ವಿಜ್ಞಾನ ಮತ್ತು ಮಾನವೀಯತೆ
ಪ್ರಸಿದ್ಧವಾದ ಡೇವೀಸ್ ಸೇಫ್ಟಿ ಲ್ಯಾಂಪ್ (ಡೇವಿಯ ಸುರಕ್ಷತಾ ದೀಪ) ನ್ನು ಕಂಡುಹಿಡಿದವನು, ಸರ್ ಹಂಫ್ರಿ ಡೇವಿ. ಅವನು ಈ ದೀಪವನ್ನು ಕಂಡುಹಿಡಿಯುವ ಮೊದಲು, ಕಲ್ಲಿದ್ದಲಿನ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನರು ಅಗ್ನಿ ಅನಾಹುತದ ಅಪಾಯಕ್ಕೆ ಒಳಗಾಗುತ್ತಿದ್ದರು. ಸಾಮಾನ್ಯ ದೀಪದ ಸಂಪರ್ಕಕ್ಕೆ ಬಂದಾಗ ಸುಲಭವಾಗಿ ಹೊತ್ತಿಕೊಂಡು ಉರಿಯುವ ಅನಿಲಗಳು ಗಣಿಗಳಲ್ಲಿ ಇರುತ್ತವೆ.
ಸರ್ ಹಂಫ್ರಿಯು ಅನೇಕ ವರ್ಷಗಳವರೆಗೆ ಕಷ್ಟಪಟ್ಟು ಕೆಲಸ ಮಾಡಿ, ಅನಿಲಗಳು ಹೊತ್ತಿಕೊಂಡು ಉರಿಯಲು ಅವಕಾಶ ನೀಡದ ದೀಪವನ್ನು ರೂಪಿಸಿದನು. ಇದು ನಿಜವಾಗಿಯೂ ಒಂದು ಮಹಾನ್ ಸಂಶೋಧನೆಯಾಗಿದ್ದು, ಗಣಿ ಕೆಲಸಗಾರರರಿಗೆ ವರವಾಗಿದೆ.
ಈ ಸಂಶೋಧನೆಗೆ ಕೇವಲ ಒಂದು ಸ್ವಾಮ್ಯವನ್ನು ತೆಗೆದುಕೊಂಡಿದ್ದರೆ, ಹಂಫ್ರಿಯು ಹಣವನ್ನು ಗಳಿಸಬಹುದಿತ್ತು. ಆದರೆ ಹಂಫ್ರಿಯು ಹಾಗೆ ಮಾಡುವುದನ್ನು ತಿರಸ್ಕರಿಸಿದನು. ಅವನು ಸಾರ್ವಜನಿಕರಿಗೆ ಸ್ವಾಮ್ಯವನ್ನು ಉಚಿತವಾಗಿ ನೀಡಿದನು.
ಒಮ್ಮೆ ಅವನ ಸ್ನೇಹಿತನು, “ಸ್ವಾಮ್ಯದಿಂದ ನೀನು ಒಳ್ಳೆಯ ಅದೃಷ್ಟ ಮಾಡಿಕೊಳ್ಳಬಹುದು, ಚೆನ್ನಾಗಿ ಯೋಚಿಸು” ಎಂದು ಹೇಳಿದನು. ಅದಕ್ಕೆ ಡೇವಿಯು, “ಇಲ್ಲ, ನನ್ನ ಪರಮ ಮಿತ್ರನೇ, ಅಂತಹ ವಿಚಾರವನ್ನು ನಾನು ಯೋಚನೆಯೇ ಮಾಡಿಲ್ಲ; ನನ್ನ ಒಂದೇ ಆಸೆಯೆಂದರೆ ಮಾನವರ ಸೇವೆ ಮಾಡುವುದು. ಅಧಿಕವಾದ ಸಂಪತ್ತು ಮನುಷ್ಯನನ್ನು ಹೆಚ್ಚು ಕೀರ್ತಿವಂತನನ್ನಾಗಿ ಮಾಡುವುದಿಲ್ಲ ಅಥವಾ ಅವನಿಗೆ ಹೆಚ್ಚಿನ ಸಂತೋಷವನ್ನು ನೀಡುವುದಿಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ; ನಾನು ಈಗ ಹೊಂದಿರುವುದರಲ್ಲಿ ನನಗೆ ತೃಪ್ತಿ ಇದೆ” ಎಂದು ಉತ್ತರ ನೀಡಿದನು.
ಸರ್ ಹಂಫ್ರಿಯು ದೊಡ್ಡ ವಿಜ್ಞಾನಿಯಾಗಿ ಮತ್ತು ಮಾನವತಾವಾದಿಯಾಗಿ ಅಮರನಾದನು.
ಪ್ರಶ್ನೆಗಳು:
- ಹಂಫ್ರಿಯು ಏನನ್ನು ಕಂಡುಹಿಡಿದನು?
- ಅದನ್ನು ಒಂದು ವರವೆಂದು ಏಕೆ ಪರಿಗಣಿಸಲಾಗಿದೆ?
- ಅವನ ಸ್ನೇಹಿತನ ಸಲಹೆ ಏನಾಗಿತ್ತು?
- ಡೇವಿಯು ಏನು ಉತ್ತರವನ್ನು ನೀಡಿದನು?
[ಆಕರ: ಸ್ಟೋರೀಸ್ ಫಾರ್ ಚಿಲ್ಡ್ರನ್- II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]