ಒಳ್ಳೆಯ ಕೆಲಸ

Print Friendly, PDF & Email
ಒಳ್ಳೆಯ ಕೆಲಸ

ಹಿಂದೆ ರೋಮ್ ನಗರದಲ್ಲಿ ಆಂಡ್ರೋಕ್ಲೀಸ್ ಎಂಬ ಗುಲಾಮನಿದ್ದನು. ಅವನ ಮಾಲೀಕನು ಬಹಳ ಕ್ರೂರಿಯಾಗಿದ್ದನು. ಗುಲಾಮನಿಗೆ ಹಗಲು ರಾತ್ರಿ ದುಡಿಮೆ, ಅತಿ ಸಣ್ಣ ತಪ್ಪಿಗೂ ಬಾರುಕೋಲಿನ ಹೊಡೆತ. ಇದರಿಂದ ಬೇಸತ್ತು ಆಂಡ್ರೋಕ್ಲೀಸ್ ಮನೆಯಿಂದ ಓಡಿ ಹೋಗಿ ಕಾಡಿನಲ್ಲಿ ಒಂದು ಗವಿಯಲ್ಲಿ ಆಶ್ರಯ ಪಡೆದನು.

Androceles removing thorn from lion's paw

ಒಂದು ದಿನ ಬೆಳಿಗ್ಗೆ ಭಯಂಕರವಾದ ಗರ್ಜನೆಯನ್ನು ಕೇಳಿ ಆಂಡ್ರೋಕ್ಲೀಸನಿಗೆ ಎಚ್ಚರವಾಯಿತು. ಅದು ಸಿಂಹದ ಗರ್ಜನೆ. ಆ ಕೂಗು ಕೇಳಿದರೆ ಸಿಂಹವು ಏನೋ ಸಂಕಟದಲ್ಲಿರುವಂತೆ ಅನಿಸುತ್ತಿತ್ತು. ಸ್ವಲ್ಪ ಹೊತ್ತಿಗೆ ಅದು ಕುಂಟುತ್ತಾ, ನರಳುತ್ತಾ ನಿಧಾನವಾಗಿ ಗವಿಯೊಳಗೆ ಬರುವುದು ಅವನಿಗೆ ಕಾಣಿಸಿತು. ಸಿಂಹವು ಒಂದು ಮೂಲೆಯಲ್ಲಿ ಕುಳಿತು ತನ್ನ ಊದಿಕೊಂಡ ಕಾಲನ್ನು ನೆಕ್ಕ ತೊಡಗಿತು. ವನರಾಜನ ಆ ಸ್ಧಿತಿಯನ್ನು ಕಂಡು ಆಂಡ್ರೋಕ್ಲೀಸನ ಅಂತಃಕರಣ ಕರಗಿತು. ಅವನು ಮೇಲೆದ್ದು ಧೈರ್ಯವಾಗಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಸಿಂಹವು ಕುಳಿತಿದ್ದಲ್ಲಿಗೆ ಹೋದನು. ಊದಿಕೊಂಡಿದ್ದ ಕಾಲಿನ ಗಾಯವನ್ನು ಎಚ್ಚರಿಕೆಯಿಂದ ಗಮನಿಸಿದನು. ಅದರ ಪಂಜದಲ್ಲಿ ಒಂದು ಮುಳ್ಳು ಅಳವಾಗಿ ನೆಟ್ಟುಕೊಂಡಿತ್ತು. ಸಿಂಹಕ್ಕೆ ನೋವಾಗದಂತೆ ಉಪಾಯವಾಗಿ ಆ ಮುಳ್ಳನ್ನು ಅವನು ಕಿತ್ತನು. ಅಲ್ಲೇ ಕಾಡಿನಲ್ಲಿದ್ದ ಕೆಲವು ಎಲೆಗಳ ರಸ ಹಿಂಡಿ ಗಾಯಕ್ಕೆ ಉಪಚಾರ ಮಾಡಿದನು. ಮೂರು ದಿನಗಳಲ್ಲಿ ಸಿಂಹದ ಕಾಲಿನ ಗಾಯ ಮಾಗಿತು. ಸಿಂಹವು ಅತ್ಯಂತ ಕೃತಜ್ಞತೆಯಿಂದ ಆಂಡ್ರೋಕ್ಲೀಸ್‌ನ ಕೈಯನ್ನು ನೆಕ್ಕಿ ಸಾವಕಾಶವಾಗಿ ಎದ್ದು ಗವಿಯಿಂದ ಹೊರಟು ಹೋಯಿತು.

ಆಂಡ್ರೋಕ್ಲೀಸ್ ಆ ಗವಿಯಲ್ಲೇ ಆನೇಕ ದಿನ ಇದ್ದನು. ಆಮೇಲೆ ಇನ್ನೇನೂ ಭಯವಿರಲಿಕ್ಕಿಲ್ಲ ಎಂದು ಭಾವಿಸಿ ಹತ್ತಿರದ ನಗರಕ್ಕೆ ಹೋದನು. ಆದರೆ ದುರ್ದೈವದಿಂದ ಅಂದು ಅದೇ ನಗರಕ್ಕೆ ಬಂದಿದ್ದ ಅವನ ಮಾಲೀಕನು ಸಂತೆಯಲ್ಲಿ ಆಂಡ್ರೋಕ್ಲೀಸನನ್ನು ನೋಡಿಬಿಟ್ಟನು. ರೋಮ್ ಶಾಸನಗಳ ಪ್ರಕಾರ ಮಾಲೀಕನ ಮನೆಯಿಂದ ಓಡಿ ಹೋಗಲು ಹವಣಿಸುವ ಗುಲಾಮರಿಗೆ ಉಗ್ರವಾದ ದಂಡನೆಯನ್ನು ವಿಧಿಸಲಾಗುತ್ತಿತ್ತು. ಪಂಜರದಲ್ಲಿ ಹಸಿದಿರುವ ಸಿಂಹದೆದುರಿಗೆ ಇಂಥ ಗುಲಾಮರನ್ನು ದೂಡಿ ಬಿಡುತ್ತಿದ್ದರು. ರಕ್ಷಣೆಗೆಂದು ಚಿಕ್ಕದೊಂದು ಕಠಾರಿಯನ್ನು ಮಟ್ಟಗೆ ಕೊಟ್ಟಿರುತ್ತಿದ್ದರು. ಆ ಬಡಪಾಯಿ ಗುಲಾಮರು ಬದುಕುವ ಆಸೆಯಿಂದ ಹಸಿದ ಸಿಂಹದ ಜೊತೆಗೆ ಹೋರಾಡುವುದನ್ನು ಆಟವೆಂದು ನೋಡಲು ರಾಜನೂ ಅವನ ಪರಿವಾರದವರೂ ಬರುತ್ತಿದ್ದರು. ಸಾಮಾನ್ಯವಾಗಿ ಇಂಥ ಆಟದಲ್ಲಿ ಗುಲಾಮನು ಸತ್ತು ಸಿಂಹವು ಅವನ ಮಾಂಸವನ್ನು ತಿಂದು ಮುಗಿಸುತ್ತಿತ್ತು.

Androceles putting his arms around lion's neck.

ಈ ಕಾನೂನಿಗನುಗುಣವಾಗಿ ಕೈಯಲ್ಲಿ ಚಿಕ್ಕದೊಂದು ಕಠಾರಿಯನ್ನು ಹಿಡಿದುಕೊಂಡ ಆಂಡ್ರೋಕ್ಲೀಸನು ದೊಡ್ಡದಾದ ಕಬ್ಬಿಣದ ಪಂಜರವನ್ನು ಪ್ರವೇಶಿಸಿದನು. ಸ್ವಲ್ಪ ಹೊತ್ತಿಗೆ ಹಸಿದು ಕಂಗಾಲಾಗಿದ್ದ ಸಿಂಹವನ್ನು ತಂದು ಪಂಜರದೊಳಕ್ಕೆ ಬಿಟ್ಟರು. ಸಿಂಹವು ಅತ್ಯಂತ ಕ್ರೋಧದಿಂದ ಗರ್ಜನೆ ಮಾಡುತ್ತಾ ಆಂಡ್ರೋಕ್ಲೀಸನತ್ತ ನುಗ್ಗಿತು. ಅವನೂ ಇನ್ನೇನು ತನ್ನ ರಕ್ಷಣೆಗಾಗಿ ಕೈಯಲ್ಲಿದ್ದ ಅ ಕಠಾರಿಯನ್ನೇ ಎತ್ತುವುದರಲ್ಲಿದ್ದನು, ಅಷ್ಟರಲ್ಲಿ ಸಿಂಹದ ಗರ್ಜನೆ ತಟಕ್ಕನೆ ನಿಂತು ಹೋಯಿತು! ಅದು ಮೆಲ್ಲಗೆ ಮೂಕವಾಗಿ ಆಂಡ್ರೋಕ್ಲೀಸ್‌ನ ಸಮೀಪಕ್ಕೆ ಬಂದು ಅವನ ಕೈಕಾಲುಗಳನ್ನು ನೆಕ್ಕತೊಡಗಿತು! ಅವನಿಗೂ ಕಾಡಿನ ಗವಿಯ ಈ “ಗೆಳಯನ ಗುರುತು” ಸಿಕ್ಕಿತು. ಸಿಂಹದ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ನೇವರಿಸುತ್ತಾ ನಿಂತನು!

