ಅಂಗುಲಿಮಾಲ
ಅಂಗುಲಿಮಾಲ
ಶ್ರಾವಸ್ತಿ ನಗರದ ಹೊರವಲಯದ ಅರಣ್ಯದಲ್ಲಿ ಇದ್ದ ಅಂಗುಲಿಮಾಲ, ಒಬ್ಬ ಕುಪ್ರಸಿದ್ಧ ಡಕಾಯಿತ. ಆ ದಾರಿಯ ಮೂಲಕ ಹಾದುಹೋಗುವ ಪ್ರಯಾಣಿಕರನ್ನು ದೋಚಿ, ಅವರನ್ನು ಸಾಯಿಸುತ್ತಿದ್ದ. ಇದರಿಂದ ಹೆದರಿದ ಜನರು ಕ್ರಮೇಣ ಆ ದಾರಿಯಲ್ಲಿ ಪ್ರಯಾಣ ಮಾಡುವುದನ್ನು ನಿಲ್ಲಿಸಿದರು.
ಅಂಗುಲಿಮಾಲನು ಪ್ರಯಾಣಿಕರ ಬಳಿ ಇರುವ ಬೆಲೆಬಾಳುವ ವಸ್ತುಗಳನ್ನು ಲೂಟಿಮಾಡುತ್ತಿದ್ದುದಲ್ಲದೇ, ಅವರ ಕಿರುಬೆರಳುಗಳನ್ನು ಕತ್ತರಿಸಿ, ಅವುಗಳನ್ನು ಪೋಣಿಸಿ, ಹಾರವಾಗಿ ಮಾಡಿ ಧರಿಸುತ್ತಿದ್ದ.
ಅದೊಂದು ದಿನ, ಯಾರಾದರೂ ಪ್ರಯಾಣಿಕರು ಆ ದಾರಿಯ ಮೂಲಕ ಹಾದುಹೋಗುವರೇನೋ ಎಂದು ಕಾಯುತ್ತಾ ಕುಳಿತಿದ್ದ ಅಂಗುಲಿಮಾಲ. ಅವನ ಹಾರಕ್ಕೆ ಮತ್ತಷ್ಟು ಬೆರಳುಗಳು ಬೇಕಿತ್ತು. ಆಗ ದೂರದಲ್ಲಿ ಒಬ್ಬ ಸನ್ಯಾಸಿ ಬರುತ್ತಿದ್ದುದನ್ನು ಗಮನಿಸಿ, “ಹೇ, ಸನ್ಯಾಸಿ! ನಿಲ್ಲು, ನಿಲ್ಲು,” ಎಂದು ಜೋರಾಗಿ ಕೂಗು ಹಾಕಿದ.
ಆದರೆ ನಿಲ್ಲದೆ ಮುಂದೆ, ಮುಂದೆ ಸಾಗುತ್ತಿದ್ದ ಆ ಸನ್ಯಾಸಿಯನ್ನು ಹಿಡಿಯಲು, ಆತನ ಹಿಂದೆ ಓಡ ತೊಡಗಿದ. ಆದರೆ ಏನಾಶ್ಚರ್ಯ! ಆತನನ್ನು ಹಿಡಿಯಲು ಆಗದೆ, “ಏಯ್! ನಿಲ್ಲು, ಮುಂದೆ ಹೋಗಬೇಡ,” ಎಂದು ಕೋಪದಿಂದ ಅರಚಿದ. ಆ ಸನ್ಯಾಸಿ ಬೇರೆ ಯಾರೂ ಅಲ್ಲ, ಆತ ಭಗವಾನ್ ಬುದ್ಧ. ಬುದ್ಧ ಶಾಂತವಾಗಿ ಉತ್ತರಿಸಿದ, “ನಾನು ಚಲಿಸುತ್ತಿಲ್ಲ, ನೀನು ಚಲಿಸುತ್ತಿರುವೆ,” ಎಂದು.
