ಅನನ್ಯಾಶ್ಚಿಂತ– ಮುಂದುವರಿದ ಅಧ್ಯಯನ

Print Friendly, PDF & Email
ಅನನ್ಯಾಶ್ಚಿಂತ– ಮುಂದುವರಿದ ಅಧ್ಯಯನ

ಈ ಶ್ಲೋಕದಲ್ಲಿ, ಭಗವಂತನು ಘೋಷಿಸುತ್ತಾನೆ, “ಯಾರು ಯಾವಾಗಲೂ ನನ್ನನ್ನೇ ಚಿಂತಿಸುತ್ತಾರೋ ಅವರಿಗೆ ನಾನು ರಕ್ಷಣೆಯ ಭರವಸೆ ನೀಡುತ್ತೇನೆ – ಏಕಮನಸ್ಸಿನ ಭಕ್ತಿಯಿಂದ, ನನಗೆ ಪೂಜೆ ಸಲ್ಲಿಸುವವರು ಯಾವಾಗಲೂ ನನ್ನೊಂದಿಗೆ ಆಲೋಚನೆಯಲ್ಲಿ ಐಕ್ಯರಾಗಿರುತ್ತಾರೆ, ನಾನು ಅವರ ಅಗತ್ಯಗಳನ್ನು ಪೂರೈಸುತ್ತೇನೆ ಮತ್ತು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ”.

ಭಗವಂತನು ಘೋಷಿಸುತ್ತಾನೆ, “ನನ್ನನ್ನು ಹೊರತುಪಡಿಸಿ ಬೇರೆ ಯಾರನ್ನೂ ಪ್ರೀತಿಸದ, ನಿರಂತರವಾಗಿ ನನ್ನ ಬಗ್ಗೆ ಯೋಚಿಸುವ, ನಿರಾಸಕ್ತಿಯಿಂದ ನನ್ನನ್ನು ಆರಾಧಿಸುವ ಮತ್ತು ನನ್ನೊಂದಿಗೆ ಆಲೋಚನೆಯಲ್ಲಿ ಯಾವಾಗಲೂ ಐಕ್ಯರಾಗಿರುವ್ವರ ಅಗತ್ಯಗಳಿಗೆ ನಾನು ಸಂಪೂರ್ಣ ಭದ್ರತೆಯನ್ನು ತರುತ್ತೇನೆ ಮತ್ತು ವೈಯಕ್ತಿಕವಾಗಿ ಪೂರೈಸುತ್ತೇನೆ”. ಅಂತಹ ಭಕ್ತರಿಗೆ ಯಾವುದೇ ಲೌಕಿಕ ಭೋಗಗಳ ಮೋಹವಿಲ್ಲ. ಭಗವಂತನಿಂದ ಒಂದು ಕ್ಷಣದ ಅಗಲಿಕೆಯು ನಿಜವಾದ ಭಕ್ತನಿಗೆ ಅಸಹನೀಯ. ಗೋಪಿಕೆಯರು ಅಂತಹ ನಿಜ ಭಕ್ತರಾಗಿದ್ದರು. ಬ್ರಹ್ಮ ಏಕೆ ರೆಪ್ಪೆಗಳನ್ನು ಸೃಷ್ಟಿಸಿದ, ಕಣ್ಣು ರೆಪ್ಪೆಗಳು ಮುಚ್ಚಿ ತೆರೆಯುವಷ್ಟು ಹೊತ್ತು ತಮ್ಮ ಭಗವಂತನನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಗೋಪಿಯರು ಆತನನ್ನು ದೂರಿದರು. ಒಮ್ಮೆ ನಾರದರು ಹನುಮಂತನನ್ನು ಕೇಳಿದರು. ಹೇಗೆ ಸಮಯ ಕಳೆಯುತ್ತಿರುವೆ ಎಂದು. ರಾಮನಾಮ ಜಪ ಮಾಡಲು ಸಮಯ ಸಾಕಾಗುತ್ತಿಲ್ಲ ಎಂದು ಹನುಮಂತ ಉತ್ತರಿಸಿದ. ಬಾಲ ಭಕ್ತ ಪ್ರಹ್ಲಾದನನ್ನು ಅನೇಕ ರೀತಿಯಲ್ಲಿ ಹಿಂಸಿಸಲಾಯಿತು ಆದರೆ ಎಲ್ಲಾ ಸಮಯದಲ್ಲೂ ಅವನು ಭಗವಂತನಿಂದ ರಕ್ಷಿಸಲ್ಪಟ್ಟ. ನಿಜವಾದ ಭಕ್ತನಿಗೆ, ದೇವರು ಸ್ನೇಹಿತ, ಮಾರ್ಗದರ್ಶಕ ಮತ್ತು ತತ್ವಜ್ಞಾನಿ. ದೇವರು ಭಕ್ತನನ್ನು ಎಲ್ಲ ರೀತಿಯಲ್ಲೂ ನೋಡಿಕೊಳ್ಳುತ್ತಾನೆ.

ಪ್ರತಿಯೊಬ್ಬರೂ ಸತ್ಯ, ಧರ್ಮ, ಶಾಂತಿ ಮತ್ತು ಪ್ರೇಮದ ಪವಿತ್ರ ಮಾರ್ಗವನ್ನು ಅನುಸರಿಸಿದರೆ ಮತ್ತು ಈ ಮಾರ್ಗದಲ್ಲಿ ಭಗವಂತನ ನಾಮಸ್ಮರಣೆಯ ಶಿಸ್ತನ್ನು ಕೈಗೊಂಡರೆ, ಭಗವಂತನು ಪ್ರತಿಯೊಬ್ಬರಿಗೂ ಬೇಕಾದುದನ್ನು, ಅರ್ಹವಾದ ಎಲ್ಲವನ್ನೂ ದಯಪಾಲಿಸುತ್ತಾನೆ. ಅದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಈ ಆಶ್ವಾಸನೆಯ ನೆರವೇರಲು ಷರತ್ತುಗಳೆಂದರೆ ಅನನ್ಯ ಚಿಂತಾ ಮತ್ತು ಉಪಾಸನಾ – ಭಗವಂತನ ಧ್ಯಾನ, ಯಾವುದೇ ಇತರ ಆಲೋಚನೆಗಳಿಲ್ಲದಿರುವುದು ಮತ್ತು ಸ್ಥಿರವಾದ ಆರಾಧನೆ. “ಯೋಗ” ಎಂದರೆ ಅಗತ್ಯತೆಗಳ ಪೂರೈಕೆ ಮತ್ತು “ಕ್ಷೇಮ” ಎಂದರೆ ಸೊತ್ತುಗಳ ರಕ್ಷಣೆ ಎಂದರ್ಥ. ನೀವು ಅದನ್ನು ಪಡೆಯಲು ಅನುಸರಿಸಬೇಕಾದ ಶಿಸ್ತು ಎಂದರೆ :ಅನನ್ಯ ಚಿಂತನೆ – ಭಗವಂತನ ವಿಶೇಷ ಧ್ಯಾನ. ಈ ಪದ್ಯವನ್ನು ಭಗವಂತನ ಮಹಾ ಭರವಸೆ ಎಂದು ಪರಿಗಣಿಸಲಾಗಿದೆ.

ಇದು ಆಧ್ಯಾತ್ಮಿಕ ಮಟ್ಟದಲ್ಲಿ ಜೀವನದ ನಿಯಮವನ್ನು ಬಹಿರಂಗಪಡಿಸುವ ಭವ್ಯವಾದ ಹೇಳಿಕೆ. ಭಗವಂತನನ್ನು ಪೂಜಿಸುವವರು, ಏಕಮನಸ್ಸಿನಿಂದ ಧ್ಯಾನಿಸುವವರು ಮತ್ತು ಅಶಾಶ್ವತ ಪ್ರಪಂಚದ ಹಿಂದಿರುವ ಏಕೈಕ ಸತ್ಯವಾಗಿ ಆತನನ್ನು ನೋಡುವವರಿಗೆ ಆತನು ‘ಯೋಗ’ ಮತ್ತು ‘ಕ್ಷೇಮ’ವನ್ನು ವಹಿಸುತ್ತಾನೆ ಎಂದು ಕೃಷ್ಣ ಇಲ್ಲಿ ಭರವಸೆ ನೀಡುತ್ತಾನೆ. ಲೌಕಿಕ ದೃಷ್ಟಿಯಲ್ಲಿ ಇದರ ಅರ್ಥವೇನೆಂದರೆ, ಒಬ್ಬನು ನಿರಂತರವಾಗಿ ಭಗವಂತನ ಚಿಂತನೆಯಲ್ಲಿ ತೊಡಗಿದ್ದರೆ ಮತ್ತು ಸಂಪೂರ್ಣವಾಗಿ ಪರಮಾತ್ಮನಿಗೆ ಹೊಂದಿಕೊಂಡರೆ, ಆಗ ಪರಮಾತ್ಮನು ಅವನಿಗೆ ಜೀವನದ ಅವಶ್ಯಕತೆಗಳಾದ ಆಹಾರ, ಬಟ್ಟೆ ಮತ್ತು ವಸತಿಗಳನ್ನು ಒದಗಿಸುವನು. ದೇವರನ್ನು ಅತ್ಯಂತ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಅರಸುತ್ತಾ ಭಗವತ್ ಸಾಕ್ಷಾತ್ಕಾರದ ಹಾದಿಯಲ್ಲಿ ಬಹಳ ದೂರ ಸಾಗುವವನಿಗೆ, ಭಗವಂತನು ಸಹಾಯ ಮಾಡುತ್ತಾನೆ. ಭಗವಂತನಿಗಾಗಿ ಅವನ ಎಷ್ಟು ತೀವ್ರವಾಗಿರುವುದೆಂದರೆ ಅವನ ಮನಸ್ಸು ಯಾವಾಗಲೂ ಉನ್ನತ ಮಟ್ಟದಲ್ಲಿರುತ್ತದೆ ಮತ್ತು ಪ್ರಾಪಂಚಿಕ ಮಟ್ಟಕ್ಕೆ ಇಳಿಯುವುದಿಲ್ಲ. ನಂತರ ಭಗವಂತನು ಅಂತಹವನಿಗೆ ಆಹಾರ ಒದಗಿಸುತ್ತಾನೆ, ಆದ್ದರಿಂದ ಅವನು ಆಹಾರಕ್ಕಾಗಿ ಶ್ರಮಿಸಬೇಕಾಗಿಲ್ಲ ಮತ್ತು ದೇವರು ಅವನಿಗೆ ಉನ್ಮತ್ತ ಸ್ಠಿತಿಯ ಎತ್ತರಕ್ಕೆ ಏರಲು ಪ್ರೋತ್ಸಾಹಿಸುತ್ತಾನೆ. ನಾವು ಸಂತರ ಜೀವನದಲ್ಲಿ ನೋಡಿದಂತೆ ಭಗವಂತನ ಅನುಗ್ರಹವು ಅದ್ಭುತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ವಾಮಿ ರಾಮದಾಸರು ಮನೆ ತೊರೆದು ಭಗವಂತನ ಅನುಗ್ರಹದಿಂದ ಬದುಕಿದರು. ರಾಮ ಆತನಿಗೆ ಆಹಾರ, ಆಶ್ರಯಗಳನ್ನು ದಯಪಾಲಿಸಿದ ತನ್ನಿಚ್ಚೆಯಂತೆ.

ಎಲ್ಲಾ ಅನ್ವೇಷಕರಿಗೆ ಬಹಳ ಮಹತ್ವಪೂರ್ಣವಾದ ಎರಡನೆಯ ಅರ್ಥವೆಂದರೆ ದೇವರು ಸಾಧಕನಿಗೆ ಜೀವನದ ಅಗತ್ಯಗಳನ್ನು ಒದಗಿಸುವ ಮೂಲಕ ಪ್ರೋತ್ಸಾಹಿಸುತ್ತಾನೆ ಮಾತ್ರವಲ್ಲದೆ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಾಧನೆ (ಯೋಗ) ಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಒದಗಿಸುತ್ತಾನೆ. ನಂತರ ಭಗವಂತನು ಸಾಧಕನಿಗೆ ಸೌಭಾಗ್ಯ ಅಥವಾ ಪರಮ ಜ್ಞಾನ ಮತ್ತು ಆನಂದದ (ಕ್ಷೇಮ) ಅಂತಿಮ ಅನುಭವವನ್ನು ನೀಡುತ್ತಾನೆ.

ಹೀಗಾಗಿ ಈ ಸಂದರ್ಭದಲ್ಲಿ ‘ಯೋಗ’ ಎಂದರೆ “ಭಕ್ತರಿಗೆ ದೇಹ ಪೋಷಣೆಗೆ ಬೇಕಾದ ಸಾಧನಗಳನ್ನು ಒದಗಿಸುವುದು” ಮತ್ತು ‘ಕ್ಷೇಮ’ ಎಂದರೆ ರಕ್ಷಣೆ. ಹೀಗಾಗಿ, ಅಂತಹ ಭಕ್ತನಿಗೆ ಯಾವುದೇ ಹಾನಿಯಾಗುವುದಿಲ್ಲ, ಏಕೆಂದರೆ ಭಗವಂತ ಅವನಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾನೆ. ಭಕ್ತನು ತನ್ನ ಜೀವನದ ಏಕೈಕ ಗುರಿಯಾಗಿರುವ ತನ್ನ ಹೃದಯವಾಸಿ ಭಗವಂತನನ್ನು ಹೊರತುಪಡಿಸಿ ಯಾವುದರಲ್ಲೂ ಆಸಕ್ತಿ ಹೊಂದಿರುವುದಿಲ್ಲ. ನರಸೀ ಮೆಹ್ತಾ, ನಾಮದೇವ, ಸಖೂಬಾಯಿ, ಜನಾಬಾಯಿ, ಗುರು ನಾನಕ್ ಅವರಂತಹ ಸಂತರ ಜೀವನದಲ್ಲಿ ಭಗವಂತನೇ ಭಕ್ತನ ಸಹಾಯಕ್ಕೆ ಬಂದ ಅನೇಕ ನಿದರ್ಶನಗಳು ಕಂಡುಬರುತ್ತವೆ.

ಅನನ್ಯ ಭಕ್ತಿಯುಳ್ಳವರು ಈ ವಿಷಯಗಳಿಂದ ಗುರುತಿಸಲ್ಪಡುತ್ತಾರೆ. ಅವನು ಭಗವಂತನ ಬಗ್ಗೆ ಮಾತ್ರ ಮಾತನಾಡುತ್ತಾನೆ, ಅವನು ಭಗವಂತನನ್ನು ಹಾಡುತ್ತಾನೆ, ಅವನು ಭಗವಂತನನ್ನು ಮಾತ್ರ ನೋಡುತ್ತಾನೆ, ಅವನು ಭಗವಂತನೊಂದಿಗೆ ಕೆಲಸ ಮಾಡುತ್ತಾನೆ ಮತ್ತು ತನ್ನ ವಿರಾಮವನ್ನು ಕಳೆಯುತ್ತಾನೆ. – ಗೀತಾ ವಾಹಿನಿ

Leave a Reply

Your email address will not be published. Required fields are marked *