ ಕಾರ್ಯವನ್ನು ಪ್ರಾರಂಭಿಸಿದನು ಮತ್ತು ಅದು ಅವನನ್ನು ಅಂತಿಮವಾಗಿ ಮಾನವಕುಲಕ್ಕೆ ಅಷ್ಟೊಂದು ಪ್ರಯೋಜನಕಾರಿಯಾದ ಸಂಶೋಧನೆಗಳ ಕಡೆಗೆ ಮುನ್ನಡೆಸಿತು.
ದ್ರಾಕ್ಷಾರಸ, ಹಾಲು, ಮತ್ತು ಬೆಣ್ಣೆ ಇವು ಹುಳಿಯಾಗುವುದು ಸೂಕ್ಷ್ಮಜೀವಿ (ಜೆರ್ಮ್ಸ್ ಅಥವಾ ಮೈಕ್ರೋಬ್ಸ್) ಗಳ ಕಾರಣದಿಂದ ಎಂದು ಸಾಧಿಸಿದನು. ಈ ಸೂಕ್ಷ್ಮಜೀವಿಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ, ಆದರೆ ಸೂಕ್ಷ್ಮದರ್ಶಕದ ಮೂಲಕ ನೋಡಬಹುದು. ಕಾಯಿಸುವುದರಿಂದ ಈ ಸೂಕ್ಷ್ಮಜೀವಿಗಳನ್ನು ನಾಶಪಡಿಸಬಹುದೆಂದು ಅವನು ತೋರಿಸಿದನು. ಈ ವಿಧಾನವನ್ನು ಈಗಲೂ ಹಾಲನ್ನು ರಕ್ಷಿಸಿಡಲು ಬಳಸಲಾಗುತ್ತಿದೆ. ಈ ಶೋಧನೆಯು ಅವನಿಗೆ ‘ಮನುಷ್ಯರ, ಪ್ರಾಣಿಗಳ ಮತ್ತು ಸಸ್ಯಗಳ ಬಹುಪಾಲು ರೋಗಗಳು ಹಾನಿಕಾರಕ ಸೂಕ್ಷ್ಮಜೀವಿಗಳಿಂದ ಉಂಟಾಗುತ್ತವೆ’ ಎಂಬ ತೀರ್ಮಾನಕ್ಕೆ ಬರಲು ಕಾರಣವಾಯಿತು.
ಆ ಸಮಯದಲ್ಲಿ ಅನಾಹುತವು ಫ್ರಾನ್ಸ್ ನಲ್ಲಿ ರೇಷ್ಮೆ ಕೈಗಾರಿಕೆಗೆ ಆಘಾತವನ್ನುಂಟುಮಾಡಿತು. ರೇಷ್ಮೆ ಹುಳುಗಳು ಗೊತ್ತಿಲ್ಲದ ರೋಗದಿಂದ ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪಿದವು. ರೇಷ್ಮೆಯನ್ನು ತಯಾರಿಸುತ್ತಿದ್ದ ಕುಟುಂಬಗಳ ಬದುಕು ಭೀತಿಗೆ ಒಳಗಾಯಿತು. ಪಾಶ್ಚರನು ಸಮಸ್ಯೆಯನ್ನು ಅಧ್ಯಯನ ಮಾಡಿ, ಈ ರೋಗಕ್ಕೂ ಸಹ ಹಾನಿಕಾರಕ ಸೂಕ್ಷ್ಮಜೀವಿಗಳೇ ಕಾರಣ ಎಂಬುದನ್ನು ಕಂಡುಹಿಡಿದನು. ಬೆಳೆಗಾರರಿಗೆ ಅಂಟುಜಾಡ್ಯವನ್ನು ಹೇಗೆ ತಪ್ಪಿಸಬಹುದೆಂದು ಬೋಧಿಸಲು ಅವನು ಶಕ್ತನಾದನು.
