ಕೋಪದ ಬಗೆಗೆ ಎಚ್ಚರವಿರಲಿ
ಕೋಪದ ಬಗೆಗೆ ಎಚ್ಚರವಿರಲಿ
ಬಾಬು ರಾಜೇಂದ್ರ ಪ್ರಸಾದರು ಭಾರತದ ರಾಷ್ಟ್ರಪತಿಗಳಾಗಿದ್ದಾಗ ಅವರ ಬಳಿ ರತ್ನಾಕರ ಎಂಬ ಹೆಸರಿನ ಒಬ್ಬ ಸೇವಕನಿದ್ದನು. ಅವನು ತುಂಬಾ ಪ್ರಾಮಾಣಿಕನೂ, ಸ್ವಾಮಿನಿಷ್ಠನೂ ಆಗಿದ್ದನು. ತನ್ನ ಒಡೆಯನಿಗೆ ಏನು ಬೇಕೆಂಬುದನ್ನು ಅವನು ಚೆನ್ನಾಗಿ ತಿಳಿದುಕೊಂಡಿದ್ದನು. ಕಾಲಕ್ಕೆ ಸರಿಯಾಗಿ ಆಯಾ ಕೆಲಸಗಳನ್ನು ಮಾಡಿಬಿಡುತ್ತಿದ್ದನು.
ಒಂದು ದಿನ ರತ್ನಾಕರನು ಅವರ ಮೇಜನ್ನು ಸ್ವಚ್ಛಗೊಳಿಸುತ್ತಿದ್ದನು. ಒಂದು ಫೈಲನ್ನು ಎತ್ತಿಡುವಾಗ ಅದರೊಳಗಿದ್ದ ಪೆನ್ನು ಕೆಳಕ್ಕೆ ಬಿದ್ದು ಬಿಟ್ಟಿತು. ಗಾಬರಿಯಿಂದ ಕೈಗೆತ್ತುಕೊಂಡು ನೋಡಿದರೆ ಅದರ ಮುಂದಿನ ತುದಿ ಮುರಿದು ಹೋಗಿದೆ. ಆ ಹೊತ್ತಿಗೆ ಸರಿಯಾಗಿ ರಾಜೇಂದ್ರ ಪ್ರಸಾದರು ಕೊಠಡಿಯೊಳಕ್ಕೆ ಬಂದರು. ನಡೆದುದೆಲ್ಲವನ್ನು ನೋಡಿ ಅವರಿಗೆ ಬಹಳ ಬೇಸರವಾಯಿತು. ತಮಗೆ ಅತ್ಯಂತ ಪ್ರೀತಿಪಾತ್ರರೂ, ಸನ್ಮಾನ್ಯರೂ ಆಗಿದ್ದ ಮಿತ್ರರೊಬ್ಬರು ಕೊಟ್ಟ, ಉಡುಗೊರೆಯಾಗಿ ಬಂದಿದ್ದ ಆ ಪೆನ್ನು ಮುರಿದು ಹೋದುದಕ್ಕಾಗಿ ಬಹಳ ಕೋಪ ಬಂತು. ಅತ್ಯಂತ ಕಟುವಾದ ಮಾತುಗಳಲ್ಲಿ ರತ್ನಾಕರನನ್ನು ಬೈದು ಅವನನ್ನು ಆ ಕ್ಷಣವೇ ಕೆಲಸದಿಂದ ತೆಗೆದು ಹಾಕುವುದಾಗಿಯೂ, ಮನೆ ಬಿಟ್ಟು ಹೊರಟು ಹೋಗಬೇಕೆಂದೂ ಅಪ್ಪಣೆ ಮಾಡಿದರು.
ರತ್ನಾಕರನಿಗೆ ಅವರ ಸೇವೆಯನ್ನು ಬಿಟ್ಟುಹೋಗಲು ಸ್ವಲ್ಪವೂ ಇಷ್ಟವಿರಲಿಲ್ಲ. ಏಕೆಂದರೆ ಯಜಮಾನರ ಮೇಲೆ ಅವನಿಗೆ ಅಪಾರ ಪ್ರೀತಿ, ಗೌರವ. ಅವನು ಅಳುತ್ತಾ ಅವರ ಕಾಲ ಮೇಲೆ ಬಿದ್ದು ತನ್ನ ತಪ್ಪನ್ನು ಮನ್ನಿಸಬೇಕೆಂದು ಬೇಡಿಕೊಂಡನು. ಆದರೆ ಪ್ರಸಾದರ ಕೋಪ ಇಳಿಯಲಿಲ್ಲ. ಅವರ ನಿರ್ಧಾರ ಬದಲಾಗಲಿಲ್ಲ. ಅವನು ಮನೆ ಬಿಟ್ಟು ಹೊರಟು ಹೋಗಬೇಕೆಂದು ಮತ್ತೆ ಖಂಡಿತವಾಗಿ ಹೇಳಿಬಿಟ್ಟರು. ಅಂದು ರಾತ್ರಿ ರಾಜೇಂದ್ರ ಪ್ರಸಾದರಿಗೆ ಮಲಗುವ ಮೊದಲು ಮತ್ತೆ ಬೆಳಗ್ಗೆ ನಡೆದ ಘಟನೆಯ.
ನೆನಪಾಯಿತು. ಆ ವೇಳೆಗೆ ಮನಸ್ಸು ಶಾಂತವಾಗಿತ್ತು. ನಿಧಾನವಾಗಿ ಅವರು ಆಲೋಚಿಸಿದರು. “ಇದರಲ್ಲಿ ರತ್ನಾಕರನ ತಪ್ಪೇನಿದೆ? ನಾನು ಪೆನ್ನನ್ನು ಹೊರಗಿಟ್ಟಿದ್ದರಿಂದ ತಾನೆ ಅದು ಕೆಳಕ್ಕೆ ಬೀಳಲು ಅವಕಾಶವಾಯಿತು? ಅಲ್ಲದೆ ಫೈಲಿನಲ್ಲಿ ಕಾಗದಗಳ ನಡುವೆ ಮರೆಯಾಗಿದ್ದ ಪೆನ್ನು ಅವನಿಗೆ ಕಾಣಿಸುವುದಾದರೂ ಹೇಗೆ? ಅವನು ಅದನ್ನು ನೋಡಿರಲಿಲ್ಲ. ನೋಡಿದ್ದರೆ ಬೀಳಿಸುತ್ತಿರಲಿಲ್ಲ. ನಿಜವಾಗಿ ರತ್ನಾಕರ ನಿರಪರಾಧಿ. ಇಷ್ಟು ವರ್ಷ ಅತ್ಯಂತ ಪ್ರಾಮಾಣಿಕನಾಗಿ, ವಿಧೇಯನೂ ನಿಷ್ಠಾವಂತನೂ ಆಗಿ ಅವನು ಸೇವೆ ಸಲ್ಲಿಸಿಲ್ಲವೇ? ಇವೆಲ್ಲಕ್ಕಿಂತ ಹೆಚ್ಚಾಗಿ ನನ್ನ ವಿಷಯದಲ್ಲಿ ತುಂಬಾ ಪ್ರೀತಿ ಗೌರವ ಉಳ್ಳವನು. ಇಂಥವನನ್ನು ಬೆಳಿಗ್ಗೆ ಎಷ್ಟು ಕಠೋರವಾಗಿ ನಾನು ಬೈದು ಬಿಟ್ಟೆ. ಕೆಲಸದಿಂದ ತೆಗೆದುಹಾಕಿ ಅವನಿಗೆ ತುಂಬಾ ಅನ್ಯಾಯ ಮಾಡಿದೆ.” ಹೀಗೆ ಆಲೋಚಿಸಿ ವ್ಯಥೆಪಟ್ಟುಕೊಂಡು ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ರಾಜೇಂದ್ರ ಪ್ರಸಾದರು ಮರುಗಿದರು.
