ಭಜಗೋವಿಂದಂ ಕುರಿತು
ಭಜಗೋವಿಂದಂ ಕುರಿತು
ಈ ಶ್ರೇಷ್ಠ ಕಾವ್ಯವು ಶಂಕರ ಭಗವತ್ಪಾದರ ಮುಖದಿಂದ ಮೂಡಿಬಂದ ಸಂದರ್ಭವನ್ನು ಹೇಳುವ ಒಂದು ಕತೆಯಿದೆ. ಒಮ್ಮೆ ಅವರು ತಮ್ಮ ಹದಿನಾಲ್ಕು ಜನ ಶಿಷ್ಯರೊಂದಿಗೆ ವಾರಾಣಸಿಯಲ್ಲಿದ್ದರು. ಒಂದು ದಿನ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಒಂದು ಕಡೆ ವೃದ್ಧ ಪಂಡಿತನೊಬ್ಬನು ಪಾಣಿನಿಯ ವ್ಯಾಕರಣವನ್ನು ಕಂಠಪಾಠ ಮಾಡುತ್ತಿದ್ದುದನ್ನು ಕೇಳಿದರು. ಅವರಿಗೆ ತನ್ನ ಅಮೂಲ್ಯ ಜೀವನದ ಅಂತಿಮ ದಿನಗಳನ್ನು ಭಗವಂತನ ಧ್ಯಾನದಲ್ಲಿ ಕಳೆಯದೆ ಬೌದ್ಧಿಕ ಸಿದ್ಧಿಗೋಸ್ಕರವಾಗಿ ವ್ಯಾಕರಣವನ್ನು ಉರುಹಚ್ಚುತ್ತಿರುವ ಆ ವೃದ್ಧ ಮಹಾಶಯರನ್ನು ನೋಡಿ ಅನುಕಂಪವುಂಟಾಯಿತು. ಅದಕ್ಕೆ ಬದಲು ಆತನು ಆಧ್ಯಾತ್ಮಿಕ ಬೆಳಕಿಗಾಗಿ, ಸಂಸಾರಬಂಧನದಿಂದ ಬಿಡುಗಡೆಗಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡುವುದು ಸೂಕ್ತವಾಗಿತ್ತು. ಇದು ಆ ವೃದ್ಧನೊಬ್ಬನ ಪರಿಸ್ಥಿತಿ ಅಲ್ಲ, ಸಾಮಾನ್ಯವಾಗಿ ಜನರಲ್ಲಿ ಕಂಡುಬರುವ ಪ್ರವೃತ್ತಿ ಇದೇಯೆ ಎಂದು ಶಂಕರರಿಗೆ ತಿಳಿದಿತ್ತು. ಜನರು ತಮ್ಮ ಬದುಕನ್ನು ಅತ್ಯಂತ ವ್ಯರ್ಥವಾದ ನಿರುಪಯುಕ್ತವಾದ ವಿಧಾನಗಳಿಂದ ಹಾಳು ಮಾಡುತ್ತಾರೆ. ಲೌಕಿಕವಾದ ಮೋಹಗಳ ಮರೀಚಿಕೆಯನ್ನು ಬೆನ್ನಟ್ಟಿ ಜೀವನದ ಏಕೈಕ ಲಕ್ಷ್ಯವಾದ ಭಗವಂತನನ್ನು ಮರೆತು ಓಡುತ್ತಾರೆ. ಮಾನವನ ಈ ವ್ಯರ್ಥ ಸಾಹಸವನ್ನು ಕುರಿತ ಕರುಣೆ ಅವರಲ್ಲಿ ಮಡುಗಟ್ಟಿ ಅವರ ಶ್ರೀಮುಖದಿಂದ ಈ ಶ್ಲೋಕಗಳಾಗಿ ಹರಿದು ಬಂದಿತು. “ಮೋಹಮುದ್ಧರ” ಎಂದು ಇದು ಪ್ರಸಿದ್ಧವಾದರೂ ಶ್ಲೋಕಗಳ ಕೊನೆಯ ಉಕ್ತಿ “ಭಜಗೋವಿಂದಂ” ಎಂಬುದರಿಂದಲೇ ಈ ಮನೋಹರವಾದ ಕಾವ್ಯ ಪ್ರಚಲಿತವಾಗಿದೆ.
“ಅಯ್ಯೋ ಮೂಢ! ನಿನ್ನನ್ನು ಕೊಂಡೊಯ್ಯಲು ಮೃತ್ಯುವು ಬಾಗಿಲು ತಟ್ಟುತ್ತಿರುವಾಗ ವ್ಯಾಕರಣ ನಿಯಮಗಳು (ವಾಸ್ತವವಾಗಿ ನಿನ್ನೆಲ್ಲ ಲೌಕಿಕ ಪಾಂಡಿತ್ಯ) ನಿನ್ನನ್ನು ರಕ್ಷಿಸಲು ಬರುವುದಿಲ್ಲ. ಹೀಗೆ ನಿನ್ನ ಬದುಕನ್ನು ವ್ಯರ್ಥವಾಗಿ ಪೋಲು ಮಾಡುವುದರ ಬದಲು ಗೋವಿಂದನನ್ನು ಭಜಿಸು. ಅವನೊಬ್ಬನೇ ನಿನ್ನನ್ನು ಬದುಕು ಸಾವುಗಳ ದವಡೆಯಿಂದ ರಕ್ಷಿಸಬಲ್ಲನು.”