ಈ ದೃಶ್ಯವನ್ನು ಕಂಡ ಪ್ರೇಕ್ಷಕರಿಗೆ ತಮ್ಮ ಕಣ್ಣೆದುರಿಗೆ ಒಂದು ಮಹಾ ಪವಾಡವೆ ನಡೆದು ಹೋದಂತೆ ಭಾಸವಾಯಿತು. ಅವರು ಹರ್ಷದಿಂದ ಚಪ್ಪಾಳೆ ತಟ್ಟಿ ಕೇಕೆ ಹಾಕಿದರು. ರಾಜನೂ ಅವನ ಪರಿವಾರದವರೂ ಆಂಡ್ರೋಕ್ಲೀಸ್‌ನನ್ನು ತಮ್ಮ ಬಳಿಗೆ ಕರೆಯಿಸಿ ಅದು ಹೇಗೆ ಅವನು ಸಿಂಹವನ್ನು ಗೆದ್ದನೆಂದು ಕೇಳಿದರು. ಆಂಡ್ರೋಕ್ಲೀಸ್‌ನು ತನ್ನ ಕ್ರೂರ ಯಜಮಾನನಿಂದಾಗುತ್ತಿದ್ದ ಹಿಂಸೆ ತಡೆಯಲಾರದೆ ಕಾಡಿಗೆ ಓಡಿ ಹೋದದ್ದನ್ನೂ ಅಲ್ಲಿ ಸಿಂಹವನ್ನು ಕಂಡದ್ದನ್ನೂ ಹೇಳಿದನು.

“ಗವಿಯಲ್ಲಿ ಗಾಯಗೊಂಡ ಸಿಂಹದ ಸಮೀಪಕ್ಕೆ ಹೋಗಲು ನಿನಗೆ ಹೆದರಿಕೆಯಾಗಲಿಲ್ಲವೇ?” ಎಂದು ರಾಜನು ಕೇಳಿದನು. ಆಂಡ್ರೋಕ್ಲೀಸ್ ಉತ್ತರಿಸಿದನು,” ಎಳ್ಳಷ್ಟೂ ಭಯವಾಗಲಿಲ್ಲ, ಕ್ರೂರ ಯಜಮಾನನ ಕೈಯಲ್ಲಿ ಜೀವನದುದ್ದಕ್ಕೂ ಹಿಂಸೆಯನ್ನು ಅನುಭವಿಸುತ್ತಾ ಗುಲಾಮನಾಗಿರುವುದಕ್ಕಿಂತ ಹಸಿದ ಸಿಂಹಕ್ಕೆ ಆಹಾರವಾಗಿ ಒಮ್ಮೆಲೇ ಸತ್ತು ಹೋಗುವುದೇ ಮೇಲೆಂದು ನಾನು ಭಾವಿಸಿದೆ.” ಆಂಡ್ರೋಕ್ಲೀಸ್‌ನ ಮಾತಿನಿಂದ ರಾಜನ ಮನಸ್ಸು ಕಲಕಿತು. ಅವನು ತಕ್ಷಣವೇ ಸಭಿಕರೆದುರಿಗೆ ಹೀಗೆ ಘೋಷಿಸಿದನು. ಆಂಡ್ರೋಕ್ಲೀಸ್‌ನು ಇನ್ನು ಮುಂದೆ ಗುಲಾಮನಲ್ಲ. ಅವನನ್ನು ಒಡನೆಯೆ ಸ್ವತಂತ್ರಗೊಳಿಸತಕ್ಕದ್ದೆಂದು ಅವನ ಕ್ರೂರಿ ಯಜಮಾನನಿಗೆ ಆಜ್ಞೆ ಮಾಡುತ್ತಿದ್ದೇನೆ. ಆಂಡ್ರೋಕ್ಲೀಸ್ ಇಂದಿನಿಂದ ಸ್ವತಂತ್ರ!”.

ಪ್ರಶ್ನೆಗಳು:
  1. ಆಂಡ್ರೋಕ್ಲೀಸ್ ನು ಸಿಂಹದ ಗವಿಯ ಬಳಿಗೆ ಹೋದಾಗ, ಏಕೆ ಅದು ಅವನ ಮೇಲೆ ಧಾಳಿ ಮಾಡಲಿಲ್ಲ?
  2. ಈ ಕಥೆಯಿಂದ ನೀವು ಏನು ಕಲಿಯುತ್ತೀರಿ?
  3. ನೀವು ಯಾವ ಪ್ರಾಣಿಯನ್ನು ಇಷ್ಟ ಪಡುತ್ತೀರಿ? ಏಕೆ ಅದನ್ನು ಇಷ್ಟ ಪಡುತ್ತೀರಿ? ನೀವು ಯಾವಾಗಲಾದರೂ ಅದರ ಸೇವೆ ಮಾಡಿದ್ದೀರಾ?

Leave a Reply

Your email address will not be published. Required fields are marked *