ಬೆಳಗಾಗುತ್ತಲೆ ಅವರು ರತ್ನಾಕರನಿಗೆ ಹೇಳಿಕಳಿಸಿದರು. ಅವನು ಬಂದೊಡನೆ ಗೆಳೆಯನ ಕೈ ಹಿಡಿಯುವಂತೆ ಅವನ ಕೈಹಿಡಿದುಕೊಂಡು “ರತ್ನ, ನನ್ನನ್ನು ನೀನು ಕ್ಷಮಿಸಬೇಕು, ನೆನ್ನೆ ನಿನ್ನ ವಿಷಯದಲ್ಲಿ ನಾನು ತುಂಬಾ ಕ್ರೂರವಾಗಿ ವರ್ತಿಸಿದ್ದೇನೆ. ಪೆನ್ನು ಮುರಿದದ್ದರಲ್ಲಿ ನಿನ್ನ ತಪ್ಪೇನಿಲ್ಲ. ನಾನು ತಪ್ಪು ಮಾಡಿದ್ದೇನೆ. ನೀನು ಕೆಲಸ ಬಿಟ್ಟು ಹೋಗಬೇಕಾಗಿಲ್ಲ. ಇಲ್ಲೇ, ಇದೇ ಕೆಲಸವನ್ನೇ ಮುಂದುವರಿಸು. ನಿನ್ನಂತಹ ನಿಷ್ಠನನ್ನು ನಾನು ಕಳೆದುಕೊಳ್ಳಲಾರೆ” ಎಂದರು. ಒಡೆಯನು ಅಂತಃಕರಣಪೂರ್ವಕವಾಗಿ ಹೇಳಿದ ಈ ಮಾತುಗಳನ್ನು ಕೇಳಿ ರತ್ನಾಕರನಿಗೆ ಅಳು ಉಕ್ಕಿಬಂತು. ಅವನು ಬಿಕ್ಕಿ ಬಿಕ್ಕಿ ಅತ್ತನು.
ಈ ಘಟನೆಯಾದ ಮೇಲೆ ಪದೇ ಪದೇ ರಾಜೇಂದ್ರ ಪ್ರಸಾದರು ಹೇಳುತ್ತಿದ್ದರು; “ಕೋಪಗೊಂಡು ನಾವು ಮನಸ್ಸಿನ ಮೇಲೆ ಹಿಡಿತ ಕಳೆದುಕೊಳ್ಳುವ ಮೊದಲು ಅಥವಾ ಇನ್ನೊಬ್ಬರಿಗೆ ಶಿಕ್ಷೆ ವಿಧಿಸುವ ಮೊದಲು ಎರಡೆರಡು ಸಾರಿ ಯೋಚನೆ ಮಾಡಬೇಕು. ಕೋಪ ಒಂದು ಅಪಾಯಕಾರಿ ನಾಯಿ ಇದ್ದ ಹಾಗೆ; ಅದನ್ನು ಸಣ್ಣ ಸರಪಣಿ ಹಾಕಿ ಕಟ್ಟಿರಬೇಕು. ಕಳ್ಳ ಬಂದಿದ್ದಾನೆ ಎನ್ನುವುದು ಖಚಿತವಾದಾಗ ಮಾತ್ರ ಸರಪಣಿ ಬಿಚ್ಚಬೇಕು. ಇಲ್ಲದೆ ಹೋದರೆ ಅದು ಯಾರನ್ನು ಕಂಡರೂ ಬೊಗಳುತ್ತದೆ, ನಿರಪರಾಧಿಯ ಮೇಲೆ ಹರಿಹಾಯುತ್ತದೆ, ಕಚ್ಚಿ ಗಾಯಗೊಳಿಸುತ್ತದೆ. ತಪ್ಪು ಮಾಡುವುದು ಮಾನವ ಸಹಜ, ಕ್ಷಮಿಸುವುದಾದರೋ ದೈವಿಕ ಗುಣ ಎಂಬ ಮಾತನ್ನು ಮತ್ತೆ ಮತ್ತೆ ಅದಕ್ಕೆ ನೆನಪು ಮಾಡಿಕೊಟ್ಟು ಅದನ್ನು ಶಾಂತಗೊಳಿಸಬೇಕು” ಎನ್ನುತ್ತಿದ್ದರು. ಕೋಪವೆಂಬುದು ಅನರ್ಥ ಸಾಧನ. ಕೋಪ ಗರಗಸದ ಹಾಗೆ, ಹೋಗುತ್ತಲೂ ಕೊಯ್ಯುತ್ತದೆ, ಬರುತ್ತಲೂ ಕೊಯ್ಯುತ್ತದೆ.
ಮಾಡಿಕೊಂಡವನಿಗೂ, ಮಾಡಿಸಿಕೊಂಡವನಿಗೂ ಇಬ್ಬರಿಗೂ ಅದರಿಂದ ಮಾನಸಿಕ ಹಿಂಸೆಯೇ. ಪಶ್ಚಾತ್ತಾಪಕ್ಕಿಂತ ಪೂರ್ವ ತಾಪ ಮೇಲು ಎನ್ನುತ್ತಾರೆ ಸ್ವಾಮಿ. ತಪ್ಪಾಗಿ ನಿರ್ಣಯ ತೆಗೆದುಕೊಂಡು ಕೋಪಕ್ಕೆ ತನ್ನನ್ನು ಬಲಿಕೊಡುವುದಕ್ಕೆ ಮುಂಚೆ ಶಾಂತವಾಗಿ ಆಲೋಚನೆ ಮಾಡಿದರೆ ಎಷ್ಟೋ ಅನರ್ಥಗಳು ತಪ್ಪುತ್ತವೆ. ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೇ! ಪ್ರತಿದಿನವೂ ಮಕ್ಕಳು ಮಲಗುವ ಮೊದಲು ತಾನು ಆ ದಿನ ವರ್ತಿಸಿದ್ದೆಲ್ಲವನ್ನೂ ಒಮ್ಮೆ ನೆನಪು ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಪ್ರಶ್ನೆಗಳು :
- “ಕೋಪವು ನಾಯಿ ಇದ್ದ ಹಾಗೆ; ಪ್ರೇಮವು ದೇವರು”– ವಿವರಿಸಿ.
- “ಕೋಪಗೊಳ್ಳುವುದರಿಂದ ಬೇರೆಯವರ ತಪ್ಪಿಗೆ ನಮಗೇ ಶಿಕ್ಷೆ ಕೊಟ್ಟುಕೊಂಡಂತೆ” ನೀವು ಇದನ್ನು ಒಪ್ಪುವಿರೇ? ನಿಮ್ಮ ಉತ್ತರಕ್ಕೆ ಕಾರಣ ನೀಡಿ.
- ಕೆಳಗಿನ ವಿಷಯದ ಮೇಲೆ ನಿಮ್ಮ ಅನುಭವವನ್ನು ಬರೆಯಿರಿ
- ಸರಿಯಾದ ಕಾರಣವಿಲ್ಲದೆ ಬೇರೆಯವರ ಮೇಲೆ ಕೋಪಗೊಂಡಾಗ
- ಬಹಳ ದೊಡ್ಡ ತಪ್ಪು ಮಾಡಿದವರ ಮೇಲೆ ಕೋಪಗೊಂಡಾಗ
- ಘಟನೆಗಳನ್ನು ನೆನಪಿಸಿಕೊಂಡಾಗ, ನಿಮಗೆ ಏನನ್ನಿಸುತ್ತದೆ?