ಅಹಂ ವೈಶ್ವಾನರೋ ಹೆಚ್ಚಿನ ಓದುವಿಕೆ

Print Friendly, PDF & Email
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ:|
ಪ್ರಾಣಾಪನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ||
(ಅ 15 ಶ್ಲೋ 14)

ಅರ್ಥ: ನಾನು ಪ್ರಾಣಿಗಳ ದೇಹದಲ್ಲಿ ಜಠರಾಗ್ನಿಯ ರೂಪದಲ್ಲಿ ವೈಶ್ವಾನರ ಎಂಬ ಹೆಸರಿನಲ್ಲಿ ನೆಲೆಸಿದ್ದೇನೆ. ಪ್ರಾಣ (ಅಂತರ್ಮುಖ) ಮತ್ತು ಅಪಾನ (ಬಹಿರ್ಮುಖ) ವಾಯುಗಳಿಂದ ಕೂಡಿದವನಾಗಿ ನಾನು ನಾಲ್ಕು ಬಗೆಯ ಆಹಾರವನ್ನು ಅರಗಿಸುತ್ತೇನೆ.
ನಾಲ್ಕು ಬಗೆಯ ಆಹಾರಗಳು:

  1. ಭೋಜ್ಯ _ ಉಣ್ಣುವುದು – ಬೇಯಿಸಿದ ಮೆದು ಅನ್ನ ಇತ್ಯಾದಿ
  2. ಭಕ್ಷ್ಯ _ ಅಗಿದು ತಿನ್ನುವುದು – ಕರಿದ, ಹುರಿದ ತಿಂಡಿ
  3. ಚೋಷ್ಯ – ಹೀರುವುದು – ವಿವಿಧ ಪಾನೀಯಗಳು
  4. ಲೇಹ್ಯ – ನೆಕ್ಕುವುದು – ನಂಜಿಕೊಳ್ಳುವ ಚಟ್ನಿ, ಗೊಜ್ಜು ಇತ್ಯಾದಿ

ಭಗವಾನ್ ಶ್ರೀ ಸತ್ಯಸಾಯಿಬಾಬಾ ಹೇಳುತ್ತಾರೆ ಸಾಕ್ಷಾತ್ ಭಗವಂತನೇ, ನಮ್ಮ ದೇಹದಲ್ಲಿ ವೈಶ್ವಾನರ ರೂಪದಿಂದ ನೆಲೆಸಿ, ಆಹಾರವನ್ನು ಸ್ವೀಕರಿಸಿ ಅದನ್ನು ಜೀರ್ಣಿಸುತ್ತಾನೆ ಮತ್ತು ದೇಹದ ಎಲ್ಲಾ ಅವಯವಗಳಿಗೆ ಶಕ್ತಿಯನ್ನು ಒದಗಿಸುತ್ತಾನೆ.

ಸ್ವಾಮಿ ಚಿನ್ಮಯಾನಂದರು ಒಬ್ಬ ರಾಜನ ಕಥೆಯನ್ನು ಹೇಳುತ್ತಾರೆ.
ಲಕ್ಷಣ ಎಂಬ ರಾಜ್ಯವನ್ನು ಒಬ್ಬ ಧಾರ್ಮಿಕ ಮತ್ತು ದಕ್ಷ ರಾಜನು ಆಳುತ್ತಿದ್ದನು. ಅವನ ಮಂತ್ರಿ ಸತ್ಯವೃತನೂ ಧಾರ್ಮಿಕ ಮತ್ತು ಬಹಳ ಬುದ್ಧಿವಂತ ಆಗಿದ್ದನು. ಅವರಿಬ್ಬರ ಆಡಳಿತದಲ್ಲಿ ರಾಜ್ಯವು ಸುಖಶಾಂತಿಗಳಿಂದ ಕೂಡಿ ಸಂಪದ್ಭರಿತವಾಗಿತ್ತು. ಪ್ರಜೆಗಳೂ ಅವರನ್ನು ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದರು.

ಅರಮನೆಯಲ್ಲಿ ಆಗಾಗ ಸತ್ಸಂಗವು ನಡೆಯುತ್ತಿತ್ತು. ಇದರಲ್ಲಿ ಜ್ಞಾನಿಗಳು, ಋಷಿಗಳು, ಪಂಡಿತರು, ಕವಿಗಳು ಭಾಗವಹಿಸಿ ಭಗವಂತನ ಮಹಿಮೆಯ ಹಾಗೂ ಋಷಿಗಳ ಉಪದೇಶಗಳ ಕುರಿತು ಚರ್ಚಿಸುತ್ತಿದ್ದರು.

ಕಾಲ ಕಳೆದಂತೆ ರಾಜನ ಮಗ ಪಟ್ಟವನ್ನು ಏರಿದ. ಅವನು ಆಧುನಿಕ ವಿದ್ಯಾಭ್ಯಾಸ ಪಡೆದ ಯುವಕನಾಗಿದ್ದನು. ಅವನಿಗೆ ದೇವರ ಮಹಿಮೆಗಳು ಅರ್ಥ ಆಗುತ್ತಿರಲಿಲ್ಲ. ಅವೆಲ್ಲವೂ ಅವೈಜ್ಞಾನಿಕ ಹಾಗೂ ಮೂಢನಂಬಿಕೆಗಳು ಎಂದು ಅವನು ಭಾವಿಸುತ್ತಿದ್ದನು. ಆದರೆ ಅವನು ವಿಶಾಲ ಹೃದಯದವನಾಗಿದ್ದು, ದೇವರ ಬಗ್ಗೆ ಸತ್ಯವನ್ನು ತಿಳಿಯದೆ ಸತ್ಸಂಗವನ್ನು ನಿಲ್ಲಿಸಬಾರದೆಂದು ನಿಶ್ಚಯಿಸಿದ್ದನು.

ಅವನು ಒಂದು ದಿನ ತನ್ನ ಮಂತ್ರಿ ಸತ್ಯವೃತನನ್ನು ಕರೆದು ಈ ಮೂರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಕಂಡುಹಿಡಿಯಲು ಹೇಳಿದನು

  1. ದೇವರು ಯಾರು?
  2. ದೇವರು ಎಲ್ಲಿ ಇರುತ್ತಾನೆ?
  3. ದೇವರು ಏನು ಮಾಡುತ್ತಾನೆ?

ರಾಜನು ಉತ್ತರವನ್ನು ಕಂಡುಹಿಡಿಯಲು ಸತ್ಯವೃತನಿಗೆ 41 ದಿನದ ಗಡುವನ್ನು ನೀಡಿದ. ಯುವಕನಾದ ರಾಜನಿಗೆ ದೇವರ ಬಗ್ಗೆ ತಿಳುವಳಿಕೆಯನ್ನು ನೀಡುವುದು ತುಂಬಾ ಕಷ್ಟವಾದ ಕೆಲಸ ಎಂದು ಸತ್ಯವೃತನಿಗೆ ತಿಳಿದಿತ್ತು. ಆದುದರಿಂದ ಅವನು ತನ್ನ ಕೆಲಸ ಪ್ರಾರಂಭಿಸುವ ಮೊದಲು ಭಗವಂತನೇ, ರಾಜನಿಗೆ ನಿನ್ನ ಮಹಿಮೆಯ ಬಗ್ಗೆ ನಂಬಿಕೆ ಮೂಡುವ ಹಾಗೆ ಮಾಡುವಂತಹ ಶಕ್ತಿಯನ್ನು ನನಗೆ ಪ್ರಸಾದಿಸು ಎಂದು ಪ್ರಾರ್ಥಿಸಿದನು.

ವೃದ್ಧನಾದ ಮಂತ್ರಿಯು ಅನೇಕ ಋಷಿಮುನಿಗಳ ಆಶ್ರಮವನ್ನು ಸಂಪರ್ಕಿದನು. ಅನೇಕ ಶಾಸ್ತ್ರ, ಪುರಾಣ, ಉಪನಿಷತ್‍ಗಳನ್ನು ಓದಿದನು. ಆದರೆ ರಾಜನಿಗೆ ಮನವರಿಕೆ ಉಂಟುಮಾಡುವಂತಹ ಸಮರ್ಪಕ ಉತ್ತರ ಅವನಿಗೆ ಹೊಳೆಯಲಿಲ್ಲ. ಗಡುವು ಮುಗಿಯುತ್ತಾ ಬಂದಿತು.