ಅವನ ಮುಂದಿನ ಸಂಶೋಧನೆಯು, ರೇಬಿಸ್ ವಿರುದ್ಧದ ಯುದ್ಧದಲ್ಲಿ ಅಂತಿಮವಾಗಿ ಅವನನ್ನು ವಿಜಯಿಯಾಗುವಂತೆ ಮಾಡಿತು. ಅವನು ಕಾಲರಾ ಸೂಕ್ಷ್ಮಜೀವಿಗಳ ಕೃಷಿಮಾಡಿ, ಸರಣಿ ಪ್ರಯೋಗಗಳನ್ನು ನಡೆಸಿದನು. ಅವನು ಅವುಗಳನ್ನು ಆರೋಗ್ಯವಂತ ಕೋಳಿಮರಿಗಳ ದೇಹ ದೊಳಕ್ಕೆ ಚುಚ್ಚಿ ನುಗ್ಗಿಸಿದನು. ಅವು ರೋಗಗ್ರಸ್ಥವಾಗಿ ಸತ್ತು ಹೋದವು. ರೋಗಗಳಿಗೆ ಹಾನಿಕಾರಕ ಸೂಕ್ಷ್ಮಜೀವಿಗಳು ಕಾರಣ ಎಂಬ ಅವನ ಸಿದ್ಧಾಂತಕ್ಕೆ ಇದು ಇನ್ನೂ ಒಂದು ಪುರಾವೆಯಾಯಿತು.
ಈ ಫಲಿತಾಂಶಗಳಿಂದ ಉತ್ತೇಜಿತನಾದ ಅವನು ಮುಂದೆ ತನ್ನ ಗಮನವನ್ನು ರೇಬೀಸ್ ಕಡೆಗೆ ತಿರುಗಿಸಿದನು. ರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳು ಎಲ್ಲಿರುತ್ತವೆ ಎಂದು ಕಂಡುಹಿಡಿಯುವುದು ಅವನ ಮೊದಲ ಗುರಿಯಾಗಿತ್ತು. ಹುಚ್ಚು ನಾಯಿಗಳ ಕಡಿತವು ಮನುಷ್ಯನಲ್ಲಿ ರೋಗವನ್ನು ಉಂಟು ಮಾಡುತ್ತಿರುವುದರಿಂದ, ಅವುಗಳ ಜೊಲ್ಲಿನಲ್ಲಿರಬಹುದೆಂದು ಅವನು ಅನುಮಾನಿಸಿದನು.
ಇದನ್ನು ದೃಢಪಡಿಸಿಕೊಳ್ಳಲು ರೋಗಗ್ರಸ್ಥ ನಾಯಿಗಳಿಂದ ಅವನು ಜೊಲ್ಲನ್ನು ಸಂಗ್ರಹಿಸಬೇಕಾಗಿತ್ತು. ಇದು ಒಂದು ಅಪಾಯಕಾರಿ ಕೆಲಸವಾಗಿತ್ತು. ಬಲಿಷ್ಠರಾದ ಇಬ್ಬರು ವ್ಯಕ್ತಿಗಳು ಒಂದು ರೋಗಗ್ರಸ್ಥ ನಾಯಿಯನ್ನು ಕುಣಿಕೆಹಾಕಿ ಹಿಡಿದು, ಒದ್ದಾಡುವ ಅದನ್ನು ಒಂದು ಕಾಲುಮಣೆಯ ಮೇಲೆ ಮಲಗಿಸಿ, ಕೆಳಕ್ಕೆ ಒತ್ತಿ ಹಿಡಿಯುತ್ತಿದ್ದರು. ಆಗ ಪಾಶ್ಚರ್ನು ಒಂದು ಗಾಜಿನ ಕೊಳವೆಯನ್ನು ಅದರ ತುಟಿಗಳ ನಡುವೆ ತೂರಿಸಿ, ಜೊಲ್ಲಿನ ಸ್ವಲ್ಪ ಭಾಗವನ್ನು ಆಯ್ದು ಸಂಗ್ರಹಿಸುತ್ತಿದ್ದನು. ಅವರ ಶೌರ್ಯ ಮತ್ತು ಸಮರ್ಪಣಾ ಭಾವಗಳು ಅವರನ್ನು ಅಂತಹ ಅಪಾಯವನ್ನು ಎದುರಿಸುವಂತೆ ಮಾಡಿತ್ತು. ನಾಯಿಯ ಒಂದೇ ಒಂದು ಕಡಿತವು ಅವರಲ್ಲಿ ಯಾರೊಬ್ಬರಿಗೂ ಪ್ರಾಣಾಂತಿಕವಾಗುವ ಸಾಧ್ಯತೆ ಇತ್ತು.
