ಸತ್ಯಸಂಧತೆಯಿಂದಲೇ ದೈವ ಕೃಪೆಯ ಪ್ರಾಪ್ತಿ
ಇತ್ತೀಚಿನ ದಿನಗಳಲ್ಲಿ, ಜನರು ಸೇವೆಯನ್ನು ಮಾಡುವುದಕ್ಕಿಂತಲೂ, ಅದರ ಬಗ್ಗೆ ಮಾತನಾಡುವುದೇ ಹೆಚ್ಚು. ಆದರೆ ಹಾಗೆ ಮಾಡಿ, ದೇವರನ್ನು ಮೋಸಮಾಡಲು ಆಗುವುದಿಲ್ಲ. ದೇವರು ಸರ್ವಜ್ಞ.
ಅದೊಂದು ಶಿವರಾತ್ರಿಯ ಪವಿತ್ರ ದಿನ. ಪಾರ್ವತೀ, ಪರಮೇಶ್ವರರು ವಾರಣಾಸಿ ನಗರದ ಮೇಲೆ, ಆಕಾಶ ಮಾರ್ಗವಾಗಿ ಹೋಗುತ್ತಿದ್ದರು. ಅಂದು, ಆ ಯಾತ್ರಾಸ್ಥಳದ ಚಿಕ್ಕ, ಚಿಕ್ಕ ಗಲ್ಲಿಗಳಲ್ಲಿ ಮತ್ತು ಸ್ನಾನಘಟ್ಟಗಳಲ್ಲಿ ಸಾವಿರಾರು ಜನರು ತುಂಬಿದ್ದರು. ವಿಶ್ವನಾಥನ ದೇವಾಲಯದ ಆವರಣವು, ಶಿವನನ್ನು ಸ್ತುತಿಸುತ್ತಿದ್ದ ಪುರುಷರು ಮತ್ತು ಮಹಿಳೆಯರಿಂದ ತುಂಬಿಹೋಗಿತ್ತು. ಅದನ್ನು ಕಂಡ ಪಾರ್ವತಿಯು, ಶಿವನನ್ನು ಉದ್ದೇಶಿಸಿ ಹೇಳಿದಳು, “ಪ್ರಭು! ನೋಡಿ, ಈದಿನ ಅದೆಷ್ಟು ಜನರು ಬಹಳ ಭಕ್ತಿಯಿಂದ ಇಲ್ಲಿ ಬಂದು ಸೇರಿದ್ದಾರೆ. ಇವರಿಗೆಲ್ಲಾ ಖಂಡಿತವಾಗಿಯೂ ಸ್ವರ್ಗ ಪ್ರಾಪ್ತಿಯಾಗುತ್ತದೆ. ಇಷ್ಟು ಜನರಿಗೆ ಸ್ವರ್ಗದಲ್ಲಿ ಸ್ಥಳಾವಕಾಶವು ದೊರೆಯಬಹುದೇ?”
ಪಾರ್ವತಿಯ ಮುಗ್ಧತೆಯನ್ನು ನೋಡಿ, ಶಿವನು ನಕ್ಕು ನುಡಿದನು, “ವಾರಣಾಸಿಗೆ ಶಿವರಾತ್ರಿಯಂದು ಬರುವ ಎಲ್ಲಾ ಜನರಿಗೂ ಸ್ವರ್ಗ ದೊರೆಯುವುದಾದರೇ, ವಾರಣಾಸಿಯೇ ಸ್ವರ್ಗವಾಗುವುದು. ಇವರೆಲ್ಲರಲ್ಲಿ ಸ್ವಾರ್ಥವು ತುಂಬಿ ತುಳುಕುತ್ತಿದೆ. ಇವರಲ್ಲಿ ಒಬ್ಬರಾದರೂ ಸ್ವರ್ಗಕ್ಕೆ ಹೋಗುವ ಆಸೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇತರರ ಹಣವನ್ನು ಕದ್ದ ಕಳ್ಳನು, ಕಳ್ಳತನದಿಂದ ದೊರೆತ ಆ ಹಣದಿಂದ ವಾರಣಾಸಿಗೆ ಬರಲು ಪ್ರಯಾಣದ ಚೀಟಿಯನ್ನು ಕೊಂಡುಕೊಂಡರೆ, ಸ್ವರ್ಗಕ್ಕೆ ಹೋಗಲು ಅರ್ಹನಾಗುವನೇ? ಪಾವಿತ್ರ್ಯತೆ, ಸತ್ಯ, ಪ್ರೇಮ,- ಇವೇ ಆನಂದದ ಬಾಗಿಲನ್ನು ತೆರೆಯುವ ಸಾಧನಗಳು. ಇಲ್ಲಿ ನೆರೆದಿರುವವರಲ್ಲಿ ಸ್ವರ್ಗಕ್ಕೆ ಹೋಗಲು ಎಷ್ಟು ಜನರು ಅರ್ಹರು? ಎಂಬುದನ್ನು ರುಜುವಾತುಮಾಡುವೆ, ಬಾ! ನಾವು ಉಡುಗಿಹೋದ, ದುರ್ಬಲ ವೃದ್ಧ ದಂಪತಿಗಳ ರೂಪದಲ್ಲಿ, ನಗರದೊಳಗೆ ಹೋಗೋಣ.” ಎಂದು.
ದೇವಾಲಯಕ್ಕೆ ಹೋಗುವ ಒಂದು ಸಣ್ಣ ರಸ್ತೆ. ವಿಶ್ವನಾಥ ದೇವಾಲಯದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಲೆಂದು, ಕೈಯಲ್ಲಿ ಗಂಗಾಜಲ ತುಂಬಿದ ಪಾತ್ರೆಗಳನ್ನು ಹಿಡಿದುಕೊಂಡು ನೂರಾರು ಭಕ್ತರು, ಆ ಮಾರ್ಗದ ಮೂಲಕ ಸಾಗುತ್ತಿದ್ದು, ಅಲ್ಲಿ ದಟ್ಟ ಜನಸಂದಣಿಯು ತುಂಬಿತ್ತು. ಆ ದಾರಿಯ ಒಂದು ಪಕ್ಕದಲ್ಲಿ, ಒಬ್ಬ ವೃದ್ಧನು ಬಹಳ ಬಾಯಾರಿಕೆಯಿಂದ, ನೀರಿಗಾಗಿ ಹಂಬಲಿಸುತ್ತಾ, ತನ್ನ ಪತ್ನಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದನು. ಆ ವೃದ್ಧ ಪತ್ನಿಯು, ಆ ದಾರಿಯಲ್ಲಿ ಹೋಗುತ್ತಿದ್ದ ಭಕ್ತರನ್ನು, “ನೀರು, ನೀರನ್ನು ಕೊಟ್ಟು ಸಾಯಲಿರುವ ನನ್ನ ಪತಿಯನ್ನು ಉಳಿಸಿಕೊಡಿ,” ಎಂದು ಅತ್ಯಂತ ದೈನ್ಯದಿಂದ ಅಳುತ್ತಾ, ಯಾಚಿಸುತ್ತಿದ್ದಳು. ಆದರೆ ಯಾರೊಬ್ಬ ಭಕ್ತರೂ ಆ ವೃದ್ಧನಿಗೆ ಕುಡಿಯಲು ನೀರುಕೊಟ್ಟು, ಅವನನ್ನು ಸಂತೈಸಲು ಮುಂದೆಬರಲಿಲ್ಲ. ಆಕೆಯು ಜೋರಾಗಿ ಕೂಗಿಕೊಂಡು, ಯಾಚಿಸುತ್ತಿದ್ದುದನ್ನು ಕಂಡ ಅನೇಕ ಭಕ್ತರು ಅವಳನ್ನು ಬೈದರು. ಕೆಲವರು ಅಲ್ಲಿಂದ ದೂರ ಹೋಗಿರೆಂದು ಜೋರಾಗಿ ಗದರಿಸಿದರು. ಇನ್ನು ಕೆಲವರು, ದೇವಾಲಯದಲ್ಲಿ ಪೂಜೆ ಮುಗಿಸಿ ಹಿಂತಿರುಗಿ ಬರುವಾಗ ನೀರನ್ನು ಕೊಡುವೆವು ಎಂದರು. ಕೆಲವರಂತೂ, ಹೀಗೆ ಭಿಕ್ಷೆ ಬೇಡುವುದು ಅಪರಾಧವೆಂದೂ, ಜನರಿಗೆ ತೊಂದರೆ ಕೊಡುವ ಇಂತಹವರನ್ನು ಪೊಲೀಸರಿಗೆ ಒಪ್ಪಿಸಬೇಕೆಂದು ಕೂಗಾಡಿದರು. ಇನ್ನು ಕೆಲವರಾದರೋ, ಜನರ ಗಮನವನ್ನು ತನ್ನ ಕಡೆಗೆ ಸೆಳೆಯಲು, ಆ ವೃದ್ಧೆಯು ಆಡುತ್ತಿರುವ ನಾಟಕವೆಂದು, ಅವಳನ್ನು ಅಪಹಾಸ್ಯಮಾಡಿದರು. ಆದರೆ ಆ ನಿಸ್ಸಹಾಯ ದಂಪತಿಗಳ ಸ್ಥಿತಿಯನ್ನು ಕಂಡು ಯಾವ ಹೃದಯವೂ ಕರಗಲಿಲ್ಲ.
ಅಂತೂ ಕಡೆಗೆ, ಅವರನ್ನು ನೋಡಿ ಕನಿಕರಗೊಂಡ ಒಬ್ಬ ವ್ಯಕ್ತಿಯು ಅವರ ಹತ್ತಿರ ಬಂದನು. ಅವನೊಬ್ಬ ಜೇಬುಗಳ್ಳ. ಜನರ ಹಣವನ್ನು ಕದಿಯಲು, ವಾರಣಾಸಿಯ ಸ್ನಾನಘಟ್ಟಗಳ ಬಳಿ ಬಂದಿದ್ದವನು. ಅವನು ಬಂದು ಆ ವೃದ್ಧನ ಪಕ್ಕದಲ್ಲಿ ಕುಳಿತು, ತನ್ನ ಬಳಿಯಿದ್ದ ಒಣಗಿದ ಸೊರೆ ಬುರುಡೆಯಲ್ಲಿ ತುಂಬಿದ್ದ ನೀರನ್ನು ಹೊರಗೆ ತೆಗೆದನು. ಅದೇ ಅವನ ನೀರಿನ ಬಾಟಲಿ. ಆಗ ವೃದ್ಧೆಯ ರೂಪದಲ್ಲಿದ್ದ ಪಾರ್ವತಿಯು, ವನಲ್ಲಿ ಮತ್ತಾವುದಾದರೂ ಸದ್ಗುಣಗಳು ಇರುವವೇನೋ ಎಂದು ಪರೀಕ್ಷಿಸಲು, ಅವನನ್ನು ಕುರಿತು ಹೇಳಿದಳು,” ಸಹೋದರನೇ! ನಿನಗೆ ಬಹಳ ಧನ್ಯವಾದಗಳು. ಆದರೆ ಒಂದು ವಿಷಯ. ನೀನು ಮಾಡಿರುವ ಯಾವುದಾದರೂ ಒಂದು ಒಳ್ಳೆಯ ಕಾರ್ಯದ ಬಗ್ಗೆ ಹೇಳಿ, ನಂತರ ನನ್ನ ಪತಿಯ ಒಣಗಿದ ಗಂಟಲಿಗೆ ನೀರನ್ನು ಕುಡಿಸಬೇಕು. ಆಗ ಮಾತ್ರ ಆತನು ನೀರನ್ನು ಕುಡಿಯುವನು. ಆತನು ಸಾಯುವ ಸ್ಥಿತಿಯಲ್ಲಿದ್ದಾನೆ. ಆದ್ದರಿಂದ, ಆತನಿಗೆ ನೀರು ಕುಡಿಸುವಾಗ, ನೀನು ಮಾಡಿದ ಆ ಒಳ್ಳೆಯ ಕಾರ್ಯದ ಫಲವನ್ನೂ ಆತನಿಗೆ ಧಾರೆಯೆರೆಯಬೇಕು,” ಅದನ್ನು ಕೇಳಿದ, ಆ ಕಠಿಣ ಮುಖದ ಕಳ್ಳನು ಉತ್ತರಿಸಿದನು, “ನಾನು ಇದುವರೆಗೆ ಅಂತಹ ಯಾವ ಒಳ್ಳೆಯ ಕಾರ್ಯವನ್ನೂ ಮಾಡಿಲ್ಲ. ಮತ್ತೊಬ್ಬರ ಕಷ್ಟವನ್ನು ನೋಡಿ, ನನ್ನ ಮನಸ್ಸು ಕರಗಿದ್ದು ಇದೇ ಮೊದಲ ಬಾರಿ. ಇದಕ್ಕೆ ವಾರಣಾಸಿಯ ಪ್ರಭು ವಿಶ್ವೇಶ್ವರನೇ ಸಾಕ್ಷಿ. “ಹೀಗೆ ಹೇಳುತ್ತಾ, ಅವನು ಪವಿತ್ರ ಗಂಗಾಜಲವನ್ನು ಆ ವೃದ್ಧನಿಗೆ ಕುಡಿಸಿದನು.
ಆ ಕೂಡಲೇ, ಶಿವ ಪಾರ್ವತಿಯರು ಅವನ ಮುಂದೆ ತಮ್ಮ ನಿಜ ರೂಪದಲ್ಲಿ ಪ್ರತ್ಯಕ್ಷರಾದರು. ಅಲ್ಲಿ ಸೇರಿರುವ ಸಾವಿರಾರು ಬರಡು ಹೃದಯದ ಜನರಲ್ಲಿ, ಅವನೊಬ್ಬನೇ ಸ್ವರ್ಗಕ್ಕೆ ಹೋಗಲು ಅರ್ಹನೆಂದು ತಿಳಿಸಿ, ಅವನನ್ನು ಆಶೀರ್ವದಿಸಿದರು. ಅವನ ಸತ್ಯವಂತಿಕೆ ಮತ್ತು ಪ್ರೇಮಗಳಿಂದಾಗಿ, ಅವನಿಗೆ ದೇವರ ಕೃಪೆಯು ಲಭಿಸಿತು.
ಪ್ರಶ್ನೆಗಳು
- ಶಿವ, ಪಾರ್ವತಿಯರ ನಡುವೆ ನಡೆದ ಸಂವಾದವನ್ನು ವಿವರಿಸಿ.
- ಆ ದೈವ ದಂಪತಿಗಳು ಹಾಕಿಕೊಂಡ ಯೋಜನೆ ಏನು?
- ಅವರಿಗೆ ಸಹಾಯ ಮಾಡಲು ಯಾರು ಮುಂದೆ ಬಂದರು?
- ಅವನು ಏನು ಮಾಡಿದನು?
[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್ –2]
[ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ]