ಅರ್ಜುನನ ಏಕಾಗ್ರತೆ

Print Friendly, PDF & Email
ಅರ್ಜುನನ ಏಕಾಗ್ರತೆ

ಒಂದಾನೊಂದು ಕಾಲದಲ್ಲಿ ಧೃತರಾಷ್ಟ್ರನೆಂಬ ಒಬ್ಬ ರಾಜನಿದ್ದನು. ಅವನಿಗೆ ಪಾಂಡುರಾಜನೆಂಬ ಒಬ್ಬ ಸೋದರನಿದ್ದನು. ಧೃತರಾಷ್ಟ್ರನ ಮಕ್ಕಳನ್ನು ಕೌರವರೆಂದೂ ಪಾಂಡುವಿನ ಮಕ್ಕಳನ್ನು ಪಾಂಡವರೆಂದೂ ಕರೆಯುತ್ತಿದ್ದರು. ಈ ಎಲ್ಲ ರಾಜಕುಮಾರರು ದ್ರೋಣಾಚಾರ್ಯರ ಶಿಷ್ಯರಾಗಿದ್ದರು. ಗುರುಗಳು ಎಲ್ಲ ವಿದ್ಯೆಗಳ ಜೊತೆಗೆ ಧನುರ್ವಿದ್ಯೆಯನ್ನು ಸಹ ಅವರಿಗೆ ಕಲಿಸುತ್ತಿದ್ದರು. ಪಾಂಡವರಲ್ಲಿ ಐದು ಜನ ಸೋದರರೂ ಕೌರವರಲ್ಲಿ ನೂರು ಜನ ಸೋದರರೂ ಇದ್ದರು.

ಆ ಎಲ್ಲ ರಾಜಕುಮಾರರಲ್ಲಿ ಅರ್ಜುನನು ಧನುರ್ವಿದ್ಯೆಯಲ್ಲಿ, ಅದ್ವಿತೀಯನಾಗಿದ್ದನು. ಅದರಲ್ಲಿ ಹೆಚ್ಚು ಆಸಕ್ತಿ ಮತ್ತು ನೈಪುಣ್ಯವನ್ನು ತೋರಿಸುತ್ತಿದ್ದುದ್ದರಿಂದ ಅವನು ಗುರು ದ್ರೋಣಾಚಾರ್ಯರ ಅಚ್ಚುಮೆಚ್ಚಿನವಾಗಿದ್ದ. ತನ್ನ ಅಭ್ಯಾಸಗಳಲ್ಲಿ ಅವನು ನಿಷ್ಠಾವಂತನಾಗಿದ್ದ. ಅರ್ಜುನನ ವಿಶೇಷ ಪ್ರತಿಭೆಯನ್ನು ಕಂಡು ಕೌರವರರೆಲ್ಲರೂ ಮತ್ಸರಿಸುತ್ತಿದ್ದರು. ಆದರೆ ಅದೇ ವಿಶೇಷ ಪ್ರತಿಭೆ, ಅವನ ಗುರುಗಳಿಗೆ ಅವನನ್ನು ಅಚ್ಚುಮೆಚ್ಚಿನವನನ್ನಾಗಿಸಿತ್ತು. ಅರ್ಜುನನು ದ್ರೋಣಾಚಾರ್ಯರ ಪ್ರೀತಿಪಾತ್ರನಾದ್ದರಿಂದ ದುರ್ಯೋಧನ ಮತ್ತು ಇತರರು ಹೊಟ್ಟೆಕಿಚ್ಚುಪಡುತ್ತಿದ್ದರು. ಅರ್ಜುನನ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸುತ್ತಾ ಪಕ್ಷಪಾತವನ್ನು ಮಾಡುತ್ತಾರೆಂದು ಅವರು ಆರೋಪಿಸಿದರು.

ಈ ದೂರು ದ್ರೋಣಾಚಾರ್ಯರವರೆಗೆ ಹೇಗೋ ಹೋಗಿ ಮುಟ್ಟಿತು. ಕಿರಿಯ ರಾಜಕುಮಾರರ ಈ ಸುಳ್ಳು ಆರೋಪವನ್ನು ಹೋಗಲಾಡಿಸಿ ಅವರ ಮನಸ್ಸನ್ನು ಶುಭ್ರಗೊಳಿಸುವ ಇಚ್ಛೆ ಮತ್ತು ಅರ್ಜುನನು ಗುರುಗಳ ಪ್ರೀತಿಗೆ ಪಾತ್ರನಾದುದು ಆತನ ಸ್ವಪ್ರತಿಭೆಯಿಂದಲೇ ಹೊರತು ಇದರಲ್ಲಿ ಗುರುವಿನ ಪಕ್ಷಪಾತ ಬುದ್ಧಿ ಎಳ್ಳಷ್ಟು ಇಲ್ಲವೆಂದು ತೋರಿಸಿಕೊಡುವ ಇಚ್ಛೆ ಅವರಿಗಾಯಿತು.