ನಂತರ ಅವನು ಈ ಜೊಲ್ಲನ್ನು ಆರೋಗ್ಯವಂತ ನಾಯಿಗಳಿಗೆ ಚುಚ್ಚು ಮದ್ದಿನ ರೂಪದಲ್ಲಿ ನೀಡಿದನು. ಆದರೆ ಇಲ್ಲಿ ಅವನಿಗೆ ಒಂದು ಕಷ್ಟ ಎದುರಾಯಿತು. ಕೆಲವು ವೇಳೆ ರೋಗವು ಹೆಚ್ಚಾಗಲು ಅನೇಕ ತಿಂಗಳುಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಅಲ್ಲಿಯವರೆಗೆ ಬಾಧೆಗೆ ಒಳಗಾದ ಪ್ರಾಣಿಯು ಸಹಜವಾಗಿರುವಂತೆ ಕಾಣಿಸುತ್ತಿತ್ತು. ಹೀಗೆ ಆದಾಗಲೆಲ್ಲ ಚುಚ್ಚುಮದ್ದು ನಾಯಿಗಳಲ್ಲಿ ರೇಬೀಸನ್ನು ಉಂಟು ಮಾಡಿದೆಯೋ ಇಲ್ಲವೋ ತಿಳಿಯಲು ಹಲವು ತಿಂಗಳುಗಳವರೆಗೆ ಕಾಯಬೇಕಾಗುತ್ತಿತ್ತು.
ಜೊಲ್ಲನ್ನು ನೇರವಾಗಿ ನಾಯಿಯ ಮಿದುಳಿಗೇ ಚುಚ್ಚು ಮದ್ದಿನ ರೂಪದಲ್ಲಿ ನೀಡುವುದರ ಮೂಲಕ ಅವನು ಈ ಕಷ್ಟವನ್ನು ನಿವಾರಿಸಿದನು. ಏಕೆಂದರೆ ಪ್ರಾಣಿಯ ಮಿದುಳಿಗೆ ಸೂಕ್ಷ್ಮಜೀವಿಗಳು ಆಕ್ರಮಣ ಮಾಡಿರುತ್ತಿದ್ದವು. ಹೀಗೆ ಮಾಡುವುದರಿಂದ ಆರೋಗ್ಯವಂತ ನಾಯಿಗಳಲ್ಲಿ ರೋಗವನ್ನು ಎರಡು ವಾರಗಳಲ್ಲಿ ಉಂಟುಮಾಡುವುದರಲ್ಲಿ ಅವನು ಯಶಸ್ವಿಯಾದನು. ಮುಂದಿನ ಹಂತವು ದುರ್ಬಲವಾದ ರೇಬೀಸ್ ಸೂಕ್ಷ್ಮಜೀವಿಗಳನ್ನು ಆರೋಗ್ಯವಂತ ಪ್ರಾಣಿಗಳಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಿ, ಅವುಗಳನ್ನು ರೋಗದಿಂದ ರಕ್ಷಿಸಲು ಸಾಧ್ಯವೇ ಎಂದು ತಿಳಿಯುವುದು. ಈ ವಿಧಾನವು ಕಾಲರಾದ ಸಂದರ್ಭದಲ್ಲಿ ಯಶಸ್ವಿಯಾದರೆ, ಇಲ್ಲಿಯೂ ಸಹ ಅದು ಕೆಲಸ ಮಾಡಲೇಬೇಕು ಎಂಬುದು ಅವನ ಯೋಚನೆಯಾಗಿತ್ತು.
ನಂತರ ಅವನು ಸೂಕ್ಷ್ಮಜೀವಿಗಳನ್ನು ಹೊಂದಿರುವ ಜೊಲ್ಲನ್ನು ಒಂದು ಮೊಲದ ಮಿದುಳಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡುವುದರ ಮೂಲಕ ಅದರಲ್ಲಿ ರೋಗ ಪ್ರಾರಂಭವಾಗುವಂತೆ ಮಾಡಿದನು. ಆ ಮೊಲವು ಸತ್ತ ನಂತರ, ಅವನು ಅದರ ಮಿದುಳಿನ ಒಂದು ತುಣುಕನ್ನು ತೆಗೆದು, ಅದನ್ನು ಕ್ರಿಮಿನಾಶಕ ಕ್ರಿಯೆಗೆ ಒಳಪಡಿಸಿದ ಒಂದು ಶೀಸೆಯಲ್ಲಿ ಹದಿನಾಲ್ಕು ದಿನಗಳವರೆಗೆ ಇಟ್ಟನು. ಆ ಅವಧಿಯಲ್ಲಿ ಸೂಕ್ಷ್ಮಜೀವಿಗಳು ದುರ್ಬಲವಾದವು. ನಂತರ ಅವನು ಆ ಮಿದುಳಿನ ಚೂರನ್ನು ಪುಡಿಮಾಡಿ, ನೀರಿನೊಡನೆ ಮಿಶ್ರಮಾಡಿ ಕೆಲವು ಆರೋಗ್ಯವಂತ ನಾಯಿಗಳಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಿದನು.
ಮರುದಿನ ಅವನು ಅವುಗಳಿಗೆ ಹದಿಮೂರು ದಿನಗಳು ಮಾತ್ರ ರಕ್ಷಿಸಿದ್ದ ಮಿದುಳಿನ ದ್ರವ್ಯವನ್ನು ಚುಚ್ಚುಮದ್ದಾಗಿ ನೀಡಿದನು. ಮತ್ತು ಅದೇ ಕ್ರಮದಲ್ಲಿ ಮುಂದುವರಿಸಿದನು. ಈ ರೀತಿಯಲ್ಲಿ ಅವನು ಹಂತಹಂತವಾಗಿ, ಹೆಚ್ಚುಹೆಚ್ಚು ಸೂಕ್ಷ್ಮಜೀವಿಗಳನ್ನು ಹೊಂದಿರುವ ಮಿದುಳಿನ ಪುಡಿಯ ಚುಚ್ಚುಮದ್ದನ್ನು ನೀಡುತ್ತಾ ಹೋದನು.
ಕೊನೆಯದಾಗಿ ಅವನು ಅವುಗಳಿಗೆ, ದುರ್ಬಲಗೊಳಿಸಲು ಕೇವಲ ಒಂದು ದಿನ ಮಾತ್ರ ಇಡಲ್ಪಟ್ಟ ದ್ರವ್ಯದ ಚುಚ್ಚುಮದ್ದನ್ನು ನೀಡಿದನು.
ಹದಿನಾಲ್ಕು ದಿನಗಳಲ್ಲಿ ಮುಗಿದ ಆ ಪ್ರಯೋಗದ ಕೊನೆಯಲ್ಲಿ ಅವನು ತನ್ನ ನಾಯಿಗಳಿಗೆ ರೇಬೀಸ್ ರೋಗಗ್ರಸ್ಥ ನಾಯಿಯು ಕಚ್ಚಲು ಅವಕಾಶಮಾಡಿಕೊಟ್ಟನು. ಅವನ ನಾಯಿಗಳು ಸುಲಭವಾಗಿ ರೋಗವನ್ನು ವಿರೋಧಿಸುವ ಗುಣವನ್ನು ಪಡೆದಿರುವುದನ್ನು ಕಂಡು ಅವನು ಭಾವಾವೇಶಕ್ಕೆ ಒಳಗಾದನು.
ಈಗ ಮಾನವರ ಮೇಲೆ ಈ ವಿಧಾನವನ್ನು ಪರೀಕ್ಷಿಸಬೇಕಾಗಿತ್ತು. ಇದಕ್ಕಾಗಿ ಅವನು ಹುಚ್ಚುನಾಯಿಯಿಂದ ಪುನಃ ಪುನಃ ಕಚ್ಚಿಸಿಕೊಂಡಿದ್ದ ಜೋಸೆಫ್ ಮೀಸ್ಟರ್ ಎಂಬ ಬಾಲಕನನ್ನು ಆರಿಸಿಕೊಂಡನು. ಅವನ ದೇಹದ ಮೇಲೆ ಎಷ್ಟೊಂದು ಗಾಯಗಳಾಗಿದ್ದವೆಂದರೆ, ಅವುಗಳಿಗೆ ಕಾವು ಕೊಡುವುದು ಸಾಧ್ಯವೇ ಇರಲಿಲ್ಲ.
ಅವನು ಬಾಲಕನಿಗೆ ಚುಚ್ಚುಮದ್ದುಗಳನ್ನು ನಾಯಿಗಳಿಗೆ ಕೊಡುತ್ತಿದ್ದ ರೀತಿಯಲ್ಲಿಯೇ ಕೊಟ್ಟನು. ಅವುಗಳಲ್ಲಿ ಹತ್ತು ಚುಚ್ಚುಮದ್ದುಗಳನ್ನು ನೀಡಿದನು ಮತ್ತು ಪ್ರತಿಸಾರಿ ಔಷಧ ಪ್ರಮಾಣದ ತೀಕ್ಷ್ಣತೆಯನ್ನು ಹೆಚ್ಚಿಸಿದನು. ಹುಡುಗನಿಗೆ ರೋಗ ಉಂಟಾಗಲಿಲ್ಲ. ಅವನು ಸಂತೋಷದಿಂದ ಹಳ್ಳಿಗೆ ಹಿಂತಿರುಗಿದನು.
ಅವನ ಮುಂದಿನ ರೋಗಿ, ಜ್ಯುಬಿಲಿ ಎಂಬ ಹುಡುಗನಾಗಿದ್ದನು. ಅವನು ಧೈರ್ಯದಿಂದ ತನ್ನ ಸ್ನೇಹಿತರನ್ನು ಒಂದು ಭಯಾನಕ ಹುಚ್ಚುನಾಯಿಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ತುಂಬ ಕೆಟ್ಟರೀತಿಯಲ್ಲಿ ಕಚ್ಚಿಸಿಕೊಂಡಿದ್ದನು. ಪಾಶ್ಚರ್ ಈ ಚಿಕಿತ್ಸೆಯನ್ನು ಪುನರಾವರ್ತಿಸಿದನು ಮತ್ತು ಜ್ಯುಬಿಲಿಯನ್ನು ಕೆಲವೇ ದಿನಗಳಲ್ಲಿ ಗುಣಪಡಿಸಿದನು.
ಪಾಶ್ಚರ್ನ ಅದ್ಭುತ ಸಂಶೋಧನೆಯ ಸುದ್ದಿಯು ಪ್ರಪಂಚದಾದ್ಯಂತ ಹರಡಿತು. ಫ್ರಾನ್ಸ್ನ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲದೆ, ದೂರದ ಅಮೆರಿಕದಂತಹ ದೇಶಗಳಿಂದಲು ಸಹ ಜನರು ಅವನನ್ನು ನೋಡಲು ಬರಲಾರಂಭಿಸಿದರು. ಅವರಿಗೆ ಸನ್ಮಾನಗಳ ಸುರಿಮಳೆಗಳಾದವು ಮತ್ತು ಫ್ರಾನ್ಸ್ನ ಮಹಾನ್ ಪುತ್ರರಲ್ಲಿ ಒಬ್ಬರಾಗಿ ಅವರು ಪ್ರಸಿದ್ಧರಾದರು.
ಪ್ರಶ್ನೆಗಳು:
- ಯಾವ ಘಟನೆಯು ಅವರಲ್ಲಿ ಕನಿಕರವನ್ನು ಮೂಡಿಸಿತು?
- ನಾಯಿ ಕಚ್ಚಿದರೆ ಪುರಾತನ ಚಿಕಿತ್ಸಾ ಕ್ರಮ ಯಾವ ರೀತಿಯಲ್ಲಿತ್ತು?
- ಅವರ ಸಂಶೋಧನೆಗಳು ಯಾವುವು?
- ಮಾನವಕುಲಕ್ಕೆ ಲೂಯೀಸ್ ಪಾಶ್ಚರ್ನ ಸೇವೆಯನ್ನು ವಿವರಿಸಿ.
[ಆಕರ: ಸ್ಟೋರೀಸ್ ಫಾರ್ ಚಿಲ್ಡ್ರನ್- II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]