ಪರಿತ್ರಾಣಾಯ ಸಾಧುನಾಂ ವಿನಾಶಾಯ ಚ ದುಷ್ಕೃತಾಮ್
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||
(ಅಧ್ಯಾಯ 4 ಶ್ಲೋಕ 8)
ಸಾಧುಗಳ ರಕ್ಷಣೆಗಾಗಿಯೂ, ದುಷ್ಟರ ವಿನಾಶಕ್ಕಾಗಿಯೂ ಮತ್ತು ಧರ್ಮದ ಸಂಸ್ಥಾಪನೆಗಾಗಿಯೂ ಪ್ರತೀ ಯುಗದಲ್ಲಿಯೂ ಅವತರಿಸುತ್ತೇನೆ.
ಒಳ್ಳೆಯದನ್ನು ರಕ್ಷಿಸಲು ಕೆಟ್ಟದ್ದನ್ನು ವಿನಾಶಗೊಳಿಸಲು ಮತ್ತು ಸದಾಚಾರವನ್ನು ಪುನ: ಸ್ಥಾಪಿಸಲು ಭಗವಂತನು ಪ್ರತಿಯುಗದಲ್ಲೂ ತನ್ನನ್ನು ತಾನು ಸಾಕಾರಗೊಳಿಸುತ್ತಾನೆ. ಉದಾಹರಣೆಗೆ ಭಗವಂತನು ಪ್ರಹ್ಲಾದನನ್ನು ರಕ್ಷಿಸಿ ಹಿರಣ್ಯಕಶಿಪುವನ್ನು ಕೊಲ್ಲಲು ನರಸಿಂಹ ರೂಪದಲ್ಲಿ ಬಂದಿರುತ್ತಾನೆ. ದ್ವಾಪರಯುಗದಲ್ಲಿ ಕಂಸನನ್ನು ಮತ್ತು ಕೌರವರನ್ನು ಕೊಲ್ಲಲು ಭಗವಂತನು ಕೃಷ್ಣನ ರೂಪದಲ್ಲಿ ಅವತರಿಸಿದನು.
ಇವತ್ತಿನ ಈ ಕಲಿಯುಗದಲ್ಲಿ ಭಗವಂತನು ಶಿಕ್ಷಣ ಹಾಗೂ ಪ್ರಾಪಂಚಿಕ ಸುಧಾರಣೆಗೆ ಶ್ರೀಸಾಯಿ ಅವತಾರದಲ್ಲಿ ಬಂದು ನಮ್ಮ ಮಧ್ಯದಲ್ಲಿ ನಿಂತಿದ್ದಾರೆ.
ಸ್ವಾಮಿ ಹೇಳುತ್ತಾರೆ, “ಒಂದು ಸಣ್ಣ ಸ್ಥಳೀಯ ಗಲಭೆ ಇದ್ದಾಗ ಅದನ್ನು ನಿಯಂತ್ರಿಸಲು ಕಾನ್ಸ್ಟೇಬಲ್ ಅನ್ನು ನೇಮಿಸಿದರೆ ಸಾಕಾಗುತ್ತದೆ. ಬೆದರಿಕೆಗಳನ್ನು ಹಾಕಿ ಗಲಭೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದಾಗ ಸಬ್ಇನ್ ಸ್ಪೆಕ್ಟರ್ ಅನ್ನು ಕಳುಹಿಸಲಾಗುತ್ತದೆ. ಅದು ದಂಗೆಯಾಗಿ ಬೆಳೆದಾಗ ಅದನ್ನು ತಣಿಸಲು ಪೋಲೀಸ್ ಅಧೀಕ್ಷಕರೇ ಬೇಕಾಗುತ್ತದೆ. ಆದರೆ ಈಗಿನಂತೆ ಇಡೀ ಮನುಕುಲವೇ ನೈತಿಕ ನಾಶದಿಂದ ಬೆದರಿಕೆಗೆ ಒಳಗಾದಾಗ ಪೋಲೀಸ್ ಅಧೀಕ್ಷಕನಂತೆ ಭಗವಂತನೇ ಸಂತಪುರುಷರು ಹಾಗೂ ಸಾಧಕರ ಸೈನ್ಯದೊಂದಿಗೆ ಧರೆಗಿಳಿದು ಬರುತ್ತಾನೆ.”
ಭಗವಂತ ಏಕೆ ಅವತರಿಸುತ್ತಾನೆ?
ಭಗವಂತ ತಾನೇ ಏಕೆ ಅವತರಿಸುತ್ತಾನೆ? ತನ್ನ ಆಜ್ಞೆಯ ಮೇರೆಗೆ ಅನೇಕ ಸಣ್ಣ ದೇವರುಗಳು ಹಾಗೂ ದೇವತೆಗಳ ಮೂಲಕ ಧರ್ಮವನ್ನು ಪುನ:ಸ್ಥಾಪಿಸುವಕಾರ್ಯವನ್ನು ಏಕೆ ಮಾಡಬಾರದು?
ಮೊಘಲ್ ಚಕ್ರವರ್ತಿ ಅಕ್ಬರನು ತನ್ನ ಆಸ್ಥಾನದಲ್ಲಿ ಸಭಾಪತಿಗಳ ಮುಂದೆ “ನಿರಾಕಾರರು ಒಂದು ರೂಪವನ್ನು ಅಳವಡಿಸಿಕೊಂಡು ಧರ್ಮವನ್ನು ಉಳಿಸುವಸಲುವಾಗಿ ಅವತಾರವೆತ್ತಿ ಜಗತ್ತಿಗೆ ಇಳಿಯುತ್ತಾರೆ ಎಂಬ ಹಿಂದೂ ಕಲ್ಪನೆಯನ್ನು ಅವಹೇಳನ ಅಥವಾ ಅಪಹಾಸ್ಯಮಾಡಿದನು.
ಬೀರಬಲ್ಲ (ಅಕ್ಬರನ ಆಸ್ಥಾನದಲ್ಲಿ ಒಬ್ಬ ಹಾಸ್ಯಗಾರ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾದವನು) ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಮರ್ಶಿಸಲು ಒಂದು ವಾರದ ಸಮಯವನ್ನು ಕೇಳಿದನು. ಸ್ವಲ್ಪ ದಿನಗಳ ನಂತರ ಅಕ್ಬರನು ತನ್ನ ಕುಟುಂಬದವರೊಂದಿಗೆ ದೋಣಿಯಲ್ಲಿ ಸರೋವರದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬೀರಬಲ್ಲನು ಒಂದು ಗೊಂಬೆಯನ್ನು ಮೇಲಕ್ಕೆ ಎಸೆದನು. ಆ ಗೊಂಬೆಯು ಚಕ್ರವರ್ತಿಯ ಪುಟ್ಟ ಮಗನಂತೆ ಕಾಣುವ ಹಾಗೆ ಮಾಡಲಾಗಿತ್ತು. ನಂತರ ಬೀರಬಲ್ಲ ಜೋರಾಗಿ ಅಯ್ಯೋ ರಾಜಕುಮಾರ ನೀರಿಗೆ ಬಿದ್ದುಬಿಟ್ಟನು ಎಂದು ಕೂಗಿದನು. ಇದನ್ನು ಕೇಳಿ ಚಕ್ರವರ್ತಿ ಅಕ್ಬರನು ತನ್ನ ಮಗನನ್ನು ಪ್ರಾಣಾಪಾಯದಿಂದ ರಕ್ಷಿಸಲು ಸರೋವರದ ನೀರಿಗೆ ಧುಮುಕಿದನು.
ಗೊಂಬೆ ಮಾತ್ರ ಸರೋವರಕ್ಕೆ ಎಸೆಯಲ್ಪಟ್ಟಿದೆ ಮತ್ತು ರಾಜಕುಮಾರ ಸುರಕ್ಷಿತವಾಗಿರುವನು ಎಂದು ಬೀರಬಲ್ಲ ಬಹಿರಂಗಪಡಿಸಿದನು. ಅವತಾರ ಕಾರ್ಯವನ್ನು ನಿರ್ವಹಿಸಲು ಕೆಲವು ಇತರ ಘಟಕಗಳನ್ನು ನಿಯೋಜಿಸದೆ ಧರ್ಮವನ್ನು ಉಳಿಸಲು ದೇವರು ಮಾನವರೂಪವನ್ನು ಪಡೆಯುತ್ತಾನೆ ಎಂಬ ಸತ್ಯವನ್ನು ಪ್ರದರ್ಶಿಸುವ ಸಲುವಾಗಿ ಅವನು ಈ ನಾಟಕವನ್ನು ಜಾರಿಗೆ ತರಬೇಕಾಗಿತ್ತು ಎಂದು ವಿವರಿಸುವ ಮೂಲಕ ಅಕ್ಬರನ ಕೋಪವನ್ನು ತಣಿಸಿದನು.
ಅಕ್ಬರನು ದೋಣಿಯಲ್ಲ್ಲಿದ್ದ ಅನೇಕಸಿಬ್ಬಂದಿಗಳಲ್ಲಿ ಯಾರನ್ನಾದರೂ ತನ್ನ ಮಗನನ್ನು ರಕ್ಷಿಸಲು ಆದೇಶಿಸಬಹುದಿತ್ತು. ಆದರೆ ಅವನ ವಾತ್ಸಲ್ಯವು ತುಂಬಾ ಅಪಾರವಾಗಿತ್ತು ಮತ್ತು ತೀವ್ರವಾಗಿತ್ತು. ಚಕ್ರವರ್ತಿ ತನ್ನ ಮಗ ನೀರಿನಲ್ಲಿ ಮುಳುಗದಂತೆ ರಕ್ಷಿಸಲು ಸ್ವತ: ತಾನೇ ಸರೋವರಕ್ಕೆ ಧುಮುಕಿದನು.
ಧರ್ಮದ ಅವನತಿಯು ಅತ್ಯಂತ ದುರಂತವಾದ ವಿಷಯವಾಗಿದೆ ಮತ್ತು ಸತ್ಪುರುಷರ ಮೇಲೆ ಭಗವಂತನು ಹೊಂದಿರುವ ಪ್ರೀತಿಯ ತೀವ್ರತೆಯು ಅಪಾರವಾಗಿದೆ. ಆದ್ದರಿಂದ ಅವನೇ ಸ್ವತ: ರಕ್ಷಣೆಗೆ ಬರುತ್ತಾನೆ.