ಶ್ರೀ ಶಂಕರರು ರಚಿಸಿದ ಶಾಸ್ತ್ರ ಗ್ರಂಥಗಳ ವಾಖ್ಯಾನವಾದ ಭಾಷ್ಯಗಳಿಗೆ ಹೋಲಿಸಿದರೆ ಭಜಗೋವಿಂದಂ ಅವರ ಕಿರುರಚನೆಗಳಲ್ಲಿ ಒಂದು. “ಆತ್ಮಬೋಧ,” ಭಜಗೋವಿಂದಂ ಇಂಥವೆಲ್ಲ ಸೇರಿ ಪ್ರಕರಣ ಗ್ರಂಥಗಳ ಗುಂಪಿಗೆ ಬರುತ್ತವೆ. ಆಧ್ಯಾತ್ಮಿಕ ಅಧ್ಯಯನಕ್ಕೆ ಇವು ಪ್ರವೇಶರೂಪದ ಕೈಪಿಡಿಗಳಿದ್ದ ಹಾಗೆ. ಸಾಧನಾ ಪಥದಲ್ಲಿ ಮುಂದೆ ಹೋಗುವ ಇಚ್ಛೆಯುಳ್ಳವರಿಗೆ ತತ್ವಶಾಸ್ತ್ರೀಯ ಪದಗಳನ್ನು, ವಿಷಯಗಳನ್ನು ವಿವರಿಸಿಕೊಡುವ ಬಾಲಬೋಧೆಗಳಿದ್ದ ಹಾಗೆ. ಈ ಪುಸ್ತಿಕೆಗಳಲ್ಲಿ ಪ್ರಾಥಮಿಕ ಆಧ್ಯಾತ್ಮಿಕ ಸತ್ಯಗಳನ್ನು ಬೆಳಕಿಗೊಡ್ಡಲಾಗಿದೆ. ಓದುಗನು ಅವುಗಳನ್ನು ಓದಿ “ಆಹಾ! ಇದೆಂಥ ಜೀವನ! ಈ ಕಾರಾಗೃಹದಿಂದ ನಾನು ಬಿಡುಗಡೆ ಹೊಂದಲೇಬೇಕು. ಭಗವಂತನು ನನಗೆ ಆ ಸಾಮರ್ಥ್ಯ ಕೊಡಲಿ, ದಾರಿ ತೋರಿಸಲಿ” ಎಂದು ಆಲೋಚಿಸುತ್ತಾರೆ. ಹೀಗೆ ಈ ಕೃತಿಗಳು ಬದುಕಿನ ಮಿಥ್ಯ ಮಾರ್ಗಗಳಿಂದ ಈಚೆಗೆಳೆದು ಅವನನ್ನು ಆಧ್ಯಾತ್ಮಿಕ ಸಾಧನೆಯ ರಾಜಮಾರ್ಗದಲ್ಲಿ ದೈವಸಾನಿಧ್ಯದ ಕಡೆಗಿನ ಹೆದ್ದಾರಿಗೆ ಒಯ್ಯುತ್ತವೆ.
೧೯೭೩ರಲ್ಲಿ ಬೃಂದಾವನದಲ್ಲಿ “ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆ”ಯನ್ನು ಕುರಿತ ಬೇಸಿಗೆ ಶಿಬಿರವು ನಡೆಯಿತು. ಆಗ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಸಂಜೆ ವೇಳೆ ತಮ್ಮ ಪ್ರವಚನಗಳಿಗಾಗಿ ಭಜಗೋವಿಂದಂ ಕಾವ್ಯವನ್ನು ಆರಿಸಿಕೊಂಡರು. ಅವರು ಈ ಕಾವ್ಯದ ಹದಿನಾರು ಶ್ಲೋಕಗಳನ್ನು ಹಾಡಿದರು. ತೆಲುಗಿನಲ್ಲಿ ತಮ್ಮ ಅನನ್ಯವಾದ ಮಧುಮಧುರವಾದ ರೀತಿಯಲ್ಲಿ ವಿವರಿಸಿದರು. ಶಂಕರರೇ ನೇರವಾಗಿ ತಮ್ಮ ಕವಿತೆಯ ಅಂತರಾರ್ಥವನ್ನೂ ಪ್ರಾಮುಖ್ಯವನ್ನೂ ವಿವರಿಸುತ್ತಿದ್ದಾರೋ ಎನ್ನುವಂತೆ ವಿಸ್ತರಿಸಿದರು. ಆದ್ದರಿಂದ ಬಾಬಾ ಅವರ ಪ್ರವಚನಗಳನ್ನು ಒಳಗೊಂಡಿರುವ “ಬೃಂದಾವನದಲ್ಲಿ ವಸಂತವೃಷ್ಟಿ” (Summer Showers in Brindavan) ೧೯೭೩ ಎಂಬ ಪುಸ್ತಕದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದು ಅತ್ಯಂತ ಅಪೇಕ್ಷಣೀಯವಾಗಿದೆ. ಈ ಕಾವ್ಯದ ಮಹತ್ವವನ್ನು ಒಂದು ಉಕ್ತಿಯಲ್ಲಿ ಬಾಬಾ ಹೀಗೆ ನಿರೂಪಿಸಿದರು: “ಹೇ, ಮೂಢಮತಿಯೇ! ಮುಕ್ತಿಮತಿಯಾಗು, ಗೋವಿಂದದನ್ನು ಅನ್ವೇಷಿಸು.”
ಬಾಬಾ ತಮ್ಮ ದಿವ್ಯ ಪ್ರವಚನಗಳಿಗಾಗಿ ಆರಿಸಿಕೊಂಡ ಹದಿನಾರು ಶ್ಲೋಕಗಳನ್ನು ಈ ಕೆಳಗೆ ಕೊಟ್ಟಿದೆ. (ವಿವರವಾದ ನಿರೂಪಣೆಗೆ ಗುರುಗಳು ಮೇಲೆ ಹೇಳಿದ Summer Shower in Brindavan ೧೯೭೩ ಕೃತಿಯನ್ನು ನೋಡಬೇಕು)
.