ಅರ್ಥವಾಗದೇ ಡಕಾಯಿತ, “ನೀನೇನು ಹೇಳುತ್ತಿರುವೆ?” ಎಂದು ಪ್ರಶ್ನಿಸಿದ. ಬುದ್ಧ ಶಾಂತ ಸ್ವರದಲ್ಲಿ ಉತ್ತರಿಸಿದ,” ಮಗು! ನೀನಿನ್ನು ನಿನ್ನ ಮನಸ್ಸಿಗೆ ವಿಶ್ರಾಂತಿ ಕೊಡಬೇಕಾಗಿದೆ.”
“ಇದೇನಿದು? ನನ್ನನ್ನು ಮಗು ಎಂದು ಕರೆಯುತ್ತಿದ್ದಾನೆ. ಆದರೆ ಅದು ಹೇಗೆ ಸಾಧ್ಯ?” ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ, ಅಂಗುಲಿಮಾಲ,” ನಾನು ಯಾರು ಎಂದು ಗೊತ್ತಿದೆಯೇ? ನಿನ್ನ ಉಪದೇಶ ಬೇಕಿಲ್ಲ. ನನಗೆ ನಿನ್ನ ಕಿರುಬೆರಳು ಬೇಕು.” ಎಂದು ಗುಡುಗಿದ.
“ಹೌದೇ? ಹಾಗಿದ್ದರೆ ತೆಗೆದುಕೋ, ಮಗನೇ,” ಎಂದು ಹೇಳುತ್ತಾ, ತನ್ನ ಎರಡೂ ಹಸ್ತಗಳನ್ನು ಅವನ ಮುಂದೆ ಚಾಚಿದ, ಬುದ್ಧ ದೇವ..
“ಕೇವಲ ಬೆರಳುಗಳನ್ನು ಮಾತ್ರವಲ್ಲ, ನಿನ್ನ ಜೀವವನ್ನೇ ತೆಗೆದುಕೊಳ್ಳುತ್ತೇನೆ, ತಿಳಿದುಕೋ,” ಎಂದು ಹೆದರಿಸಿದ ಅಂಗುಲಿಮಾಲನನ್ನು ಉದ್ದೇಶಿಸಿ ಬುದ್ಧದೇವ ನುಡಿದ,” ನಿನಗೆ ಅದರಿಂದ ಮನಸ್ಸಿಗೆ ಶಾಂತಿ ಸಿಗುವುದಾದರೆ, ಧಾರಾಳವಾಗಿ ತೆಗೆದುಕೋ,” ಎಂದು.
ತನ್ನ ಜೀವನದಲ್ಲಿ, ಶಾಂತಿ ಮತ್ತು ಪ್ರೇಮ ತುಂಬಿದ ಇಂತಹ ವ್ಯಕ್ಯಿಯನ್ನು ಎಂದೂ ಕಂಡರಿಯದ ಅಂಗುಲಿಮಾಲ, ಬುದ್ಧದೇವನ ಪಾದಗಳ ಮೇಲೆ ಬಿದ್ದು, ಕಣ್ಣೇರು ಹಾಕುತ್ತ, ಗದ್ಗದಿತನಾಗಿ,” ನಾನು ಮುಂದೆ ಯಾರನ್ನೂ ಕೊಲ್ಲುವುದಿಲ್ಲ,” ಎಂದು ಹೇಳಿದ.
ಅವನನ್ನು ಮೇಲೆಬ್ಬಿಸಿ, ತನ್ನೊಂದಿಗೆ ವಿಹಾರ (ಮಠ) ಕ್ಕೆ ಕರೆದೊಯ್ದ ಬುದ್ಧ, ‘ಅನೌಥ ಪಿಂಡಕ’ ಎಂಬ ಸನ್ಯಾಸಿಗೆ ಅವನನ್ನು ಒಪ್ಪಿಸುತ್ತಾ, ಹೀಗೆ ಹೇಳಿದ,” ಇವನು ಅಂಗುಲಿಮಾಲ, ಇನ್ನೊಬ್ಬ ಸಹೋದರ,” ಮರುದಿನ, ಶ್ರಾವಸ್ತಿಯ ರಾಜ, ಬೌದ್ಧ ವಿಹಾರಕ್ಕೆ ಆಗಮಿಸಿ, ಗೌರವ, ಭಕ್ತಿಯಿಂದ ಬುದ್ಧನ ಪಾದಗಳಿಗೆ ನಮಿಸಿದ. ದೊರೆಯನ್ನು ನೋಡುತ್ತಾ, ಬುದ್ಧ ದೇವ ಹೀಗೆ ಕೇಳಿದ, “ಏನು? ನೀವು ಮತ್ತೊಂದು ದಂಡಯಾತ್ರೆಗೆ ಹೊರಟಂತಿದೆ?” ರಾಜನು ಉತ್ತರಿಸಿದ,” ಹೌದು, ಗುರುದೇವಾ. ಅಂಗುಲಿಮಾಲನನ್ನು ಹಿಡಿದು, ಅವನನ್ನು ಈ ಕೂಡಲೇ ಮರಣ ದಂಡನೆಗೆ ಗುರಿ ಪಡಿಸಬೇಕಾಗಿದೆ. ಅದಕ್ಕಾಗಿ ತಮ್ಮ ಆಶೀರ್ವಾದವನ್ನು ಬೇಡಲು ಬಂದಿರುವೆ,” ಎಂದು.
ಬುದ್ಧದೇವ ಹೀಗೆ ಕೇಳಿದ, “ಒಂದು ವೇಳೆ ಅಂಗುಲಿಮಾಲನು ಹಿಂಸಾಮಾರ್ಗವನ್ನು ತ್ಯಜಿಸಿ, ಸನ್ಯಾಸಿಯಾಗಿ ಜೀವಿಸಿದರೆ, ಆಗೇನು ಮಾಡುವಿರಿ?”
ಆಶ್ಚರ್ಯದಿಂದ ರಾಜ ಕೇಳಿದ, “ಅಂತಹವನನ್ನು ನಾನು ನಿಜಕ್ಕೂ ವಂದಿಸುತ್ತೇನೆ. ಆದರೆ ಅಂಗುಲಿಮಾಲನಂತಹ ಕ್ರೂರಿ ಸನ್ಯಾಸಿಯಾಗುವನೆಂದು ಊಹಿಸಲು ಸಹ ಅಸಾಧ್ಯ!”
“ಅಲ್ಲಿ ನೋಡಿ! ಅವನು ಗಿಡಗಳಿಗೆ ನೀರು ಹಾಕುತ್ತಿದ್ದಾನೆ,” ಎಂದು ಬುದ್ಧ ದೇವ, ರಾಜನಿಗೆ ಹೊರಗಡೆ ತೋರಿಸಿದ.
ಪರಮಾಶ್ಚರ್ಯಗೊಂಡ ರಾಜನು, “ಗುರುದೇವ! ನನ್ನ ಬಲಿಷ್ಠ ದೈಹಿಕ ಮತ್ತು ಮಾನಸಿಕ ಬಲಗಳನ್ನು ಉಪಯೋಗಿಸಿದರೂ ಅಡಗಿಸಲು ಸಾಧ್ಯವಾಗದ ಅವನನ್ನು, ತಮ್ಮ ಕಿರುಬೆರಳನ್ನು ಸಹ ಮೇಲೆತ್ತದೆ ಗೆದ್ದಿರುವಿರಿ. ಕರುಣಾಳುವೇ! ತಮಗೆ ಜಯವಾಗಲಿ,” ಎನ್ನುತ್ತಾ, ಬುದ್ಧದೇವನ ಪಾದಗಳಿಗೆ ನಮಿಸಿದ.
ಪ್ರಶ್ನೆಗಳು
- ಅಂಗುಲಿಮಾಲನಿಗೆ ಆ ಹೆಸರು ಹೇಗೆ ಬಂದಿತು?
- ಬುದ್ಧದೇವನನ್ನು ಹಿಡಿಯಲು ಅವನಿಗೆ ಏಕೆ ಸಾಧ್ಯವಾಗಲಿಲ್ಲ?
- ಅವನಲ್ಲಿ ಬದಲಾವಣೆಯಾಗಲು ಏನು ಕಾರಣ ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್–2, ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ]