ತಸ್ಮಾದಸಕ್ತಃ-ಸತತಂ –ಮುಂದುವರೆದ ಅಧ್ಯಯನ
ಈ ಶ್ಲೋಕದಲ್ಲಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, “ಆಸಕ್ತಿಯಿಲ್ಲದೆ ನಿನ್ನ ಕರ್ತವ್ಯವನ್ನು ಮಾಡು. ಆಸಕ್ತಿಯಿಲ್ಲದೆ ಕರ್ತವ್ಯವನ್ನು ಮಾಡುವುದರಿಂದ ಮನುಷ್ಯನು ಪರಮೋನ್ನತ ತತ್ವವನ್ನು ಪಡೆಯುತ್ತಾನೆ.
ಆಸಕ್ತಿಯನ್ನು ತ್ಯಜಿಸುವುದು ಎಂದರೆ ಆಸೆಗಳನ್ನು ತ್ಯಜಿಸುವುದು. ಫಲಾಸಕ್ತಿಯು ಆಸೆಗೆ ಕಾರಣವಾಗುತ್ತದೆ. ಫಲವನ್ನು ಬಯಸದೆ ಎಚ್ಚರಿಕೆಯಿಂದ, ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ಕರ್ತವ್ಯವು ಮನಸ್ಸಿಗೆ ಶಾಂತಿಯನ್ನು ತರುತ್ತದೆ.
ರಾಜ ಜನಕನು ಕರ್ಮಯೋಗಿಯ ಅತ್ಯುತ್ತಮ ಉದಾಹರಣೆ, ಆತನು ರಾಜನಾಗಿ ತನ್ನ ಕರ್ತವ್ಯವನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಿದ್ದ. ಅದೇ ಸಮಯದಲ್ಲಿ, ಅವನು ಯೋಗಿಯಾಗಿದ್ದ ಮತ್ತು ತನ್ನ ಕರ್ಮದ ಫಲದ ಬಗ್ಗೆ ಸ್ವಲ್ಪವೂ ಚಿಂತಿಸಲಿಲ್ಲ. ಅವರು ಸಮಚಿತ್ತತೆಯನ್ನು ಹೊಂದಿದ್ದ ಮತ್ತು ಅವನು ಯಾವಾಗಲೂ ದೇವರನ್ನು ಸ್ಮರಿಸುತ್ತಾ ಧಾರ್ಮಿಕ ಜೀವನವನ್ನು ನಡೆಸುತ್ತಿದ್ದ.
ಪ್ರೀತಿಯಿಂದ ಅಥವಾ ಕರ್ತವ್ಯ ಪ್ರಜ್ಞೆಯಿಂದ ಮಾಡಿದ ಕೆಲಸವು ಹೃದಯವನ್ನು ಅರಳಿಸುತ್ತದೆ. ಪ್ರಜ್ಞೆಯು ವಿಸ್ತರಿಸುತ್ತದೆ ಮತ್ತು ಆಳವಾಗುತ್ತದೆ. ನಮ್ಮಲ್ಲಿ ಸುಪ್ತವಾಗಿರುವ ಸ್ವಾರ್ಥ ಒಡೆಯುತ್ತದೆ. ಅಂತಹ ವ್ಯಕ್ತಿಯು ತನ್ನ ಸಂಪತ್ತು, ಕೌಶಲ್ಯ ಮತ್ತು ಬುದ್ಧಿವಂತಿಕೆ, ತನ್ನ ಸ್ಥಾನಮಾನವನ್ನು ಇತರರಿಗೆ ಅರ್ಪಿಸುತ್ತಾನೆ. ಅವನು ನಿಜವಾಗಿಯೂ ಶಾಂತ ಮನುಷ್ಯನಾಗುತ್ತಾನೆ, ಅವನು ಎಲ್ಲೇ ಇರಲಿ ಮತ್ತು ಅವನ ಸುತ್ತಲಿನ ಜನರು ಸಹ ಅವನ ಶಾಂತಿಯನ್ನು ಅನುಭವಿಸುತ್ತಾರೆ. ಬಂಧನರಹಿತ ಸ್ಥಿತಿಯು ಮನಸ್ಸಿನ ಶುದ್ಧೀಕರಣಕ್ಕೆ ಕಾರಣವಾಗುತ್ತದೆ, ನಮ್ಮ ದೇಹದ ಕರ್ಮಗಳು ಬಂಧನವಿಲ್ಲದೆ ದಿನದಿಂದ ದಿನಕ್ಕೆ ನಡೆಸಲ್ಪಡುತ್ತವೆ. ಉದಾಹರಣೆಗೆ, ನಮ್ಮ ಹೃದಯವು ಹಗಲು ರಾತ್ರಿ ಎಡೆಬಿಡದೆ ಬಡಿಯುತ್ತದೆ, ಆದರೆ ನಾವು ಅದನ್ನು ಯೋಚಿಸುವುದಿಲ್ಲ.
ನಮ್ಮ ಆಹಾರವು ಹೊಟ್ಟೆಯಲ್ಲಿ ಜೀರ್ಣವಾಗುತ್ತದೆ, ಆದರೆ ನಾವು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಅದೇ ರೀತಿಯಲ್ಲಿ, ನಮ್ಮ ಲೌಕಿಕ ಕರ್ತವ್ಯಗಳು ತನ್ನಿಂದ ತಾನಾಗಿಯೇ ನಡೆಯಬೇಕು ಆದರೆ ಪರಿಣಾಮಕಾರಿಯಾಗಿರಬೇಕು. ಈ ರೀತಿ, ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಲವೊಮ್ಮೆ, ಹಳ್ಳಿಯ ಹೆಂಗಸರು ತಮ್ಮ ತಲೆಯ ಮೇಲೆ ಮತ್ತು ಕೈಯಲ್ಲಿ ನೀರನ್ನು ಸಾಕಷ್ಟು ತೂಕದ ದೊಡ್ಡ ಮಡಕೆಗಳಲ್ಲಿ ಹೊತ್ತುಕೊಂಡು ಹೋಗುವುದನ್ನು ನಾವು ನೋಡುತ್ತೇವೆ. ಆದರೆ ಅವರು ನಗುತ್ತಾ ಹರಟೆ ಹೊಡೆಯುತ್ತಾ ನಡೆಯುವುದನ್ನು ನೋಡುತ್ತೇವೆ. ಹರಟೆ, ಸಲ್ಲಾಪಗಳ ಮಧ್ಯೆ ಮನದ ಒಂದು ಭಾಗ ಮಡಕೆಗಳ ಮೇಲೆಯೇ ಇದ್ದರೂ ಉಳಿದ ಭಾಗ ಸ್ನೇಹಿತರೊಂದಿಗೆ ಆನಂದಿಸುತ್ತದೆ. ಅದೇ ರೀತಿ ನಾವು ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ನಮ್ಮ ಕರ್ತವ್ಯಗಳನ್ನು ಮಾಡಬೇಕು, ತನ್ಮಧ್ಯೆ ನಮ್ಮ ಮನಸ್ಸನ್ನು ದೇವರ ಮೇಲೆ ಕೇಂದ್ರೀಕರಿಸಬೇಕು.
ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಅಥವಾ ಮನೆ ಹಾಗೂ ದೇಶದ ಸದಸ್ಯನಾಗಿ ತನ್ನ ಕಡ್ಡಾಯವಾದ ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸದವನು ದೇವರ ಸಾಕ್ಷಾತ್ಕಾರದ ಪರಮಾನಂದವನ್ನು ಎಂದಿಗೂ ತಿಳಿದಿರಲು ಸಾಧ್ಯವಿಲ್ಲ. ನಮ್ಮ ಹಿಂದಿನ ಕರ್ಮಗಳು ಅಥವಾ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಫಲಗಳು ತೀರಬೇಕು. ಇವು ಈ ಜೀವಿತಾವಧಿಯಲ್ಲಿ ನಾವು ಅನುಭವಿಸಬೇಕಾದ ಪ್ರಾರಬ್ದ ಕರ್ಮಗಳು.
ಹಿಂದಿನ ಕರ್ಮಗಳ ಪರಿಣಾಮವನ್ನು ಅಳಿಸಲು ಸುಲಭವಾದ ಪರಿಹಾರವಿದೆ ಎಂದು ನಮ್ಮ ಭಗವಾನರು ಹೇಳುತ್ತಾರೆ. ಅವರು ಹೇಳುತ್ತಾರೆ, ‘ಬೀಜವನ್ನು ಭೂಮಿಯಲ್ಲಿ ಆಳವಾಗಿ ಹೂತಿಟ್ಟರೆ ಅವು ಮೊಳಕೆಯೊಡೆಯುವುದಿಲ್ಲ. ಅದೇ ರೀತಿಯಲ್ಲಿ, ಸಹಾಯ, ಸಾಂತ್ವನ ಮತ್ತು ಪ್ರೀತಿಯ ಅಗತ್ಯವಿರುವವರಿಗೆ ಪ್ರೇಮದ ಸೇವೆಯಿಂದ ನಮ್ಮ ಬೀಜಗಳನ್ನು ಆಳವಾಗಿ ಹೂತಿಟ್ಟರೆ, ಪಾಪ ಕರ್ಮದ ಬೀಜಗಳು ಮೊಳಕೆಯೊಡೆಯುವುದಿಲ್ಲ ಮತ್ತು ನಮ್ಮ ಜೀವನದಲ್ಲಿ ನೋವಿನ ಘಟನೆಗಳಾಗಿ ಬೆಳೆಯುವುದಿಲ್ಲ.
“ಪಾಪ ಕಾರ್ಯಗಳ ಋಣಾತ್ಮಕ ಪರಿಣಾಮವನ್ನು ಯೋಗ್ಯ ಕರ್ಮಗಳ ಧನಾತ್ಮಕ ಪರಿಣಾಮಗಳಿಂದ ಮಾತ್ರ ತಟಸ್ಥಗೊಳಿಸಬಹುದು”. ಪೂರ್ಣ ಬೌದ್ಧಿಕ ಅರಿವಿನೊಂದಿಗೆ, ಕರ್ಮಫಲಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟುಬಿಡಿ ಮತ್ತು ಕರ್ತವ್ಯ ಅಥವಾ ಸಮರ್ಪಣೆಯಾಗಿ ಕೆಲಸಗಳನ್ನು ಮುಂದುವರಿಸಿ. ಈ ಮನೋಭಾವವನ್ನು ಬೆಳೆಸಿಕೊಳ್ಳಿ ಮತ್ತು ಅದರ ಮೂಲಕ ಬಂಧನ ಮತ್ತು ಕರ್ಮದಿಂದ ನಿಮ್ಮನ್ನು ಮುಕ್ತಗೊಳಿಸಿ.
-ಗೀತಾ ವಾಹಿನಿ