ಮಾನವ ಸೇವೇಯೇ ಮಾಧವ ಸೇವೆ
ಮಾರ್ಟಿನ್ ಎಂಬ ಒಬ್ಬ ಚಮ್ಮಾರನಿದ್ದನು. ಅವನು ರಾತ್ರಿ ನಿದ್ರಿಸುವಾಗ ಎದೆಯ ಮೇಲೆ ಬೈಬಲ್ನ್ನು ಇಟ್ಟುಕೊಂಡಿರುತ್ತಿದ್ದನು ಮತ್ತು ಕ್ರಿಸ್ತನು ಹೇಳಿದ, “ಗಮನಿಸಿ, ನಾನು ಬಾಗಿಲ ಬಳಿ ಬಂದು ಕದ ಬಡಿಯುತ್ತೇನೆ. ನನ್ನ ಧ್ವನಿಯನ್ನು ಯಾರಾದರೂ ಕೇಳಿಸಿಕೊಂಡು ಬಾಗಿಲು ತೆಗೆದರೆ, ನಾನು ಅವನಲ್ಲಿಗೆ ಬರುತ್ತೇನೆ ಮತ್ತು ಅವನೊಂದಿಗೆ ಊಟ ಮಾಡುತ್ತೇನೆ, ನನ್ನ ತಂದೆಯು ಅವರ ಸಿಂಹಾಸನದಲ್ಲಿ ನನ್ನನ್ನು ಕೂರಿಸಿಕೊಂಡಂತೆಯೇ, ನನ್ನ ಸಿಂಹಾಸನದಲ್ಲಿ ನನ್ನೊಂದಿಗೆ ಕುಳಿತುಕೊಳ್ಳಲು ಅವನಿಗೆ ಅನುಮತಿ ನೀಡುತ್ತೇನೆ” ಎಂಬ ಮಾತನ್ನು ಮನಸ್ಸಿನಲ್ಲಿ ಚಿಂತನೆ ಮಾಡುತ್ತಿದ್ದನು.
ಆದಿನ ರಾತ್ರಿ ಅವನ ನಿದ್ರೆಯಲ್ಲಿ ಭಗವಂತನು ಗೋಚರನಾಗಿ, ಮರುದಿನ ತಾನು ಅವನನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದನು.
ಆದ್ದರಿಂದ ಅವನು ಬೆಳಗ್ಗೆ ಮುಂಚಿತವಾಗಿ ಎದ್ದು, ಶುಚಿಯಾಗಿ, ಪ್ರತಿದಿನದ ಎರಡರಷ್ಟು ಊಟ ಮತ್ತು ಚಹಾವನ್ನು ತಯಾರಿಸಿ, ಭಗವಂತನ ಬರುವಿಕೆಗಾಗಿ ಕಣ್ಣನ್ನೇ ಸ್ವಾಗತ ಕಮಾನನ್ನಾಗಿಸಿ ಕಾಯುತ್ತಿದ್ದನು. ಆಗ ಇನ್ನೂ ಹಿಮ ಬೀಳುತ್ತಿದ್ದುದರಿಂದ ಅವನ ದೃಷ್ಟಿಗೆ ಗೋಚರನಾದ ಮೊದಲ ವ್ಯಕ್ತಿ, ಪುರಸಭೆಯ ಬೀದಿಗಳನ್ನು ಗುಡಿಸುವವನು. ಜನರು ಎಚ್ಚರಗೊಂಡು ತಮ್ಮ ಮನೆಯ ಬಾಗಿಲು ತೆರೆಯುವ ಮೊದಲೇ ಅವನು ತನ್ನ ಕೆಲಸವನ್ನು ಮುಗಿಸಬೇಕಾಗಿತ್ತು. ಅವನ ಮನಸ್ಸಿಗೆ ಆಘಾತವನ್ನುಂಟುಮಾಡಿದ ವ್ಯಂಗ್ಯವೆಂದರೆ, ಒಳಗೆ ಅಗ್ಗಿಷ್ಟಿಕೆಯ ಪಕ್ಕದಲ್ಲಿ ಸ್ವಯಂ ಬೆಚ್ಚಗಿರುವವರ ಬಾಗಿಲ ಮೆಟ್ಟಿಲುಗಳನ್ನು ಮತ್ತು ಕಿಟಕಿಯ ಕಟ್ಟುಗಳನ್ನು ಬೆಚ್ಚಗಿಡಲು ಸಹಾಯ ಮಾಡುತ್ತಿದ್ದ ವಯಸ್ಸಾದ ವ್ಯಕ್ತಿಯು ಹೊರಗಡೆ ಹಿಮದಲ್ಲಿ ಮರಗಟ್ಟುತ್ತಾ ಇದ್ದುದು. ಒಳಗಿದ್ದ ಜನರು ತಮ್ಮ ಉಣ್ಣೆಯ ತೊಡುಗೆಗಳ ಒಳಗೆ ಸೇರಿಕೊಂಡಿದ್ದರು, ಆದರೆ ಈ ಮುದಿ ವ್ಯಕ್ತಿ ಹೊರಗಡೆ ಚಳಿಯಲ್ಲಿ ನಡುಗುತ್ತಿದ್ದನು.
ಮಾರ್ಟಿನ್ನು ಸ್ವಲ್ಪ ವಿಶ್ರಾಂತಿಗಾಗಿ ಅವನನ್ನು ಒಳಗೆ ಕರೆದು, ತನ್ನ ಪಾಲಿನ ಚಹಾವನ್ನು ಅವನಿಗೆ ಕೊಟ್ಟನು ಮತ್ತು ಅಗ್ಗಿಷ್ಟಿಕೆಯ ಬಳಿ ಕಾಯಿಸಿಕೊಳ್ಳಲು ಅವನಿಗೆ ಅವಕಾಶ ಮಾಡಿಕೊಟ್ಟನು. ಅವನು ಧನ್ಯವಾದ ಹೇಳಿ ಹೊರಟು ಹೋದನು. ಅವನ ಮನೆಯ ಬಾಗಿಲಿನಲ್ಲಿ ಅವನು ನೋಡಿದ ಮುಂದಿನ ವ್ಯಕ್ತಿ ಒಬ್ಬಳು ಮುದುಕಿಯಾಗಿದ್ದಳು. ಅವಳು ಹಸಿವು ಮತ್ತು ಚಳಿ ಯಿಂದ ಬಳಲಿದ್ದು, ಒಂದು ಹೆಜ್ಜೆಯನ್ನೂ ಮುಂದಿಡಲಾರದ ಸ್ಥಿತಿಯಲ್ಲಿದ್ದಳು. ಅವನು ಅವಳನ್ನು ಒಳಗೆ ಕರೆದು ತನ್ನ ಕಂಬಳಿಯನ್ನು ಹೊದೆಯಲು ಕೊಟ್ಟನು ಮತ್ತು ತನ್ನ ಪಾಲಿನ ಊಟವನ್ನು ಅವಳಿಗೆ ನೀಡಿದನು. ಅವಳು ಅವನಿಗೆ ಆಶೀರ್ವದಿಸಿ ಹೊರಟು ಹೋದಳು.
ನಂತರ ಅವನು ಒಬ್ಬಳು ಬಡ ತಾಯಿಯು, ಹಸಿವಿನಿಂದ ಅಳುತ್ತಿದ್ದ ತನ್ನ ಮಗುವನ್ನೆತ್ತಿಕೊಂಡು ಆ ಮಾರ್ಗದಲ್ಲಿ ಹೋಗುತ್ತಿರು ವುದನ್ನು ನೋಡಿದನು. ಅವನು ಅವಳನ್ನು ಒಳಗೆ ಕರೆದು, ಭಗವಂತನ ಪಾಲಿನ ಊಟವನ್ನು ನೀಡಿದನು ಮತ್ತು ಅವಳ ಮಗು ವಿಗೆ ಕುಡಿಸಲು ಭಗವಂತನ ಪಾಲಿನ ಹಾಲನ್ನು ನೀಡಿದನು. ಗತಿಸಿದ ತನ್ನ ಮಡದಿಯ ಸೀರೆಯನ್ನು ಅವಳಿಗೆ ಉಡುಗೊರೆಯಾಗಿ ನೀಡಿದನು. ಅವಳೂ ಸಹ ಅವನಿಗೆ ಕೃತಜ್ಞತೆ ಸಲ್ಲಿಸಿ ಹೊರಟು ಹೋದಳು.
ಅದಾಗಲೇ ಸೂರ್ಯ ಮುಳುಗುವ ಹೊತ್ತಾಗಿದ್ದುದರಿಂದ, ಆ ದಿನ ಭಗವಂತನು ಬರುತ್ತಾನೆಂದು ನಿರೀಕ್ಷಿಸಲು ಬಹಳ ತಡವಾಗಿತ್ತು. ನಿರಾಸೆ ಮತ್ತು ದುಃಖಗಳ ಮಿಶ್ರಭಾವನೆಯಲ್ಲಿ ಅವನು ತನ್ನ ಸ್ಥಳದಲ್ಲಿ ಕುಸಿದು ಕುಳಿತುಕೊಂಡನು. ಒಂದು ವೇಳೆ ಭಗವಂತನು ಬಂದರೆ ಅವನನ್ನು ಯಾವ ರೀತಿಯಲ್ಲಿ ಸತ್ಕರಿಸುವುದು? ಅವನ ಹತ್ತಿರ ಊಟವಾಗಲಿ ಅಥವಾ ಹಾಲಾಗಲಿ ಉಳಿದಿರಲಿಲ್ಲ. ಈ ಯೋಚನೆಯು ಅವನಿಗೆ ಹೆಚ್ಚು ನೋವನ್ನುಂಟು ಮಾಡಿದಾಗ, ಅವನ ಮನಸ್ಸಿನಲ್ಲಿ ಕತ್ತಲೆ ಆವರಿಸಿತು. ಆದರೆ ರಾತ್ರಿಯಾಗಿ ಜಗತ್ತನ್ನು ಕತ್ತಲೆ ಆವರಿಸಿದಾಗ, ಅವನು ಗುಡಿಸಿಲಿನಲ್ಲಿ ಒಂದು ಹೆಜ್ಜೆ ಸಪ್ಪಳವನ್ನು ಕೇಳಿದನು. ಮತ್ತು ಒಂದು ಅಪರೂಪವಾದ ಬೆಳಕು, ಗುಡಿಸಿಲನ್ನು ಬೆಳಗುತ್ತಿರುವುದು ಅವನಿಗೆ ಕಂಡು ಬಂತು. ಅವನು ಇನ್ನೂ ದೀಪ ಹೊತ್ತಿಸಿರಲಿಲ್ಲವಾದ್ದರಿಂದ ಅವನಿಗೆ ಆಶ್ಚರ್ಯವಾಯಿತು.
ಆ ಬೆಳಕಿನಲ್ಲಿ ಅವನಿಗೆ ನಡಗುತ್ತಿದ್ದ ಇಳಿವಯಸ್ಸಿನ ಕಾವಲುಗಾರನು ಕಾಣಿಸಿಕೊಂಡನು.
ಅವನು ಮಾರ್ಟಿನ್ನನ್ನು ಅಭಿನಂದಿಸಿ ಮುಂದೆ ಹೋದನು. ನಂತರ ಕಾಣಿಸಿಕೊಂಡವಳು ಮುದುಕಿ. ಆದರೆ ಅವಳೂ ಸಹ ಅವನನ್ನು ಆಶೀರ್ವದಿಸುತ್ತಾ ಮುಂದೆ ಹೋದಳು. ಕೊನೆಯಲ್ಲಿ ಕಾಣಿಸಿಕೊಂಡವಳು, ಹಸಿದ ತನ್ನ ಮಗುವಿನೊಂದಿಗೆ ಉಪವಾಸವಿದ್ದ ತಾಯಿ! ಅವರೂ ಸಹ ಹೊರಟು ಹೋದರು. ನಂತರ ಅದು ಯಾರು?… ಅದು ಆರ್ಯಾರೂ ಆಗಿರಲಿಲ್ಲ! ಅದು, ಸ್ವಯಂ ಭಗವಂತನೇ ಆಗಿದ್ದನು! ಅವನು, “ನಿನ್ನಿಂದ ಸತ್ಕಾರವನ್ನು ಪಡೆದವನು ನಾನೇ! ಅದು ನಾನೇ!” ಎಂದು ಸತ್ಯ ವಿಚಾರವನ್ನು ತಿಳಿಸಿ, ಅವನನ್ನು ಆಲಂಗಿಸಿ, ಆಶೀರ್ವದಿಸಿದನು. ನಂತರ ಮಾಯವಾದನು.
ಪ್ರಶ್ನೆಗಳು:
- ಮಾರ್ಟಿನ್ನು ಯಾವ ರೀತಿಯ ವ್ಯಕ್ತಿಯಾಗಿದ್ದನು?
- ನಿದ್ರೆಯಲ್ಲಿ ಭಗವಂತನು ಅವನಿಗೆ ಏನು ಹೇಳಿದನು?
- ಅವನು ಕಾವಲುಗಾರನಿಗೆ ಹೇಗೆ ಸಹಾಯ ಮಾಡಿದನು?
- ನಂತರ ಮಾರ್ಟಿನ್ನು ಯಾರನ್ನು ಸಂಧಿಸಿದನು?
- ಈ ಕಥೆಯಿಂದ ನೀವು ಏನನ್ನು ಕಲಿತುಕೊಂಡಿರಿ?
[ಆಕರ: ಸ್ಟೋರೀಸ್ ಫಾರ್ ಚಿಲ್ಡ್ರನ್ – II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]