ಒಂದು ದಿವಸ ದ್ರೋಣಾಚಾರ್ಯರು ಎಲ್ಲ ವಿದ್ಯಾರ್ಥಿಗಳನ್ನು ಕರೆದರು ಮತ್ತು ಹೇಳಿದರು: “ನೋಡಿ ಮಕ್ಕಳೇ ಧನುರ್ವಿದ್ಯೆಯಲ್ಲಿ ನಿಮ್ಮ ಕೌಶಲವನ್ನು ನೋಡಲು ಒಂದು ಪರೀಕ್ಷೆಯನ್ನಿಡಬೇಕೆಂದಿದ್ದೇನೆ. ಆ ಮರದ ಕೊಂಬೆಯಲ್ಲಿರುವ ಹಕ್ಕಿಯನ್ನು ನೀವು ಗುರಿ ಇಟ್ಟು ಹೊಡೆಯಬೇಕು.”

ಮಕ್ಕಳೆಲ್ಲರೂ ಸಂತೋಷದಿಂದ ಸಿದ್ಧರಾಗಿ ಹೇಳಿದರು “ಆಗಲಿ, ಗುರುಗಳೇ.”

ಅನಂತರ ದ್ರೋಣಾಚಾರ್ಯರು ದುರ್ಯೋಧನನಿಂದ ಪ್ರಾರಂಭಿಸಿ ಒಬ್ಬೊಬ್ಬರನ್ನಾಗಿ ಕರೆಸಿ ಕೇಳಿದರು. “ದುರ್ಯೊಧನನೇ, ನೀನು ಆ ಮರದ ಮೇಲಿರುವ ಹಕ್ಕಿಯನ್ನು ಗುರಿಯಿಟ್ಟು ಹೊಡೆಯಬೇಕು. ಅದನ್ನು ನೀನು ನೋಡುತ್ತಿರುವೆಯಾ?” ದುರ್ಯೊಧನ ಉತ್ತರ ಕೊಟ್ಟನು: “ಹೌದು ಗುರುಗಳೇ, ಅದನ್ನು ನಾನು ಕಾಣಬಲ್ಲೆ.”

ಆಗ ಗುರುಗಳು ಪ್ರಶ್ನಿಸಿದರು ಮತ್ತೇನನ್ನು ನೀನು ಕಾಣುತ್ತಿರುವೆ?” “ಗುರುಗಳೇ ವಿಶಾಲವಾದ ನೀಲಿ ಆಕಾಶವನ್ನು, ದೊಡ್ಡದಾದ ಮರವನ್ನು, ಅದರ ದಟ್ಟವಾಗಿ ಬೆಳೆದ ಎಲೆಗಳನ್ನು, ನಿಮ್ಮನ್ನು, ನನ್ನ ಸೋದರರನ್ನು, ಧರ್ಮರಾಜ ಮತ್ತು ಇತರರನ್ನು ನಾನು ಕಾಣುತ್ತಿದ್ದೇನೆ,” ಎಂದು ದುರ್ಯೋಧನ ಉತ್ತರಿಸಿದನು.

ಆಗ ದ್ರೋಣಾಚಾರ್ಯರು ಹೇಳಿದರು, “ನೀನು ಹೋಗಬಹುದು.” ಅದೇ ರೀತಿ ಅವರು ಇತರ ಶಿಷ್ಯರನ್ನು ಕೂಡ ಕರೆದರು. ಎಲ್ಲ ಶಿಷ್ಯರು ಸ್ವಲ್ಪ ಹೆಚ್ಚು ಕಡಿಮೆ ಅದೇ ಪ್ರಕಾರ ಉತ್ತರವನ್ನು ಕೊಟ್ಟರು.

ದ್ರೋಣಾಚಾರ್ಯರು ಅರ್ಜುನನನ್ನು ಪ್ರಶ್ನಿಸಿದರು, “ಅರ್ಜುನಾ, ಆ ದೊಡ್ಡ ವೃಕ್ಷದ ಶಾಖೆಯ ತುದಿಯಲ್ಲಿರುವ ಆ ಹಕ್ಕಿಯನ್ನು ನೀನು ನೋಡುವೆಯಾ?”

ಅರ್ಜುನನು ಉತ್ತರಿಸಿದನು “ಹೌದು ಗುರುಗಳೇ.” “ಮತ್ತೇನು ಕಾಣುತ್ತದೆ ನಿನಗೆ?”

“ಮತ್ತೇನೂ ಇಲ್ಲ ಗುರುಗಳೇ,” ಅರ್ಜುನನು ಉತ್ತರಿಸಿದನು. ದ್ರೋಣಾಚಾಯ೵ರು ಮತ್ತೆ ಪ್ರಶ್ನಿಸಿದರು “ಆ ಆಕಾಶ ಟೊಂಗೆಗಳು ಆ ಎಲೆಗಳು ಇತ್ಯಾದಿಗಳು ನಿನಗೆ ಕಾಣುವುದಿಲ್ಲವೇ?”

“ಇಲ್ಲ ಗುರುಗಳೇ, ಹಕ್ಕಿಯ ಹೊರತು ನನಗೇನೂ ಕಾಣುವುದಿಲ್ಲ,” ಅತ್ಯಂತ ವಿನಯಪೂರ್ವಕವಾಗಿ ಅರ್ಜುನನು ಉತ್ತರಿಸಿದನು. ದ್ರೋಣಾಚಾರ್ಯರು ಅತ್ಯಂತ ಹರ್ಷಿತರಾಗಿ ಹೇಳಿದರು:

“ಮಗನೇ, ನೀನು ಹೋಗಬಹುದು.” ಈ ಪರೀಕ್ಷೆಯಿಂದ ದೊಣಾಚಾರ್ಯರು ತಮ್ಮ ಶಿಷ್ಯರ ಮೇಲೆ ಬೀರಬಯಸಿದ ಪ್ರಭಾವವೇನೆಂಬುದನ್ನು ನಾವು ತಿಳಿದುಕೊಳ್ಳಬಹುದು.

ಇದನ್ನು ಕೇವಲ ಧರ್ನುವಿದ್ಯೆಯ ಪರೀಕ್ಷೆ ಎಂದು ದ್ರೋಣಾಚಾರ್ಯರು ಕರೆದಿದ್ದಾಗ್ಯೂ ನಿಜವಾಗಿಯೂ ಏಕಾಗ್ರತೆಯನ್ನು ಪರೀಕ್ಷಿಸಲೋಸುಗ ಇದೊಂದು ಶೋಧನೆಯಾಗಿತ್ತು.

ಯಾವುದೇ ಕಾಯ೵ವನ್ನು ಮಾಡುವಾಗ ಏಕಾಗ್ರತೆಯು ಅತ್ಯಂತ ಶ್ರೇಷ್ಠವಾದುದೆಂಬ ಪಾಠವನ್ನು ಕಲಿಸುವುದೇ ದ್ರೋಣಾಚಾರ್ಯರ ಮುಖ್ಯ ಉದ್ದೇಶವಾಗಿತ್ತು. ಯಾವುದೇ ರೀತಿಯ ಕಳವಳ ಅಥವಾ ಗಾಬರಿ ವಿದ್ಯಾರ್ಥಿಗಳಲ್ಲಿ ಇರಬಾರದು. ಜೀವನದ ಪ್ರತಿಯೊಂದು ಸನ್ನಿವೇಶದಲ್ಲಿಯೂ ಏಕಾಗ್ರತೆ ಕಡಿಮೆಯಾದರೆ ಅದರ ಪರಿಣಾಮ ಸೋಲು.

ಪ್ರಶ್ನೆಗಳು:
  1. ಅರ್ಜುನನು ತನ್ನ ಗುರು ದ್ರೋಣಾಚಾರ್ಯರಿಗೆ ಅತ್ಯಂತ ಮೆಚ್ಚುಗೆಯಾದ ಶಿಷ್ಯನಾಗಲು ಕಾರಣವೇನು?
  2. ಸೂಕ್ಷ್ಮವಾಗಿ ಯಾವ ಪರೀಕ್ಷೆಯನ್ನು ಮಾಡಲಾಗಿತ್ತು- ಧನುರ್ವಿದ್ಯೆಯಲ್ಲಿಯೋ ಅಥವಾ ಏಕಾಗ್ರತೆಯಲ್ಲಿಯೋ? ನಿಮ್ಮ ಸ್ವಂತ ಶಬ್ದಗಳಲ್ಲಿ ಅದನ್ನು ಸಿದ್ಧಪಡಿಸಿ.

Leave a Reply

Your email address will not be published. Required fields are marked *

error: