ದೈವ ಸತ್ಯತೆಯ ಅರಿವು
ಮಹಾನ್ ಋಷಿ ಉದ್ಧಾಲಕ ಆರುಣಿಯು ತನ್ನ ಮಗ ಶ್ವೇತಕೇತುವಿಗೆ ಬ್ರಹ್ಮ ಜ್ಞಾನದ ಬಗ್ಗೆ ತಿಳಿಸಲು ಇಚ್ಛಿಸಿದ. ಅದಕ್ಕೆ ಒಂದು ಸರಳ ವಿಧಾನವನ್ನೂ ಹುಡುಕಿದ. ಮಗನಿಗೆ ಒಂದು ದೊಡ್ಡ ವಟವೃಕ್ಷವನ್ನು (ಆಲದ ಮರ) ತೋರಿಸಿ, ಅದರಿಂದ ಒಂದು ಮಾಗಿದ ಹಣ್ಣನ್ನು ತೆಗೆದುಕೊಂಡು ಬರಲು ತಿಳಿಸಿದ. ಮಗನು ಹೋಗಿ, ಒಂದು ಸಣ್ಣದಾದ ಕೆಂಪು ಹಣ್ಣನ್ನು ತಂದ. ಆಗ ಉದ್ಧಾಲಕನು ಮಗನಿಗೆ ಹೇಳಿದ, “ಮಗು, ಈ ಹಣ್ಣನ್ನು ಎರಡು ಭಾಗಗಳಾಗಿ ಮಾಡು.”
“ಇದೋ ಮಾಡಿದೆ, ನೋಡಿ,” ಎಂದು ಮಗನು ತೋರಿಸಿದ.
“ಅದರೊಳಗೆ ಏನು ಕಂಡು ಬರುತ್ತಿದೆ?” ಎಂದು ತಂದೆಯು ಪ್ರಶ್ನಿಸಿದಾಗ,
“ಅಸಂಖ್ಯಾತ ಅತಿ ಸಣ್ಣ ಬೀಜಗಳು. ಬೇರಿನ್ನೇನು ಇರಲು ಸಾಧ್ಯ?” ಮಗನು ಉತ್ತರಿಸಿದ.
“ಒಳ್ಳೆಯದು. ಅದರಲ್ಲಿ ಒಂದು ಸಣ್ಣ ಬೀಜವನ್ನು ತೆಗೆದುಕೋ. ಅದನ್ನು ಸೀಳು,” ಎಂದು ಉದ್ಧಾಲಕ ಸೂಚಿಸಿದ.
ಅಂತೆಯೇ ಶ್ವೇತಕೇತುವು ಒಂದು ಸಣ್ಣ ಬೀಜವನ್ನು ವಿಭಜಿಸಿ, “ಇದೋ ನೋಡಿ!” ಎಂದು ತೋರಿಸಿದ.
“ಅದರೊಳಗೆ ಏನಿದೆ?” ಎಂದು ತಂದೆಯು ಪ್ರಶ್ನಿಸಿದಾಗ, ಗಮನಿಸಿ ನೋಡಿದ ಶ್ವೇತಕೇತುವು ಹೇಳಿದ,” ಇದರೊಳಗೆ ಏನೂ ಇಲ್ಲ.”
ಆಗ ಉದ್ಧಾಲಕನು ಮಗನನ್ನು ಕುರಿತು ಹೀಗೆ ವಿವರಿಸಿದ, “ಓ! ಪ್ರಿಯಪುತ್ರನಾದ ಶ್ವೇತಕೇತುವೇ! ಅಂದರೆ, ಈ ದೊಡ್ಡ ಆಲದ ಮರವು ಒಳಗೆ ಏನೂ ಇಲ್ಲದ ಬೀಜದಿಂದ ಬಂದಿದೆ ಎಂದಾಯಿತು. ಆ ಬೀಜದೊಳಗೆ ಇರುವ ಯಾವುದೋ ಒಂದು ಚೈತನ್ಯ ಶಕ್ತಿಯು ಈ ಮರವು ಹುಟ್ಟುವುದಕ್ಕೆ ಕಾರಣವಾಗಿದೆ. ಕಣ್ಣಿಗೆ ಕಾಣದ ಆ ಅವ್ಯಕ್ತ ಚೈತನ್ಯ ಶಕ್ತಿಯೇ, ಈ ವಿಶ್ವದ ಎಲ್ಲೆಡೆ, ಎಲ್ಲದರಲ್ಲೂ ವ್ಯಾಪಿಸಿದೆ. ಅದೇ ಈ ಸಮಸ್ತ ಸೃಷ್ಟಿಯ ಮೂಲಾಧಾರ. ಈ ಸತ್ಯವನ್ನು ಅರಿತುಕೊ.”
“ತಂದೆಯೇ! ಇದು ನಿಜಕ್ಕೂ ಅತ್ಯದ್ಭುತ, ದಿಗ್ಭ್ರಮೆಗೊಳಿಸುವ ವಿಷಯ. ಆದರೆ, ನಾನು ಅದನ್ನು ಕೇವಲ ತಿಳಿದರೆ ಸಾಲದು, ಅದು ನನ್ನ ಅನುಭವಕ್ಕೂ ಬರಬೇಕಲ್ಲವೇ?” ಎಂದು ಶ್ವೇತಕೇತು ಕೇಳಿದ.
ಆಗ ಉದ್ಧಾಲಕನು ಒಂದು ಸೂಚನೆ ನೀಡಿದ, “ಒಂದು ಕೆಲಸ ಮಾಡು. ರಾತ್ರಿ ನೀನು ಮಲಗುವ ಮೊದಲು, ಒಂದು ಬಟ್ಟಲು ನೀರಿನಲ್ಲಿ ಉಪ್ಪಿನ ಕೆಲವು ಹರಳುಗಳನ್ನು ಹಾಕಿಡು. ಅದನ್ನು ಬೆಳಿಗ್ಗೆ ನನ್ನ ಬಳಿ ತೆಗೆದುಕೊಂಡು ಬಾ.” ವಿಧೇಯನಾಗಿ, ಮಗ ಶ್ವೇತಕೇತುವು ತಂದೆಯು ಹೇಳಿದಂತೆಯೇ ಮಾಡ, ಬೆಳಿಗ್ಗೆ ಆ ಬಟ್ಟಲನ್ನು ತಂದೆಯ ಬಳಿಗೆ ತೆಗೆದುಕೊಂಡು ಹೋದ. ತಂದೆ ಉದ್ಧಾಲಕ ಹೇಳಿದ, “ಮಗನೇ, ಅದರಿಂದ ಉಪ್ಪನ್ನು ಹೊರಗೆ ತೆಗೆ,”
ಇದನ್ನು ಕೇಳಿ ಕಿರಿಕಿರಿಗೊಂಡ ಶ್ವೇತಕೇತುವು ಕೇಳಿದ, “ತಂದೆಯೇ! ಏನು ಹೇಳುತ್ತಿರುವಿರಿ? ಈಗ ಇದರಿಂದ ಉಪ್ಪನ್ನು ಹೊರಗೆ ತೆಗೆಯಲು ಹೇಗೆ ಸಾಧ್ಯ? “ಓ! ಸರಿ ಹಾಗಾದರೆ! ಈಗ ಮೇಲ್ಭಾಗದಲ್ಲಿರುವ ನೀರನ್ನು ಸ್ವಲ್ಪ ತೆಗೆದುಕೊಂಡು ರುಚಿ ನೋಡಿ ಹೇಳು.” ಎಂದ ಉದ್ಧಾಲಕ. ಅದನ್ನು ಕುಡಿದು ನೋಡಿದ ಶ್ವೇತಕೇತುವು ಹೇಳಿದ,” ಅದು ಉಪ್ಪಾಗಿದೆ. ಅದು ಹಾಗಿರಲೇಬೇಕು.”
ತಂದೆಯು ಮತ್ತೆ ಸೂಚನೆ ನೀಡಿದ, “ಈಗ ನೀರಿನ ಮಧ್ಯ ಭಾಗದಿಂದ ಮತ್ತು ತಳಭಾಗದಿಂದ ನೀರನ್ನು ತೆಗೆದುಕೊಂಡು ಕುಡಿದು ನೋಡಿ, ಅವುಗಳ ರುಚಿಯು ಹೇಗಿದೆ ತಿಳಿಸು.”
ಅಂತೆಯೇ ಮಾಡಿದ ಮಗ ಉತ್ತರಿಸಿದ, “ಅದೂ ಸಹ ಉಪ್ಪಾಗಿಯೇ ಇದೆ.”
ಆಗ ಉದ್ಧಾಲಕ ಋಷಿಯು ವಿವರಿಸಿದ, “ಪ್ರೀತಿಯ ಪುತ್ರ ಶ್ವೇತಕೇತುವೇ, ಕೇಳು. ಸರ್ವವ್ಯಾಪಕ ಚೈತನ್ಯ ಶಕ್ತಿಯ ಬಗ್ಗೆ ನಿನಗೆ ತಿಳಿಸಿದೆ ಅಲ್ಲವೇ? ಅದು, ಈ ಬಟ್ಟಲಲ್ಲಿರುವ ಉಪ್ಪು ನೀರಿನಂತೆ, ಅದರೊಳಗೇ ಅಡಗಿದೆ. ಅದು ನಿನ್ನಲ್ಲೂ ಇದೆ, ಅದೇ ನೀನು.”
“ಇದೆಲ್ಲವನ್ನು ತಿಳಿಯಲು ಸುಲಭ. ಆದರ ಅನುಭವ ಪಡೆಯಲು ಬಹಳ ಕಷ್ಟ. “ಎಂದ ಶ್ವೇತಕೇತು.
ಆಗ ಉದ್ಧಾಲಕನು ವಿವರಿಸಿದ, “ಈ ಚೈತನ್ಯವನ್ನು ಸಾಕ್ಷಾತ್ಕರಿಸಿ ಕೊಳ್ಳುವುದು ಹೇಗೆಂದು ನಾನು ಈಗ ತಿಳಿಸುವೆ, ಕೇಳು. ಒಂದು ವೇಳೆ, ಒಬ್ಬ ವ್ಯಕ್ತಿಯ ಕಣ್ಣುಗಳನ್ನು ಕಟ್ಟಿ, ಅವನ ಮನೆಯಿಂದ ದೂರದ ಒಂದು ಗೊತ್ತಿಲ್ಲದ ಕಾಡಿನಲ್ಲಿ ಬಿಟ್ಟು ಬಂದರೆ, ಆಗ ಅವನೇನು ಮಾಡುವನು? ತನ್ನ ಮನೆಗೆ ದಾರಿಯನ್ನು ಹೇಗೆ ಹುಡುಕುವನು? ಅವನನ್ನು ಅಲ್ಲಿ ಬಿಟ್ಟು ಬಂದಮೇಲೆ, ಕೂಡಲೇ ವನು ತನ್ನ ಕಣ್ಣುಗಳಿಗೆ ಕಟ್ಟಿರುವ ಬಟ್ಟೆಯನ್ನು ಕಿತ್ತು ಹಾಕುವನು. ನಂತರ, ಅಲ್ಲಿಯೇ ಸುತ್ತಾಡುತ್ತಾ, ತನ್ನ ಮನೆಗೆ ದಾರಿ ಹುಡುಕಲು ಪ್ರಯತ್ನಿಸುವನು. ಹಳ್ಳಿ, ಹಳ್ಳಿಗೂ ಹೋಗಿ ದಾರಿಕೇಳುವಾಗ, ಯಾರಾದರೂ ಒಬ್ಬರು ಅವನಿಗೆ ಸರಿಯಾದ ದಾರಿಯನ್ನು ತೋರಿಸುವರು. ಆಗ ಅವನು ತನ್ನ ಮನೆಗೆ ಹಿಂತಿರುಗುವನು. ಹಾಗೆಯೇ ನಮ್ಮ ಆಧ್ಯಾತ್ಮಿಕ ನೆಲೆಯನ್ನು ಹುಡುಕುವುದೂ ಸಹ. ನಾವೂ ದಾರಿ ತಿಳಿಯದೇ ಅದರಿಂದ ದೂರವಾಗಿ, ಅಜ್ಞಾನದಲ್ಲಿ ಅಲೆದಾಡುತ್ತಿದ್ದೇವೆ. ಆ ಚೈತನ್ಯ ಶಕ್ತಿಯನ್ನು ಹುಡುಕುತ್ತಾ, ಅದರ ಕಡೆಗೆ ಹೆಜ್ಜೆ ಹಾಕುತ್ತಾ ಮುಂದೆ ನಡೆಯಬೇಕು. ಓ ಶ್ವೇತಕೇತು! ಆ ಚೈತನ್ಯ ಶಕ್ತಿಯು ನಿನ್ನಲ್ಲೇ ಇದೆ. ಅದೇ ನೀನು.” ಹೀಗೆ, ಛಾಂದೋಗ್ಯ ಉಪನಿಷತ್ತಿನಲ್ಲಿ ಉದ್ಧಾಲಕ ಅರುಣಿಯು ಮಗ ಶ್ವೇತಕೇತುವಿಗೆ ಬೋಧಿಸಿದನು.
ಪ್ರಶ್ನೆಗಳು
- ಉದ್ಧಾಲಕ ಋಷಿಯು ಶ್ವೇತಕೇತುವಿಗೆ ಏನನ್ನು ಕಲಿಸಲು ಯತ್ನಿಸಿದನು?
- ಏನನ್ನು ತೆಗೆದುಕೊಂಡು ಬರಲು ಶ್ವೇತಕೇತುವಿಗೆ ಹೇಳಿದನು?
- ಅವನು ಏನು ಮಾಡಬೇಕೆಂದು ಹೇಳಿದನು?
- ದೇವರು ಸರ್ವವ್ಯಾಪಿ ಎಂಬುದನ್ನು ಶ್ವೇತಕೇತುವು ಹೇಗೆ ಅರಿತನು?
[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್– 2
ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ]