ಯತ್ಕರೋಷಿ – ಹೆಚ್ಚಿನ ಓದುವಿಕೆ
ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್
ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಂ ||
(ಅಧ್ಯಾಯ ೯, ಶ್ಲೋಕ ೨೭)
ಅರ್ಜುನಾ, ಯಾವ ಕೆಲಸ ಮಾಡುವಿಯೋ, ಯಾವುದನ್ನು ತಿನ್ನುವೆಯೋ, ಯಾವುದನ್ನು ಹೋಮ ಮಾಡುವಿಯೋ, ಯಾವುದನ್ನು ದಾನ ಮಾಡುವಿಯೋ, ಯಾವ ತಪಸ್ಸನ್ನು ಮಾಡುವಿಯೋ ಅವೆಲ್ಲವನ್ನೂ ನನಗೆ ಸಮರ್ಪಿಸು.
“ನೀವು ಏನನ್ನು ಮಾಡಿದರೂ ಅದನ್ನು ಭಗವಂತನ ತೃಪ್ತಿಗಾಗಿ ಮಾಡಿ. ನಿಮ್ಮ ಎಲ್ಲಾ ವರ್ತನೆಗಳೂ ಎಲ್ಲರ ಪ್ರಯೋಜನಕ್ಕಾಗಿ ಇರಬೇಕು. ನಿಮ್ಮ ಎಲ್ಲ ಕಾರ್ಯಗಳು ಸ್ವಾರ್ಥರಹಿತವಾಗಿ ಮತ್ತು ಪವಿತ್ರವಾಗಿ ಇರಬೇಕು. ಆಗ ಮಾತ್ರ ನೀವು ನನ್ನ ಪ್ರೀತಿಪಾತ್ರರಾಗುತ್ತೀರಿ ಮತ್ತು ನಾನು ನಿಮ್ಮ ಮಿತ್ರನಾಗುತ್ತೇನೆ. ನೀವು ಯಾರಿಗಾದರೂ ಒಂದು ತುತ್ತು ಅನ್ನ ನೀಡಿದರೂ ಅದನ್ನು ಸರಿಯಾದ ಕ್ರಮದಲ್ಲಿ ಮಾಡಿರಿ”.ಎಂದು ಸ್ವಾಮಿ ಹೇಳಿದ್ದಾರೆ.
ನೀವು ಏನನ್ನು ಮಾಡಿದರೂ ಅದನ್ನು ಎಚ್ಚರಿಕೆಯಿಂದ ಮಾಡಿರಿ. (Whatever you do, do it with CARE i.e Constant Awareness of the Real Entity (God). Always act in “Dharma”). ಯಾವಾಗಲೂ ‘ಧರ್ಮ’ ಮಾರ್ಗದಲ್ಲಿ ನಡೆಯಿರಿ.
ಶ್ರೀಮತಿ. ಗೀತಾರಾಮ್ ರವರು ಸೇವೆಗೆ ಸಂಬಂಧಿಸಿದ ಒಂದು ಘಟನೆಯನ್ನು ವಿವರಿಸುತ್ತಾರೆ. ಒಂದು ಸಂದರ್ಶನದ ಸಮಯದಲ್ಲಿ ಸ್ವಾಮಿ ಒಬ್ಬ ಮಹಿಳೆಗೆ, ‘ನಿಮ್ಮ ನಗರದಲ್ಲಿ ಸೇವೆ ಹೇಗೆ ನಡೆಯುತ್ತಿದೆ?” ಎಂದು ಕೇಳಿದರು. ಆ ಮಹಿಳೆಯು ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದಳು. ಆ ದಿನಗಳಲ್ಲಿ ಸ್ವಾಮಿ, ಪ್ರತಿದಿನ ನಾವು ಅಡಿಗೆ ಮಾಡುವಾಗ ಒಂದು ಮುಷ್ಟಿ ಅಕ್ಕಿಯನ್ನು ಪ್ರತ್ಯೇಕವಾಗಿ ತೆಗೆದಿಟ್ಟು, ಪ್ರತಿ ಮನೆಯಿಂದ ಅದನ್ನು ಸಂಗ್ರಹಿಸಿ, ಅಗತ್ಯವಿರುವವರಿಗೆ ನೀಡಬೇಕೆಂದೂ, ಇದರಿಂದ ಪ್ರತಿನಿತ್ಯ ನಾವು ಸೇವೆ ಮಾಡುತ್ತಿರುವ ಭಾವನೆ ಉಂಟಾಗುವುದೆಂದೂ ಸಲಹೆ ಮಾಡುತ್ತಿದ್ದರು. ಆ ಮಹಿಳೆಯೇ ಸಂಚಾಲಕಳಾಗಿದ್ದುದರಿಂದ ಆ ನಗರದಲ್ಲಿ ನಡೆಯುತ್ತಿದ್ದ ಸೇವಾ ಚಟುವಟಿಕೆಗಳ ಬಗ್ಗೆ ಅವಳು ಹೇಳತೊಡಗಿದಳು. ಅವಳು ಹೆಮ್ಮೆಯಿಂದ ಪುನಃ ಎಲ್ಲ ಚಟುವಟಿಕೆಗಳ ಪಟ್ಟಿಮಾಡಿದಳು. ಸ್ವಾಮಿ ‘ಬಹಳ ಸಂತೋಷ’ ಎಂದು ಹೇಳಿದರು.
ನಂತರ ಅವರು, “ಎರಡು ರೂಪಾಯಿಯ ಅಕ್ಕಿಯೋ ಅಥವಾ ಐದು ರೂಪಾಯಿಯದೋ?” ಎಂದು ಕೇಳಿದರು. ಆಗ ಆ ಮಹಿಳೆಯು ‘ಬೇರೆಬೇರೆ ಜನರು ಬೇರೆಬೇರೆ ಬಗೆಯ ಅಕ್ಕಿಯನ್ನು ತರುತ್ತಾರೆ ಸ್ವಾಮಿ’ ಎಂದು ಹೇಳಿದಳು. ಆಗ ಸ್ವಾಮಿ, “ನಾನು ಬೇರೆಯವರ ಬಗ್ಗೆ ಕೇಳುತ್ತಿಲ್ಲ, ನೀನು ಯಾವ ಅಕ್ಕಿ ಕೊಡುತ್ತಿರುವೆಯೆಂದು ಕೇಳುತ್ತಿದ್ದೇನೆ?” ಎಂದು ಹೇಳಿದರು. ಅವಳು ಹಿಂಜರಿಯುತ್ತಾ, “ಒಳ್ಳೆಯ ಅಕ್ಕಿ ಸ್ವಾಮಿ” ಎಂದು ಹೇಳಿದಳು. ಆಗ ಸ್ವಾಮಿ ಬಿರುಸಾಗಿ, “ಏನು? ಬಡಜನರಿಗೆ, ನಾರಾಯಣ ಸೇವೆಗೆ ಎರಡು ರೂಪಾಯಿಯ ಅಕ್ಕಿ! ಮತ್ತೆ ನಿಮ್ಮ ಕುಟುಂಬಕ್ಕೆ ಐದು ರೂಪಾಯಿಯ ಅಕ್ಕಿ! ಸ್ವಚ್ಛ ಮಾಡದೇ ಇರುವ, ಕಲ್ಲುಗಳಿಂದ ಕೂಡಿದ ಎರಡು ರೂಪಾಯಿಯ ಅಕ್ಕಿಯನ್ನು ನೀನು ಬಡವರ ಸೇವೆಗೆ ಬಳಸುತ್ತಿದ್ದೀಯೆ” ಎಂದು ಹೇಳಿದರು. “ಮಹಿಳೆಯು ಇಲ್ಲ ಸ್ವಾಮಿ” ಎಂದಳು.
ಆಗ ಸ್ವಾಮಿ ಕುರ್ಚಿಯಿಂದ ಎದ್ದು, “ಎರಡು ವರ್ಷಗಳ ಹಿಂದೆ ನಾನು ನಿನ್ನ ಮನೆಗೆ ಭಿಕ್ಷುಕನಂತೆ ಬಂದಿದ್ದೆ. ಆಗ ನೀನು ನಾರಾಯಣ ಸೇವೆಗಾಗಿ ಉಳಿಸಿದ ಅಕ್ಕಿಯನ್ನು ನನಗೆ ಕೊಟ್ಟೆ. ಆ ಅಕ್ಕಿಯನ್ನು ನೀನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿದ್ದೆ. ನಿನಗೆ ನಂಬಿಕೆಯಿಲ್ಲ ಅಲ್ಲವೇ? ಸ್ವಲ್ಪ ಇರು,” ಎಂದು ಹೇಳಿದ ಅವರು ಒಳಕೋಣೆಗೆ ಹೋದರು. ಹೊರಬರುವಾಗ ಒಂದು ಕೆಂಪುಬಟ್ಟೆಯ ಗಂಟನ್ನು ತಂದು, “ಇದನ್ನು ನೀನು ನನಗೆ ಕೊಟ್ಟಿರಲಿಲ್ಲವೆ?” ಎಂದು ಕೇಳಿದರು. ಮಹಿಳೆ ಅಳಲು ಪ್ರಾರಂಭಿಸಿದಳು.
‘ಸೇವೆಯನ್ನು ಪ್ರೇಮದಿಂದ ಮಾಡಬೇಕು’ ಎಂಬ ಮೂಲ ಸಂದೇಶವನ್ನು ತಿಳಿಸಲು ಸ್ವಾಮಿ ಪ್ರಯತ್ನಿಸಿದ್ದರು. ನೀವು ಯಾರ ಸೇವೆಯನ್ನು ಮಾಡುತ್ತೀರೋ ಅವರಲ್ಲಿ ಸ್ವಾಮಿಯನ್ನು ಕಾಣಬೇಕು ಮತ್ತು ಅದಕ್ಕನುಗುಣವಾಗಿ ಸೇವೆ ಮಾಡಬೇಕು.