ಸಸ್ಯಗಳೂ ಸಹ ಅನುಭವಿಸಬಲ್ಲವು
ಡಾ. ಜೆ.ಸಿ. ಬೋಸ್ ರವರು ಒಬ್ಬ ಮಹಾನ್ ಜೀವಶಾಸ್ತ್ರಜ್ಞರಾಗಿದ್ದರು. ಅವರು ಸಸ್ಯಗಳೂ ಸಹ ಅನುಭವಿಸಬಲ್ಲವು ಎಂಬುದನ್ನು ತೋರಿಸಿದರು. ಜಗದೀಶ ಚಂದ್ರ ಬೋಸರು, ಭಗವಾನ್ ಚಂದ್ರ ಬೋಸ್ ಮತ್ತು ಅಬಲಾಬೋಸ್ ದಂಪತಿಗಳ ಪುತ್ರರು. ಭಗವಾನ್ ಚಂದ್ರ ಬೋಸ್ ರವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿದ್ದರು. ಅವರು ಒಬ್ಬ ಶಿಕ್ಷಣ ತಜ್ಞರಾಗಿದ್ದು, ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಒಲವನ್ನು ಹೊಂದಿದ್ದರು. ಅಬಲಾ ಬೋಸ್ರು ಕರುಣಾಹೃದಯಿಯಾದ ಮಹಿಳೆಯಾಗಿದ್ದರು.
ಜೆ.ಸಿ. ಬೋಸರನ್ನು ಮೊದಲು ಬೆಂಗಾಲಿ ಭಾಷೆಯಲ್ಲಿ ಬೋಧಿಸಲಾಗುತ್ತಿದ್ದ ಒಂದು ಶಾಲೆಗೆ ಕಳಿಸಲಾಯಿತು. ಅಲ್ಲಿ ಅವನು ಬಡಮಕ್ಕಳೊಡನೆ ಸೇರಿ, ಅವರೊಡನೆ ಆಟವಾಡುವಂತೆ ಮಾಡಲಾಯಿತು. ಅವನು ಚಿಕ್ಕ ವಯಸ್ಸಿನವನಾಗಿದ್ದಾಗಲೇ ಅನೇಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದನು. ಮಿಣಕುಹುಳ ಎಂಬುದೇನು? ಗಾಳಿ ಬೀಸುವುದೇಕೆ, ನೀರು ಹರಿಯುವುದೇಕೆ? ಮುಂತಾಗಿ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಆಸಕ್ತನಾಗಿದ್ದನು. ಅವನು ಒಂದು ಕೊಳದಲ್ಲಿ ಮೀನು ಮತ್ತು ಕಪ್ಪೆಗಳನ್ನು ಸಾಕಿದ್ದನು. ಮೊಳಕೆಯೊಡೆಯುತ್ತಿರುವ ಗಿಡವನ್ನು ಕಿತ್ತು, ಅದರ ಬೇರಿನ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದ್ದನು. ಅವನು ಅನೇಕ ಸಾಕು ಪ್ರಾಣಿಗಳನ್ನೂ, ಇಲಿಗಳನ್ನೂ, ಅಳಿಲುಗಳನ್ನೂ ಮತ್ತು ವಿಷಯುಕ್ತವಲ್ಲದ ಹಾವುಗಳನ್ನೂ ಸಾಕಿದ್ದನು.
ಜೆ.ಸಿ. ಬೋಸ್ಗೆ ಒಬ್ಬ ಸೇವಕನಿದ್ದು, ಅವನಿಗೆ ಸಾಹಸ ಪ್ರಧಾನವಾದ ಕಥೆಗಳನ್ನು ಹೇಳುತ್ತಿದ್ದನು. ಅಬಲಾ ಬೋಸ್ ಅವನಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು. ಜೆ.ಸಿ. ಬೋಸರು ಪುರಾತನ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು.
ಜೆ.ಸಿ. ಬೋಸರನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ಗೆ ಕಳಿಸಲಾಯಿತು. ಅವರು ಭಾರತಕ್ಕೆ ಹಿಂದಿರುಗಿ, ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು. ಅವರು ಸಂಶೋಧನೆಗಾಗಿ ತಮ್ಮ ಸ್ವಂತ ಪ್ರಯೋಗಾಲಯವನ್ನು ಕಟ್ಟುವ ಸಲುವಾಗಿ, ಕಷ್ಟಪಟ್ಟು ಕೆಲಸಮಾಡಿ ಹಣವನ್ನು ಉಳಿಸಿದರು. ತಮ್ಮ ಸಂಶೋಧನೆಗಾಗಿ ತಮ್ಮದೇ ಸಲಕರಣೆಗಳನ್ನು ಅವರು ಮಾಡಿಕೊಂಡರು.
‘ವಿದ್ಯುಚ್ಛಕ್ತಿ’ಯು ಅವರ ಅಧ್ಯಯನದ ವಿಶೇಷ ವಿಷಯವಾಗಿತ್ತು. ಒಂದು ಸಸ್ಯದ ಮೂಲಕ ವಿದ್ಯುತ್ತನ್ನು ಹಾಯಿಸಿದಾಗ ಅದು ಉತ್ತೇಜನಗೊಳ್ಳುತ್ತದೆ ಅಥವಾ ಕಿರಿಕಿರಿಗೊಳ್ಳುತ್ತದೆ ಎಂದು ತಮ್ಮ ಪ್ರಯೋಗಗಳ ಮೂಲಕ ತೋರಿಸಿದರು. ವಿದ್ಯುತ್ತಿಗೆ ಸಸ್ಯದ ಪ್ರತಿಕ್ರಿಯೆಯನ್ನು ತೋರಿಸಲು ಅವರು ಒಂದು ಉಪಕರಣವನ್ನು ತಯಾರಿಸಿದರು.
ರಾಯಲ್ ಸೊಸೈಟಿಯು ಜೆ.ಸಿ. ಬೋಸ್ರನ್ನು ಅವರ ಸಿದ್ಧಾಂತಗಳನ್ನು ವಿವರಿಸಲು ಆಹ್ವಾನಿಸಿತು. ಒಂದು ಗಿಡಕ್ಕೆ ವಿಷವನ್ನು ಚುಚ್ಚಿದರೆ, ಅದೂ ಸಹ ಅನುಭವಿಸುತ್ತದೆ ಮತ್ತು ಅಂತಿಮವಾಗಿ ಸಾಯುತ್ತದೆ ಎಂದು ಅವರು ತೋರಿಸಿದರು. ಕೆಲವು ಗಿಡಗಳು ನೇರವಾಗಿ ಬೆಳೆಯುತ್ತವೆ, ಇನ್ನು ಕೆಲವು ಹಾಗೆ ಬೆಳೆಯುವುದಿಲ್ಲ ಏಕೆ ಎಂಬುದಕ್ಕೂ ಅವರು ವಿವರಣೆ ನೀಡಿದರು. ಸಸ್ಯವನ್ನು ಮುಟ್ಟಿದಾಗ ಅದರ ಪ್ರತಿಕ್ರಿಯೆಯನ್ನು ಗಮನಿಸಲು ಅವರು ಉಪಕರಣಗಳನ್ನು ತಯಾರಿಸಿದರು. ಆ ದಿನಗಳಲ್ಲಿ ಒಬ್ಬ ಭಾರತೀಯ ವಿಜ್ಞಾನಿಯು ಸೂಕ್ಷ್ಮ ಉಪಕರಣಗಳನ್ನು ಸಂಶೋಧಿಸಿ, ರೂಪಿಸಬಲ್ಲನೆಂದು ಯಾರೂ ಊಹಿಸಲೂ ಸಾಧ್ಯವಿರಲಿಲ್ಲ. ಬೋಸರು ‘ಸಸ್ಯಗಳಿಗೆ ಬೆಳಕಿನ ಅಗತ್ಯವಿದೆ, ಆದ್ದರಿಂದ ಅವು ಉಷ್ಣತೆಯು ಹೆಚ್ಚು ಮತ್ತು ಕಡಿಮೆಯಾದಾಗ ತೆರೆದುಕೊಳ್ಳುತ್ತವೆ ಮತ್ತು ಮುಚ್ಚಲ್ಪಡುತ್ತವೆ’ ಎಂದು ವಿವರಿಸಿದರು.
ಜೆ.ಸಿ. ಬೋಸರು ಬೇರುಗಳಿಲ್ಲದೆಯೂ ಸಹ ಸಸ್ಯಗಳು ನೀರನ್ನು ಪಡೆದುಕೊಳ್ಳಬಲ್ಲವು ಎಂಬುದನ್ನು ಪ್ರದರ್ಶಿಸಿದರು. ಸಸ್ಯಗಳ ಜೀವಕೋಶಗಳು ಮಾನವ ಹೃದಯದಂತೆ ವಿಕಸನ ಮತ್ತು ಸಂಕೋಚನಗೊಳ್ಳುತ್ತವೆ ಎಂದು ಅವರು ವಿವರಿಸಿದರು.
ಪಾಶ್ಚಾತ್ಯರಿಂದ ಪ್ರಶ್ನೆಗೆ ಒಳಪಟ್ಟಾಗ ಬೋಸರು, “ಭಾರತದ ಋಷಿಗಳು ಬಹಳ ಹಿಂದೆಯೇ ಇವೆಲ್ಲವನ್ನೂ ತಿಳಿದಿದ್ದರು. ಅವರು ಬದುಕಿನ ಐಕ್ಯತೆಯಲ್ಲಿ ನಂಬಿಕೆಯನ್ನಿಟ್ಟಿರಲಿಲ್ಲವೇ?” ಎಂದು ಹೇಳುತ್ತಿದ್ದರು. ಒಂದು ಅಲಗೂ ಸಹ ಮತ್ತೆ ಮತ್ತೆ ಉಪಯೋಗಿಸಿದರೆ, ಆಯಾಸಕ್ಕೆ ಒಳಪಡುತ್ತದೆ ಎಂಬುದನ್ನೂ ಸಹ ಅವರು ತೋರಿಸಿದರು.
ಜೆ.ಸಿ. ಬೋಸರು, ಟಾಗೂರ್ ಮತ್ತು ವಿವೇಕಾನಂದರ ಪ್ರೇಮ ಮತ್ತು ಹೊಗಳಿಕೆಗೆ ಪಾತ್ರರಾಗಿದ್ದರು. ಮರಣಕ್ಕೆ ಮೊದಲು ಅವರು ತಮ್ಮ ಒಂದು ಆಸೆಯನ್ನು ಪೂರೈಸಿಕೊಂಡರು. ಅವರು ಒಂದು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿ, ಅನೇಕ ಯುವ ಜನರಿಗೆ ವಿಜ್ಞಾನದಲ್ಲಿ ಸಂಶೋಧನೆಯನ್ನು ಮಾಡಲು ಸ್ಫೂರ್ತಿ ನೀಡಿದರು.
ಜೆ.ಸಿ. ಬೋಸರು ವಿದೇಶಗಳಲ್ಲಿ ಅನೇಕ ಉಪನ್ಯಾಸಗಳನ್ನು ನೀಡಿದರು, ಅನೇಕ ಲೇಖನಗಳನ್ನು ಬರೆದರು ಮತ್ತು ಅನೇಕ ಉಪಕರಣಗಳನ್ನು ಸಂಶೋಧಿಸಿ, ನಿರ್ಮಾಣ ಮಾಡಿದರು.
ಪ್ರಶ್ನೆಗಳು:
- ಜೆ.ಸಿ. ಬೋಸರ ತಂದೆಯವರ ಬಗ್ಗೆ ನಿಮಗೇನು ತಿಳಿದಿದೆ? ಬರೆಯಿರಿ.
- ಅವರ ವಿಶೇಷ ಆಸಕ್ತಿಯ ವಿಷಯ ಯಾವುದಾಗಿತ್ತು?
- ಅವರು ಸಸ್ಯಗಳ ಬಗ್ಗೆ ಯಾವ ನಂಬಿಕೆಗಳನ್ನು ಹೊಂದಿದ್ದರು ಮತ್ತು ಪ್ರದರ್ಶಿಸಿದರು ಎಂಬ ಬಗ್ಗೆ ಬರೆಯಿರಿ.
[ಆಕರ: ಸ್ಟೋರೀಸ್ ಫಾರ್ ಚಿಲ್ಡ್ರನ್- II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]