ಸತ್ಯವೃತನ ಅಡುಗೆಯವನು ತನ್ನ ಯಜಮಾನರ ಚಿಂತೆಯನ್ನು ಗಮನಿಸಿದ್ದನು. ಒಂದು ರಾತ್ರಿ ಕನಸಿನಲ್ಲಿ ಭಗವಂತನು ಅವನಿಗೆ ಮೂರೂ ಪ್ರಶ್ನೆಗಳ ಉತ್ತರವನ್ನು ತಿಳಿಸಿದನು.
ಉತ್ತರ ಹೇಳಬೇಕಾದ ದಿನವು ಬಂದಿತು. ವೃದ್ಧ ಅಡುಗೆ ಭಟ್ಟನು ತಾನು ರಾಜನ ಪ್ರಶ್ನೆಗಳಿಗೆ ಉತ್ತರಿಸುವೆನೆಂದು ಮಂತ್ರಿಯ ಬಳಿ ಹೇಳಿದನು. ಇಬ್ಬರೂ ರಾಜನ ಆಸ್ಥಾನಕ್ಕೆ ತೆರಳಿದರು. ಬಾಣಸಿಗನು ರಾಜನಿಗೆ “ರಾಜನೇ ನೀನು ನನ್ನ ಶಿಷ್ಯನಾದ ಹೊರತು ನಾನು ನಿನಗೆ ಬ್ರಹ್ಮ ಜ್ಞಾನವನ್ನು ಉಪದೇಶಿಸಲು ಸಾಧ್ಯವಾಗದು” ಎಂದನು. ರಾಜನು ಕೂಡಲೇ ಒಪ್ಪಿ ತಮ್ಮ ತಮ್ಮ ಸ್ಥಾನವನ್ನು ಅದಲು ಬದಲು ಮಾಡಿದರು. ರಾಜನು ತನ್ನಮೊದಲ ಪ್ರಶ್ನೆ ಕೇಳಿದನು. “ದೇವರು ಯಾರು?”

ಅದಕ್ಕೆ ಅಡುಗೆಯವನು ಒಬ್ಬ ಸೇವಕನನ್ನು ಕರೆದು, ಅರಮನೆಯ ಗೋಶಾಲೆಯಿಂದ ಒಂದು ಕಪ್ಪು ಬಣ್ಣದ ಕರೆಯುವ ದನವನ್ನು ತರಲು ಹೇಳಿದನು. ಹಸುವನ್ನು ತಂದಾಗ ಅದರ ಹಾಲನ್ನು ಕರೆಯಲು ಹೇಳಿದನು. ಒಂದು ಬಂಗಾರದ ಪಾತ್ರೆಯಲ್ಲಿ ಈಗ ತಾನೇ ಕರೆದ ಹಾಲನ್ನು ರಾಜನಿಗೆ ತೋರಿಸಲಾಯಿತು.

ಈಗ ಅಡುಗೆಯವನು ರಾಜನಿಗೆ ಕೇಳಿದನು “ರಾಜನೇ ನೀನು ಬಿಂದಿಗೆಯಲ್ಲಿ ಹಾಲನ್ನು ಕಾಣುತ್ತಿರುವೆಯಾ?

‘ಹೌದು ಎಂದನು ರಾಜ ಅದರ ಬಣ್ಣವೇನು’?

ಮಾನ್ಯರೇ, ಅದು ಅಚ್ಚ ಬಿಳಿಯದಾಗಿದೆ

‘ಈ ಬಿಳಿಯ ಹಾಲನ್ನು ಕೊಟ್ಟ ಆಕಳಿನ ಬಣ್ಣವೇನು’?

ಮಾನ್ಯರೇ ಅದು ಕಪ್ಪು

ಆಕಳು ಏನನ್ನು ತಿಂದು ಹಾಲನ್ನು ಉತ್ಪಾದಿಸುತ್ತದೆ?

ಹುಲ್ಲನ್ನು ತಿನ್ನುತ್ತದೆ _ ಎಂದನು ರಾಜ

“ಯಾರು ಕಪ್ಪು ಆಕಳಿನ ದೇಹದಲ್ಲಿ ಹಸಿರು ಹುಲ್ಲನ್ನು ಬಿಳಿಯ ಹಾಲಾಗಿ ಮಾರ್ಪಡಿಸುತ್ತಾನೆ ? ನಿಮ್ಮ ವಿಜ್ಞಾನವು ಇದನ್ನು ಸಾಧಿಸಬಲ್ಲುದೇ? ಎಂದು ರಾಜನನ್ನು ಪ್ರಶ್ನಿಸಿದ ಅಡುಗೆಯವನು ಪ್ರಜೆಗಳತ್ತ ತಿರುಗಿ ‘ ಯಾವ ಶಕ್ತಿಯು ಇಂತಹ ಚಮತ್ಕಾರವನ್ನು ಮಾಡುತ್ತದೆಯೋ ಅದೇ ದೇವರು” ಎಂದನು.

ಈಗ ರಾಜನು ಎರಡನೆಯ ಪ್ರಶ್ನೆಯನ್ನು ಕೇಳಿದನು – ‘ದೇವರು ಎಲ್ಲಿದ್ದಾನೆ’ ?

ಅಡುಗೆಯವನು ಒಂದು ಬಂಗಾರದ ಹರಿವಾಣದಲ್ಲಿ ಮೊಂಬತ್ತಿ ಮತ್ತು ಬೆಂಕಿ ಪೆಟ್ಟಿಗೆಯನ್ನು ತರಿಸಿದನು. ದರ್ಬಾರಿನ ಎಲ್ಲಾ ಕಿಟಿಕಿ ಬಾಗಿಲುಗಳು ಮುಚ್ಚಲ್ಪಟ್ಟವು. ಮತ್ತು ಈ ಕತ್ತಲಲ್ಲಿ ಮೊಂಬತ್ತಿ ಬೆಳಗಿಸಲಾಯಿತು. ಕತ್ತಲು ಕಳೆದು ಎಲ್ಲೆಡೆ ಬೆಳಕಾಯಿತು ಅಡುಗೆಯವನು ಕೇಳಿದ

‘ರಾಜನೇ ಬೆಳಕು ಎಲ್ಲಿದೆ’?

‘ಮಾನ್ಯರೇ ಎಲ್ಲೆಡೆಯೂ ಇದೆ’ ರಾಜ ಉತ್ತರಿಸಿದ

‘ಈ ಮೊಂಬತ್ತಿಯ ಬೆಳಕು ಎಲ್ಲೆಡೆ ಪಸರಿಸಿರುವಂತೆ ಭಗವಂತನು ಎಲ್ಲಾ ಕಡೆಯೂ ಇದ್ದಾನೆ ( ಸರ್ವವ್ಯಾಪಿ ಆಗಿದ್ದಾನೆ) ಎಂದನು ಬಾಣಸಿಗ. ಈಗ ಕೊನೆಯ ಪ್ರಶ್ನೆ – ‘ದೇವರು ಏನು ಮಾಡುತ್ತಿದ್ದಾನೆ?’

‘ಈಗ ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಅವನ ಅನೇಕ ನಾಮ ರೂಪಗಳ ಮುಖಾಂತರವೇ ನಡೆಯುತ್ತದೆ’ ಎಂದನು ಅಡುಗೆಯವನು.
ಈ ಉತ್ತರಗಳಲ್ಲಿರುವ ಸತ್ಯವನ್ನು ಮನವರಿಕೆ ಮಾಡಿಕೊಂಡ ರಾಜನು ಅವುಗಳನ್ನು ವಿನೀತನಾಗಿ ಕೃತಜ್ಞತೆಯಿಂದ ಸ್ವೀಕರಿಸಿದನು.

Leave a Reply

Your email address will not be published. Required fields are marked *